Animal Husbandry

ಜಗತ್ತಿನಲ್ಲಿಯೇ ಅತೀ ಸಂದರವಾದ ಪುಂಗನೂರ ಹಸುವಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ......

28 May, 2021 2:41 PM IST By: KJ Staff
ಪುಂಗನೂರು ತಳಿಯ ಹಸು

ಗಾತ್ರದಲ್ಲಿ ಕುಳ್ಳಗೆ, ಮೈತುಂಬಿಕೊಂಡ ಗುಂಡಗುಂಡಗಿನ ಆಕಾರ, ಮುದ್ದಾದ ಮುಖದೊಂದಿಗೆ ಅಷ್ಟೇ ಮುದ್ದಾದ ಸೌಮ್ಯ ಸ್ವಭಾವ, ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೆ ನೋಡಿದರೆ ಮೊಗದೊಮ್ಮೆ ನೋಡಬೇಕೆನಿಸುವ ಸೌಂದರ್ಯ... ಇದಾವುದೋ ಹೆಣ್ಣಿನ ಅಂದ ಬಣ್ಣಿಸುತ್ತಿದ್ದಾರೆ ಅಂದುಕೊಂಡಿರಾ..! ಖಂಡಿತಾ ಇಲ್ಲ. ಇದು ಅತ್ಯಾಕರ್ಷಕ ಹಾಗೂ ಅಪ್ಪಟ ದೇಸಿ ತಳಿಯ ಹಸು ಒಂದರ ವರ್ಣನೆ. ಅಸಲಿಗೆ ಈ ಹಸುವೇ ಪುರಾಣಗಳಲ್ಲಿ ಉಲ್ಲೇಖಿಸಿರುವ ಕಾಮಧೇನು ಎನ್ನಲಾಗುತ್ತದೆ!

ಆಂಧ್ರಪ್ರದೇಶ ಮೂಲದ ಪುಂಗನೂರು ತಳಿಯ ಹಸುಗಳ ಅಂದವನ್ನು ಎಷ್ಟು ಬಣ್ಣಿಸಿದರೂ ಸಾಲದು. ಅವುಗಳ ರೂಪ ಅಷ್ಟೊಂದು ಸುಂದರ. ಇಷ್ಟೊಂದು ಸುಂದರವಾಗಿರುವ ಹಸುವಿನ ತಳಿ ಜಗತ್ತಿನ ಬೇರೆಲ್ಲೂ ಇಲ್ಲ ಎಂಬುದು ದೇಶದ ನಾನಾ ಭಾಗದ ರೈತರು ಹಾಗೂ ಪಶು ಸಂಗೋಪನಾ ವಲಯದ ಪರಿಣಿತರ ಅಭಿಪ್ರಾಯ. ಪಕ್ಕದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಗ್ರಾಮ ಈ ಹಸುಗಳ ಮೂಲ ಸ್ಥಾನ. ಹೀಗಾಗಿಯೇ ಹಸುಗಳ ತಳಿಗೆ ಗ್ರಾಮದ ಹೆಸರೇ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಹಳ್ಳಿಕಾರ್, ಅಮೃತಮಹಲ್, ಗಿರ್, ಸಹಿವಾಲ್ ರೀತಿಯ ಹಲವಾರು ದೇಸಿ ತಳಿ ಹಸುಗಳ ಸಾಕಣೆಗೆ ರೈತರು ಹಾಗೂ ಇತರರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ದೇಸಿ ತಳುಗಳನ್ನು ಸಂರಕ್ಷಿಸುವ ಕೆಲಸವನ್ನು ಹಲವಾರು ತಂಡಗಳು, ಸ್ವಯಂ ಸೇವಕರ ಸಂಘಗಳು ಸಕ್ರಿಯವಾಗಿ ಮಾಡುತ್ತಿವೆ. ಮಠ ಮಾನ್ಯಗಳು, ಗೋ ರಕ್ಷಾ ಸಮಿತಿಗಳು ತೆರೆದಿರುವ ಗೋಶಾಲೆಗಳಲ್ಲೂ ದೇಸಿ ಹಸುವಿನ ತಳಿಗಳ ಸಂರಕ್ಷಣೆಯ ಕಾರ್ಯ ಸಾಂಗವಾಗಿ ನಡೆಯುತ್ತಿದೆ. ಆದರೆ ಹಿಂದೊಮ್ಮೆ ಜಗತ್ತಿನಾದ್ಯಂತ ಸದ್ದು ಮಾಡಿದ್ದ, ತನ್ನ ಅಂದ, ಗುಣ ವಿಶೇಷಗಳಿಂದ ಮನೆಮಾತಾಗಿದ್ದ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ಪುಂಗನೂರು ಹಸುಗಳ ಹೆಸರು ಮಾತ್ರ ದೇಸಿ ರಾಸುಗಳ ತಳಿಯ ಪಟ್ಟಿಯಿಂದ ಹೇಳದೇ-ಕೇಳದೆ ಮಂಗಮಾಯವಾಗಿದೆ.

ನೋಡಿದವರೇ ಕಡಿಮೆ

ಪುಂಗನೂರು ತಳಿ ಹಸುಗಳನ್ನು ಇತ್ತೀಚಿನ ಯುವ ಪೀಳಿಗೆಯ ಮಂದಿ ನೋಡಿರಲಿಕ್ಕಿಲ್ಲ. ಎಲ್ಲೋ ಹಳ್ಳಿಗಳಲ್ಲಿರುವ ಹಿರಿಯ ತಲೆಮಾರಿನ ಯಜಮಾನರು ಮಾತ್ರ ಈ ಹಸುಗಳನ್ನು ನೋಡಿರಲು ಸಾಧ್ಯ. ಅಂಥ ಹಿರಿಯರನ್ನು ಕೇಳಿದರೆ ಈ ಸ್ಪುರದ್ರೂಪಿ ಹಸುಗಳ ಅಂದವನ್ನು ಗಂಟೆಗಟ್ಟಲೇ ಹೊಗಳುತ್ತಾರೆ. ಕೆಲವರು ಕಣ್ಣಿಗೆ ಕಟ್ಟುವಂತೆ ಅವುಗಳ ಅಂದ ಬಣ್ಣಿಸುತ್ತಾರೆ. ಆದರೆ ಇತ್ತೀಚೆಗೆ ಪುಂಗನೂರು ಹಸುಗಳು ಮರೆಯಾಗುತ್ತಿವೆ. ಆಂಧ್ರಪ್ರದೇಶದ ಕೆಲವೇ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ಬೇರೆಡೆ ಇವುಗಳ ಇರುವುಕೆ ಅಪರೂಪ. ಕರ್ನಾಟಕದ ಕರಾವಳಿ ಭಾಗದಲ್ಲಿ ಒಂದೆರಡು ಹಸುಗಳು, ಆಂಧ್ರದ ಗಡಿ ಭಾಗದಲ್ಲಿರುವ ಕರ್ನಾಟಕದ ಕೆಲ ಊರುಗಳಲ್ಲಿ ಈ ಹಸು, ಕರುಗಳನ್ನು ಕಾಣಬಹುದು.

 ಅಂದದೊಂದಿಗೆ ಹಲವು ವಿಶೇಷ

ನೋಡಲು ಅಂದವಾಗಿವೆ ಎಂಬ ಕಾರಣಕ್ಕಷ್ಟೇ ಪುಂಗನೂರು ಹಸುಗಳು ಜನಪ್ರಿಯವಾಗಿಲ್ಲ. ಬದಲಿಗೆ, ಪುರಾಣದಲ್ಲಿ ಕಾಮಧೇನು ಎಂದು ಉಲ್ಲೇಖಿಸಲ್ಪಟ್ಟಿರುವ ಈ ಹಸುಗಳು ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿವೆ. ಇವುಗಳ ಹಾಲಿನಲ್ಲಿ ಕೊಬ್ಬಿನ ಅಂಶ ಯಥೇಚ್ಚವಾಗಿರುತ್ತದೆ. ಜೊತೆಗೆ ಇವುಗಳ ಹಾಲು ಔಷಧಿ ಗುಣಗಳ ಆಕರವಾಗಿದೆ. ಈ ಹಾಲನ್ನು ಪ್ರತಿನಿತ್ಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎನ್ನುತ್ತಾರೆ ಪಶು ತಜ್ಞರು.

