Animal Husbandry

ಕೊಟ್ಟಿಗೆಯ ಸ್ವಚ್ಛತೆ ಆದರೆ ಮೂಲ ಮಂತ್ರ; ಜಾನುವಾರುಗಳು ರೋಗ-ರುಜಿನಗಳಿಂದ ಸ್ವತಂತ್ರ

05 August, 2021 1:59 PM IST By:
ಭಾರತದಲ್ಲಿ ಬಳಕೆಯಲ್ಲಿರುವ ಕೊಟ್ಟಿಗೆಯ ನೆಲ ಸ್ವಚ್ಛಗೊಳಿಸುವ ಅತ್ಯಾಧುನಿಕ ತಂತ್ರಜ್ಞಾನ.

ನಮ್ಮ ಮನೆ, ಹಳ್ಳಿ, ಕಚೇರಿ, ಶಾಲೆ, ಕಾಲೇಜು, ರಸ್ತೆ, ಸಾರ್ವಜನಿಕ ಸ್ಥಳಗಳು, ಉದ್ಯಾನವನ ಎಲ್ಲವೂ ಸ್ವಚ್ಛಗೊಳ್ಳಲು ಅಣಿಯಾಗುತ್ತಿವೆ. ಆದರೆ ನಮ್ಮ ರೈತರು ಏಕೋ ತಮ್ಮ ದನಗಳ ಕೊಟ್ಟಿಗೆಯನ್ನು ಮಾತ್ರ ಸ್ವಚ್ಛತೆಯಿಂದ ದೂರವಿಟ್ಟಂತೆ ಕಾಣುತ್ತಿದೆ.

ಹೌದು, ಎಲ್ಲದಕ್ಕೂ ಪ್ರಾಶಸ್ತ್ಯ ನೀಡುತ್ತಿರುವ ಗ್ರಾಮೀಣ ಭಾಗದ ರೈತ ಸಮುದಾಯವು ತಮ್ಮ ಆರ್ಥಿಕತೆಯ ಪ್ರಮುಖ ಮೂಲವಾಗಿರುವ ಪಶುಸಂಗೋಪನೆಯ ವಿಭಾಗದಲ್ಲಿ ಸ್ವಚ್ಛತೆಯನ್ನು ತರುವಲ್ಲಿ ವಿಫಲರಾಗಿದೆ. ಪಶುಗಳಿಂದ ಉತ್ತಮ ಲಾಭವನ್ನು ಪಡೆಯಬೇಕಾದರೆ ಅವುಗಳ ಆರೋಗ್ಯ ಉತ್ತಮವಾಗಿರುವುದು ಕೂಡ ಮುಖ್ಯ. ಈ ನಿಟ್ಟಿನಲ್ಲಿ ದನ-ಕರುಗಳು ವಾಸಿಸುವ ಪರಿಸರದ ನೈರ್ಮಲ್ಯವನ್ನು ಅವುಗಳ ಆರೋಗ್ಯವು ಅವಲಂಬಿಸಿದೆ. ಹಾಗಾಗಿ ದನಗಳ ‘ಕೊಟ್ಟಿಗೆ’ಯ ಸ್ವಚ್ಛತೆ ಅವಶ್ಯಕವಾಗಿದೆ.

