Agripedia

ಕಬ್ಬಿನ ತ್ಯಾಜ್ಯ ಸುಡದೇ ಮುಚ್ಚಿಗೆ ಹಾಕುವುದರಿಂದ ಹೊಲಕ್ಕೆ ದೊರೆಯಲಿದೆ ಪೋಷಕಾಂಶ

13 February, 2023 3:18 PM IST By: Kalmesh T
Covering sugarcane waste without burning: This will provide nutrients to the field

ರೈತರು ಕಬ್ಬಿನ ತ್ಯಾಜ್ಯವನ್ನು ಸುಡುವ ಬದಲು ಅದನ್ನು ಹೊಲದಲ್ಲೆ ಮುಚ್ಚಿಗೆ ಹಾಕುವ ವಿಧಾನವನ್ನು ಕಲಿತರೆ ಇದರಿಂದ ಹೇಗೆ ಲಾಭ ಪಡೆಯಬಹುದು ಎಂಬುದನ್ನು ವಿವರಿಸಿದ್ದಾರೆ ರೈತರು ಮತ್ತು ಕೃಷಿ ಸಲಹೆಗಾರರಾದ ಪ್ರಶಾಂತ್‌ ಜಯರಾಮ್‌ ...

ಪಿಎಂ ಕಿಸಾನ್‌ ಪಟ್ಟಿಯಿಂದ ಈ ರೈತರನ್ನು ಕೈಬಿಟ್ಟ ಸರ್ಕಾರ! ಯಾರನ್ನು ಗೊತ್ತೆ?

ಕಬ್ಬಿನ ತ್ಯಾಜ್ಯಗಳಿಗೆ ಬೆಂಕಿ ಹಾಕೋದು ಬಿಡಬೇಕು, ಮುಚ್ಚಿಗೆ ಮಾಡೋದು ಕಲಿಯಬೇಕು. ಪ್ರತಿ ಎಕರೆಯಲ್ಲಿ ಕಬ್ಬಿನ ಸೋಗು/ರವದಿ/ತ್ಯಾಜ್ಯ 03 ರಿಂದ 04 ಟನ್ ಉತ್ಪಾದನೆಯಾಗುತ್ತದೆ.

ಇದನ್ನು ಬೆಂಕಿಯಲ್ಲಿ ಸುಡದೆ ಒಂದು ಸಾಲು ಬಿಟ್ಟು ಮತ್ತೊಂದು ಸಾಲಿನಲ್ಲಿ ಮುಚ್ಚಿಗೆ ಮಾಡಿ ಭೂಮಿಯಲ್ಲಿ ಸೇರಿಸಿದಾಗ ಕಬ್ಬಿನ ತ್ಯಾಜ್ಯದಲ್ಲಿ ಅಡಕವಾಗಿರುವ ಪೋಷಕಾಂಶಗಳು ಭೂಮಿಗೆ ಸೇರುವುದರಿಂದ, ರಾಸಾಯನಿಕ ಗೊಬ್ಬರದ ಮೂಲಕ ನೀಡುವ 12 ರಿಂದ 16 ಸಾವಿರ ರೂಪಾಯಿ ಉಳಿತಾಯವಾಗುತ್ತದೆ.

ಒಂದು ಎಕರೆಯಲ್ಲಿ ಉತ್ಪಾದನೆಯಾಗುವ ಕಬ್ಬಿನ ತ್ಯಾಜ್ಯವನ್ನು ಕಬ್ಬಿನ ಸಾಲುಗಳ ನಡುವೆ ಮುಚ್ಚಿಗೆ ಮಾಡಲು 4 ರಿಂದ 5 ಕೃಷಿ ಕಾರ್ಮಿಕರ ಅವಶ್ಯಕತೆ ಬೀಳುತ್ತದೆ, ಇದಕ್ಕೆ ಸುಮಾರು ರೂ 1500/ ರಿಂದ 2000/ ಖರ್ಚು ಬರುತ್ತದೆ.

Kharchikayi | ಅಪರೂಪದ ಔಷಧೀಯ ಗುಣ ಹೊಂದಿರುವ “ಕರ್ಚಿಕಾಯಿ”!

ಕೃಷಿ ಕಾರ್ಮಿಕರ ಅಭಾವಿರುವ ಕಡೆ ಕಬ್ಬಿನ ತ್ಯಾಜ್ಯವನ್ನು ಪುಡಿ ಮಾಡುವ ರೋಟೊವೇಟರ್ ಬಳಸಿಕೊಳ್ಳಬಹುದು.ಕಬ್ಬಿನ ಬೆಳೆಗಾರರು ಹಣವನ್ನು ವ್ಯಯಿಸಿ ಮುಚ್ಚಿಗೆ ಮಾಡಿಸಬೇಕಿರುವುದರಿಂದ ಕಬ್ಬಿನ ತ್ಯಾಜ್ಯಗಳಿಗೆ ಬೆಂಕಿ ಹಾಕುತ್ತಿರುವುದಕ್ಕೆ ಪ್ರಮುಖ ಕಾರಣವಾಗಿರುತ್ತದೆ.

ಬೆಂಕಿ ಹಾಕದೇ ಕಬ್ಬಿನ ತ್ಯಾಜ್ಯವನ್ನು ಭೂಮಿಗೆ ಮರಳಿಸುವುದರಿಂದ ಬೆಳೆಗಾರನಿಗೆ ಆಗುವ ವೈಯಕ್ತಿಕ ಲಾಭದ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ಮಣ್ಣು, ನೀರು, ಪರಿಸರದ ಹೆಸರಲ್ಲಿ ಪೋಲಾಗುತ್ತಿರುವ ಸರ್ಕಾರದ ಹಣವನ್ನು ಇದಕ್ಕೆ ಬಳಕೆ ಮಾಡಿಕೊಳ್ಳುವ ಬಗ್ಗೆ ಗಮನ ನೀಡಬೇಕಿದೆ.

ಕೂಳೆ ಕಬ್ಬಿನ ಬೆಳೆಯಲ್ಲಿ ಕಬ್ಬಿನ ತ್ಯಾಜ್ಯವನ್ನು ಸಾಲು ಬಿಟ್ಟು ಸಾಲಿನಲ್ಲಿ ಮುಚ್ಚಿಗೆ ಮಾಡುವುದು ಮತ್ತು ಮುಚ್ಚಿಗೆ ಮೇಲೆ ಬಳ್ಳಿ ಜಾತಿಗೆ ಸೇರಿದ ಅಲಸಂದೆ, ಕುಂಬಳ ಇತ್ಯಾದಿ ಬೀಜಗಳನ್ನು ಹಾಕಿ ಮುಚ್ಚಿಗೆ ಮೇಲೆ ಹಬ್ಬುವಂತೆ ಮಾಡುವುದು.

ಖಾಲಿಯಿರುವ ಸಾಲಿನಲ್ಲಿ ದ್ವಿದಳ /ಹಸಿರೆಲೆ ಗೊಬ್ಬರ ಬೆಳೆದು ಭೂಮಿಗೆ ಸೇರಿಸುವುದು.ಕಬ್ಬಿನ ತ್ಯಾಜ್ಯದಲ್ಲಿ ಅಪಾರ ಪ್ರಮಾಣದ ಇಂಗಾಲದ ಅಂಶವಿರುತ್ತದೆ.

G20 ಭಾರತದ ಅಧ್ಯಕ್ಷತೆ: ಇಂದೋರ್‌ನಲ್ಲಿ ಕೃಷಿ ಪ್ರತಿನಿಧಿಗಳ ಮೊದಲ ಸಭೆ

ಹಸಿರೆಲೆ ಗೊಬ್ಬರದಲ್ಲಿ ಸಾರಾಜನಕ ಅಂಶವಿರುತ್ತದೆ,ಇವೆರೆಡು ಸೇರಿ ಭೂಮಿಗೆ ಉತ್ತಮ ಗೊಬ್ಬರ ಒದಗಿಸುತ್ತದೆ.

