Animal Husbandry

ಹಾಲು ಉತ್ಪಾದಕರಿಗೆ ಸಂತಸದ ಸುದ್ದಿ: ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದ ಬಮೂಲ್

23 January, 2021 8:57 AM IST By:
Milk

ಹಾಲು ಉತ್ಪಾದನೆ ಮಾಡುವ ರೈತರಿಗೆ ಬೆಂಗಳೂರು ಸಹಕಾರಿ ಹಾಲು ಒಕ್ಕೂಟದಿಂದ ಪ್ರತಿ ಲೀಟರ್‌  ಹಾಲಿಗೆ  2 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಬಮೂಲ್‌ ನಿರ್ದೇಶಕ ಎಚ್‌.ಎಸ್‌.ಹರೀಶ್‌ಕುಮಾರ್‌ ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು ಹಾಕುವ ಪ್ರತಿ ಲೀಟರ್‌ ಹಾಲಿಗೆ ಇದೇ ಫೆ.1ರಿಂದ ಎರಡು ರೂಪಾಯಿ ಹೆಚ್ಚಿಸಲಾಗಿದೆ. ಇದು ರೈತರಿಗೆ ರಾಜ್ಯದ ಹಾಲು ಒಕ್ಕೂಟ ನೀಡಿದ ಸಂಕ್ರಾಂತಿ ಸಿಹಿಯಾಗಿದೆ.  ಮಾರುಕಟ್ಟೆಯು ಮೊದಲ ಸ್ಥಿತಿಯತ್ತ ಬಂದಿದ್ದು, ನಮ್ಮಲ್ಲಿದ್ದ ಉತ್ಪನ್ನಗಳ ಮಾರಾಟದಿಂದ ನಷ್ಟವನ್ನು ಸರಿದೂಗಿಸಿದ್ದು ಹಾಲು ಉತ್ಪಾದಕ ರೈತರಿಗೆ ಬೆಂಬಲವಾಗಿ ಹಾಗೂ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಹಾಲಿನ ದರ ಹೆಚ್ಚಿಸುತ್ತಿರುವುದಾಗಿ ತಿಳಿಸಿದರು.

ನಷ್ಟದಿಂದ ಲಾಭದತ್ತ ಸಾಗುತ್ತಿರುವ ಹಾಲುಒಕ್ಕೂಟ ಮಹಾ ಮಂಡಳಿ ಸಭೆಯಲ್ಲಿ ನಮ್ಮ ರೈತ ಹಿತ ಕಾಯುವ ಉದ್ದೇಶದಿಂದ 3 ರೂ ಹೆಚ್ಳಕ್ಕೆ ಬೇಡಿಕೆ ಮುಂದಿಟ್ಟಿದ್ದೆವು. ಆದರೆ ಎಲ್ಲರ ಸಹಮತದಂತೆ 2 ರೂಪಾಯಿ ಹೆಚ್ಚಳ ಮಾಡಲಾಗುತ್ತಿದೆ ಎಂದರು.
ಕನಕಪುರದಲ್ಲಿ ಮೆಗಾ ಡೇರಿಯನ್ನು ಒಕ್ಕೂಟದಿಂದ ನಿರ್ಮಾಣ ಮಾಡಿದ್ದು, ಹೆಚ್ಚುವರಿ ಹಾಲಿನಿಂದ ಹಾಲಿನ ಉತ್ಪನ್ನಗಳಾದ ಚೀಸ್‌, ಪೌಡರ್‌ ಮಾಡಿದ್ದರಿಂದ  ನಷ್ಟವನ್ನು ತಪ್ಪಿಸಲಾಗಿದೆ.ಕೊರೊನಾ ಸಂಕಷ್ಟದಿಂದ ಹಾಲಿನ ಮಾರಾಟವಾಗದೆ ಒಕ್ಕೂಟಕ್ಕೆ  1 ಕೋಟಿ ನಷ್ಟವಾಗಿತ್ತು. ಆ ಕಾರಣದಿಂದ ಈ ಹಿಂದೆ ರೈತರ ಹಾಲಿನ ಖರೀದಿಯಲ್ಲಿ ಬೆಲೆ ಇಳಿಕೆ ಮಾಡಲಾಗಿದೆ ಎಂದರು.

ಕನಕಪುರದಲ್ಲಿ ಏಷ್ಯಾದಲ್ಲೇ ಅತಿದೊಡ್ಡ ನಂದಿನಿ ಉತ್ಪನ್ನಗಳ ಘಟಕ ನಿರ್ಮಾಣದಿಂದ ಕೋವಿಡ್‌ ಕಾಲದಲ್ಲಿ ಆಗಬಹುದಾದ ಹೆಚ್ಚುವರಿ ನಷ್ಟ ತಪ್ಪಿಸಲು ಕಾರಣವಾಗಿದ್ದು, ಹಾಲು ಒಕ್ಕೂಟ ಈ ಸಂದರ್ಬದ ಹೆಚ್ಚುವರಿ ಹಾಲನ್ನು ಚೀಸ್‌ ಮತ್ತು ಪೌಡರನ್ನಾಗಿ ಸಂಗ್ರಹ ಮಾಡಿದ್ದರಿಂದ ಇಂದು ಅದನ್ನು ಮಾರಾಟ ಮಾಡಿ ನಷ್ಟವನ್ನು ಸರಿದೂಗಿಸಿಕೊಳ್ಳಲಾಗುತ್ತಿದೆ ಎಂದರು.