Animal Husbandry

ರಾಸುಗಳಲ್ಲಿ ಕೆಚ್ಚಲುಬಾವು ಲಕ್ಷಣಗಳು ಮತ್ತು ಚಿಕಿತ್ಸೆ

01 January, 2021 2:50 PM IST By:

ಹೈನುರಾಸು ಗಳಲ್ಲಿ ಕೆಚ್ಚಲು ಬೇನೆ ಕಾಣಿಸಿಕೊಳ್ಳುತ್ತದೆ, ಇದರಿಂದಾಗಿ ರಾಸುಗಳು ಹಾಲು ಕಡಿಮೆ ನೀಡುವುದರ ಜೊತೆಗೆ ಆರೋಗ್ಯ ಗುಣಮಟ್ಟವೂ ಸಹ ಕಡಿಮೆಯಾಗುತ್ತದೆ. ಯಂತ್ರದ ಸಹಾಯದಿಂದ ಹಾಲನ್ನು ಕರೆಯುವರು ಈ ಸಮಸ್ಯೆ ಕಡಿಮೆ ಪ್ರಮಾಣದಲ್ಲಿ ನೋಡಬಹುದು. ಆದರೆ ಕೈಗಳಿಂದ ಹಾಲನ್ನು ಕರೆದರೆ ಈ ಸಮಸ್ಯೆ ಕಾಣುತ್ತದೆ.

ಹೈನುಗಾರಿಕೆ ಯೊಂದು ಪ್ರಮುಖ ಆದಾಯದ ಮೂಲವಾಗಿದೆ. ವರ್ಷಪೂರ್ತಿ ಉದ್ಯೋಗ ಜೊತೆಗೆ ಮನೆಗೆ ಪೌಷ್ಟಿಕ ಹಾಲು ಮತ್ತು ಗೊಬ್ಬರ ಸಿಗುತ್ತದೆ. ಆಧುನಿಕ ದಿನಗಳಲ್ಲಿ ಹಾಲು ಉದ್ಯಮವನ್ನು ಪ್ರಾರಂಭಿಸಿ ಹಲವಾರು ರೈತರು ಯಶಸ್ಸನ್ನು ಕಂಡಿದ್ದಾರೆ. ಈಗಿನ ಕಾಲದಲ್ಲಿ ಹೈನುಗಾರಿಕೆ ಒಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.  ಆದಾಯ ಮೂಲ ಆಗಿರುವುದರಿಂದ ನಾವು ರಾಸುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು.

ಕೆಚ್ಚಲು ಬೇನೆ:

ಕೆಚ್ಚಲು ಗ್ರಂಥಿಗಳಿಗೆ ಉರಿಯುತ ಉಂಟಾಗಿ ಹಾಲು ಕೆಟ್ಟಾಗ,ಕೆಚ್ಚಲು ಬೇನೆ ಅಥವಾ ಕೆಚ್ಚಲುಬಾವು ಆಗಿದೆ ಎಂದು ಹೇಳಬಹುದು.ಇದು ಹಸು,ಎಮ್ಮೆ, ಮೇಕೆ,ಕುರಿಗಳಲ್ಲಿ ಕಂಡುಬರುತ್ತದೆ. ಅಧಿಕ ಹಾಲು ನೀಡುವ ಮಿಶ್ರತಳಿ ರಾಸುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಕೆಚ್ಚಲು ಬೇನೆಗೆ ಕಾರಣಗಳು

ಕೆಚ್ಚಲು ಬೇನೆಗೆ ಬ್ಯಾಕ್ಟೀರಿಯಾ, ವೈರಸ್, ಶಿಲಿಂದ್ರಗಳ ಅಂತಹ ಜೀವಾಣುಗಳು ಮತ್ತು ವಿಷಾಣುಗಳು ಕಾರಣವಾಗಿವೆ. ರಾಸುಗಳಲ್ಲಿ ಹಾಲನ್ನು ಸರಿಯಾದ ನಿಗದಿತ ಸಮಯಕ್ಕೆ ಹಿಂದಿದ್ದರೆ, ಮತ್ತು ಕೆಚ್ಚಲಿನ ಗ್ರಂಥಿಯಲ್ಲಿ ಉಳಿದಿರುವ ಹಾಲಿನಲ್ಲಿ ರೋಗಾಣುಗಳು ಹುಟ್ಟುತ್ತವೆ, ಇದು ಕೆಚ್ಚಲುಬಾವಿಗೆ ಕಾರಣವಾಗುತ್ತದೆ.