ಕಬ್ಬಿನ ತ್ಯಾಜ್ಯವನ್ನು ಮುಚ್ಚಿಗೆ ಮಾಡುವುದರಿಂದ, ಮುಚ್ಚಿಗೆ ಮಾಡಿರುವ ಸಾಲು ಬಿಟ್ಟು ಖಾಲಿಯಿರುವ ಸಾಲಿಗೆ ಮಾತ್ರ ನೀರು ಕೊಡುವುದರಿಂದ ಅಪಾರ ಪ್ರಮಾಣದ ನೀರಿನ ಉಳಿತಾಯವಾಗುತ್ತದೆ.

ಮುಚ್ಚಿಗೆ ಮಾಡಿರುವ ಸಾಲಿನಲ್ಲಿ ಕಳೆ ನಿಯಂತ್ರಣವಾಗುತ್ತದೆ, ಮಣ್ಣಿನ ರಚನೆ ಮತ್ತು ಆರೋಗ್ಯ ಉತ್ತಮವಾಗುವುದರಿಂದ ಮಣ್ಣಿನ ರಸಸಾರ ಮಟ್ಟ ಸುಧಾರಣೆಯಾಗಿ ಬೆಳೆಗಳು ಸೊಗಸಾಗಿ ಬರುತ್ತವೆ.

ಮುಚ್ಚಿಗೆ ಮಾಡುವ ಕಬ್ಬಿನ ತ್ಯಾಜ್ಯವನ್ನು ಬೇಗ ಕರಗಿಸಬೇಕಾದರೆ,ನೀರಿನಲ್ಲಿ ಹಸಿ ಸಗಣಿ ಕಲೆಸಿಕೊಂಡು ಮುಚ್ಚಿಗೆ ಮೇಲೆ ಸಮಾನವಾಗಿ ಎರಚಬಹುದು ಅಥವಾ ವೇಸ್ಟ್ ಡಿಕಂಪೋಸರ್ ಪುಡಿ/ದ್ರಾವಣವನ್ನು ಮುಚ್ಚಿಗೆ ಮೇಲೆ ಸಿಂಪಡಿಸಬಹುದು.

ಕಬ್ಬಿನ ತ್ಯಾಜ್ಯಕ್ಕೆ ಬೆಂಕಿ ಹಾಕಿ ಸುಟ್ಟಾಗ ವಿಷಕಾರಕ ಅನಿಲಗಳು ವಾತಾವರಣಕ್ಕೆ ಬಿಡುಗಡೆಯಾಗುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ.ಕಬ್ಬಿನ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ ಮಣ್ಣಿನಲ್ಲಿರುವ ಸೊಕ್ಷ್ಮಜೀವಿಗಳು ಸಾಯುತ್ತದೆ.

ಮಣ್ಣಿನ ಫಲವತ್ತತೆ ಕುಂಠಿತವಾಗುತ್ತದೆ, ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ ನೀರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾಗುತ್ತದೆ,ಕಬ್ಬಿನ ತ್ಯಾಜ್ಯವನ್ನು ಸುಡದೆ ಮುಚ್ಚಿಗೆ ಮೂಲಕ ಮಣ್ಣಿಗೆ ಸೇರಿಸುವುದರಿಂದ ಎಲ್ಲಾ ರೀತಿಯಿಂದಲೂ ಅನುಕೂಲವಿದೆ.

ಲೇಖಕರು : ಪ್ರಶಾಂತ್ ಜಯರಾಮ್, ರೈತರು ಮತ್ತು ಕೃಷಿ ಸಲಹೆಗಾರರು

ಸಂಪರ್ಕಕ್ಕೆ: 9342434530