Agripedia

ಮಣ್ಣಿಗೆ ಸಾವಯವ ಗೊಬ್ಬರವನ್ನೇ ಏಕೆ ಕೊಡಬೇಕು? ಇಲ್ಲಿದೆ ಈ ಕುರಿತಾದ ತಜ್ಞರ ಸಲಹೆ

15 February, 2023 12:26 PM IST By: Kalmesh T
Why Fertilize Soil? Here is an expert advice on this

ಮಣ್ಣಲಿನ ಸಾವಯವ ಅಂಶ ಆರೋಗ್ಯಕರ ಮಣ್ಣಲ್ಲಿನ ಪ್ರಮುಖ ಅಂಶ. ಇದು ಬೆಳೆಯ ಉಳಿಕೆಗಳು ಮತ್ತು ಜಾನುವಾರುಗಳ ಸಗಣಿ-ಹಿಕ್ಕೆಯಂತಹ ಸಾವಯವ ವಸ್ತುಗಳ ಸಮಿಶ್ರಣದ ಕಳೆಯುವಿಕೆಯ ನಂತರ ಸಹಜವಾಗಿ ಸೃಷ್ಟಿಯಾಗಿರುವ ಸಾವಯವ ಅಂಶ. ಈ ಸಾವಯವ ಅಂಶವೇ ಗಿಡಗಳ ಬೆಳವಣಿಗೆಗೆ ಬೇಕಾದ ಅತ್ಯಮೂಲ ಪೋಷಕಾಂಶಗಳು.

ಮೊಸಂಬಿ, ಮಾವು ಮತ್ತು ಬಾಳೆ ಒಟ್ಟಿಗೆ ಬೆಳೆದು ಅಧಿಕ ಲಾಭ ಪಡೆಯುತ್ತಿದ್ದಾರೆ ಈ ರೈತರು

ಸಾವಯವ ಅಂಶದಿಂದ ಗಿಡಗಳಿಗೆ ಪೋಷಕಾಂಶ ಸಿಗುವುದಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳೂ ಇವೆ.

ಮೊದಲನೆಯದಾಗಿ, ಮಣ್ಣಿಗೆ ಸೇರುವ ಬೆಳೆಯುಳಿಕೆಗಳು, ತಿಪ್ಪೆಗೊಬ್ಬರ, ಕಾಂಪೋಸ್ಟ್ ಹಾಗೂ ಇನ್ನಿತರ ರೂಪದ ಸಹಜ ಗೊಬ್ಬರಗಳು ಮಣ್ಣಲ್ಲಿ ಬೆರೆತಾದ ನಂತರ ಹದಗೆಟ್ಟಿರುವ ಮಣಿನ ರಚನೆಯನ್ನು (soil structure) ಸುಧಾರಿಸುತ್ತದೆ.

ಮಣ್ಣಲಿ ಬೆರೆಯುವ ಸಾವಯವ ವಸ್ತು ಮಣ್ಣಲ್ಲಿ ಕ್ರಮೇಣ ಕೊಳೆಯುತ್ತಾ, ಕಳಿಯುತ್ತಾ ಮಣ್ಣಲಿ ಮಣ್ಣಾಗಿ ಬೆರೆಯುತ್ತಾ ತನ್ನ ಪರಮ ಹಂತವನ್ನು ತಲುಪುತ್ತದೆ.

ಅಂದರೆ ಸಾವಯವ ಗೊಬ್ಬರಕ್ಕಾಗಿ ಬಳಸಿದ ಯಾವುದೇ ಮೂಲ ವಸ್ತುಗಳು ಅಂದರೆ, ಒಣಗಿದ ಬೆಳೆ ಉಳಿಕೆಗಳು, ಒಣಗಿದ ಎಲೆಗಳು ಇವೆಲ್ಲವೂ ತಮ್ಮ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡು ಜೀರ್ಣಗೊಂಡು ಮಣ್ಣಲಿ ಬೆರೆಯುತ್ತವೆ.

