ನೋಡಲು ಸಾಮಾನ್ಯ ಮೇಕೆಗಳಿಗಿಂತಲೂ ಆಕರ್ಷಕವಾಗಿರುವ, ಬೇರೆ ಆಡುಗಳಿಗಿಂತಲೂ ಹೆಚ್ಚು ಎತ್ತರವಾಗಿ ಬೆಳೆಯುವ, ಉದ್ದನೆಯ ಮುಖ ಹಾಗೂ ದೊಡ್ಡ ಕಿವಿಗಳನ್ನು ಹೊಂದಿರುವ ಬೀಟಲ್ ಅಥವಾ ಲಾಹೋರಿ ತಳಿ ಮೇಕೆಗಳು ಬೇರೆಲ್ಲಾ ತಳಿಗಳಿಗಿಂತಲೂ ಭಿನ್ನ. ಭಾರತದ್ದೇ ಮೂಲ ತಳಿಯಾಗಿರುವ ಈ ಮೇಕೆಗಳು ತಮ್ಮ ಗಾತ್ರ ಹಾಗೂ ರೂಪ ವಿಶೇಷತೆಗಳಿಂದಲೇ ಗಮನ ಸೆಳೆಯುತ್ತವೆ. ಹಳ್ಳಿಗಳಲ್ಲಿ ಜವಾರಿ ತಳಿಯ ಮೇಕೆಗಳನ್ನು ನೋಡಿರುವವರು ಬೀಟಲ್ ಮೇಕೆಯನ್ನೇನಾದರೂ ನೋಡಿದರೆ ಒಂದು ಕ್ಷಣ ಅವಕ್ಕಾಗುತ್ತಾರೆ. ಏಕೆಂದರೆ ಇವು 6 ಅಡಿ ಎತ್ತರ ಬೆಳೆಯಬಲ್ಲವು!
ನಾವು ಕುರಿ ಮಂದೆಗಳ ನಡುವೆ ಇಲ್ಲವೇ ಸಾಂಪ್ರದಾಯಿಕ ಆಡು ಸಾಕಣೆದಾರರ ದೊಡ್ಡಿಯಯಲ್ಲಿ ನೋಡುವ ಸಾಮಾನ್ಯ ಮೇಕೆಗಳಿಗೆ ಹೋಲಿಸಿದರೆ ಬೀಟಲ್ ಆಡುಗಳು ಗಾತ್ರದಲ್ಲಿ ಎರಡುಪಟ್ಟು ದೊಡ್ಡದಾಗಿರುತ್ತವೆ. ಹಾಗೇ ಗಾತ್ರಕ್ಕೆ ತಕ್ಕಂತೆ ಹೆಚ್ಚು ಹಾಲು ನೀಡುವುದಲ್ಲದೆ, ಮೈತುಂಬಾ ಮಾಂಸವನ್ನು ತುಂಬಿಕೊಂಡು ನಯನಾಕರ್ಷಕವಾಗಿರುತ್ತವೆ. ನೀವೇನಾದರೂ ಆದಾಯಕ್ಕಾಗಿ ಮೇಕೆ ಸಾಕಣೆ ಮಾಡುತ್ತಿರುವುದೇ ಆದರೆ ಸಾಮಾನ್ಯ ತಳಿಗಳ ಬದಲು ಬೀಟಲ್ ತಳಿಯ ಮೊರೆ ಹೋಗುವುದು ಸೂಕ್ತ. ಏಕೆಂದರೆ ವಾಣಿಜ್ಯ ಸಾಕಣೆಗೆಂದೇ ಅಭಿವೃದ್ಧಿ ಪಡಿಸಿದಂತಿರುವ ಹೇಳಿಮಾಡಿಸಿದ ತಳಿ ಬೀಟಲ್.
