Anemia in Cattle : ಜಾನುವಾರುಗಳಲ್ಲಿ ಕಂಡು ಬರುವ ರಕ್ತಹೀನತೆ ಸಮಸ್ಯೆಯನ್ನು ಕಂಡು ಹಿಡಿಯುವುದು ಹೇಗೆ? ಇದರ ಲಕ್ಷಣಗಳೇನು? ಇದಕ್ಕೆ ಸೂಕ್ತ ಚಿಕಿತ್ಸಾ ವಿಧಾನಗಳು ಯಾವುವು? ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಏನಿದು ರಕ್ತ ಹೀನತೆ? : ರಕ್ತಹೀನತೆ ಎಂದರೆ ರಕ್ತದಲ್ಲಿ ಕೆಂಪು ರಕ್ತ ಕಣದ ಗಣನೀಯ ಕುಸಿತ ಮತ್ತು ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುವುದು. ಕೆಂಪು ರಕ್ತ ಕಣದ ಸಂಖ್ಯೆಯಲ್ಲಿ ಗಣನೀಯ ಇಳಿತ, ಹಿಮೋಗ್ಲೋಬಿನ್ ಸಾಂದ್ರತೆಯ ಕುಸಿತ ಅಥವಾ ಕೆಂಪು ಕೋಶ ದ್ರವ್ಯರಾಶಿಯಲ್ಲಿನ ಸಂಪೂರ್ಣ ಇಳಿಕೆ ಎಂದು ವ್ಯಾಖ್ಯಾನಿಸಬಹುದು. ರಕ್ತದಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಶೇ: 10-14 ಇರಬೇಕು. ಇದು ಶೇ 8 ಕ್ಕಿಂತ ಕಡಿಮೆಯಾದಾಗ ರಕ್ತಹೀನತೆ ಎನ್ನಬಹುದು.
ಕೆಂಪು ರಕ್ತಕಣಗಳು ಅಸ್ಥಿಮಜ್ಜೆಯಲ್ಲಿ ಉತ್ಪಾದನೆಯಾಗುತ್ತವೆ. ಪ್ರತಿ ಸೆಕೆಂಡಿಗೆ 2.5 ಮಿಲಿಯನ್ ರಕ್ತಕಣಗಳು ಶರೀರದಲ್ಲಿ ಉತ್ಪಾದನೆಯಾಗುತ್ತವೆ. ಒಂದು ಕೆಂಪು ರಕ್ತ ಕಣದ ಜೀವಿತಾವಧಿ 3 ತಿಂಗಳುಗಳು. ಕೆಂಪು ರಕ್ತಕಣಗಳು ತಟ್ಟೆಯಾಕಾರದ ಚಿಕ್ಕ ಜೀವಕೋಶಗಳು. ಇವುಗಳಿಗೆ ಜೀವಕೋಶ ಕೇಂದ್ರವಿರುವುದಿಲ್ಲ.
ಇವುಗಳ ಬಹುಮುಖ್ಯ ಭಾಗವೆಂದರೆ ರಕ್ತಕಣಕ್ಕೆ ಕೆಂಪು ಬಣ್ಣ ತರುವ ಹಿಮೊಗ್ಲೋಬಿನ್. ಇದಕ್ಕೆ ಆಮ್ಲಜನಕವನ್ನು ಶ್ವಾಸಕೋಶದಿಂದ ಹೀರಿಟ್ಟುಕೊಂಡು ಇಂಗಾಲದ ಡಯಾಕ್ಸೈಡ್ ಅಂಶವನ್ನು ಶ್ವಾಸಕೋಶದ ಮೂಲಕ ವಿಸರ್ಜಿಸುವ ಗುಣವಿದೆ.
