ಗೋಧಿಯು ಕರ್ನಾಟಕ ರಾಜ್ಯದ ಪ್ರಮುಖ ಹಿಂಗಾರಿ ಬೆಳೆಯಾಗಿದ್ದು, ಸುಮಾರು 1.93 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. 2.19 ಲಕ್ಷ ಟನ್ ಧಾನ್ಯ ಉತ್ಪಾದನೆಯಾಗುತ್ತಿದ್ದು, ಸರಾಸರಿ ಉತ್ಪಾದನೆ ಪ್ರತಿ ಎಕರೆಗೆ 4.53 ಕ್ವಿಂಟಲ್ ಇರುವುದು (2017-18).
ಗೋಧಿಯನ್ನು ರಾಜ್ಯದ ಧಾರವಾಡ, ಹಾವೇರಿ, ಗದಗ, ಬಾಗಲಕೋಟ, ವಿಜಯಪುರ, ಬೆಳಗಾವಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಖುಷ್ಕಿ ಹಾಗೂ ನೀರಾವರಿಯಲ್ಲಿ ಬೆಳೆಯಲಾಗುತ್ತಿದೆ. ಗೋಧಿಯನ್ನು ಬಾಧಿಸುವ ಪ್ರಮುಖ ಕೀಟಗಳು ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕ ಕೀಟದ ಸಮಗ್ರ ಹತೋಟಿ ಕ್ರಮಗಳು
1. ಗೆದ್ದಲು ಹುಳು
ಕೀಟಬಾಧೆಯ ಲಕ್ಷಣಗಳು: ಸಾಮಾನ್ಯವಾಗಿ ಗೆದ್ದಲು ಹುಳುಗಳು ಮಣ್ಣಿನ ಪದರನ್ನು ನಿರ್ಮಿಸಿ, ಒಳಗಿನಿಂದ ಬೆಳೆಯನ್ನು ತಿನ್ನುತ್ತವೆ. ತೇವಾಂಶ ಮಣ್ಣಿನಲ್ಲಿ ಕಡಿಮೆಯಾದಾಗ ಗೆದ್ದಲಿನ ಬಾಧೆ ಹೆಚ್ಚು, ಅದರಲ್ಲೂ ಬೇರು ಮತ್ತು ಭೂಮಿಯ ಮಟ್ಟದಲ್ಲಿರುವ ಕಾಂಡದ ಭಾಗವನ್ನು ಮಾತ್ರ ತಿನ್ನುವುದರಿಂದ ಗಿಡಗಳು ಬೇಗ ಒಣಗುತ್ತದೆ. ಇದರಿಂದಾಗಿ ಶೇ. 20-30 ರಷ್ಟು ಬೆಳೆ ಹಾನಿಯಾಗುತ್ತದೆ.
ಹತೋಟಿ ಕ್ರಮಗಳು: ಗೆದ್ದಲಿನ ಗೂಡಿನಲ್ಲಿ/ಹೊಲದ ಅಕ್ಕ-ಪಕ್ಕದಲ್ಲಿರುವ ಹುತ್ತದಲ್ಲಿ ರಾಣಿ ಹುಳುವನ್ನು ಗುರುತಿಸಿ ನಾಶಪಡಿಸಬೇಕು. ಆಗಾಗ ಬೆಳೆಗಳಿಗೆ ನೀರು ಹಾಯಿಸುವುದರಿಂದ ಅಥವಾ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು. ಕಪ್ಪು ಮಣ್ಣಿನ ನೀರಾವರಿ ಪ್ರದೇಶಗಳಲ್ಲಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಅಂತರಬೇಸಾಯ ಮಾಡುವುದರಿಂದ ಗೆದ್ದಲಿನ ಬಾಧೆಯನ್ನು ಕಡಿಮೆ ಮಾಡಬಹುದು. ಹುತ್ತಗಳಿಗೆ ವಿಷಪೂರಿತ ವಸ್ತುಗಳನ್ನು ಹಾಕಿ ಗೆದ್ದಲಿನ ರಾಣಿ ಮತ್ತು ಅದರ ಸಂತತಿಯನ್ನು ನಾಶಪಡಿಸಬೇಕು.
