Animal Husbandry

ಯಾರೇ ಕೂಗಾಡಲಿ, ಊರೇ ಹೋರಾಡಲಿ ಎಮ್ಮೆ ನಿನಗೆ ಸಾಟಿ ಇಲ್ಲ!

13 August, 2021 1:16 PM IST By:
buffalo

ಎಮ್ಮೆ ಒಂದು ಅತ್ಯದ್ಭುತ ಜೀವಿ. ರೈತರ ಕೊಟ್ಟಿಗೆಗಳಲ್ಲಿ ಇದ್ದುಕೊಂಡು, ತನಗೆ ಇಂಥದ್ದೇ ಬೇಕು ಎಂದು ಡಿಮಾಂಡ್ ಮಾಡದೆ, ತನ್ನ ಯಜಮಾನ ಹಾಕಿದ್ದನ್ನು ತಿಂದು-ಉAಡು ಉರುಳಾಡುವ, ಸಿಕ್ಕಿದ್ದರಲ್ಲೇ ಸ್ವರ್ಗ ಕಾಣುವ ಜೊತೆಗೆ ಭರಪೂರ ಹಾಲನ್ನೂ ದಯಪಾಲಿಸುವ ನಿಜ ಅರ್ಥದ ಕಾಮಧೇನು ಈ ಎಮ್ಮೆ. ಹಾಗೆ ನೋಡಿದರೆ ಎಮ್ಮೆ ಎಂಬ ಈ ‘ಸಾಧು ಪ್ರಾಣಿ’ಯ ಬಗ್ಗೆ ನಾವು ಹೆಮ್ಮೆ ಪಡಬೇಕು. ಆದರೆ, ಕೊಟ್ಟಿಗೆಯಲ್ಲಿ ಎಮ್ಮೆಯೊಂದಿಗಿದ್ದು, ಅದಕ್ಕೆ ಸಿಗಬೇಕಿದ್ದ ಎಲ್ಲಾ ಮಾನ-ಸಮ್ಮಾನಗಳನ್ನು ಕಿತ್ತುಕೊಂಡಿರುವುದು ನಾವೆಲ್ಲರೂ ಮಾತೃ ಸಮಾನವಾಗಿ ಕಾಣುವ ಗೋಮಾತೆ!

ಹೌದು, ಹಸುಗಳಿಗೆ ತಾಯಿಯ ಸ್ಥಾನ ನೀಡಿರುವ ನಾವು, ಎಮ್ಮೆಯನ್ನು ಮಾತ್ರ ಅತ್ಯಂತ ದಯನೀಯವಾಗಿ ನಡೆಸಿಕೊಳ್ಳುತ್ತೇವೆ. ಆಕಳಂತೆಯೇ ಎಮ್ಮೆ ಕೂಡ ಒಂದು ಅತ್ಯುತ್ತಮ ಹೈನು ರಾಸು. ಆದರೆ ಆಕಳಿಗೆ ದೊರೆತಿರುವ ಪೂಜನೀಯ ಸ್ಥಾನದಲ್ಲಿ ಅರ್ಧದಷ್ಟು ಸಹ ಎಮ್ಮೆಗೆ ಸಿಕ್ಕಿಲ್ಲ. ಅರ್ಧದಷ್ಟೇಕೆ ಕೇವಲ 10 ಪೈಸೆಯ ಸ್ಥಾನ-ಮಾನ ಕೂಡ ಎಮ್ಮೆಗಿಲ್ಲ. ಒಂದು ಕಡೆ ಹಸುವಿಗೆ ಮೃಷ್ಟಾನ್ನ, ಪರಮಾನ್ನವನ್ನೆಲ್ಲಾ ನೀಡುವ ಯಜಮಾನ, ಅದೇ ಕೊಟ್ಟಿಗೆಯ ಮೂಲೆಯಲ್ಲಿ ನಿಂತು ಕಣ್ಣುಗಳನ್ನು ಅರಳಿಸಿ, ಕಿವಿ ನಿಮಿರಿಸಿ, ತಲೆದೂಗುತ್ತಾ, ‘ಮೇವನ್ನಾದ್ರೂ ಹಾಕು ಬಾರೋ ಮಾರಾಯಾ...’ ಎಂದು ಕರೆಯುವವರಂತೆ ತನ್ನತ್ತ ನೋಡುವ ಎಮ್ಮೆಯನ್ನು ಮಾತ್ರ ತಿರುಗಿ ಕೂಡ ನೋಡುವುದಿಲ್ಲ. ಅಸಲಿಗೆ ತನಗೆ ಸಿಗಬೇಕಿರುವ ಯಾವುದೇ ಗೌರವ, ಮಾನ, ಮರ್ಯಾದೆ, ಸ್ಥಾನಮಾನಗಳು ಸಿಗದೆ ಅತ್ಯಂತ ಶೋಷಣೆಗೆ ಒಳಗಾಗಿರುವ ಪ್ರಾಣಿ ಎಂದರೆ ಅದು ಎಮ್ಮೆಯೇ.

ಹಾಗಂತಾ ಎಮ್ಮೆಯನ್ನು ಪ್ರೀತಿಸುವವರು, ಅದನ್ನೂ ಚೆನ್ನಾಗಿ ನೋಡಿಕೊಳ್ಳುವವರು ಇಲ್ಲ ಎಂದೇನಿಲ್ಲ. ಆದರೆ, ಅಂಥವರ ಪ್ರಮಾಣ ಕಡಿಮೆ. ಹೈನುಗಾರಿಕೆ ಮಾಡಬೇಕು ಎಂದು ಆಲೋಚನೆ ಮಾಡುವ ಎಲ್ಲರ ಮನದಲ್ಲಿ ಮೊದಲು ಸುಳಿಯುವುದು ಆಕಳೇ ಹೊರತು ಎಮ್ಮೆಯಲ್ಲ. ಆದರೆ ಯಾವುದೇ ದೃಷ್ಟಿಯಿಂದ ನೋಡಿದರೂ, ಒಂದು ಹೈನು ರಾಸುವಾಗಿ ಹಸುವಿಗಿಂತಲೂ ತಾನು ಉತ್ತಮ ಎಂದು ಸಾಬೀತು ಮಾಡಬಲ್ಲ ಎಲ್ಲಾ ಗುಣಗಳನ್ನು ಎಮ್ಮೆ ಹೊಂದಿದೆ. ಕಸ ತಿಂದೂ ರಸವನ್ನೇ ನೀಡುವ ಎಮ್ಮೆಗೂ ಮನ್ನಣೆ ನೀಡುವ ಅಗತ್ಯವಿದೆ ಎನ್ನುತ್ತಾರೆ ಎಮ್ಮೆ ಪ್ರೇಮಿಗಳು.

ಎಮ್ಮೆಯೂ ಏಕೆ ಶ್ರೇಷ್ಠ?

ಸುರಿಯುವ ಮಳೆ ಇರಲಿ, ಜೋರಾಗಿ ಬೀಸುವ ಗಾಳಿಯೇ ಬರಲಿ ನಮ್ಮ ಈ ಎಮ್ಮೆ ಜುಪ್ ಎನ್ನುವುದಿಲ್ಲ. ಅದೇ ಹಸುವಿಗೆ ಈ ಮಳೆ-ಗಾಳಿ ಎಂದರೆ ಅಲರ್ಜಿ. ಒಂದೆರಡು ದಿನ ಮಳೆಯಲ್ಲಿ ನೆನೆದರೂ ಸಾಕು ಹಸು ಹಾಸಿಗೆ ಹಿಡಿಯುತ್ತದೆ. ಸಣ್ಣ ಕಾಲು ನೋವಾದರೂ ಹಸು ಒಂದು ಹೆಜ್ಜೆ  ಮುಂದಿಡುವುದಿಲ್ಲ. ಅದೇ ಎಮ್ಮೆ, ಕಾಲು ಮುರಿದರೂ ಎದ್ದು ನಿಲ್ಲುವ ಉತ್ಸಾಹ ತೋರುತ್ತದೆ. ನೋಡಲು ಸಾಧುವಿನಂತೆ, ಮೆತ್ತಗೆ ಕಾಣುವ ಎಮ್ಮೆ, ವಾಸ್ತವದಲ್ಲಿ ಬಹಳ ಗಟ್ಟಿ ಪ್ರಾಣಿ. ಕೊಟ್ಟಿಗೆಯ ನೆಲ ಅಂಕುಡೊAಕಾಗಿದ್ದರೂ ಎಮ್ಮೆ ಕೇರ್ ಮಾಡುವುದಿಲ್ಲ. ನೆಲ ಸರಿ ಇಲ್ಲ ಎಂದು ರಬ್ಬರ್ ಮ್ಯಾಟ್ ಬೇಡುವುದಿಲ್ಲ. ಅದೇ ಲಕ್ಷಾಂತರ ರೂ. ಕೊಟ್ಟು ಖರೀದಿಸಿದ ಜರ್ಸಿ, ಎಚ್‌ಎಫ್ ಹಸುವಿಗೆ ಮಾಮೂಲಿ ನೆಲ ಒಗ್ಗುವುದಿಲ್ಲ. ಗುಉಂಡಿಗಳಿಲ್ಲದ, ನಯವಾದ ಸಿಮೆಂಟಿನ ನೆಲ ಇದ್ದರೂ, ಅದರ ಮೇಲೆ ಮ್ಯಾಟ್ ಹಾಕಿ ಅದನ್ನು ಮಲಗಿಸಬೇಕು. ದುಬಾರಿ ಬೆಲೆಗೆ ಖರೀದಿಸಿದ್ದಲ್ಲದೆ, ಅದರ ಸುಖ-ವೈಭೋಗಗಳಿಗೂ ಹಣ ಖರ್ಚು ಮಾಡಬೇಕು.