ಆಕ್ಸಿಜನ್ ಹೀರಿಕೊಂಡ ಕೆಂಪುರಕ್ತಕಣ ಶರೀರದ ಎಲ್ಲಾ ಭಾಗದಲ್ಲಿ ಸಂಚರಿಸುತ್ತಾ ಶರೀರದ ಅಸಂಖ್ಯಾತ ಜೀವಕೋಶಗಳಿಗೆ ಅವಶ್ಯಕ ಪ್ರಮಾಣದಲ್ಲಿ ಪೂರೈಸುತ್ತದೆ.
ಇದು ಶರೀರದ ಶಕ್ತಿವಾಹಕ. ಅಪದಮನಿಗಳ ಮೂಲಕ ಸಂಚರಿಸುವ ಕೆಂಪುರಕ್ತಕಣ ವಿವಿಧ ಜೀವಕೋಶಗಳ ತ್ಯಾಜ್ಯಗಳು ಮತ್ತು ಮುಖ್ಯವಾಗಿ ಇಂಗಾಲದ ಡಯಾಕ್ಸೈಡ್ ಹೀರಿಕೊಂಡು ಮೂಲ ಕೆಂಪು ಬಣ್ಣ ಕಳೆದುಕೊಳ್ಳುತ್ತಾ ಅಬಿಧಮನಿಯನ್ನು ಸೇರಿಕೊಂಡು ಪುನ: ಹೃದಯಕ್ಕೆ ಹಿಂದಿರುಗಿ ಅಲ್ಲಿಂದ ಶ್ವಾಸಕೋಶಕ್ಕೆ ತೆರಳಿ ಸ್ವಚ್ಚಗೊಳ್ಳುತ್ತದೆ.
ರಕ್ತಹೀನತೆಯಲ್ಲಿ ಅನೇಕ ವಿಧಗಳಿವೆ.
* ಯಾವುದಾದರೂ ಹೊಡೆತ ಬಿದ್ದಾಗ ಅಥವಾ ಅಪಘಾತವಾದಾಗ ತೀವ್ರತರನಾದ ರಕ್ತಸ್ರಾವವಾಗಿ ರಕ್ತಹೀನತೆಯಾಗಬಹುದು.
* ವಿವಿಧ ಪರೋಪಜೀವಿಗಳಾದ ಉಣ್ಣೆ, ಸೊಳ್ಳೆ, ಕಡಿಯುವ ನೊಣಗಳು, ಹೇನುಗಳು ರಕ್ತ ಹೀರುವುದು
* ಕಬ್ಬಿಣದ ಅಂಶದ ಕೊರತೆ
* ಫೋಲಿಕ್ ಆಮ್ಲದ ಕೊರತೆ
* ಕರುಳಿನಲ್ಲಿ ರಕ್ತ ಹೀರುವ ಜಂತುಹುಳಗಳು
* ರಕ್ತ ಬೇಧಿ ಇತ್ಯಾದಿ ಅನೇಕ ಕಾರಣಗಳಿಂದ ಉಂಟಾಗುವುದು.
ರಕ್ತಹೀನತೆಯಾದಾಗ ಪ್ರಮುಖವಾಗುವ ತೊಂದರೆ ಶರೀರದಲ್ಲಿನ ಆಕ್ಸಿಜನ್ ಪ್ರಮಾಣದ ಕುಸಿತ ಮತ್ತು ಇಂಗಾಲದ ಡಯಾಕ್ಸೈಡ್ ಪ್ರಮಾಣದ ಹೆಚ್ಚಳ. ಇದರಿಂದ ಶರೀರದ ಜೀವಕೋಶಗಳು ಶಕ್ತಿಯ ಅಂಶದ ಕೊರತೆಯಿಂದ ಬಳಲುತ್ತವೆ.
ಅವುಗಳಲ್ಲಿನ ಕಲ್ಮಶದ ಪ್ರಮಾಣವು ಏರಿ ಅವುಗಳ ಕ್ರಿಯೆ ಕಡಿಮೆಯಾಗುತ್ತದೆ. ಇದರ ಫಲವಾಗಿ ಶ್ವಾಸಕೋಶ ಮತ್ತು ಹೃದಯ ಹೆಚ್ಚಿನ ಕೆಲಸ ನಿರ್ವಹಿಸಬೇಕಾಗುತ್ತದೆ. ಕಾರಣ ಶ್ವಾಸದ ಪ್ರಮಾಣ ಮತ್ತು ಹೃದಯದ ಮಿಡಿತ ಸಹಜವಾಗಿವೇ ಜಾಸ್ತಿಯಾಗುತ್ತದೆ.