ರೋಗ ಹರಡುವ ಮಾರ್ಗಗಳು

ಅನೇಕ ಸಾಂಕ್ರಾಮಿಕ ರೋಗಗಳು ಗಾಳಿ, ಆಹಾರ, ನೀರು, ಕೀಟಗಳ ಮೂಲಕ ಹರಡುತ್ತವೆ. ಬ್ಯಾಕ್ಟೀರಿಯಾ, ವೈರಾಣು, ಶಿಲೀಂದ್ರÀ, ಪರಾವಲಂಬಿ ಜೀವಿಗಳ ಬಾಧೆಗಳು ಹೆಚ್ಚಾಗುವಿಕೆ ಸೇರಿ ಹಲವು ಸಮಸ್ಯೆಗಳು ಪಶುಗಳನ್ನು ಕಾಡುತ್ತವೆ. ಇದರ ಪರಿಣಾಮವಾಗಿ ಜಾನುವಾರುಗಳಲ್ಲಿ ಉಸಿರಾಟದ ಅಂಗಗಳು, ಜೀರ್ಣಾಂಗಗಳು, ಉತ್ಪಾದನೆ ಮತ್ತು ಸಂತಾನೋತ್ಪತ್ತಿಗೆ ಸಂಬAಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಜಾನುವಾರುಗಳ ಉತ್ಪಾದನಾ ಸಾಮರ್ಥ್ಯ ಕುಂಠಿತಗೂಳುತ್ತದೆ. ಇದು ನೇರವಾಗಿ ರೈತರ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಕಲುಷಿತ ಮೇವು (ಆಹಾರ), ಕಲುಷಿತ ನೀರು, ಅಶುದ್ಧ ನೆಲ, ರೋಗ ಹೊಂದಿರುವ ವ್ಯಕ್ತಿಗಳು, ಕಲುಷಿತ ಗಾಳಿ, ವಿಲೇವಾರಿಯಾಗದ ತ್ಯಾಜ್ಯ... ಇವೇಏ ಮೊದಲಾದವುಗಳು ರೋಗದ ಮೂಲಗಳಾಗಿವೆ.

ರೋಗ ತಡೆಗಟ್ಟುವುದು ಹೇಗೆ?

ಜಾನುವಾರುಗಳ ಮೇಲೆ ಅಶುದ್ಧ ಪರಿಸರದಿಂದ ಉಂಟಾಗುವ ಪ್ರತಿಕುಲ ಪರಿಣಾಮಗಳನ್ನು ತಡೆಯಲು ಕೆಲವು ಮುಖ್ಯವಾಗಿರುವ ಅಂಶಗಳನ್ನು ಗಮನಿಸಿ, ಅವುಗಳಿಗೆ ಪ್ರಾಮುಖ್ಯತೆ ನೀಡಿ, ಸ್ವಚ್ಛತೆಯನ್ನು ಕಾಪಾಡಬೇಕು. ಇದರಿಂದ ಪಶುಗಳ ಆರೋಗ್ಯದ ಮಟ್ಟವನ್ನು ಸುಧಾರಿಸಬಹುದು.

ಕೊಟ್ಟಿಗೆಯಲ್ಲಿ ಗಾಳಿ ಇರಲಿ

ದನದ ಕೊಟ್ಟಿಗೆಯಲ್ಲಿ ಉತ್ತಮ ಗಾಳಿಯ ಅವಶ್ಯಕತೆ ಇರುತ್ತದೆ. ಗಾಳಿಯು ಸುಲಭವಾಗಿ ಸುಳಿದಾಡಲು ಅವಕಾಶವಿರಬೇಕು. ಕೊಟ್ಟಿಗೆಯ ಒಳ ಪರಿಸರದಲ್ಲಿರುವ ಕಲುಷಿತ ಗಾಳಿಯನ್ನು ನಿರ್ಮೂಲನೆ ಮಾಡಿ, ಶುದ್ಧ ಗಾಳಿಯು ಸಂಚರಿಸುವಂತೆ ಮಾಡಬೇಕು. ಇಲ್ಲವಾದಲ್ಲಿ ಧೂಳು, ಅನಿಲಗಳು ಶೇಖರಣೆಗೊಂಡು, ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಪೋರಕ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ಪ್ರಮುಖವಾಗಿ ಉಸಿರಾಟ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತವೆ ಹಾಗೂ ಗಳಲೆ ರೋಗದಂತಹ ಮಾರಣಾಂತಿಕ ಖಾಯಿಲೆಗಳು ಸಹ ಜಾನುವಾರುಗಳಿಗೆ ತಗುಲಬಹುದು.

ನಿಮ್ಮ ಕೊಟ್ಟಿಗೆ ಸಹ ಹೀಗೇ ಸ್ವಚ್ಚವಾಗಿರಲಿ.