ಭಾರತ-ಪಾಕ್ ನಂಟು
ಬೀಟಲ್ ಮೇಕೆಗಳನ್ನು ‘ಲಾಹೋರಿ ಮೇಕೆ’ ಎಂದೂ ಕರೆಯುತ್ತಾರೆ. ಇದಕ್ಕೆ ಕಾರಣ ಇವುಗಳ ತಳಿ ಅಭಿವೃದ್ಧಿ ಹೊಂದಿರುವ ಪಂಜಾಬ್ ಪ್ರಾಂತ್ಯ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಗಡಿ ಹಂಚಿಕೊಂಡಿರುವುದು. ಲಾಹೋರಿ ತಳಿಯ ಇತಿಹಾಸ ಸ್ವಾತಂತ್ರ್ಯ ಪೂರ್ವದ್ದು. ಹೀಗಾಗಿ ಅದರ ಮೂಲ ಭಾರತವೇ ಎಂದು ಧೈರ್ಯವಾಗಿ ಹೇಳಬಹುದು. ದೇಶ ವಿಭಜನೆ ನಂತರ ಇವುಗಳ ಉಗಮಸ್ಥಾನವಾಗಿರುವ ಪಂಜಾಬ್ ಪ್ರಾಂತ್ಯ ಎರಡೂ ದೇಶಗಳ ನಡುವೆ ಹಂಚಿ ಹೋಯಿತಾದರೂ ಇವುಗಳ ತಳಿ ಅಭಿವೃದ್ಧಿ ಉಳಿದುಕೊಂಡಿದ್ದು ಭಾರತದಲ್ಲೇ. ಜೊತೆಗೆ ಈಗಲೂ ಬೀಟಲ್ ಮೇಕೆಗಳು ಹೆಚ್ಚಾಗಿ ಇರುವುದು ಭಾರತದ ಗಡಿಯಲ್ಲೇ ಎಂಬುದು ವಿಶೇಷ.
ಹಾಲು-ಮಾಂಸಕ್ಕೆ ಪ್ರಸಿದ್ಧಿ
ಕೆಲವು ಮೇಕೆಗಳನ್ನು ಹಾಲಿಗಾಗಿ ಮತ್ತೆ ಕೆಲವನ್ನು ಮಾಂಸಕ್ಕಾಗಿ ಸಾಕುತ್ತಾರೆ. ಆದರೆ, ಈ ಎರಡೂ ಉದ್ದೇಶಗಳಿಗಾಗಿ ಸಾಕಲ್ಪಡುವ ಏಕೈಕ ತಳಿ ಎಂದರೆ ಅದು ಬೀಟಲ್. ಸೇವಿಸುವ ಮೇವಿನಲ್ಲಿ ಹೆಚ್ಚಿನ ಪ್ರಮಾಣವನ್ನು ಹಾಲನ್ನಾಗಿ ಪರಿವರ್ತಿಸುವ ವಿಶೇಷ ಸಾಮರ್ಥ್ಯ ಹೊಂದಿರುವ ಬೀಟಲ್ ಆಡುಗಳು, ಬೇರೆಲ್ಲಾ ತಳಿಗಳಿಗಿಂತ ಹೆಚ್ಚು ಹಾಲು ನೀಡುತ್ತವೆ. ಇದಕ್ಕಿಂತಲೂ ಮುಖ್ಯವಾಗಿ ಬಲಿಷ್ಟ ಮಾಂಸಖಂಡಗಳನ್ನು ಹೊಂದಿರುವ ಇವು, ಮಾಂಸಾಹಾರಿ ಮನುಷ್ಯರ ಫೇವರಿಟ್ ಆಗಿವೆ.
ಕಪ್ಪು, ಬಿಳಿ, ಕಂದು, ಬೂದು ಸೇರಿ ವಿವಿಧ ಬಣ್ಣ ಹೊಂದಿರುವ ಬೀಟಲ್ ಮೇಕೆಯ ಕಾಲುಗಳು ಉದ್ದವಿದ್ದು, ಕಿವಿಗಳು ಗಿರ್ ತಳಿ ಹಸುವಿನಂತೆ ಉದ್ದವಿರುತ್ತವೆ. ಉಬ್ಬಿದ ಹಣೆ ಮತ್ತು ಮೋಟು (ಸಣ್ಣ) ಬಾಲ ಇವುಗಳ ಪ್ರಮುಖ ಲಕ್ಷಣ. ಒಂದು ವರ್ಷದಲ್ಲಿ ಎರಡು ಮರಿ ಹಾಕುವ ಮೇಕೆಗಳು, ಪ್ರತಿ ದಿನ ಎರಡೂವರೆಯಿಂದ ನಾಲ್ಕು ಲೀಟರ್ ಹಾಲು ನೀಡಬಲ್ಲವು.