ಪ್ರಮುಖ ಅಂಗಗಳಾದ ಮೆದುಳು, ಹೃದಯ, ಮೂತ್ರಜನಕಾಂಗ , ಪಿತ್ತಜನಕಾಂಗ ಇತ್ಯಾದಿಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ಪೂರೈಕೆಯ ಅವಶ್ಯಕತೆ ಇರುತ್ತಿದ್ದು, ಇವುಗಳ ಕ್ರಿಯೆ ಕಡಿಮೆಯಾಗುತ್ತ ಬರುತ್ತದೆ. ಮಾಂಸಖಂಡಗಳಿಗೂ ಸಹ ಆಮ್ಲಜನಕದ ಪೂರೈಕೆಯ ವ್ಯತ್ಯಯವಾಗುವುದರಿಂದ ಅವುಗಳ ಕ್ರಿಯೆಯೂ ಸಹ ಕಡಿಮೆಯಾಗುತ್ತದೆ.
ರಕ್ತ ಹೀನತೆಯಿಂದಾಗುವ ಸಮಸ್ಯೆಗಳು?
* ಬಿಳಚಿಕೊಂಡ ಲೋಳ್ಪದರಗಳು
* ಜಾಸ್ತಿಯಾದ ಉಸಿರಾಟ
* ಆಹಾರ ಸೇವಿಸದಿರುವಿಕೆ
* ನಿಶ್ಯಕ್ತಿ, ಸುಸ್ತು
* ಹಾಲಿನ ಉತ್ಪಾದನೆಯಲ್ಲಿ ಗಣನೀಯ ಇಳಿತ. ಇವೆಲ್ಲಾ ರಕ್ತ ಹೀನತೆಯ ತೊಂದರೆಗಳು.
ರಕ್ತದಲ್ಲಿ ಏನಿದೆ?
ರಕ್ತದಲ್ಲಿ ರಕ್ತಸಾರ ಅಥವಾ ಪ್ಲಾಸ್ಮ (sಶೇ 65-70), ಬಿಳಿ ರಕ್ತ ಕಣಗಳು (ಶೇ:10-15) ಮತ್ತು ಕೆಂಪುರಕ್ತಕಣಗಳಿರುತ್ತವೆ (ಶೇ 25-35). ಕೆಂಪು ರಕ್ತಕಣಗಳು ಪಶುವಿನ ಶರೀರದಲ್ಲಿ ಸುಮಾರು 8-14 ಮಿಲಿಯನ್ ಸಂಖ್ಯೆಯಲ್ಲಿರುತ್ತವೆ.
ರಕ್ತ ಹೀನತೆಯ ಲಕ್ಷಣಗಳು ಯಾವುವು?
* ರಕ್ತ ಹೀನತೆಯ ಪ್ರಥಮ ಲಕ್ಷಣವೇ ನಿಶ್ಯಕ್ತಿ.
* ಹೆಚ್ಚಿದ ಶ್ವಾಸ ಪ್ರಕ್ರಿಯೆ ಮತ್ತು ನಡೆದಾಡಲೂ ಆಗದಂತ ನಿಶ್ಯಕ್ತಿ.
* ರಕ್ತ ಹೀನತೆ ಜಾಸ್ತಿಯಿದ್ದಾಗ ಕಣ್ಣಿನ ರೆಪ್ಪೆಯ ಒಳಪದರ ನೋಡಿದಲ್ಲಿ ಅದು ಬಿಳಚಿಕೊಂಡಿರುವುದು ಕಂಡು ಬರುತ್ತದೆ.