ಇದನ್ನೂ ಓದಿರಿ: “ಟೊಮೆಟೊ”ಗೆ ಅಂಗಮಾರಿ ರೋಗ, ತಡೆಯುವುದು ಹೇಗೆ ?
ಬಿತ್ತನೆಗೂ ಮುನ್ನ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ 3-4 ಮಿ. ಲೀ ಕ್ಲೋರ್‌ಪೈರಿಫಾಸ್ 20 ಇಸಿ ಅನ್ನು ಉಪಯೋಗಿಸಿ ಬೀಜೋಪಚಾರ ಮಾಡಬೇಕು. ಒಂದು ಮೀಟರ್ ಸುತ್ತಳತೆ ಇರುವ ಹುತ್ತಕ್ಕೆ 2 ಅಲ್ಯೂಮಿನಿಯಂ ಫಾಸ್ಪೆಂಡ್ ಮಾತ್ರೆಗಳನ್ನು ಹಾಕಿ, ಅದರಿಂದ ಗಾಳಿ ಹೊರಗೆ ಹೋಗದಂತೆ ಎಲ್ಲಾ ರಂಧ್ರಗಳನ್ನು ಹಸಿ ಮಣ್ಣಿನಿಂದ ಮುಚ್ಚಿ ಅಥವಾ ಪ್ರತಿ ಲೀಟರ್ ನೀರಿಗೆ 3.3 ಮಿ. ಲೀ. ಕ್ಲೋರ್‌ಪೈರಿಫಾಸ್ 20 ಇಸಿ ಯನ್ನು ಸೇರಿಸಿ ಪ್ರತಿ ಹುತ್ತಕ್ಕೆ 18 ಲೀಟರ್ ದ್ರಾವಣವನ್ನು ಹಾಕಬೇಕು. ಕೆಲವು ಸಂದರ್ಭಗಳಲ್ಲಿ ಹುತ್ತದ ಮೇಲೆ ರಂಧ್ರಗಳನ್ನು ಮಾಡಿ ಈ ದ್ರಾವಣವನ್ನು ಸುರಿಯಬೇಕಾಗುತ್ತದೆ.
ಗೆದ್ದಲಿನ ಬಾಧೆ ಬೆಳೆಗಳಲ್ಲಿ ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ 10 ಮಿ.ಲೀ ಕ್ಲೋರ್‌ಪೈರಿಫಾಸ್ 20 ಇ.ಸಿ. ಯನ್ನು ಸೇರಿಸಿ ಬಾಧೆಗೊಳಗಾದ ಪ್ರದೇಶದಲ್ಲಿ ಮಣ್ಣು ನೆನೆಯುವಂತೆ ಸುರಿಯಬೇಕು. ಶೇ. 10ರ ಎಕ್ಕೆ ಕಷಾಯವನ್ನು ಮಣ್ಣಿಗೆ ಸಿಂಪಡಿಸಬೇಕು.
ಸೂಚನೆ: ಅಲ್ಯೂಮಿನಿಯಂ ಫಾಸ್ಪೆಂಡ್ ಅತೀ ವಿಷಕಾರಿ ಕೀಟನಾಶಕ, ಆದ್ದರಿಂದ ಇದನ್ನು ಬಳಸುವಾಗ ಜಾಗರೂಕರಾಗಿರಬೇಕು)
ಇದನ್ನೂ ಓದಿರಿ: ರಾಗಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು
2. ಕಾಂಡ ಕೊರೆಯುವ ಹುಳು
ಕೀಟಬಾಧೆಯ ಲಕ್ಷಣ: ಮರಿಹುಳು ಕಾಂಡವನ್ನು ತಿನ್ನುವುದರಿಂದ ಕಾಂಡವು ಟೊಳ್ಳಾಗಿ ಸುಳಿ ಒಣಗುವುದು.
ಹತೋಟಿ ಕ್ರಮ: ಬಾಧೆ ಕಂಡ ಕೂಡಲೇ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಬಿತ್ತಿದ 20 ದಿವಸಗಳ ನಂತರ ಕೀಟಗಳ ಬಾಧೆ ಕಂಡಾಗ ಸಿಂಪಡಿಸಬೇಕು.