ಮಿತವ್ಯಯಿ ನಮ್ಮ ಎಮ್ಮೆ

ಎಮ್ಮೆಗಳಿಗೆ ತಮ್ಮ ಯಜಮಾನರ ಮೇಲೆ ಭಾರೀ ಕಾಳಜಿ. ಹೀಗಾಗಿ ಅನಗತ್ಯ ಖರ್ಚುಗಳಿಗೆ ಅವು ಕಡಿವಾಣ ಹಾಕುತ್ತವೆ. ಹಾಗೇ ತಿನ್ನಲು ದುಬಾರಿ ಬೂಸ, ಹಿಂಡಿ ಬೇಕು ಎಂದು ಬೇಡಿಕೆ ಇಡುವುದಿಲ್ಲ. ತನ್ನನ್ನು ಸಾಕುವವರು ಹಾಕುವ ಹುಲ್ಲನ್ನೇ ತಿಂದು, ಮುಸುರೆಯನ್ನೇ ಕುಡಿದು, ಭತ್ತದ ತೌಡನ್ನೇ ಗಬಗಬನೆ ಉಂಡು ಹೆಚ್ಚು ಹಾಲು ಕೊಡುವುದು ಎಮ್ಮೆಗಳ ‘ದೊಡ್ಡ ಗುಣ’. ನಿತ್ಯ ಹಸಿ ಮೇವು ಹಾಕಿದರಷ್ಟೇ ಹೆಚ್ಚು ಹಾಲು ಕೊಡುತ್ತೇನೆಂದು ಎಮ್ಮೆಗಳು ಎಂದೂ ಹಠ ಮಾಡುವುದಿಲ್ಲ (ಕೊಟ್ಟರೆ ಬೇಡ ಎನ್ನುವುದಿಲ್ಲ). ದಿನಾ ಒಣ ಹುಲ್ಲು ಹಾಕಿದರೂ ಕನಿಷ್ಠ ಎರಡು ಲೀಟರ್ ಹಾಲಿಗೆ ದೋಖಾ ಮಾಡುವುದಿಲ್ಲ. ನೆಲದ ಮೇಲೆ ಸಾವಿರಾರು ರೂಪಾಯಿಯ ಮ್ಯಾಟ್ ಹಾಕು, ತಿನ್ನಲು ದುಬಾರಿ ಬೂಸ ಬೇಕು ಎಂದು ಯಜಮಾನನನ್ನು ಎಂದು ಕೇಳುವುದಿಲ್ಲ. ದಿನಾ ಮೈ ತೊಳೆದು, ಮಾಲಿಶ್ ಮಾಡು ಎಂದು ಕೇಳುವ ಜಾತಿಯಂತೂ ಎಮ್ಮೆಯದ್ದಲ್ಲ. ಕೆಸರು ಸಿಕ್ಕರೆ ಮನದುಂಬಿ ಹೊರಳಾಡುವ, ಅದೇ ಕೆಸರು ಮೈನೊಂದಿಗೆ ನಾಲ್ಕಾರು ದಿನ ನೆಮ್ಮದಿಯಿಂದ, ಖುಷಿ ಖುಷಿಯಾಗಿ ಕಾಲ ಕಳೆಯುವ ವಿಲಾಸಿ ಜೀವಿ ಎಮ್ಮೆ.