* ಹೃದಯದ ಬಡಿತ ಪಕ್ಕದಲ್ಲಿ ನಿಂತಾಗ ಕೇಳುವಷ್ಟು ಜಾಸ್ತಿಯಾಗಿರುತ್ತದೆ.
* ಹಾಲಿನ ಪ್ರಮಾಣದಲ್ಲಿ ಗಣನೀಯ ಇಳಿತ ಮತ್ತು ಸೊರಗಿ ಹೋಗುವುದೂ ಸಹ ಕಂಡು ಬರಬಹುದು.
ರಕ್ತ ಹೀನತೆ ನಿವಾರಣೆಗೆ ಇರುವ ಸೂಕ್ತ ಚಿಕಿತ್ಸೆ ಏನು?
ಯಾವುದೇ ರೀತಿಯ ರಕ್ತಹೀನತೆಯಿದ್ದಾಗ ಅದರ ಮೂಲ ಕಾರಣ ಪತ್ತೆ ಮಾಡುವುದು ಅತ್ಯಂತ ಅವಶ್ಯ. ರಕ್ತಹೀನತೆಯ ಯಾವುದೇ ಲಕ್ಷಣಗಳು ಕಾಣಿಸಿಕೊಂಡಾಗ ತಜ್ಞ ಪಶುವೈದ್ಯರ ಸಲಹೆ ಪಡೆದು ಮೂಲಕಾರಣಕ್ಕೆ ಚಿಕಿತ್ಸೆ ಕೊಡಿಸುವುದು ಅತ್ಯಂತ ಮುಖ್ಯ.
ಗರ್ಭ ಧರಿಸಿದ ರಾಸುಗಳಲ್ಲಿ ರಕ್ತಹೀನತೆಯಾದರೆ ಗರ್ಭದಲ್ಲಿ ಬೆಳೆಯುತ್ತಿರುವ ಕರುವಿಗೂ ಸಹ ತೊಂದರೆ. ಕೆಲವೊಮ್ಮೆ ಈ ರೀತಿಯ ಜಾನುವಾರುಗಳು ನೆಲ ಹಿಡಿದಲ್ಲಿ ಇದರ ಚಿಕಿತ್ಸೆ ಬಹಳ ಕಷ್ಟ. ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಶೇ. 4 ಕ್ಕಿಂತ ಕಡಿಮೆಯಾದರೆ ರಕ್ತ ವರ್ಗಾವಣೆಯ ಅವಶ್ಯಕತೆ ಬರಬಹುದು.
ಉಣ್ಣೆಗಳ ನಿಯಂತ್ರಣ ಸದ್ಯದ ಅತ್ಯಂತ ಅವಶ್ಯಕ ಕಾರ್ಯ. ಇದರಿಂದ ತೀವ್ರವಾದ ರಕ್ತ ಹೀನತೆಯುಂಟು ಮಾಡುವ ಅನಾಪ್ಲಾಸ್ಮೋಸಿಸ್, ಬೆಬೆಸಿಯೋಸಿಸ್ ಮತ್ತು ಥೈಲೇರಿಯಾಸಿಸ್ ಇತ್ಯಾದಿ ಮಾರಕ ಕಾಯಿಲೆಗಳನ್ನು ತಡೆಯಬಹುದು. ಕಬ್ಬಿಣದ ಮತ್ತು ಫೋಲಿಕ್ ಆಮ್ಲದ ಅಂಶ ಹೊಂದಿದ ಗುಳಿಗೆಗಳು ರಕ್ತಹೀನತೆಯನ್ನು ತಡೆಯಬಲ್ಲವು.
ಉತ್ತಮ ಸಮತೋಲಿತ ಪಶುಆಹಾರ ನೀಡುವಿಕೆ ಮತ್ತು ಉತ್ತಮ ಖನಿಜ ಮಿಶ್ರಣವನ್ನು ನಿಯಮಿತವಾಗಿ ನೀಡುವುದು ಸಹ ರಕ್ತಹೀನತೆಯನ್ನು ತಡೆಯಬಲ್ಲದು.