ತಿಮ್ಮಪ್ಪನಿಗೂ ಬೇಕು ಇದೇ ಹಾಲು!

ತಿರುಮಲ ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿ ನೆಲೆನಿಂತು ಜಗತ್ತಿನ ಲೀಲಾ ವಿನೋದಗಳನ್ನೆಲ್ಲಾ ಗಮನಿಸುವ ಶ್ರೀ ತಿರುಪತಿ ವೆಂಕಟರಮಣ (ತಿರುಪತಿ ತಿಮ್ಮಪ್ಪ) ಸ್ವಾಮಿಗೂ ಪುಂಗನೂರು ಗೋವಿಗೂ ಅವಿನಾಭಾವ ಸಂಬಂಧವಿದೆ. ಇಂದಿಗೂ ಪ್ರತಿ ನಿತ್ಯ ತಿಮ್ಮಪ್ಪನ ಅಭಿಷೇಕ, ನೈವೇದ್ಯಕ್ಕೆ ಸಲ್ಲುತ್ತಿರುವುದು ಇದೇ ದೇಸಿ ಪುಂಗನೂರು ತಳಿ ಹಸುವಿನ ಹಾಲು. ಹೀಗಾಗಿ ಧಾರ್ಮಿಕವಾಗಿಯೂ ಈ ಹಸುಗಳು ಮಹತ್ವ ಪಡೆದಿವೆ.

 ಅಧಿಕ ಫ್ಯಾಟ್

ಹಾಲಿನಲ್ಲಿ ಕೊಬ್ಬಿನ ಅಂಶ ಅಧಿಕವಾಗಿದ್ದರೆ ಅದರಿಂದ ಹೆಚ್ಚು ಬೆಣ್ಣೆ ತೆಗೆಯಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸಾಮಾನ್ಯವಾಗಿ ಎಮ್ಮೆಗಳ ಹಾಲಿನಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ. ಆದರೆ, ಈ ವಿಚಾರದಲ್ಲಿ ಪುಂಗನೂರು ತಳಿ ಹಸುಗಳು ಎಮ್ಮೆಗಳನ್ನೂ ಹಿಂದಿಕ್ಕುತ್ತವೆ. ಸಾಮಾನ್ಯ ಹಸುಗಳ ಹಾಲಿನಲ್ಲಿ ಶೇ.3.5 ರಷ್ಟು ಕೊಬ್ಬಿನ ಅಂಶವಿದ್ದರೆ, ಎಮ್ಮೆಗಳ ಹಾಲಿನಲ್ಲಿ ಶೇ. 5 ರಿಂದ ಶೇ.6ರ ಪ್ರಮಾಣದಲ್ಲಿ ಫ್ಯಾಟ್ ಇರುತ್ತದೆ. ಆದರೆ, ಪುಂಗನೂರು ಹಸುಗಳ ಹಾಲಿನಲ್ಲಿ ಶೇ. 8 ರಷ್ಟು ಕೊಬ್ಬಿನ ಅಂಶವಿರುತ್ತದೆ.

ಬಿಸಿಲಿಗೆ ಬೆಚ್ಚದ ಹಸು

ಸಾಮಾನ್ಯವಾಗಿ ಬೂದು, ತಿಳಿಗೆಂಪು ಹಾಗೂ ಬಿಳಿ ಬಣ್ಣ ಹೊಂದಿರುವ ಪುಂಗನೂರು ಹಸುಗಳು ಎಂಥ ಬಿರು ಬಿಸಿಲಿಗೂ ಜಗ್ಗುವುದಿಲ್ಲ. ಅತಿ ಹೆಚ್ಚು ಉಷ್ಣಾಂಶವಿರುವ ಪ್ರದೇಶಗಳಲ್ಲೂ ಹೊಂದಿಕೊAಡು ಬೆಳೆಯುವ ಗುಣ ಈ ಹಸುಗಳಿಗಿದೆ. ಈ ಹಸುವಿನ ಕೊಂಬುಗಳು ಚಿಕ್ಕದಾಗಿರುತ್ತವೆ. ಹಣೆ ಭಾಗ ವಿಶಾಲವಾಗಿದ್ದು, ಬಾಲವು ದೇಹದ ಎತ್ತರದಷ್ಟೇ ಇರುತ್ತದೆ. ಸರಾಸರಿ 65ರಿಂದ 95 ಸೆಂ.ಮೀ ಎತ್ತ ಬೆಳೆಯುವ ಈ ಹಸುಗಳ ದೇಹದ ತೂಕ 110ರಿಂದ 225 ಕೆ.ಜಿ ಇರುತ್ತದೆ. ಚೆನ್ನಾಗಿ ತಿಂದುಂಡು ಬೆಳೆದ ಹಸುಗಳು 300 ಕಿಲೋವರೆಗೂ ತೂಗುತ್ತವೆ. ಗರಿಷ್ಠ 5.5 ಲೀಟರ್ ಹಾಲು ಕರೆಯುವ ಈ ಗೋವುಗಳಿಗೆ ನಿತ್ಯ 6 ಕೆ.ಜಿಯಷ್ಟು ಆಹಾರ ಬೇಕೇಬೇಕು.

 ಭಾರೀ ದುಬಾರಿ ಹಸು

ನೀವು ಒಂದೇ ಒಂದು ಪುಂಗನೂರು ತಳಿಯ ಕರು ಖರೀದಿಸಬೇಕೆಂದರೂ ಕೈಯಲ್ಲಿ ಕನಿಷ್ಠ 1.5 ಲಕ್ಷದಿಂದ 2 ಲಕ್ಷ ರೂ. ಇರಬೇಕು. ಇನ್ನು ಹಸುಗಳ ಬೆಲೆ 2.5 ಲಕ್ಷಕ್ಕೂ ಅಧಿಕ. ಇತ್ತೀಚೆಗೆ ಇವುಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಬೆಲೆ 3 ಲಕ್ಷ ಮೀರಿದರೂ ಅಚ್ಚರಿಯಿಲ್ಲ. ಇನ್ನು ಇದರ ಹಾಲಿನಲ್ಲಿ ಔಷಧೀಯ ಗುಣ ಇರುವ ಕಾರಣ ತುಪ್ಪ ಕೂಡ ಶ್ರೇಷ್ಠವಾಗಿರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ತುಪ್ಪದ ಬೆಲೆ 4500ರಿಂದ 6000 ರೂ.ವರೆಗೆ ಇದೆ. ವಿಶೇಷವೆಂದರೆ ಹಸುವಿನ ಕೊಂಬುಗಳನ್ನು ನೋಡಿ ತಳಿಯ ಶುದ್ಧತೆಯನ್ನು ಕಂಡುಹಿಡಿಯಲಾಗುತ್ತದೆ.

ಪುರಾಣದ ಕಾಮಧೇನು!

ಪುರಾಣಗಳಲ್ಲಿ ಕಾಮಧೇನುವಿನ ಬಗ್ಗೆ ನೀವು ಕೇಳಿರುತ್ತೀರ. ಆ ಕಾಮಧೇನು ಬೇರಾವುದೂ ಅಲ್ಲ, ಇದೇ ಪುಂಗನೂರು ತಳಿಯ ಹಸು ಎನ್ನಲಾಗುತ್ತದೆ. ಜೊತೆಗೆ ಹಿಂದೆಲ್ಲಾ ಈ ಹಸುಗಳನ್ನು ರಾಜರು, ಆಗರ್ಭ ಶ್ರೀಮಂತರು ಮಾತ್ರ ಸಾಕುತ್ತಿದ್ದರು ಎಂದು ಕೆಲ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಈ ತಳಿಯನ್ನು ಅಭಿವೃದ್ಧಿಪಡಿಸಿದ್ದು ಆಂಧ್ರಪ್ರದೇಶದ ರಾಜ ಮನೆತನಗಳು ಎಂದು ಹೇಳಲಾಗುತ್ತದೆ. ಮೂಲ ಒಂದರ ಪ್ರಕಾರ ದೇಶದಲ್ಲಿ ಈಗ ಉಳಿದಿರುವುದು 60 ಪುಂಗನೂರು ಹಸುಗಳು ಮಾತ್ರ!