ಆದಾಯದ ಲೆಕ್ಕಾಚಾರ
ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಈ ಮೇಕೆಗಳನ್ನು ಸಾಕುವವರಿದ್ದಾರೆ. ರೈತರು 20 ಬೀಟಲ್ ಅಥವಾ ಲಾಹೋರಿ ತಳಿ ಮೇಕೆಗಳನ್ನು ಸಾಕಿದರೆ ವರ್ಷದಲ್ಲಿ 5 ಲಕ್ಷಕ್ಕೂ ಅಧಿಕ ಆದಾಯ ಗಳಿಸಬಹುದು ಎನ್ನುತ್ತಾರೆ ಅನುಭವಿಗಳು. ಆರಂಭದಲ್ಲಿ ಒಂದು ಗಂಡು ಮತ್ತು 10 ಹೆಣ್ಣು ಮರಿಗಳನ್ನು ಸಾಕುವುದಾದರೆ 1.50 ಲಕ್ಷದಿಂದ 2 ಲಕ್ಷ ರೂ. ಬಂಡವಾಳ ಬೇಕಾಗುತ್ತದೆ. ಈ 11 ಮೇಕೆಗಳಿಂದ ಒಂದು ವರ್ಷದಲ್ಲಿ 20 ಮೇಕೆಗಳನ್ನು ಪಡೆಯಬಹುದು. ಹೀಗೆ ಹುಟ್ಟಿದ ಮರಿಗಳು 8 ತಿಂಗಳಾಗುಷ್ಟರಲ್ಲಿ 40 ಕೆ.ಜಿ ತೂಗುತ್ತವೆ. ಮಾರುಕಟ್ಟೆಯಲ್ಲಿ ಬೀಟಲ್ ಮೇಕೆಗೆ ಒಂದು ಕೆ.ಜಿಗೆ 550 ರೂ. ಬೆಲೆ ಇದೆ. ಅದರಂತೆ ಒಂದು ಮರಿಗೆ 22,000 ರೂ. ಬೆಲೆ ಸಿಗಬಹುದು. 20 ಮೇಕೆಗಳಿಂದ 4,40,000 ಆದಾಯ ಗಳಿಸಬಹುದು.
ಮೇಲಿನದು 8 ತಿಂಗಳ ಮರಿಗಳ ಲೆಕ್ಕವಾದರೆ, ಎರಡು ವರ್ಷದ ಮೇಕೆಯ ಲೆಕ್ಕಾಚಾರವೇ ಬೇರೆ. ಎರಡು ವರ್ಷ ಸಾಕಿ ಬೆಳೆಸಿದ ಒಂದು ಬೀಟಲ್ ತಳಿ ಮೇಕೆ ಸರಾಸರಿ 100 ಕೆ.ಜಿ ತೂಕವಿರುತ್ತದೆ (ತೂಕವು ಅವುಗಳಿಗೆ ನೀಡುವ ಆಹಾರವನ್ನು ಅವಲಂಬಿಸಿರುತ್ತದೆ). ಕೆ.ಜಿಗೆ 500 ರೂ. ಎಂದು ಲೆಕ್ಕ ಹಾಕಿದರೂ ಒಂದು ಮೇಕೆಗೆ 50,000 ರೂ. ಗಳಿಸಬಹುದು. 20 ಮೇಕೆಗಳಿಂದ ಸಾಕಣೆದಾರರು ಬರೋಬ್ಬರಿ 10 ಲಕ್ಷ ರೂಪಾಯಿ ಸಂಪಾದಿಸಬಹುದು.
ಮೇವು ಮತ್ತು ವಾತಾವರಣ
‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಸಾಮಾನ್ಯವಾಗಿ ಆಡುಗಳು ಎಲ್ಲಾ ರೀತಿಯ ಹುಲ್ಲು, ಸಸ್ಯ, ಎಲೆ, ಸೊಪ್ಪುಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಮೇಕೆ ಸಾಕಣೆದಾರರು ಬೀಟಲ್ ಆಡುಗಳಿಗೆ ಕುದುರೆ ಮಸಾಲ ಸೊಪ್ಪನ್ನು ಪ್ರಮುಖ ಆಹಾರವಾಗಿ ನೀಡುತ್ತಾರೆ. ಇದರೊಂದಿಗೆ ಜೋಳದ ಕಡ್ಡಿ, ಸೀಮೆ ಹುಲ್ಲು, ರಾಗಿ ಹುಲ್ಲು, ಇಂಡಿ ಮತ್ತು ಬೂಸ ಕೂಡ ನೀಡುತ್ತಾರೆ.
ಈ ಮೇಕೆಗಳು ಸದಾ ತಾಜಾ ಮತ್ತು ಪೌಷ್ಟಿಕ ಆಹಾರ ಬಯಸುತ್ತವೆ. ಬೀಟಲ್ ಆಡುಗಳು ಹಾಲು ಮತ್ತು ಮಾಂಸ ಎರಡನ್ನೂ ಉತ್ಪಾದಿಸುವುದರಿಂದ ಇವುಗಳಿಗೆ ಉತ್ತಮ ಗುಣಮಟ್ಟದ ಸಮತೋಲಿತ ಮತ್ತು ಪೌಷ್ಟಿಕ ಆಹಾರ ನೀಡಬಬೇಕು. ಹೀಗೆ ನೀಡುವ ಆಹಾರದಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ಹೇರಳವಾಗಿ ಇರುವಂತೆ ನೋಡಿಕೊಳ್ಳಬೇಕು. ಆಹಾರದೊಂದಿಗೆ ಆಗಾಗ ಶುದ್ಧ ನೀರನ್ನೂ ಕುಡಿಸುತ್ತಿರಬೇಕು.
‘ಬೀಟಲ್ ಮೇಕೆಗಳು ಗಾತ್ರದಲ್ಲಿ ದೊಡ್ಡದಾಗಿರುವ ಕಾರಣ ಅವುಗಳಿಗೆ ಹೆಚ್ಚು ಆಹಾರ ಬೇಕು. ಹೀಗಾಗಿ ಅಗತ್ಯ ಮೇವನ್ನು ರೈತರೇ ಬೆಳೆದರೆ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ. ರಾಸುಗಳಲ್ಲಿ ಸಾಮಾನ್ಯವಾಗಿರುವ ಕಾಯಿಲೆಗಳು ಈ ತಳಿಗೂ ಬರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮುಖ್ಯವಾಗಿ ದೊಡ್ಡಿ ಅಥವಾ ಕೊಟ್ಟಿಗೆಯನ್ನು ಸ್ವಚ್ಛವಾಗಿಡಬೇಕು. ಔಷಧೀಯ ಗುಣಗಳ ಆಗರವಾಗಿರುವ ಈ ಮೇಕೆಗಳ ಹಾಲಿಗೆ ಬೆಂಗಳೂರು ನಗರದಲ್ಲಿ ಬೇಡಿಕೆಯಿದೆ. ಹೀಗಾಗಿ, ಮಾಂಸ ಮಾತ್ರವಲ್ಲದೆ ಹೈನುಗಾರಿಕೆ ಮೂಲಕವೂ ಇವುಗಳು ಸಾಕಣೆದಾರರಿಗೆ ಆದಾಯ ತಂದುಕೊಡಬಲ್ಲವು,’ ಎನ್ನುತ್ತಾರೆ ಪಶುವೈದ್ಯಾಧಿಕಾರಿ ಡಾ.ಬಿ.ಆರ್.ನರಸಿಂಹ ರಾವ್.