ಇಂತಹದೊಂದು ಸಹಾಯವಾಣಿ ಆರಂಭಿಸಿದ ಇಲಾಖೆಯ ಕಾರ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘಿಸಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಆರಂಭಗೊಂಡಿರುವ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಮ್) ರೈತರು, ಸಾಕಾಣಿಕೆದಾರರನ್ನು ತಲುಪಲು ಮತ್ತು ಜಾನುವಾರುಗಳ ಆರೋಗ್ಯ ಹಾಗೂ ಉತ್ಪಾದಕತೆ ಹೆಚ್ಚಿಸಲು ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, ದಿನ 24 ಗಂಟೆಯೂ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. 8277100200 ಸಹಾಯವಾಣಿಗೆ ರೈತರು ಕರೆ ಮಾಡಿ ಪಶುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು., ಜಾನುವಾರುಗಳ ಆರೋಗ್ಯ ಕಾಪಾಡುವಲ್ಲಿ ವಾರ್ ರೂಂ ಮಹತ್ವದ ಕಾರ್ಯವಹಿಸಲಿದೆ. ಇದರ ಪ್ರಯೋಜನವನ್ನು ಎಲ್ಲಾ ಜಾನುವಾರು ಸಾಕಾಣಿಕೆದಾರರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪಶುಸಂಗೋಪನೆ ಇಲಾಖೆ ರೈತರಿಗೆ ಈ ವಾರ್ ರೂಂ ಮೂಲಕ ಮಾರ್ಗದರ್ಶನ ಮಾಡಲಿದೆ. ರೈತರ ಕಲ್ಯಾಣಕ್ಕಾಗಿ ಪಶಸಂಗೋಪನೆ ಇಲಾಖೆ ಸಾಕಷ್ಟು ಶ್ರಮವಹಿಸುತ್ತಿದೆ. ಹೈನೋದ್ಚಮಕ್ಕೆ ಪ್ರಾಣಿ ಕಲ್ಯಾಣ ಸಹಾಯವಾಣಿಯಿಂದ ಸಹಕಾರಿಯಾಗಲಿದ್ದು, ವಾರ್ ರೂಂ ಮೂಲಕ ರೈತರು ಮತ್ತು ಜಾನುವಾರು ಸಾಕಣೆದಾರರು ಅಗತ್ಯ ಮಾಹಿತಿ ಪಡೆಯಬಹುದು ಎಂದರು.
ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗ್ರತೆ ಕ್ರಮವಾಗಿ ಚುಚ್ಚುಮದ್ದು ಹಾಕಿಸಬೇಕಾದ ವಿವರ, ಬ್ಯಾಂಕುಗಳಿಂದ ವಿವಿಧ ಸಾಲ ಸೌಲಭ್ಯಗಳ ಮಾಹಿತಿ, ಮಿಶ್ರತಳಿ, ಹೈನುರಾಸುಗಳ, ಕುರಿ ಹಂದಿಗಳು, ದೊರೆಯುವ ಸ್ಥಳಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.
ಹೆಬ್ಬಾಳದ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್. ಶಿವರಾಮ ಮಾತನಾಡಿ, ಸಹಾಯವಾಣಿಯಲ್ಲಿ ಒಟ್ಟು 24 ಜನ ಕಾರ್ಯನಿರ್ವಹಿಸಲಿದ್ದು, ಮೂಬರು ತಂಡಗಳಾಗಿ 24*7 ರಂತೆ ಕಾರ್ಯನಿರ್ವಹಿಸಲಿದೆ. ರೈತರು ವ್ಯಾಟ್ಸಪ್ ಮೂಲಕ ಮಾಹಿತಿ ನೀಡಬಹುದು. ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಪಶುವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಗಳು ತೆರಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು.
ಕೇವಲ ಹಸುಗಳಿಗಷ್ಟೇ ಅಲ್ಲ, ಆಡು, ಕುರಿ, ಮೊಲ, ಕೊಳಿ, ಹಂದಿ ಸೇರಿದಂತೆ ಇನ್ನಿತರ ಪ್ರಾಣಿ ಪಕ್ಷಿಗಳ ರಕ್ಷಣೆಗೆ ನೆರವು ನೀಡಲಾಗುವುದು. ಪಕ್ಷಿಗಳು, ಹಾವು, ಹಾಗೂ ಕಾಡು ಪ್ರಾಣಿಗಳು, ಬೀದಿ ನಾಯಿಗಳನ್ನು ರಕ್ಷಣೆ ಮಾಡಲು ಬಯಸುವ ನಾಗರಿಕರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.
ಪಕ್ಷಿ ಸೇರಿದಂತೆ ಹಲವು ಪ್ರಾಮಿಗಳಿಗೆ ಸಹಾಯ ಕೇಂದ್ರಗಳಿವೆ. ಆದರೆ, ಇಲಾಖೆ ವತಿಯಿಂದ ಆರಂಭಿಸುತ್ತಿರುವ ಮೊದಲ ಸಹಾಯವಾಣಿ ಇದಾಗಿದೆ. ವೈದ್ಯಕೀಯ ವಾರ್ ರೂಮ್ ನಂತೆಯೇ ಈ ವಾರ್ ರೂಮ್ ಕೂಡ ಕಾರ್ಯನಿರ್ವಹಿಸಲಿದೆ. ಗಾಯಗೊಂಡಿರುವ, ಅನಾರೋಗ್ಯಕ್ಕೀಡಾಗುವ ಪ್ರಾಣಿಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.