Animal Husbandry

ಪ್ರತಿಪಕ್ಷಗಳ ವಿರೋಧದ ನಡುವೆ ಗೋಹತ್ಯೆ ನಿಷೇಧ ಮಸೂದೆ ಮೇಲ್ಮನೆಯಲ್ಲಿ ಅಸ್ತು

09 February, 2021 9:57 AM IST By:
cow

ವಿಧಾನಸಭೆಯಲ್ಲಿ ಕಳೆದ ಅಧಿವೇಶನದಲ್ಲಿ ಅಂಗೀಕೃತವಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದ್ದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ (ಗೋಹತ್ಯೆ ನಿಷೇಧ) ಮೇಲ್ಮನೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧದ ನಡುವೆ ಧ್ವನಿಮತದಿಂದ ಅಂಗೀಕಾರಗೊಂಡಿತು.

ಕಳೆದೆರಡು ಅಧಿವೇಶನದಲ್ಲಿ ಅನುಮೋದನೆಯಾಗದೆ ಉಳಿದಿದ್ದ ವಿಧೇಯಕವನ್ನು ಸಚಿವ ಪ್ರಭು ಚವ್ಹಾಣ ಮಂಡಿಸಿದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರೂ ಧ್ವನಿಮತದ ಮೂಲಕ ಒಪ್ಪಿಗೆ ಪಡೆಯಿತು.

ಮಸೂದೆಯ ಕುರಿತು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಕಟುವಾಗಿ ಟೀಕಿಸಿದರು. ಮಸೂದೆಯ ಬಗ್ಗೆ ಎಲ್ಲರಿಗೂ ಚರ್ಚೆಗೆ ಅವಕಾಶ ನೀಡದೇ ಇರುವುದನ್ನು ಪ್ರತಿಭಟಿಸಿ ಸಭಾಪತಿ ಪೀಠದ ಮುಂದಿನ ಜಾಗಕ್ಕೆ ಬಂದು ಪ್ರತಿಭಟಿಸಿದರು.

ವಿಧೆಯಕ ಕುರಿತಂತೆ ವಿವರಣೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ,  ‘ಈ ಕಾಯ್ದೆ ಜಾರಿಗೆ ಬಂದ ಮೇಲೆ ಎಲ್ಲ ಜಾನುವಾರುಗಳ ರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿ, ವಿಶೇಷ ಅನುದಾನ ನೀಡಲಾಗುವುದು. ವಯಸ್ಸಾದ ಜಾನುವಾರುಗಳ ಸಂರಕ್ಷಣೆಗೆ ಸರ್ಕಾರ ಸಿದ್ಧವಿದೆ. ಅದಕ್ಕೆ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುವುದು‘ ಎಂದರು. 

ಮೃಗಾಲಯಗಳಿಗೆ ಕೋಣದ ಮಾಂಸ

ಮೃಗಾಲಯಗಳಲ್ಲಿರುವ ಹುಲಿ, ಸಿಂಹ ಇತ್ಯಾದಿ ಮಾಂಸಾಹಾರಿ ಪ್ರಾಣಿಗಳಿಗೆ 13 ವರ್ಷಕ್ಕೆ ಮೇಲ್ಪಟ್ಟ ಕೋಣ, ಎತ್ತುಗಳ ಮಾಂಸ ಸರಬರಾಜು ಮಾಡಬಹುದು. ಅದಕ್ಕೆ ನಿರ್ಬಂಧವಿಲ್ಲ. ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಸಚಿವ ಬಸವರಾಜಬೊಮ್ಮಾಯಿ ತಿಳಿಸಿದರು.

ಗೋಹತ್ಯೆ ಮಸೂದೆಯಲ್ಲಿ ಏನಿದೆ?

10 ಲಕ್ಷ ರುಪಾಯಿಯವರೆಗೆ ದಂಡ ವಿಧಿಸಬಹುದು. ಗೋ ಹತ್ಯೆ ಕಾಯ್ದೆ ಉಲ್ಲಂಘಿಸಿದರೆ 3 ರಿಂದ 7 ವರ್ಷ ಜೈಲು ಶಿಕ್ಷೆ. ರಾಜ್ಯದೊಳಗೂ ಜಾನುವಾರು ಸಾಗಣೆಗೆ ನಿರ್ಬಂಧ. ನಿರ್ಧಿಷ್ಟ ಉದ್ದೇಶ, ಕಾರ್ಯಕ್ಕೆ ಅನುಮತಿ ಪಡೆದು ರಾಸುಗಳ ಸಾಗಣೆ ಸಾಧ್ಯ