ಯಾವುದೇ ಕಾರಣದಿಂದಾಗಿ ಕೆಚ್ಚಲಿಗೆ ಪೆಟ್ಟು ಮತ್ತು ಗಾಯವಾದ ಕಾರಣಗಳಿಂದ  ಕೆಚ್ಚಲುಬಾವು ಉಂಟಾಗುತ್ತದೆ.  ಮಲಿನವಾದ ಜಾಗದಲ್ಲಿ ರಾಸುಗಳು ಕುಳಿತಾಗ ಸೂಕ್ಷ್ಮಾಣು ಜೀವಿಗಳು ಮೊಲೆತೊಟ್ಟುಗಳ ಮೂಲಕ ಗ್ರಂಥಿಗಳಿಗೆ ಸೇರುವುದರಿಂದ ಸಹ ಕೆಚ್ಚಲು ಬೇನೆ ಉಂಟಾಗುತ್ತದೆ.

ಕಾಲುಬಾಯಿ ಜ್ವರ,ಸಿಡುಬು ರೋಗ ಮುಂತಾದವುಗಳ ಜೊತೆಗೆ ಕೆಚ್ಚಲು ಬೇನೆ ಸಹ ಕಾಣಿಸಿಕೊಳ್ಳಬಹುದು. ಒಂದು ವೇಳೆ ಕೆಚ್ಚಲು ಬೇನೆಯ ಉಂಟಾಗಿರುವ ರಾಸುಗಳನ್ನು ಮೊದಲು ಹಿಂಡಿ ಕೈ ತೊಳೆಯದೆ ನಂತರ ಆರೋಗ್ಯವಂತ ರಾಸುಗಳನ್ನು ಹಿಂಡಿದರು ಸಹ ಕೆಚ್ಚಲು ಬೇನೆ ಉಂಟಾಗುತ್ತದೆ.

 ಕೆಚ್ಚಲು ಬೇನೆ ಲಕ್ಷಣಗಳು:

* ಕೆಚ್ಚಲು ಬೇನೆ ಉಂಟಾದಾಗ ಮೊಲೆಗಳು ಮತ್ತು ಕೆಚ್ಚಲಿನ ಭಾಗಗಳು ಕೆಂಪಾಗಿ ಊದಿಕೊಂಡಿರುತ್ತದೆ.  ಉದಿಕೊಂಡಿರುವ ಭಾಗದಿಂದ  ನೀರಿನಂತೆ ಹಾಲು ಅಥವಾ ರಕ್ತ ಮಿಶ್ರಿತವಾದ ಅಥವಾ ಒಡೆದ ಹಾಲಿನಂತೆ ಗಡ್ಡೆಗಡ್ಡೆಯಾಗುವುದು.

* ಹಾಲು ರಕ್ತ ಅಥವಾ ಕೀವಿನಿಂದ ಕೂಡಿರುತ್ತವೆ. ಕ್ರಮೇಣವಾಗಿ ಹಾಲು ಕಡಿಮೆಯಾಗುತ್ತಾ ಹೋಗುತ್ತದೆ.  ಕೆಲವೊಂದು ಸಾರಿ ರಾಸುಗಳು ಮೇವು ನೀರು ಮುಟ್ಟದೆ ನಿಷೇಧದಿಂದ ಬಳಲುತ್ತವೆ.  ಕೆಚ್ಚಲು ಬೇನೆ  ಹೆಚ್ಚಾದಾಗ ತೊಂದರೆ ತಾಳಲಾಗದೆ ರಾಸುಗಳು ಸಾವನ್ನಪ್ಪುತ್ತವೆ.