3. ಜಿಗಿ ಹುಳು ಮತ್ತು ಸಸ್ಯಹೇನು
ಕೀಟಬಾಧೆಯ ಲಕ್ಷಣ: ಮರಿಹುಳು ಮತ್ತು ಪ್ರೌಢ ಕೀಟಗಳು ರಸ ಹೀರುವುದರಿಂದ ಎಲೆಗಳು ಮುದುಡಿದಂತೆ ಕಾಣುತ್ತದೆ.
ಹತೋಟಿ ಕ್ರಮಗಳು: ಬಾಧೆ ಕಂಡ ಕೂಡಲೇ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಅಥವಾ 0.5 ಗ್ರಾಂ ಥಯಾಮೆಥೋಕ್ಸಾಮ್ 25 ಡಬ್ಲ್ಯೂ. ಜಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬಿತ್ತಿದ 20 ದಿವಸಗಳ ನಂತರ ಕೀಟಗಳ ಬಾಧೆ ಕಂಡಾಗ ಸಿಂಪಡಿಸಬೇಕು.
ಎರೆಹುಳು ಸಾಕಾಣಿಕೆ ಮೂಲಕ ಪ್ರತಿ ತಿಂಗಳು ಉತ್ತಮ ಆದಾಯ..ಸಂಪೂರ್ಣ ವಿಧಾನವನ್ನು ಓದಿ
4. ಗೊಣ್ಣೆ ಹುಳು
ಕೀಟಬಾಧೆಯ ಲಕ್ಷಣ: ಮರಿಹುಳುಗಳು ʼಚʼ ಆಕಾರದಲ್ಲಿದ್ದು, ಬೇರುಗಳನ್ನು ತಿನ್ನುವುದರಿಂದ ಸಸಿಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗುತ್ತವೆ.
ಹತೋಟಿ ಕ್ರಮಗಳು:
ಮಳೆಯಾದಾಗ ದುಂಬಿಗಳು ಸಾಯಂಕಾಲ 7-7.30 ರ ವೇಳೆಗೆ ಭೂಮಿಯಿಂದ ಹೊರಬರುತ್ತವೆ. ಆ ಸಂದರ್ಭದಲ್ಲಿ ಸಂಜೆಯ ವೇಳೆ ಹೊಲದ ಬದುಗಳ ಮೇಲೆ ಬೆಂಕಿಯನ್ನು ಹಾಕುವುದರಿಂದ ದುಂಬಿಗಳು ಬೆಂಕಿಗೆ ಆಕರ್ಷಿತಗೊಂಡು ಬೆಂಕಿಯಲ್ಲಿ ಬಿದ್ದು ಸಾಯುತ್ತವೆ.
ಅಥವಾ ಸಾಮೂಹಿಕವಾಗಿ ಹಿಡಿದು ನಾಶಪಡಿಸಲು ಮಳೆ ಬಿದ್ದ ದಿನವೇ ಸಾಯಂಕಾಲ ಮರದ ಕಾಂಡಕ್ಕೆ ಬೇವಿನ ಸೊಪ್ಪನ್ನು ಕಟ್ಟಿ ಅದಕ್ಕೆ 2 ಮಿ. ಲೀ. ಕ್ಲೋರೋಫೆರಿಫಾಸ್ 20 ಇ. ಸಿ. ಯನ್ನು ಪ್ರತಿ ಲೀಟರ್ ನೀರನಲ್ಲಿ ಮಿಶ್ರಣ ಮಾಡಿ ಬೇವಿನ ಸೊಪ್ಪಿಗೆ ಸಿಂಪಡಿಸುವುದು.
ಹೊರಬಂದ ದುಂಬಿಗಳು ಬೇವಿನ ಸೊಪ್ಪು ತಿಂದು ಸಾಯುತ್ತವೆ. ಕೀಟಬಾಧೆಯ ಲಕ್ಷಣ ಕಂಡಂತಹ ಪ್ರದೇಶದಲ್ಲಿ ಪ್ರತಿ ಲೀಟರ್ ನೀರಿಗೆ 10 ಮಿ.ಲೀ ಕ್ಲೋರ್‌ಪೈರಿಫಾಸ್ 20 ಇ.ಸಿ. ಯನ್ನು ಸೇರಿಸಿ ಬಾಧೆಗೊಳಗಾದ ಪ್ರದೇಶದಲ್ಲಿ ಮಣ್ಣು ನೆನೆಯುವಂತೆ ಸುರಿಯಬೇಕು.
Authors: