Animal Husbandry

ಮದ್ದೂರಿನಲ್ಲಿ ಮಾರ್ಚ್ 9 ರಿಂದ 13ರವರೆಗೆ ಐದು ದಿನಗಳ ಕಾಲ ದನಗಳ ಜಾತ್ರೆ

06 March, 2021 4:44 PM IST By:
cattle

ಶಿವರಾತ್ರಿ ಹಬ್ಬದ ಅಂಗವಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹನುಮಂತ ನಗರದ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಮಾರ್ಚ್‌ 9ರಿಂದ 13 ರವರೆಗೆ  ಐದು ದಿನಗಳ ಕಾಲ 28ನೇ ವರ್ಷದ ಭಾರಿ ದನಗಳ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಆತ್ಮಲಿಂಗೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿ ಟ್ರಸ್ಟಿ ಬಸವೇಗೌಡ ತಿಳಿಸಿದರು.

ಅವರು ಗುರುವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲ ಮಾತನಾಡಿ, ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ  28 ವರ್ಷಗಳಿಂದ ದನದ ಜಾತ್ರೆ ನಿರಂತರವಾಗಿ ನಡೆಯುತ್ತಿದ್ದು, ಇದರಲ್ಲಿ ಭಾಗ ವಹಿಸುವ ರೈತರು ಮತ್ತು ರಾಸುಗಳಿಗೆ ನೀರು ಮತ್ತು ನೆರಳಿನ ಸೌಲಭ್ಯದ ಜೊತೆಗೆ ತಾತ್ಕಾಲಿಕ ಆರೋಗ್ಯ, ಪಶು ವೈದ್ಯ ಕೀಯ ಕೇಂದ್ರಗಳನ್ನು ತೆರೆಯಲಾಗುವುದು. ಉತ್ತಮ ರಾಸುಗಳಿಗೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಗದು ಬಹುಮಾನ, ನೆನಪಿನ ಫಲಕಗಳನ್ನು ನೀಡಲಾಗುವುದು ಎಂದು ಹೇಳಿದರು.

ಮಾರ್ಚ್‌ 11ರಂದು ಶಿವರಾತ್ರಿ ಹಬ್ಬದ ಅಂಗವಾಗಿ ಜಾಗರಣೆ, ವಿಶೇಷ ಅಭಿಷೇಕ, ಹರಿಕಥೆ, ಸುಗಮ ಸಂಗೀತ, ಕೋಲಾಟ, ದೊಣ್ಣೆ ವರಸೆ, ಭಜನೆ, ಭಕ್ತಿ ಪ್ರಧಾನ ಚಲನಚಿತ್ರಗಳ ಪ್ರದರ್ಶನ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್‌ 13ರಂದು ಮಧ್ಯಾಹ್ನ 3.45ಕ್ಕೆ ರಥೋತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ತಮಟೆ, ಕೀಲುಕುದುರೆ, ಗಾರುಡಿ ಬೊಂಬೆ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ದೇವರ ಉತ್ಸವ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ  ಧರ್ಮದರ್ಶಿ ಮಂಡಳಿಯ ಉಪಾಧ್ಯಕ್ಷ ಕೆ.ಎಸ್.ಗೌಡ, ಕಾರ್ಯ ದರ್ಶಿ ಸಿದ್ದೇಗೌಡ, ಉಪನ್ಯಾಸಕ ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು ಇದ್ದರು.