 ಕೆಚ್ಚಲು ಬೇನೆ ತಪಾಸಣೆ:

* ಕೆಚ್ಚಲಿನ ಗಾತ್ರ, ಆಕಾರ , ಬಣ್ಣದಲ್ಲಿ ಬದಲಾವಣೆಗಳಿಂದ ಮತ್ತು ಹಾಲಿನ, ಬಣ್ಣ, ವಾಸನೆ, ಸಾಂದ್ರತೆ, ಇವುಗಳಲ್ಲಿನ ಬದಲಾವಣೆಯಿಂದ ಕೆಚ್ಚಲು ಬೇನೆಯನ್ನು ಗುರುತಿಸಬಹುದು.  ಶುಭ್ರವಾದ ಪಾತ್ರೆಯಲ್ಲಿ ಹಾಲನ್ನು ತೆಗೆದುಕೊಂಡು ಕಾಯಿಸಿದರೆ ಹಾಲು ಒಡೆಯುತ್ತವೆ.  ಇದರಿಂದ ಸಹ ಕೆಚ್ಚಲು ಬೇನೆಯನ್ನು ಗುರುತಿಸಬಹುದು.  CMT ಪರೀಕ್ಷೆ ಮೂಲಕ ರಾಸುಗಳ ಕೊಟ್ಟಿಗೆಯಲ್ಲಿಯೇ ಹಾಲುಗಳನ್ನು ಪರೀಕ್ಷೆ ಮಾಡಿ ಕೆಚ್ಚಲು ಬೇನೆಯನ್ನು ಪರೀಕ್ಷಿಸಿಕೊಳ್ಳಬಹುದು.

 ಕೆಚ್ಚಲು ಬೇನೆಗೆ ಚಿಕಿತ್ಸೆ:

* ಕೆಚ್ಚಲು ಬೇನೆ ಉಂಟಾಗಿರುವ ತಕ್ಷಣ,  ಬೇನೆ ಆಗಿರುವ ಕೆಚ್ಚಲಿನಿಂದ ಹಾಲನ್ನು ಹಿಂಡಿ ಹೊರ ಚೆಲ್ಲಬೇಕು.ಈ ರೀತಿಯಾಗಿ ಪ್ರತಿ 2-3  ಗಂಟೆಗಳಿಗೊಮ್ಮೆ ಮಾಡಬೇಕು.ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವ ವರೆಗೂ ಹೀಗೆ ಮಾಡಬೇಕು. ಮಂಜುಗಡ್ಡೆ ಅಥವಾ ಬರ್ಪ್  ಬಟ್ಟೆ ಸಹಾಯದಿಂದ ಕೆಚ್ಚಲಿಗೆ ಕಟ್ಟಬೇಕು ಅಥವಾ ತಣ್ಣೀರಿನಿಂದ ತಟ್ಟಬೇಕು.  ಪಶುವೈದ್ಯರಿಗೆ ಕರೆಸಿ ಸೂಕ್ತ ಚಿಕಿತ್ಸೆ ನೀಡಬೇಕು.

* ಕೆಚ್ಚಲಿನ ಒಳಗೆ ಪಶುವೈದ್ಯರು ಪ್ರತಿಜೀವಕ ಔಷಧಿಯನ್ನು ಹಾಕಿದಾಗ, ಅವರು ಸೂಚಿಸಿದಂತೆ 12 ರಿಂದ 24 ಗಂಟೆಗಳಲ್ಲಿ ಮತ್ತೆ ಹಾಲನ್ನು ಹಿಂಡಿ ಹೊರ ಚೆಲ್ಲಬೇಕು.ಹೀಗೆ ಪ್ರತಿ 12ರಿಂದ 24 ಗಂಟೆಗಳಿಗೆ ಜೀವಾಣು ನಿರೋಧಕ ಔಷಧಿಯನ್ನು ಪಶುವೈದ್ಯರಿಂದ ಹಾಕಿಸಬೇಕು.  ಕೆಚ್ಚಲು ಬೇನೆಯನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದಲ್ಲಿ, ನಷ್ಟವಾಗುವುದನ್ನು ತಡೆಗಟ್ಟಬಹುದು.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