ಕಬ್ಬಿನ ತ್ಯಾಜ್ಯ ಸುಡದೇ ಮುಚ್ಚಿಗೆ ಹಾಕುವುದರಿಂದ ಹೊಲಕ್ಕೆ ದೊರೆಯಲಿದೆ ಪೋಷಕಾಂಶ

ಹೀಗೆ ಬೆರೆತು ಪರಮ ಹಂತ ತಲುಪಿದ ಆ ವಸ್ತುಗಳ ಸ್ಥಿತಿಯನ್ನೇ ಹ್ಯೂಮಸ್‌ (Humus) ಎಂದು ಕರೆಯಲಾಗಿದೆ. ಹೀಗೆ ಮಣ್ಣಲ್ಲಿ ಸೃಷ್ಟಿಯಾದ ಹ್ಯೂಮಸ್‌ ಸಾವಯವ ಅಂಶಗಳನ್ನು ಹೊಂದಿರುವ ಸಧೃಡ ವಸ್ತು.

ಈ ಹ್ಯೂಮಸ್‌ ಮಣ್ಣಲಿನ ಮರಳು, ಗೋಡು, ಜೇಡಿ ಕಣಗಳನ್ನು ಪರಸ್ಪರ ಬೆಸೆಯುತ್ತಾ ಅವುಗಳನ್ನು ಒಟ್ಟಾಗಿ ಸಂಯೋಜಿಸುತ್ತದೆ. ಇದನ್ನೇ ಮಣ್ಣಿನ ಕಣಗಳ ಸಂಯೋಜನೆ (Soil aggregation) ಎನ್ನುವುದು.

ಒಳ್ಳೆಯ ಫಲವತ್ತು ಮಣ್ಣಲ್ಲಿ ಅಥವಾ ಕಳಿತ ಮಣ್ಣಲ್ಲಿ (loamy soil) ಮರಳು, ಗೋಡು, ಜೇಡಿ ಕಣಗಳು ಪರಸ್ಪರ ಬೆರೆತು ಸಂಯೋಜನೆಗೊಂಡಿರುತ್ತವೆ. ಹೀಗೆ ಸಂಯೋಜನೆಗೊಂಡಿರುವ ಮಣ್ಣಲ್ಲಿ ಗಾಳಿ ಮತ್ತು ನೀರು ಸರಾಗವಾಗಿ ಹರಿದಾಡಲು ಅಗತ್ಯವಾದ ಸ್ಥಳ ಸೃಷ್ಟಿಯಾಗುತ್ತದೆ.

ಇದನ್ನೇ ಮಣ್ಣಲಿನ ರಂಧ್ರಗಳು (Porosity) ಎನ್ನುವುದು. ಇಂತಹ ಸ್ಥಿತಿಯಿರುವ ಮಣ್ಣು, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.

ಗೋಧಿ ಬೆಳೆಯನ್ನು ಬಾಧಿಸುವ ಪ್ರಮುಖ ಕೀಟಗಳು ಮತ್ತು ಅವುಗಳ ಹತೋಟಿ ಕ್ರಮಗಳು

ಎರಡನೆಯದಾಗಿ, ಮಣ್ಣಿನ ಸಾವಯವ ಅಂಶ ಸ್ಪಾಂಜಿನಂತೆ ಬದಲಾಗಿ, ಮಣ್ಣಲಿನ ನೀರಿನ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಮಣ್ಣಲ್ಲಿ ಸಾವಯವ ವಸ್ತು ಕಲಿಯುತ್ತಿದ್ದಂತೆ, ಮಣ್ಣೊಳಗೆ ಮಳೆ ನೀರು ಇಳಿಯುವಂತಹ ರಂಧ್ರಗಳನ್ನು, ಸೃಷ್ಟಿಸುತ್ತದೆ ಹಾಗೂ ಇಳಿದ ನೀರು ಮಣ್ಣೊಳೊಗೆ ಸರಾಗವಾಗಿ ಹರಿದಾಡುವಂತಹ ಕಾಲುವೆಗಳನ್ನು ನಿರ್ಮಿಸುತ್ತದೆ.

