ಹೈನುಗಾರರು ಸೊಸೈಟಿಗೆ ಹಾಕಿದ ಹಾಲಿನ ಪ್ರಮಾಣ, ಸಮಯ, ಕೊಬ್ಬಿನಾಂಶ, ಸಿಎಲ್‌ಆರ್, ಎಸ್ಎನ್‌ಎಫ್, ದರ, ಒಟ್ಟು ಮೊತ್ತ ಸಹಿತ ಒಂದು ವರ್ಷದ ಮಾಹಿತಿಯನ್ನು ಬೆರಳ ತುದಿಯಲ್ಲೇ ಪರಿಶೀಲಿಸಲು ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದೆ.
ಕೊರೋನಾ ಮಹಾಮಾರಿ ಹರಡುತ್ತಿದ್ದ ಇಂತಹ ಕಾಲಘಟ್ಟದಲ್ಲಿ ಹಾಲು ಉತ್ಪಾದಕ ಸಂಘಗಳಿಗೆ ಹೈನುಗಾರರು ಹಾಲನ್ನು ಪೂರೈಸಿ ಅದರ ಸ್ಲಿಪ್ ಪಡೆಯುವಾಗ ಕಾಂಟೆಕ್ಟ್ ಆಗುವುದನ್ನು ತಡೆಯಲು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಯುವಕರ ತಂಡ ನೂತನ ಡಿಜಿಟಲ್ ಸ್ಲಿಪ್ ವಿಧಾನ “ಮೈ ಎಂಪಿಸಿಎಸ್” ಆ್ಯಪ್ ಬಿಡುಗಡೆ ಮಾಡಿದೆ. ಇದು ದಕ್ಷಿಣ ಕನ್ನಡ ಜಿಲ್ಲೆ ಅಷ್ಟೇ ಅಲ್ಲ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರಿಗೆ ತುಂಬಾ ಸಹಕಾರಿಯಾಗಿದೆ.
ಹೈನುಗಾರಿಕೆಯ ಮೌಲ್ಯ ವರ್ಧನೆ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಡಿಜಿಟೈಲೈಸೇಷನ್ ಹೆಜ್ಜೆ ಇಡುತ್ತಿದ್ದರೆ, ಒಕ್ಕೂಟದ ಸಾಫ್ಟ್‌ವೇರ್ ಸಮಾಲೋಚಕರು ಪ್ರತ್ಯೇಕವಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿದ್ದಾರೆ.
ಒಕ್ಕೂಟದ ಸಾಫ್ಟ್‌ವೇರ್ ಸಮಾಲೋಚಕ ಕೇಶವ ಪ್ರಸಾದ್ ಸೂರ್ಡೇಲು ಅವರು ಪುತ್ತೂರಿನ ವಿವೇಕಾನಂದ ಡಿಗ್ರಿ ಕಾಲೇಜ ವಿದ್ಯಾರ್ಥಿ ಶ್ರೀನಿಧಿ ಆರ್.ಕಲ್ಕಡ್ ಜೊತೆಗೂಡಿ ಮೈ ಎಂಪಿಸಿಎಸ್ (ಮಿಲ್ಕ್ ಪ್ರೊಡ್ಯೂಸರ್ಸ್ ಕೊ ಆಪರೇಟಿವ್ ಸೊಸೈಟಿ) ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ.
ಈಗಾಗಲೇ ಹಾಲು ಸಂಗ್ರಹ, ದಾಸ್ತಾನು ಮತ್ತಿತರ ಮಾಹಿತಿಗಾಗಿ ಸಾಫ್ಟ್‌ವೇರ್ ಅನ್ನು ಆಯ್ದ ಸಂಘಗಳಲ್ಲಿ ಅನುಷ್ಠಾನಗೊಳಿಸಿ ಪ್ರಾಯೋಗಿಕವಾಗಿ ಪರಿಶೀಲಿಸುತ್ತಿದೆ. 728 ಸೊಸೈಟಿ ಹಾಗೂ 129 ಬಲ್ಕ್ ಮಿಲ್ಕ್ ಕೂಲರ್‌ಗಳಲ್ಲಿ ದಾಸ್ತಾನಿನ ಮಾಹಿತಿ ಕ್ಷಣಾರ್ಧದಲ್ಲಿ ಸಿಗುವಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ.
ಮೈ ಎಂಪಿಸಿಎಸ್ ಆಪ್ ಕಳೆದ ಮೂರು ತಿಂಗಳಿನಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಹೈನುಗಾರರ ಮನೆಯ ಮಾತಾಗಿದೆ. ಅಲ್ಲದೆ ಈ ಆಪ್ ಹೈನುಗಾರರಿಗೆ ಸಂಪೂರ್ಣ ಉಚಿತವಾಗಿದ್ದು, ಕೇವಲ 5 ಎಂ ಬಿ ಹೊಂದಿದೆ ಹಾಗೂ ಗೂಗಲ್ ಪ್ಲೇಸ್ಟೋರ್‍ನಲ್ಲಿ ಲಭ್ಯವಿದೆ. ಹಾಲಿನ ಡೈರಿಯವರು ಅತೀ ಕಡಿಮೆ ಸರ್ವರ್ ದರವನ್ನು ಪಾವತಿಸಿ ತಮ್ಮ ಸಂಘಕ್ಕೆ ಹಾಲು ಪೂರೈಸುವ ಹೈನುಗಾರರಿಗೆ ಈ ಆ್ಯಪ್ ಬಳಸುವ ಅವಕಾಶ ಮಾಡಿಕೊಡಬಹುದಾಗಿದೆ.
ಏನಿದು ಮೈ ಎಂಪಿಸಿಎಸ್ ಆಪ್ ?
ಈ ಆಪ್ ಮೂಲಕ ಹೈನುಗಾರರು ತಾವು ಪ್ರತಿ ದಿನ ಡೈರಿಗೆ ಪೂರೈಸಿದ ಹಾಲಿನ ಪರಿಮಾಣ ಹಾಗೂ ಗುಣಮಟ್ಟವನ್ನು ಯಾವಾಗ ಬೇಕಾದರೂ ನೋಡಬಹುದು.ವಿವರವಾದ(1 ವರ್ಷ ತನಕದ) ಹಾಲು ಪೂರೈಕೆಯ ವರದಿಗಳನ್ನು ನೋಡಬಹುದು. ಬಹಳ ಮುಖ್ಯವಾಗಿ ಹೈನುಗಾರರಿಗೆ ಸೂಚನೆಗಳನ್ನು ಕೂಡಾ ಯಾವುದೇ ಸಮಯದಲ್ಲಿ ನೀಡಬಹುದು.
ಹೈನುಗಾರರಿಗೆ ಬೇಕಾದ ಇತರ ಸಲಹೆ–ಸೂಚನೆಗಳನ್ನು ಈ ಆ್ಯಪ್ ಮೂಲಕ ನೀಡಲೂ ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ ಮೊ. 73534 07473ಗೆ ಸಂಪರ್ಕಿಸಬಹುದು. ಮೈ ಎಪಿಸಿಎಸ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ. https://play.google.com/store/apps/details?id=com.app.mympcs
----
ಲಾಕ್ಡೌನ್ ವೇಳೆ ಹಾಲು ಉತ್ಪಾದಕ ಸಂಘಗಳಲ್ಲಿ ಕೊರೋನಾ ಸಿಷ್ಟಾಚಾರ ಪಾಲನೆ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೈನುಗಾರಿಕಾ ಕ್ಷೇತ್ರದಲ್ಲಿ ಡಿಜಿಟಲೈಸೇಷನ್ ಚಿಂತನೆ ಫಲವಾಗಿ ಮೈ ಎಂಪಿಎಸಿಎಸ್ ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ. ಇದು ಕೊರೋನಾ ಸಂಕಷ್ಟದ ಇಂತಹ ಕಷ್ಟದ ಕಾಲದಲ್ಲಿ ಹೈನುಗಾರರಿಗೆ ವರದಾನವಾಗಲಿದೆ. ಮೂರು ತಿಂಗಳಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 35ಸಂಘಗಳ 3,000ಹೈನುಗಾರರ ಹಾಲಿನ ಲೆಕ್ಕದ ತಲೆಬಿಸಿ, ತಲೆನೋವು ಈಗ ನಿವಾರಣೆಯಾಗಿದೆ.
---ಕೇಶವ ಪ್ರಸಾದ್ ಸೂರ್ಡೇಲು, ಸಾಫ್ಟ್ ವೇರ್ ಕನ್ಸಲ್ಟೆಂಟ್, ಮಂಗಳೂರು