ಮೇವು ಶುದ್ಧವಾಗಿರಲಿ

ಹಸು, ಎಮ್ಮೆಗಳ ಉತ್ತಮ ಬೆಳವಣಿಗೆಗೆ ಹಾಗೂ ಹಾಲಿನ ಉತ್ಪಾದನೆ ಸಮೃದ್ಧವಾಗಿರಲು ಪೋಷಕಾಂಶಯುಕ್ತ ಶುದ್ಧ ಮೇವಿನ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಗಣಿ, ಮೂತ್ರ ಮತ್ತಿತರ ಯಾವುದೇ ರೀತಿಯ ತ್ಯಾಜ್ಯ ಪದಾರ್ಥಗಳು ಮೇವಿಗೆ ಸೇರದಂತೆ ಎಚ್ಚರ ವಹಿಸಬೇಕು. ಸ್ವಚ್ಛ ಹಸಿ ಹಾಗೂ ಒಣಗಿದ ಹುಲ್ಲನ್ನು ಜಾನುವಾರುಗಳಿಗೆ ಪೂರೈಸಬೇಕು ಹಾಗೂ ಮೇವಿನ ಸಂಗ್ರಹಣೆಯ ಬಗ್ಗೆ ನಿಗಾವಹಿಸಬೇಕು. ಹಿಂಡಿ, ಬೂಸ ಇತ್ಯಾದಿಗಳನ್ನು ಒಣ ಪ್ರದೇಶದಲ್ಲಿ ಅಂದರೆ, ತೇವಾಂಶ ಇಲ್ಲದ ಜಾಗದಲ್ಲಿ ಸಂಗ್ರಹಿಸಿ ಇಡಬೇಕು. ಇಲ್ಲವಾದಲ್ಲಿ ಅವುಗಳಲ್ಲಿ ಶಿಲೀಂದ್ರಗಳ ಬೆಳವಣಿಗೆ ವೃದ್ಧಿಸಿ, ರಾಸುಗಳಲ್ಲಿ ರೋಗ ಹರಡಲು ಕಾರಣವಾಗುತ್ತದೆ.

ಕಲುಷಿತ ನೀರು ಬೇಡ

ದನ-ಕರುಗಳಿಗೆ ಕುಡಿಯಲು ನೀಡುವ ನೀರು ಸ್ವಚ್ಛವಾಗಿರಬೇಕು. ಕಲುಷಿತ ನೀರಿನಲ್ಲಿ ಸೂಕ್ಷ್ಮಜೀವಿಗಳ ಬೆಳವಣಿಗೆ ಬಹು ಬೇಗ ಆಗುತ್ತದೆ. ಹೀಗಾದಾಗ ಜಾನುವಾರುಗಳು ಅನಾರೋಗ್ಯದ ತೊಂದರೆ ಎದುರಿಸಬೇಕಾಗುತ್ತದೆ. ನೀರು ಸಂಗ್ರಹಿಸುವ ತೊಟಟ್ಟಿ, ಬಾನಿ ಹಾಗೂ ಬಕೆಟ್‌ಗಳನ್ನು ಪ್ರತಿ ದಿನ ಸ್ವಚ್ಛವಾಗಿ ತೊಳೆಯಬೇಕು. ನೀರಿನಲ್ಲಿ ಯಾವುದೇ ಕಾರಣಕ್ಕೂ ಸಗಣಿ, ದನಗಳ ಮೂತ್ರ  ಬೀಳದಂತೆ ಎಚ್ಚರ ವಹಿಸಬೇಕು.

ಕೊಟ್ಟಿಗೆಯ ನೆಲ ಶುಭ್ರವಾಗಿರಲಿ

ಜಾನುವಾರುಗಳು ಮಲಗಿದ್ದಾಗ ಕೆಚ್ಚಲು ನೆಲದ ಸಂಪರ್ಕಕ್ಕೆ ಬರುತ್ತದೆ. ಆದಕಾರಣ ಕೊಟ್ಟಿಗೆಯ ನೆಲಹಾಸು ಸದಾ ಸ್ವಚ್ಛವಾಗಿರಬೇಕು. ಇಲ್ಲದಿದ್ದರೆ ಹೈನು ರಸುಗಳಲ್ಲಿ ಕೆಚ್ಚಲು ಬಾವು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರಿಂದ ಹಾಲಿನ ಉತ್ಪಾದನೆ ಗಣನೀಯವಾಗಿ ಇಳಿಮುಖವಾಗುತ್ತದೆ. ಹಸುವಿನ ಉತ್ಪಾದನಾ ಮಟ್ಟವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾದರೆ ನೆಲಹಾಸು ಶುಭ್ರವಾಗಿರಲೇಬೇಕು. ಹಾಗೇ ನೆಲಹಾಸು ಹಳ್ಳ-ದಿನ್ನೆ, ಅಂಕುಡೊಂಕಾಗಿರದೇ ಸಮತಟ್ಟಾಗಿರಬೇಕು. ಇಲ್ಲವಾದಲ್ಲಿ ಮೂತ್ರ ಹಾಗೂ ನೀರು ಶೇಖರಣೆಗೊಂಡು ನೊಣ, ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿ, ಮಲೇರಿಯಾ ರೀತಿಯ ಖಾಯಿಲೆಗಳಿಗೆ ಕಾರಣವಾಗಬಹುದು. ನೆಲಹಾಸನ್ನು ಸ್ವಚ್ಛಗೊಳಿಸಲು ಸಾಮಾನ್ಯ ಸಾಬೂನುಗಳನ್ನು ಬಳಸಬಹುದು. ಬ್ಲೀಚಿಂಗ್ ಪೌಡರ್, ಫಿನಾಲಿಕ್ ಪದಾರ್ಥಗಳು, ಪೊಟ್ಯಾಷಿಯಂ ಪರಮ್ಯಾಂಗನೇಟ್ ಇತ್ಯಾದಿ ಕ್ರಿಮಿನಾಶಕಗಳನ್ನು ಬಳಸಿಕೊಂಡರೆ ಪರಿಣಾಮ ಹೆಚ್ಚು.

ತ್ಯಾಜ್ಯ ನಿರ್ವಹಣೆ

ಕೊಟ್ಟಿಗೆಯಲ್ಲಿ ಬೀಳುವ ಜಾನುವಾರುಗಳ ಸಗಣಿ, ಮೂತ್ರಗಳನ್ನು ದಿನಕ್ಕೆ ಕನಿಷ್ಠ ಮೂರು ಬಾರಿಯಾದರೂ ಸ್ವಚ್ಛಗೊಳಿಸಬೇಕು. ಈ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸರಿಯಾದ ರೀತಿಯಲ್ಲಿ ಗೊಬ್ಬರದ ಗುಂಡಿಯನ್ನು ನಿರ್ಮಿಸಿ ಅದರಲ್ಲಿ ನಿಯಮಿತವಾಗಿ ವಿಲೇವಾರಿ ಮಾಡಬೇಕು.

ಪರಿಕರಗಳ ಸ್ವಚ್ಛತೆ

ದಿನ ನಿತ್ಯ ಪಶುಸಂಗೋಪನೆಯಲ್ಲಿ ಬಳಸುವ ಪರಿಕರಗಳಾದ ನೀರುಣಿಕೆ, ಮೇವುಣಿಕೆಗಳು, ಹಾಲು ಕರೆಯುವ ಯಂತ್ರ, ಹಾಲಿನ ಪಾತ್ರೆ ಮುಂತಾದ ವಸ್ತುಗಳು ಸ್ವಚ್ಛವಾಗಿರುವಂತೆ ನಿಗಾವಹಿಸಬೇಕು. ಇವುಗಳನ್ನು ತೊಳೆಯಲು ಬೆಚ್ಚಗಿನ ನೀರು ಹಾಗೂ ಸಾಬೂನು ಬಳಸಬಹುದು. ಇವುಗಳೊಂದಿಗೆ ಸಾಧ್ಯವಾದಲ್ಲಿ ಕ್ರಿಮಿನಾಶಕಗಳನ್ನು ಕೂಡ ಅಲ್ಪ ಪ್ರಮಾಣದಲ್ಲಿ ಬಳಸಬಹುದು.

ಜಾನುವಾರುಗಳ ಸ್ವಚ್ಛತೆ

ಎಲ್ಲಕ್ಕಿಂತ ಮುಖ್ಯವಾಗಿ ಸ್ವತಃ ಜಾನುವಾರುಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಪ್ರತಿ ದಿನವೂ ಜಾನುವಾರುಗಳ ಮೈ ತೊಳೆಯುವುದು ಉತ್ತಮ. ಇದರಿಂದ ಅವುಗಳ ಮೈ ಮೇಲಿನ ಕಲ್ಮಶಗಳೆಲ್ಲವೂ ತೊಲಗಿ ಆರೋಗ್ಯ ವೃದ್ಧಿಯಾಗುತ್ತದೆ. ಮೈ ತೊಳೆಯಲು ರಾಸಾಯನಿಕಗಳನ್ನು ಬಳಸುತ್ತಿದ್ದಲ್ಲಿ ಅವು ಕಣ್ಣು, ಬಾಯಿ ಸೇರದಂತೆ ಎಚ್ಚರ ವಹಿಸಬೇಕು.

ಹಾಲು ಕರೆಯುವ ವ್ಯಕ್ತಿಯ ಸ್ವಚ್ಛತೆ

ಹೈನುಗಾರರು ಸಹ ಅವರ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಹಾಲು ಕರೆಯುವ ಮುನ್ನ ಮತ್ತು ಹಆಲು ಕರೆದ ನಂತರ ಕೈಗಳನ್ನು ಸಾಬೂನು ಹಚ್ಚಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ರೋಗ ಹೊಂದಿರುವ ಜಾನುವಾರಿನ ಆರೈಕೆ ಮಾಡಿದ ನಂತರ ರೋಗ ಹೊಂದಿರದ, ಆರೋಗ್ಯವಂತ ಜಾನುವಾರಿನ ಸಂಪರ್ಕಕ್ಕೆ ಬರುವ ಮುನ್ನ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ ಆರೋಗ್ಯವಂತ ಜಾನುವಾರುಗಳಿಗೂ ರೋಗದ ವರ್ಗಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ಮೇಲಿನ ಎಲ್ಲ ಅಂಶಗಳನ್ನು ಆದ್ಯತೆ ಮೇರೆಗೆ ಅಳವಡಿಸಿಕೊಂಡಲ್ಲಿ, ಜಾನುವಾರುಗಳಿಗೆ ತಗುಲಬಹುದಾದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆದು, ಉತ್ತಮ ಹೈನು ಉತ್ಪಾದನೆ ಪಡೆಯಬಹುದು. ಇದರೊಂದಿಗೆ ಚಿಕಿತ್ಸಾ ವೆಚ್ಚವನ್ನೂ ಕಡಿತಗೊಳಿಸಬಹುದು ಮತ್ತು ಪ್ರಾಣಿಜನ್ಯ ರೋಗಗಳು ಬಾರದಂತೆ ತಡೆಗಟ್ಟಬಹುದು.

ಲೇಖಕರು: ಡಾ. ಅಕ್ಷಯಕುಮಾರ ವಿಜ್ಞಾನಿಗಳು (ಪಶು ವಿಜ್ಞಾನ), ಡಾ. ಸುನೀಲಕುಮರ ಎನ್.ಎಂ. ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ತರು ಮತ್ತು ಡಾ. ನಿಂಗದಳ್ಳಿ ಮಲ್ಲಿಕಾರ್ಜುನ, ವಿಜ್ಞಾನಿಗಳು (ತೋಟಗಾರಿಕೆ), ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಬೀದರ್.