ರೋಗ ನಿರೋಧಕ ಎಮ್ಮೆ

ನೀವು ಗಮನಿಸಿರಬಹುದು, ಎಮ್ಮೆಗಳು ಹೆಚ್ಚಾಗಿ ಕಾಯಿಲೆ ಬೀಳುವುದಿಲ್ಲ. ಮಳೆಗಾಲ ಬಂದರೆ ಹಸುಗಳಿಗೆ ನೂರೆಂಟು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅದೇ ಎಮ್ಮೆ ಮಳೆ-ಚಳಿಗೆ ಎಂದೂ ನಡುಗುವುದಿಲ್ಲ. ಹಸುಗಳನ್ನು ಕಾಡಿ, ಕಂಗೆಡಿಸುವ ಕೆಚ್ಚಲು ಬಾವು ಎಂಬ ಮಾರಕ ರೋಗ ಎಮ್ಮೆಗಳ ಹತ್ತಿರ ಕೂಡ ಸುಳಿಯುವುದಿಲ್ಲ. ಕಂದು ರೋಗವೂ ಕಡಿಮೆ. ಕೃತಕ ಗರ್ಭಧಾರಣೆ ಮಾಡಿಸಿದಾಗ ಬೇಗ ಕಟ್ಟಿಕೊಳ್ಳುತ್ತವೆ. ಇನ್ನು ಮನೆಯಲ್ಲೊಂದು ಕೋಣ ಇತ್ತೆಂದರೆ ಎಮ್ಮೆಗಳು ಆಸ್ಪತ್ರೆಯ ಸುದ್ದಿ ಎತ್ತುವುದಿಲ್ಲ.

ಎಮ್ಮೆ ಹಾಲಿಗೆ ಸಾಟಿಯಿಲ್ಲ

ಎಮ್ಮೆ ಹಾಲಿನಷ್ಟು ಗಟ್ಟಿ ಹಾಲು ಮತ್ತೊಂದಿಲ್ಲ. ಹಾಲಿನ ಡೈರಿಯಲ್ಲಿ ‘ಡಿಗ್ರಿ ಇಲ್ಲ’, ‘ಫ್ಯಾಟ್ ಇಲ್ಲ’ ಎಂದು ಎಮ್ಮೆಯ ಹಾಲು ಎಂದೂ ರಿಜೆಕ್ಟ್ ಆಗುವುದಿಲ್ಲ. ಹಸು ಒಂದು ಚೊಂಬು ನೀರು ಹೆಚ್ಚಾಗಿ ಕುಡಿದರೂ ಅದರ ಹಾಲು ನೀರಿನಂತೇ ಆಗಿಬಿಡುತ್ತದೆ. ಆದರೆ ಎಮ್ಮೆ ಹಾಗಲ್ಲ.

ದಿನವಿಡೀ ನೀರು ಕುಡಿಸಿದರೂ ಎಮ್ಮೆಯ ಹಾಲು ತನ್ನ ಗಟ್ಟಿತನ ಕಳೆದುಕೊಳ್ಳುವುದಿಲ್ಲ. ಹಾಗೇ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಎಮ್ಮೆ ಹಾಲಿಗಿದೆ. ಡೈರಿಗಳಲ್ಲಿ ಎಮ್ಮೆ ಹಾಲು ಹಾಕುವರು ಹಸುವಿನ ಹಾಲು ಹಾಕುವವರಿಗಿಂತಲೂ ಹೆಚ್ಚು ಹಣ ಪಡೆಯುತ್ತಾರೆ. ಅದಕ್ಕೆ ಕಾರಣ, ಎಮ್ಮೆಯ ಹಾಲಿನಲ್ಲಿ ಫ್ಯಾಟ್ ಅಂಶ ಹೆಚ್ಚಾಗಿರುವುದು. ಆದರೂ ಹಸುವಿನ ಹಾಲಿಗೆ ಸಿಕ್ಕಿರುವ ಶ್ರೇಷ್ಠ ಸ್ಥಾನ, ಮನ್ನಣೆ ಎಮ್ಮೆ ಹಾಲಿಗೆ ಸಿಕ್ಕಿಲ್ಲ.

ಹೀಗೆ ರೈತರಿಗೆ ಸ್ವಲ್ಪವೂ ಕಷ್ಟ ನೀಡದೆ, ಯಾವ ಬೇಡಿಕೆಯನ್ನೂ ಇರಿಸದೆ ತನ್ನ ಪಾಡಿಗೆ ತಾನು ತಿಂದುAಡು ಆಡಿಕೊಂಡಿರುವ ಎಮ್ಮೆಯನ್ನು ಸಾಕುವವರ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ. ಕಡಿಮೆ ನಿರ್ವಹಣಾ ವೆಚ್ಚ, ಹಾಲಿಗೆ ಉತ್ತಮ ಬೆಲೆ ಮೊದಲಾದ ಲಭದಾಯಕ ಗುಣಗಳನ್ನು ಹೊಂದಿದ್ದರೂ ಎಮ್ಮೆಗಳ ಡೈರಿ ಮಾಡುವುದನ್ನು ರೈತರು ಲಾಭದಾಯಕ ಎಂದು ಭಾವಿಸದಿರುವುದೇ ವಿಪರ್ಯಾಸ!