Animal Husbandry

ಹಸುವಿನ ಗಂಜಲದಲ್ಲಿ ಅಡಗಿದೆ ಮಣ್ಣು, ಬೆಳೆಗಳನ್ನು ಪೋಷಿಸುವ ಅಖಂಡ ಶಕ್ತಿ

17 August, 2021 1:17 PM IST By:

ಭಾರತದಲ್ಲಿ ಹಸು ಒಂದು ಪೂಜನೀಯ ಪ್ರಾಣಿ. ಹಸುವಿಗೆ ಮಾತೆಯ ಸ್ಥಾನವನ್ನು ನೀಡಿರುವ ಭಾರತೀಯರು ಅದನ್ನು ನಿತ್ಯ ಪೂಜಿಸುತ್ತೇವೆ. ಹಾಗೇ ಹಸುವಿನ ಗಂಜಲ, ಸಗಣಿಗೂ ಭಾರತೀಯ ಸಂಪ್ರದಾಯದಲ್ಲಿ ಶ್ರೇಷ್ಠ ಸ್ಥಾನವಿದೆ. ರೈತರ ಮನೆಗಳಲ್ಲಿ ಹಸುವಿನ ಸಗಣಿಯಿಂದ ವಿಜ್ಞೇಶ್ವರನನ್ನು ಮಾಡಿ ನಿತ್ಯ ಪೂಜಿಸುತ್ತಾರೆ. ಮನೆಯ ಮುಖ್ಯ ಬಾಗಿಲಿನ ಬಳಿ ಈ ವಿಜ್ಞೇಶ್ವರನನ್ನು ಇರಿಸಿದರೆ ಯಾವುದೇ ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ರೈತ ಕುಟುಂಬಗಳದ್ದು.

ಹಾಗೇ ಹಸುವಿನ ಗಂಜಲವನ್ನು ಮನೆಯ ಮೂಲೆ ಮೂಲೆಗೂ ಸಿಂಪಡಿಸಿದರೆ ದುಷ್ಟ ಶಕ್ತಿಗಳು ನಾಶವಾಗುತ್ತವೆ ಎಂಬ ನಂಬಿಕೆಯೂ ಭಾರತೀಯರಲ್ಲಿದೆ. ಮುಖ್ಯವಾಗಿ ಸೂರ್ಯ, ಚಂದ್ರ ಗ್ರಹಣಗಳು ಸಂಭವಿಸಿದಾಗ ಹಸುವಿನ ಗಂಜಲ ಹಿಡಿದು ತಂದು ಅದನ್ನು ಮನೆಯ ತುಂಬಾ ಸಂಪ್ರೋಕ್ಷಣೆ ಮಾಡಲಾಗುತ್ತದೆ. ಇನ್ನು ಹಬ್ಬ ಹರಿದಿನಗಳ ಸಂದರ್ಭದಲ್ಲೂ ಪೂಜೆಗೆ ಮೊದಲು ಗೋ ಮೂತ್ರವನ್ನು ಮನೆಯ ತುಂಬಾ ಸಿಂಪಡಿಸುತ್ತಾರೆ. ಒಂದು ದೃಷ್ಟಿಯಿಂದ ದೈವಿಕ ಸ್ಥಾನವನ್ನೇ ಪಡೆದಿರುವ ಈ ಹಸುವಿನ ಗಂಜಲವು ರೈತರ ಕೃಷಿ ಅಭ್ಯಾಸದಲ್ಲೂ ಸಾಕಷ್ಟು ಕೆಲಸಕ್ಕೆ ಬರುತ್ತದೆ. ಈಗಾಗಲೇ ಹಲವಾರು ಕೃಷಿಕರು ತಮ್ಮ ಬೆಳೆಗಳ ಉಪಚಾರದಲ್ಲಿ ಹಸುವಿನ ಗಂಜಲ ಬಳಸಿ ಮಾದರಿಯಾಗಿದ್ದಾರೆ.

ಜೀವಾಮೃತ

ಮೊದಲನೆಯದಾಗಿ ಕೃಷಿಯಲ್ಲಿ ಹಸುವಿನ ಗಂಜಲ ಅತಿ ಹೆಚ್ಚಾಗಿ ಬಳಕೆಯಾಗುವುದು ಜೀವಾಮೃತ ತಯಾರಿಕೆಗೆ. ಹೆಸರೇ ಹೇಳುವಂತೆ ಜೀವಾಮೃತವು ಬೆಳೆಗಳ ಪಾಲಿಗೆ ಅಮೃತವಾಗಿಯೇ ಕೆಲಸ ಮಾಡುತ್ತದೆ. ಹಸುವಿನ ಗಂಜಲ, ಸಗಣಿ, ದ್ವಿದಳ ಧಾನ್ಯದ ಹಿಟ್ಟು, ಬೆಲ್ಲ ಮತ್ತಿತರ ಸಾಮಗ್ರಿ ಬಳಸಿ ತಯಾರಿಸಲಾಗುವ ಜೀವಾಮೃತ, ಬೆಳೆಗಳಲ್ಲಿನ ರೋಗ ನಿರ್ವಹಣೆ, ಮಣ್ಣಿನ ಗುಣಮಟ್ಟ ಹೆಚ್ಚಳ ಮತ್ತು ಎರೆ ಹುಳು ಸೇರಿದಂತೆ ಹಲವು ಮಣ್ಣು ಜೀವಿಗಳ ಸಂಖ್ಯೆ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿಯೇ ಸಾವಯವ ಕೃಷಿ ಪದ್ಧತಿಯಲ್ಲಿ ಜೀವಾಮೃತಕ್ಕೆ ಮಹತ್ವದ ಸ್ಥಾನವಿದೆ.

ಪ್ರಮುಖವಾಗಿ ಹೈನು ಉದ್ದೇಶಕ್ಕಾಗಿ ಹಸುಗಳನ್ನು ಸಾಕುವ ರೈತರು, ಆ ಹಸುಗಳಿಂದ ಲಭ್ಯವಾಗುವ ತ್ಯಾಜ್ಯವನ್ನು ಸದುಪಯೋಗ ಪಡಿಸಿಕೊಳ್ಳುವತ್ತ ಗಮನ ಹರಿಸುವುದು ಕಡಿಮೆ. ಹಸು ಸಾಕುವವರು ಸಾಮಾನ್ಯವಾಗಿ ಹಸುವಿನ ಗಂಜಲ ಮತ್ತು ಮೈ ತೊಳೆದ ನೀರನ್ನು ಚರಂಡಿಗಳಿಗೆ ಹರಿಬಿಟ್ಟರೆ ಸಗಣಿಯನ್ನು ಮಾತ್ರ  ತಿಪ್ಪೆಗೆ ಹಾಕಿ ಗೊಬ್ಬರವಾಗಿ ಬಳಸುತ್ತಾರೆ. ಆದರೆ ಹಸುಗಳ ಗಂಜಲದಲ್ಲಿ ಬೆಳೆಗಳನ್ನು ಪೋಷಿಸುವ ಅಖಂಡ ಶಕ್ತಿ ಅಡಗಿದೆ. ಆದರೆ ಅದರ ಅರಿವಿಲ್ಲದ ರೈತರು ಅದನ್ನು ವ್ಯರ್ಥವಾಗಿ ಚರಂಡಿಗೆ ಹರಿಬಿಡುತ್ತಿರುವುದು ವಿಪರ್ಯಾಸ.

ಮಣ್ಣಿನ ಪುನಶ್ಚೇತನ

ವರ್ಷವಿಡೀ ಬೆಳೆಗಳನ್ನು ಬೆಳೆಯುವುದರಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತದೆ. ಅದರಲ್ಲೂ ರಾಸಾಯನಿಕ ಕೃಷಿ ಪದ್ಧತಿ ಅನುಸರಿಸಿ ಬೆಳೆ ಬೆಳೆಯುವ ಹೊಲಗಳಲ್ಲಿನ ಮಣ್ಣು ನಿರ್ಜೀವವಾಗಿರುತ್ತದೆ. ಹೀಗಾಗಿ, ಆ ಮಣ್ಣನ್ನು ಮತ್ತೆ ಸಜೀವಗೊಳಿಸಲು ಅಥವಾ ಮಣ್ಣಿಗೆ ಮರು ಜೀವ ನೀಡಲು ಹಸುವಿನ ಗಂಜಲ ಹಾಗೂ ಸಗಣಿಯ ಬಳಕೆ ಅತಿ ಮುಖ್ಯವಾಗಿದೆ. ಸಗಣಿ ಮತ್ತು ಗೋ ಮೂತ್ರದಲ್ಲಿರುವ ಸಾವಯವ ಅಂಶಗಳು ಮಣ್ಣಿನ ಫಲವತ್ತತೆ ವೃದ್ಧಿಸುತ್ತವೆ. ಜೊತೆಗೆ ಮಣ್ಣಿನಲ್ಲಿ ಎರೆ ಹುಳುಗಳ ಸಂಖ್ಯೆ ವೃದ್ಧಿಸಲು ನೆರವಾಗುತ್ತವೆ. ಇದರೊಂದಿಗೆ ಮಣ್ಣಿನಲ್ಲಿ ಜೀವಿಸುವ ಹಾಗೂ ತಮ್ಮ ಇರುವಿಕೆಯಿಂದ ಮಣ್ಣನ್ನು ಫಲವತ್ತಾಗಿಸುವ ಸೂಕ್ಶ್ಮ ಜೀವಿಗಳ ವೃದ್ಧಿಗೂ ಸಹ ಗೋ ತ್ಯಾಜ್ಯ ಪೂರಕವಾಗಿದೆ.

ಇಂಗಾಲ, ಸಾರಜನಕ ರಂಜಕ ವೃದ್ಧಿ

ಫಲವತ್ತಾದ ಮಣ್ಣಿನಲ್ಲಿ ಇಂಗಾಲ, ರಂಜಕ, ಸಾರಜನಕ, ಪೊಟ್ಯಾಷ್, ಸತು ರೀತಿಯ ಪೋಷಕಾಂಶಗಳು ಇರುಬೇಕಾದ್ದು ಅತಿ ಮುಖ್ಯ. ಅದರಲ್ಲೂ ಇಂಗಾಲವು ಬೆಳೆಗಳ ಬೆಳವಣಿಗೆಗೆ ಅತಿ ಮುಖ್ಯವಾಗಿ ಬೇಕಿರುವ ಪೋಷಕಾಂಶವಾಗಿದೆ. ಮಣ್ಣಿನಲ್ಲಿ ಇರದ ಪ್ರಮಾಣ ಹೆಚ್ಚಿಸಲು ಸಾವಯವ ಕೃಷಿಗೆ ಒತ್ತುಕೊಡಬೇಕಾದ್ದು ಮುಖ್ಯವಾಗಿದೆ. ಅದರಲ್ಲೂ ಹಸಿರೆಲೆ ಗೊಬ್ಬರ ಮತ್ತು ಹಸುವಿನ ಗಂಜಲವನ್ನು ಕೃಷಿ ಭೂಮಿಗೆ ಹಾಕುವುದರಿಂದ  ಮಣ್ಣು ಸಂಪದ್ಭರಿತವಾಗುತ್ತದೆ.

ಗಂಜಲದಲ್ಲಿ ಪೋಷಕಾಂಶ ಪ್ರಮಾಣ

ದೇಶಿ ಹಸುವಿನ ಗಂಜಲದಲ್ಲಿ ಶೇ.8.53ರಷ್ಟು ರಸಸಾರ, ಶೇ.0.64ರಷ್ಟು ಇಂಗಾಲ, ಶೇ.0.75ರಷ್ಟು ಸಾರಜನಕ, ಶೇ.0.012 ರಂಜಕ, ಶೇ.0.62 ಪೊಟ್ಯಾಷ್ ಹಾಗೂ ಶೇ.1.56ರಷ್ಟು ಸತು ಇರುತ್ತದೆ. ದೇಶಿ ಹಸುಗಳಲ್ಲೇ ಶ್ರೇಷ್ಠ ಸ್ಥಾನಮಾನ ಹೊಂದಿರುವ ಗಿರ್ ಹಸುಗಳ ಗಂಜಲದಲ್ಲಿ ಈ ಪೋಷಕಾಂಶಗಳ ಪ್ರಮಾಣ ಹೆಚ್ಚಾಗಿರುತ್ತದೆ. ಇನ್ನು ನಾವು ನಿತ್ಯ ಸಿದ್ಧ ಆಹಾರ ನೀಡಿ ಪೋಷಿಸುವ ಜರ್ಸಿ, ಹೆಚ್‌ಎಫ್ ಮತ್ತಿತರ ಹೈ ಬ್ರೀಡ್ ಹಸುಗಳ ಗಂಜಲವು ಶೇ.8.94 ರಸಸಾರ, ಶೇ.1.13 ಇಂಗಾಲ, ಶೇ.1.56 ಸಾರಜನಕ, ಶೇ.0.029 ರಂಜಕ, ಶೇ.1.50 ಪೊಟ್ಯಾಷ್, ಶೇ.6.7 ಸತುವನ್ನು ಒಳಗೊಂಡಿರುತ್ತದೆ. ಹೀಗಾಗಿ ದೇಶಿ ಜವಾರಿ ಹಸುಗಳಿಗಿಂತಲೂ ಹೈ ಬ್ರೀಡ್ ಹಸುಗಳ ಗಂಜಲದಲ್ಲಿ ಹೆಚ್ಚು ಪೋಷಕಾಂಶಗಳಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಹಸುಗಳ ಗಂಜಲದಲ್ಲಿ ಜೀವಾಅಮೃತ, ಗೋ ಕೃಪಾಮೃತ ಜಲ, ದಶಪರ್ಣಿ ಮೊದಲಾದ ಸಾವಯವ ದ್ರವ ರೂಪದ ಗೊಬ್ಬರಗಳು ಹಾಗೂ ಕೀಟ ನಾಶಕ ದ್ರಾವಣಗಳನ್ನು ಸಿದ್ಧಪಡಿಸಬಹುದಾಗಿದೆ. ಇವುಗಳನ್ನು ಬೆಳೆಗಳಿಗೆ ಸಿಂಪಡಿಸುವುದರಿAದ ಎಲ್ಲಾ ರೀತಿಯ ರೋಗಗಳನ್ನು ನಿಯಂತ್ರಿಸಬಹುದು. ಅಲ್ಲದೆ ಹಾನಿಕಾರಕ ಕೀಟಗಳ ನಿಯಂತ್ರಣದಲ್ಲೂ ಹಸುವಿನ ಗಂಜಲದಿAದ ತಯಾರಿಸುವ ದ್ರವರೂಪದ ಪೋಷಕಾಂಶ, ಕೀಟನಾಶಕಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ.

ಹಸುವಿನ ತ್ಯಾಜ್ಯಗಳಿಂದ ಬೆಳೆಗಳಿಗೆ ಪೂರಕವಾಗಿರುವ ದ್ರವ ರೂಪದ ಪೋಷಕಶಂಗಳನ್ನು ಸಿದ್ಧಪಡಿಸಿಕೊಳ್ಳುವ ವಿಧಾನಗಳು ಸಹ ಅತ್ಯಂತ ಸುಲಭವಾಗಿವೆ. ಹೀಗಾಗಿ ರೈತರು, ಎಲ್ಲದಕ್ಕೂ ರಾಸಾಯನಿಕ ಗೊಬ್ಬರ, ಹಾನಿಕಾರಿಕ ಹಾಗೂ ವಿಷಕಾರಿ ಕೀಟನಾಶಕಗಳನ್ನು ಬಳಸುವ ಬದಲು ಸಾವಯವ ಮತ್ತು ಗೋ ಜನ್ಯ ಉತ್ಪನ್ನಗಳನ್ನು ಮನೆಯಲ್ಲೇ ತಯಾರಿಸಿಕೊಂಡು ಬೆಳೆಗಳಿಗೆ ಸಿಂಪಡಿಸಬೇಕು. ಇದರಿಂದ ಬೆಳೆಗಳು ಉತ್ತಮವಾಗಿ ಬೆಳೆಯುತ್ತವೆ, ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಎಲ್ಲಕ್ಕಿಂಲೂ ಮುಖ್ಯವಾಗಿ ರಾಸಾಯನಿಕ ವಿಷಮುಕ್ತವಾಗಿರುವ ಆಹಾರ ಧಾನ್ಯಗಳು ಸೇವನೆಗೆ ಸಿಗುತ್ತವೆ.