Success stories

ಸೋಷಿಯಲ್ ಮೀಡಿಯಾ ನೆರವಿನಿಂದ 4 ಎಕರೆ ಕಲ್ಲಂಗಡಿ ಮಾರಿದ ಯುವ ರೈತ!

14 June, 2021 4:34 PM IST By:
ಹಳದಿ ಕಲ್ಲಂಗಡಿಯೊಂದಿಗೆ ರೈತ ಬಸವರಾಜ ಪಾಟೀಲ

ಕೃಷಿ ಕ್ಷೇತ್ರದಲ್ಲಿ ಅತ್ಯಂತ ಕಠಿಣ ಸಂದರ್ಭ ಎದುರಾದಾಗಲ್ಲೂ ಯಶಸ್ಸಿನ ಹಾದಿ ಹುಡುಕಿಕೊಳ್ಳುವ ಸಾಧಕ ಶ್ರಮಿಕರಿಗೇನೂ ಕೊರತೆಯಿಲ್ಲ. ಹೀಗೆ ಕಠಿಣ ಸಮಯದಲ್ಲಿ ಗಟ್ಟಿ ಮನಸು ಮಾಡಿ, ಹೊಸ ಆಲೋಚನೆಗಳೊಂದಿಗೆ ಯಶಸ್ಸಿನ ಮಾರ್ಗ ಹುಡುಕಿಕೊಂಡವರು ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಕೊರಳ್ಳಿ ಗ್ರಾಮದ ಯುವ ರೈತ ಬಸವರಾಜ ಪಾಟೀಲ.

ವಾರದ ಹಿಂದೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್‌ನಲ್ಲಿ ಹಳದಿ ಕಲ್ಲಂಗಡಿ ಹಣ್ಣುಗಳ ಚರ್ಚೆ, ಗುಣಗಾನ ತುಂಬಿತ್ತು. ಇದಕ್ಕೆ ಕಾರಣ ಬಸವರಾಜ ಪಾಟೀಲ್ ಎಂಬ ಯುವ ರೈತ. ಕೊರಳ್ಳಿಯ ಬಸವರಾಜ ಪಾಟೀಲ, ಮೂರೂವರೆ ಎಕರೆ ಜಮೀನಿನಲ್ಲಿ ಜರ್ಮನಿ ಮೂಲದ ಅಪರೂಪದ ಹಳದಿ ಕಲ್ಲಂಗಡಿ ಬೆಳೆದಿದ್ದರು. ಇನ್ನೇನು ಹಣ್ಣುಗಳ ಕೊಯ್ಲು ಮಾಡಿ ಮಾರುಕಟ್ಟೆಗೆ ಕೊಂಡೊಯ್ಯಬೇಕು ಅನ್ನುವಷ್ಟರಲ್ಲಿ ಎರಡನೇ ಅಲೆಯ ಕೊರೊನಾ ಲಾಕ್‌ಡೌನ್ ಜಾರಿಯಾಯಿತು. ಇದರಿಂದ ಕೊಂಚ ಗಲಿಬಿಲಿಯಾದ ರೈತ, ಮುಂದೇನು ಎಂಬ ಯೋಚನೆಯಲ್ಲಿ ಮುಳುಗಿರುವಾಗಲೇ ಅನಿರೀಕ್ಷಿತ ಅಥಿತಿಯಾಗಿ ಬಂದದ್ದು ಮುಂಗಾರು ಪೂರ್ವ ಮಳೆ. ಹಣ್ಣುಗಳನ್ನು ಹೊಲದಲ್ಲೇ ಬಿಟ್ಟರೆ ನೀರಲ್ಲಿ ಕೊಳೆತುಹೋಗುತ್ತವೆ ಎಂಬ ಭಯದಿಂದ ಕಟಾವು ಮಾಡಿಸಿ ಹೊಲದಲ್ಲೇ ಇದ್ದ ಶೆಡ್‌ನಲ್ಲಿ ಸಂಗ್ರಹಿಸಿದ್ದೂ ಆಯಿತು. ಆದರೆ, ಮುಂದೇನು...!!

ಸೋಷಿಯಲ್ ಮೀಡಿಯಾ ನೆರವು

ಒಂದೆಡೆ ಮಳೆ ಭಯದಿಂದ ಹಣ್ಣುಗಳನ್ನು ಕಟಾವು ಮಾಡಿಸಿ ಆಗಿದೆ. ಮತ್ತೊಂದೆಡೆ ಲಾಕ್‌ಡೌನ್ ಹಿನ್ನಲೆಯಲ್ಲಿ ಮಾರುಕಟ್ಟೆಗಳೆಲ್ಲಾ ಬಂದ್ ಆಗಿವೆ. ಹಣ್ಣುಗಳನ್ನು ಕೊಳ್ಳುವವರೇ ಇಲ್ಲ. ಅದರಲ್ಲೂ ಹಳದಿ ಕಲ್ಲಂಗಡಿ ಎಂದರೆ ಅನುಮಾನದ ಕಣ್ಣಿನಿಂದ ನೋಡುವವರೇ ಹೆಚ್ಚು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬಸವರಾಜ ಅವರ ಕೈ ಹಿಡಿದದ್ದು ಸಾಮಾಜಕ ಜಾಲತಾಣಗಳು. ಹೀಗೇ ಯೋಚಿಸುತ್ತಾ ಕುಳಿತಾಗ, ಸೋಷಿಯಲ್ ಮೀಡಿಯಾ ಮೂಲಕವೇಕೆ ಹಣ್ಣುಗಳ ಕುರಿತು ಪ್ರಚಾರ ಮಾಡಬಾರದು ಎಂಬ ಆಲೋಚನೆ ಬಂತು. ಮರು ಕ್ಷಣವೇ ತಮ್ಮ ಫೋನ್‌ನಲ್ಲಿ ಹಳದಿ ತಿರುಳಿನ ಕಲ್ಲಂಗಡಿ ಹಣ್ಣುಗಳ ಹಲವು ಫೋಟೋ ಕ್ಲಿಕ್ಕಿಸಿದ ನಮ್ಮ ರೈತ, ಈ ಹಣ್ಣುಗಳ ವಿಶೇಷತೆ ವಿವರದೊಂದಿಗೆ ತಮ್ಮ ವಾಟ್ಸ್ ಆಪ್ ಸ್ಟೇಟಸ್ ಅಪ್‌ಡೇಟ್ ಮಾಡಿದರು. ಜೊತೆಗೆ, ಫೇಸ್‌ಬುಕ್‌£ಲ್ಲೂ ಒಂದು ಪೋಸ್ಟ್ ಹಾಕಿದರು.

ಮೊದಲ ದಿನ ಮೌನ!

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿನ ಮರುದಿನವೇ ಅತ್ಯುತ್ಸಾಹದಿಂದ ಗೂಡ್ಸ್ ವಾಹನವೊಂದರಲ್ಲಿ ಕಲ್ಲಂಗಡಿ ಹಣ್ಣುಗಳನ್ನು ತುಬಿಕೊಂಡು ಕಲಬುರಗಿಗೆ ಹೋದ ಬಸವರಾಜ, ಕೋರ್ಟ್ ಸಮೀಪ ಗಾಡಿ ನಿಲ್ಲಿಸಿ ಗ್ರಾಹಕರಿಗಾಗಿ ಕಾಯತೊಡಗಿದರು. ಆದರೆ ಬಂದು ಹಣ್ಣು ಕೊಂಡದ್ದು ಬೆರಳೆಣಿಕೆಯಷ್ಟು ಮಂದಿ. ಉಳಿದ ಹಣ್ಣುಗಳನ್ನು ಊರಿಗೆ ಕೊಂಡೊಯ್ದ ಬಸವರಾಜ ಅವರಿಗೆ ನಿರಾಸೆಯೇನೋ ಆಯಿತು. ಹಾಗಂತಾ ಪ್ರಯತ್ನ ಕೈಬಿಡಲಿಲ್ಲ. ಈ ಬಾರಿ ಹಣ್ಣುಗಳಿಂದ ಆಗುವ ಆರೋಗ್ಯ ಪ್ರಯೋಜನಗಳ ಪಟ್ಟಿ ಮಾಡಿ ಒಂದು ಬ್ಯಾನರ್ ಮಾಡಿಸಿದರು. ಬಳಿಕ, ‘ಈ ದಿನ ಬೆಳಗ್ಗೆ 11 ಗಂಟೆಯಿAದ ಸಂಜೆ 6 ಗಂಟೆಯವರೆಗೆ ಕಲಬುರಗಿಯ ಜಿಲ್ಲಾ ನ್ಯಾಯಾಲಯದ ಸಮೀಪ ಹಳದಿ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಲಾಗುವುದು’ ಎಂಬ ಮಾಹಿತಿ ಒಳಗೊಂಡ ಪೋಸ್ಟ್ ಸಿದ್ಧಪಡಿಸಿದ ಬಸವರಾಜ, ಹಣ್ಣಿನ ಆರೋಗ್ಯ ಪ್ರಯೋಜನಗಳ ಮಾಹಿತಿಯಿದ್ದ ಬ್ಯಾನರ್‌ನ ಸಾಫ್ಟ್ ಕಾಪಿ ಒಂದನ್ನು ಫೆಸ್ಬುಕ್, ವಾಟ್ಸ್ಆ್ಯಪ್‌ನಲ್ಲಿ ಪೋಸ್ಟ್ ಮಾಡಿದರು. ಜೊತೆಗೆ, ಈ ಬಗ್ಗೆ ಸಾಧ್ಯವಾದಷ್ಟು ಪ್ರಚಾರ ಮಾಡುವಂತೆ ಸ್ನೇಹಿತರು, ಆಪ್ತರನ್ನು ಕೋರಿದರು. ಹಣ್ಣುಗಳ ರುಚಿ ನೋಡಿದ್ದ ಆಪ್ತ ಬಳಗದವರೂ ತಮ್ಮ ಸಂಪರ್ಕಗಳು ಮತ್ತು ಗುಂಪುಗಳಲ್ಲಿ ಈ ಮಾಹಿತಿ ಹಂಚಿಕೊAಡರು.

ಅರ್ಧ ತಾಸಲ್ಲಿ ನೂರಾರು ಫೋನ್ ಕಾಲ್

ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಪೋಸ್ಟ್ ಮಾಡಿದ ಮರು ದಿನ ಬೆಳಗ್ಗೆ ತಲಾ 2 ಸಾವಿರ ಹಣ್ಣುಗಳಂತೆ ಎರಡು ಗಾಡಿಗಳಲ್ಲಿ ಒಟ್ಟು 4 ಸಾವಿರ ಹಳದಿ ಕಲ್ಲಂಗಡಿ ಹಣ್ಣುಗಳನ್ನು ತುಂಬಿಕೊAಡ ಬಸವರಾಜ, ಜಿಲ್ಲಾ ನ್ಯಾಯಾಲಯದತ್ತ ಹೊರಟಿದ್ದರು. 11 ಗಂಟೆಗೆ ಮಾರಾಟ ಆರಂಭಿಸುತ್ತೇವೆ ಎಂದು ತಿಳಿಸಿದ್ದರಾದರೂ ಗಂಟೆ 11.30 ಆದರೂ ನಿಗದಿತ ಸ್ಥಳ ತಲುಪಿರಲಿಲ್ಲ. ಆದರೆ, ಆ ಅರ್ಧ ಗಂಟೆ ಅವಧಿಯಲ್ಲಿ ಬಸವರಾಜ ಅವರ ಮೊಬೈಲ್‌ಗೆ ಸುಮಾರು 200 ಮಂದಿ ಕರೆ ಮಾಡಿದ್ದರು. ‘ಬಾಳ್ ಹೊತ್ತಿಂದ ಕೋರ್ಟ್ ಅಂತೇಲೆ ಕಾಯಕುಂತೇವಿ, ನೀಯೆಲ್ಲೋ ಯಪ್ಪಾ ಕಾಣಾವಲ್ಲ್ಲಿ!’ ಎಂದು ಪ್ರಶ್ನಿಸಲಾರಂಭಿಸಿದ್ದರು. 11.40ರ ವೇಳೆಗೆ ಕಲ್ಲಂಗಡಿ ಹೊತ್ತ ಗಾಡಿಗಳು ಕೋರ್ಟ್ ಆವರಣ ತಲುಪಿದವು. ಅಷ್ಟೊತ್ತು ಹಣ್ಣು ಕೊಳ್ಳಲು ಕಾಯುತ್ತಿದ್ದ ನೂರಾರು ಮಂದಿಗೆ ಅದೇನೋ ಖುಷಿ. ಅವರನ್ನು ನೋಡಿದ ರೈತನ ಮೊಗದಲ್ಲಿ ಮಂದಹಾಸ. ಮುಂದೆ ಕೇವಲ 25 ನಿಮಿಷಗಳಲ್ಲಿ ಹಳದಿ ಕಲ್ಲಂಗಡಿಯ ಸುಳಿವೇ ಇರಲಿಲ್ಲ! ಆಮೇಲೆ ಬಂದವರಿಗೆ, ‘ನಾಳೆ ಮತ್ತೆ ತರುತ್ತೇವೆ’ ಅಂತ ತೋರಿಸೋಣವೆಂದರೂ ಒಂದೇ ಒಂದು ಕಲ್ಲಂಗಡಿ ಸಹ ಉಳಿದಿರಲಿಲ್ಲ!

100 ಹೆಚ್ಚಾಯ್ತು, 50ಕ್ಕೆ ಮಾರಿದೆ

‘ಒಂದೊAದು ಹಣ್ಣು 5 ಕೆ.ಜಿ ತೂಗುತ್ತಿದ್ದವು. ಹೀಗಾಗಿ ಮೊದಲ ದಿನ ವ್ಯಾಪಾರ ಆರಂಭಿಸಿದಾಗ ಒಂದು ಹಣ್ಣಿಗೆ 100 ರೂ. ಬೆಲೆ ನಿಗದಿ ಮಾಡಿದೆ. ಕೆಲವರು ಕೊಂಡರಾದರೂ ‘ರೇಟ್ ಭಾಳಾತೋ ತಮ್ಮ’ ಅಂದವರೇ ಹೆಚ್ಚು. ಹೀಗಾಗಿ ಬೆಲೆಯನ್ನು 50 ರೂ.ಗೆ ಇಳಿಸಿದೆ. ಕೊನೆಯಲ್ಲಿ ಉಳಿಯುತ್ತಿದ್ದ ಸಣ್ಣ ಹಣ್ಣುಗಳನ್ನು 50 ರೂ.ಗೆ ಎರಡರಂತೆ ಮಾರಿದೆ. ಕೆಲವರು ಹಣ್ಣಿನ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ಹಣ್ಣು ಕೆಟ್ಟಿದ್ದರೆ ಕರೆ ಮಾಡಿ ನಿಮ್ಮ ಮನೆ ಬಾಗಿಲಿಗೇ ಬೇರೆ ಹಣ್ಣು ತಂದುಕೊಡುತ್ತೇನೆ ಅಂದೆ. ಒಬ್ಬ ಗ್ರಾಹಕರ ಮನೆಗೆ ಹೋಗಿ ಬದಲಿ ಹಣ್ಣು ಕೊಟ್ಟು ಬಂದದ್ದೂ ಆಯಿತು. ಹೀಗೆ ಒಟ್ಟಾರೆ 10,000 ಹಣ್ಣುಗಳನ್ನು ಮಾರಾಟ ಮಾಡಿದೆ. ಈ ನಡುವೆ ಶೆಡ್‌ನಲ್ಲಿ ಸಂಗ್ರಹಿಸಿದ್ದ ಹಣ್ಣುಗಳಲ್ಲಿ ಶೇ.40ರಷ್ಟು ಹಣ್ಣುಗಳು ಕೆಟ್ಟು ಹೋದವು. ಆದರೂ, ನೇರವಾಗಿ ನಾನೇ ಹಣ್ಣುಗಳನ್ನು ಮಾರಿದ್ದರಿಂದ ನಷ್ಟವಂತೂ ಆಗಲಿಲ್ಲ,’ ಎನ್ನುತ್ತಾರೆ ಬಸವರಾಜ ಪಾಟೀಲ.

ಮೊದಲು ಕಲಬುರಗಿಯಲ್ಲಿ ಟ್ರ್ಯಾಕ್ಟರ್ ಶೋರೂಮ್ ಹೊಂದಿದ್ದ ಬಸವರಾಜ ಪಾಟೀಲ, ಅದನ್ನು ಮುಚ್ಚಿದ ಬಳಿಕ ಪೂರ್ಣ ಪ್ರಮಾಣದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಜಮೀನು ಹೆಚ್ಚಿರುವುದರಿಂದ ಕಲ್ಲಂಗಡಿ ಜೊತೆಗೆ ಕಬ್ಬು, ಟೊಮೇಟೊ, ಬಾಳೆ, ಪಪ್ಪಾಯ ಸೇರಿ ಹಲವು ವಿಧದ ಬೆಳೆ ಬೆಳೆಯುತ್ತಾರೆ. ಕೆಲ ವರ್ಷಗಳ ಹಿಂದೆ ಸತತ ಮೂರು ಬೆಳೆ ಎಕರೆಗೆ 100 ಟನ್ ಕಬ್ಬು ಬೆಳೆದಿದ್ದ ಬಸವರಾಜ ಅವರು, ಕಳೆದ ವರ್ಷ ಕೇವಲ 2 ಎಕರೆ ಟೊಮೇಟೊ ಬೆಳೆದು ಬರೋಬ್ಬರಿ 18 ಲಕ್ಷ ಆದಾಯ ಗಳಿಸಿದ್ದರು. ಜೊತೆಗೆ ಮಧ್ಯಪ್ರದೇಶದ ಕೃಷಿಕರೊಬ್ಬರು ಅನುಸರಿಸಿದ್ದ 70/30 ಮಾದರಿಯನ್ನು ತಮ್ಮ ಬಾಳೆ ತೋಟದಲ್ಲಿ ಅಳವಡಿಸಿಕೊಂಡು ಉತ್ತಮ ಇಳುವರಿ ಕೂಡ ಪಡೆಯುತ್ತಿದ್ದಾರೆ. ಈ ಯುವ ರೈತನ ಪ್ರಗತಿಪರ ಕೃಷಿ ಪಯಣದ ಕುರಿತ ಮತ್ತಷ್ಟು ಮಾಹಿತಿಯನ್ನು ಮತ್ತೊಂದು ಲೇಖನದ ಮುಲಕ ನಿಮ್ಮೆದುರು ಪ್ರಸ್ತುತಪಡಿಸಲಿದ್ದೇವೆ.