ಮಣ್ಣೊಳಗೆ ಸಾವಯವ ವಸ್ತು ಮಾಡುವ ಈ ವ್ಯವಸ್ಥೆಯಿಂದ ಮಣ್ಣು ನೀರನ್ನು ಹೀರುವ ಹಾಗೂ ಸಂಗ್ರಹಿಸುವ ಸಾಮರ್ಥ್ಯವನ್ನು ಪಡೆಯುತ್ತದೆ.

ಜೊತೆಗೆ ಗಾಳಿಗೆ - ಮಳೆಗೆ ಸವೆಯುವ ಮೇಲ್ಮಣ್ಣನ್ನು ತಡೆದು ಸಂರಕ್ಷಿಸುತ್ತದೆ. ಹಾಗೆಯೇ ಆವಿಯಾಗಿ ಹೋಗುವ ನೀರಿನ ಪ್ರಮಾಣವನ್ನೂ ಸಹ ತಡೆಯುತ್ತದೆ.

ಮೂರನೆಯದಾಗಿ, ಮಣ್ಣಲಿನ ಸಾವಯವ ಅಂಶ ಮಣಿನ ತಾಪಮಾನವನ್ನು ನಿಯಂತ್ರಿಸುತ್ತದೆ.

ಮಣ್ಣಲ್ಲಿ ಸಾವಯವ ವಸ್ತು ಕಳೆಯುವ ಪ್ರಕ್ರಿಯೆಯಲ್ಲಿ ಶಾಖ ಸೃಷ್ಟಿಯಾಗುತ್ತದೆ. ಈ ಮೂಲಕ ಮಣ್ಣು ಸ್ವಲ್ಪ ಬೆಚ್ಚಗಾಗುವಂತೆ ಮಾಡುತ್ತದೆ. ಮಣ್ಣಲ್ಲಿನ ಈ ಬಿಸಿಯ ಅಂಶ ಗಿಡಗಳ ಬೆಳವಣಿಗೆ ದೃಷ್ಟಿಯಲಿ ಬಹಳ ಮುಖ್ಯ.

ಇದರ ಜೊತೆಗೆ ಸಾವಯವ ಅಂಶ ಮಣ್ಣಲ್ಲಿ ಈ ಶಾಖದ ಏರುಪೇರನ್ನು ನಿಗ್ರಹಿಸುತ್ತದೆ. ಅಂದರೆ ಬೆಳೆಯುವ ಗಿಡಗಳಿಗೆ ಮಣ್ಣಲ್ಲಿನ ಉಷ್ಣತೆ ಅಗತ್ಯಕ್ಕಿಂತಾ ಹೆಚ್ಚಾದಲ್ಲಿ ಅಥವಾ ಕಡಿಮೆಯಾದಲ್ಲಿ ಅದನ್ನು ಅಗತ್ತು ಪ್ರಮಾಣಕ್ಕೆ ತರುವಂತೆ ಮಣ್ಣಲ್ಲಿನ  ಉಷ್ಣತೆಯನ್ನು ನಿಯಂತ್ರಿಸುತ್ರದೆ.

ನಾಲ್ಕನೆಯದಾಗಿ, ಮಣ್ಣಲ್ಲಿನ ಸಾವಯವ ಅಂಶ ಮಣ್ಣೊಳಗಿನ ಪ್ರಾಕೃತಿಕ ವ್ಯವಸ್ಥೆಯನ್ನು ಸರಿದೂಗಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಮಣ್ಣಲ್ಲಿನ ಜೀವಿಗಳಿಗಳಿಗೆ ಈ ಸಾವಯವ ವಸ್ತುವೇ ಮೂಲ ಆಹಾರ. ಮಣ್ಣಿನ ಆರೋಗ್ಯ ನಿರ್ವಹಣೆಯಲಿ ಇದು ಬಹಳ ಮುಖ್ಯ. ಈ ಮಣ್ಣುಜೀವಿಗಣಗಳು ಸಾವಯವ ವಸ್ತುವನ್ನು ವಿಘಟಿಸುತ್ತವೆ ಹಾಗೂ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ. ಈ ಪೋಷಕಾಂಶಗಳು ಗಿಡಗಳ ಬೆಳವಣಿಗೆಗೆ ಉಪಯುಕ್ತ.

PM-KISAN: ಪಿಎಂ ಕಿಸಾನ್ ಫಲಾನುಭವಿಗಳ ಸಂಖ್ಯೆ 10.45 ಕೋಟಿಗೆ ಏರಿಕೆ

ಇದರ ಜೊತೆಗೆ, ಸಾವಯವ ಅಂಶ ಮಣ್ಣಲ್ಲಿನ ವೈವಿಧ್ಯಮಯ ಜೀವಿಸಂಕುಲಗಳಿಗೆ ಅಂದರೆ ಎರೆಹುಳು, ಇರುವೆಗಳು, ಕ್ರಿಮಿಕೀಟಗಳು ಹಾಗೂ ಇನ್ನಿತರ ಜೀವಿಗಳಿಗೆ ಮಣ್ಣಲ್ಲಿ ನೆಲೆಯೂರಲು ಸಹಕರಿಸುತ್ತದೆ. ಈ ಮಣ್ಣು ಜೀವಿಗಳ ಪರಸ್ಪರಾವಲಂಬನಾ ಚಟುವಟಿಕೆಗಳಿಂದ ಮಣ್ಣಿನ ರಚನೆ ಸುಧಾರಿಸುತ್ತದೆ ಹಾಗೂ ಮಣ್ಣು ಫಲವತ್ತಾಗುತ್ತದೆ.

ಒಟ್ಟಾರೆಯಾಗಿ ಮಣ್ಣಲಿನ ಸಾವಯವ ಅಂಶ ಮಣ್ಣಿನ ಆರೋಗ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಿಡಗಳ ಬೆಳವಣಿಗೆಗೆ ಅಗತ್ಯವಾದ ಅತ್ಯಗತ್ಯ ಪೋಷಕಾಂಶಗಳನ್ನು ಒದಗಿಸುವುದರೊಂದಿಗೆ ಮಣ್ಣಿನ ರಚನೆಯನ್ನೂ ಸಹ ಸುಧಾರಿಸುತ್ತದೆ.

ಜೊತೆಗೆ ಅಗತ್ಯವಾಗಿ ಬೇಕಾದ ನೀರು ಮತ್ತು ಶಾಖವನ್ನು ನಿರ್ವಹಿಸುತ್ತದೆ ಹಾಗೂ ಮಣ್ಣಲ್ಲಿನ ಜೀವಿಸಂಕುಲಕ್ಕೆ ನೆಲೆಯೂರಲು ಹಾಗೂ ಬದುಕಲು ಪೂರಕ ವಾತಾವರಣವನ್ನು ಮಣ್ಣಲ್ಲಿ ನಿರ್ಮಿಸುತ್ತದೆ.

ಮಣ್ಣಿನ ಆರೋಗ್ಯ ಕಾಪಾಡುವಲ್ಲಿ, ಮಣ್ಣಲ್ಲಿ ಸಾವಯವ ಅಂಶ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಸುಸ್ಥಿರ ವಿಧಾನದಲ್ಲಿ ಹೊಲ-ತೋಟಗಳಲ್ಲಿನ ಮೇಲ್ಮಣ್ಣನ್ನು ರಕ್ಷಿಸುವ ಕೃಷಿಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

ಲೇಖಕರು : ಸುರೇಶ ವೀ. ಕುಂಬಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು