ಕೆಲಸ ಎಷ್ಟು ಕಷ್ಟದ್ದೇ ಇರಲಿ, ಸವಾಲಿನದ್ದೇ ಆಗಿರಲಿ, ರೈತ ಒಮ್ಮೆ ಮನಸ್ಸು ಮಾಡಿದರೆ ಸಾಕು, ತಾನು ಅಂದುಕೊಂಡಿದ್ದನ್ನು ಸಾಧಿಸದೆಯೇ ಬಿಡುವುದಿಲ್ಲ. ಅಷ್ಟಿಲ್ಲದೆಯೇ ‘ಬಂಗಾರದ ಮನುಷ್ಯ’ ರಾಜಣ್ಣನವರು ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂದು ಹೇಳಿದ್ದಾರಾ..? ಹಾಗೇ, ರಾನಣ್ಣನವರು ಅಂದು ಹಾಡಿನ ಮೂಲಕ ಕೊಟ್ಟ ಸಂದೇಶವನ್ನು ಕೆಲ ರೈತರು ಇಂದಿಗೂ ಪಾಲಿಸುತ್ತಿದ್ದಾರೆ. ‘ಅಯ್ಯೋ ಇದನ್ನು ಇಲ್ಲಿ ಬೆಳೆಯೋಕಾಗಲ್ಲ ಅಂದುಕೊಂಡು ಬಹಳಷ್ಟು ಮಂದಿ ಮುಟ್ಟದೇ ಬಿಟ್ಟ ಬೆಳೆಗಳನ್ನೇ ಕೈಗೆತ್ತಿಕೊಂಡ ಕೆಲ ಉತ್ಸಾಹಿಗಳು, ಅದನ್ನು ಸವಾಲಾಗಿ ಸ್ವೀಕರಿಸಿ ಬೆಳೆದೇ ತೀರಬೇಕೆಂಬ ಛಲದಲ್ಲಿ ಕೃಷಿ ಮಾಡುತ್ತಿದ್ದಾರೆ. ಹೀಗೇ ಯಾರೂ ಬೆಳೆಯದೆ ಇರುವ ಬೆಳೆಯನ್ನೇ ತಾನು ಬೆಳೆದು ತೋರಿಸಬೇಕೆಂಬ ವಿಭಿನ್ನ ಆಲೋಚನೆಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿರುವವರು ಚಿತ್ರದುರ್ಗ ಜಿಲ್ಲೆ ಮತ್ತು ಅದೇ ತಾಲೂಕಿನ ಗೊಡಬನಹಾಳ್ ಗ್ರಾಮದ ಯುವ ರೈತ ಸುನೀಲ್.
ಅಂದಹಾಗೆ ಸುನೀಲ್ ಅವರು, ಕಾಶ್ಮೀರದಲ್ಲಷ್ಟೇ ಫೇಮಸ್ ಆಗಿರುವ ಸೇಬನ್ನು ಚಿತ್ರದುರ್ಗದಂತಹ ಬರ ಹಾಗೂ ಬಿಸಿಲ ನಾಡಿನ ನೆಲದಲ್ಲೂ ಬೆಳೆದು ತೋರಿಸಿದ್ದಾರೆ. ವಿಶೇಷ ಏನೆಂದರೆ ಸೇಬು ಬೆಳೆಸಲು ಸುನೀಲ್ ಹೆಚ್ಚೇನೂ ಕಷ್ಟ ಪಟ್ಟಿಲ್ಲ. ಆದರೆ ಶ್ರದ್ಧೆ ವಹಿಸಿದ್ದಾರೆ. ಪ್ರತಿ ಗಿಡಕ್ಕೂ ಒಂದೊಂದು ಪುಟ್ಟಿ ದನದ ಸಗಣಿ ಹಾಕಿದ್ದು ಬಿಟ್ಟರೆ ಮತ್ತೇನನ್ನೂ ಬಳಸಿಲ್ಲ. ಇದರೊಂದಿಗೆ ಸೇಬು ಬೆಳೆಯಬೇಕೆಂಬ ಸುನೀಲ್ ಅವರ ಛಲ, ಬೆಳೆಯಬಲ್ಲೆ ಎಂಬ ವಿಶ್ವಾಸ, ಆಶಾವಾದ ಕೂಡ ಕೆಲಸ ಮಾಡಿದೆ.
ಸೇಬನ್ನೇಕೆ ಬೆಳೆಯಬಾರದು?
ಸಾಮಾನ್ಯವಾಗಿ ಸೇಬು ಎಂದರೆ ಅದು ಕಾಶ್ಮೀರದ ಆಸ್ತಿ. ಕಾಶ್ಮೀರ ಬಿಟ್ಟರೆ ಬೇರೆಲ್ಲೂ ಆ ಬೆಳೆ ಸರಿಯಾಗಿ ಬರುವುದಿಲ್ಲ ಎಂಬ ಆಲೋಚನೆ ಬಹಳಷ್ಟು ಮಂದಿಗಿದೆ. ಆದರೆ ನಮ್ಮ ಹೊಲದಲ್ಲೇಕೆ ಸೇಬು ಬೆಳೆಯೋಲ್ಲ? ಸಸಿ ನೆಟ್ಟು ನೋಡೇಬಿಡೋಣ ಅಂದುಕೊAಡ ಗೊಡಬನಹಾಳ್ ಗ್ರಾಮದ ಸುನೀಲ್, ಜ್ಯೋತಿ ಪರಕಾಶ್ ಹಾಗೂ ಪಕ್ಕದ ಊರಿನ ರಮ್‌ಮೋಹನ್ ಎಂಬ ಮೂವರು ರೈತರು, ಸೇಬು ಸಸಿಗಳಿಗೆ ಹುಡುಕಾಟ ನಡೆಸುತ್ತಾರೆ. ಆರಂಭದಲ್ಲಿ ಕೆಲ ನರ್ಸರಿಯವರು, ಮಧ್ಯವರ್ತಿಗಳು ಒಂದು ಸಸಿಗೆ 250, 300 ರೂ. ಹೇಳಿದ್ದರು. ಬೆಲೆ ಹೆಚ್ಚಾಯ್ತು ಅನಿಸಿದ್ದೇ, ನೇರವಾಗಿ ಸೇಬು ಸಸಿ ಬೆಳೆಸುವವರನ್ನೇ ಹುಡುಕಿದರೆ ಹೇಗೆ ಎಂಬ ಐಡಿಯಾ ರೈತರಿಗೆ ಬಂದಿದೆ. ಕೂಡಲೆ ಸರ್ಚಿಂಗ್ ಶುರು ಮಾಡಿದ್ದಾರೆ. ಗೂಗಲ್, ಯೂಟೂಬ್ ಸೇರಿ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಜಾಲಾಡಿದ ಬಳಿಕ ಸೇಬು ಸಸಿಗಳನ್ನು ಮಾರಾಟ ಮಾಡುವ ಹಿಮಾಚಲಪ್ರದೇಶದ ಶರ್ಮಾ ಎಂಬ ರೈತರ ಪರಿಚಯವಾಗಿದೆ.
ಶರ್ಮಾ ಅವರಿಂದ ಸೇಬಿನ ಬೂತಿ (ಸೇಬಿನ ಗಿಡದ ಕಾಂಡ ಮತ್ತು ಎಲೆ ಭಾಗ ಸೇರಿಸಿ ಕಸಿ ಮಾಡಿದ ಸಸಿ) ತರಿಸಿಕೊಂಡು, ಅವುಗಳನ್ನು ಅಡಿಕೆ ಸಸಿ ಮಾಡುವ ಪ್ಯಾಕೇಟ್‌ಗಳಲ್ಲಿ ಹಾಕಿದರು. ಒಂದು ತಿಂಗಳು ಬೆಳೆಸಿದರು. ತಿಂಗಳಲ್ಲಿ ಸಸಿಗಳು ಒಂದು ಅಡಿ ಎತ್ತರಕ್ಕೆ ಬೆಳೆದಿದ್ದು, ಬಳಿಕ ಅವುಗಳನ್ನು ತೋಟದಲ್ಲಿ ನೆಡಲಾಗಿತ್ತು. ಶರ್ಮಾ ಅವರಿಂದ 1000 ಸೇಬು ಸಸಿಗಳನ್ನು ತರಿಸಿಕೊಂಡ ಸುನೀಲ್, ಜ್ಯೋತಿಪ್ರಕಾಶ್ ಹಾಗೂ ರಾಮ್‌ಮೋಹನ್, ಅವುಗಳನ್ನು ಹಂಚಿಕೊAಡರು. ಆ ಪೈಕಿ 300 ಸೇಬು ಗಿಡಗಳನ್ನು ಸುನೀಲ್ ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆಸಿದ್ದಾರೆ. ಮೂವರ ಜಮೀನಿನಲ್ಲೂ ಒಂದೂವರೆ ವರ್ಷದ ಸೇಬು ಗಿಡಗಳು ಹಲುಸಾಗಿ ಬೆಳೆದಿದ್ದು, ಹಣ್ಣು ಬಿಡಲು ಪ್ರಾರಂಭಿಸಿವೆ.
ನಾಟಿ ಮಾಡಿದ್ದು ಹೇಗೆ?
ಒಂದು ಗಿಡದಿಂದ ಮತ್ತೊಂದು ಗಡಕ್ಕೆ ಹಾಗೂ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ 12 ಅಡಿ ಅಂತರ ಇರುವಂತೆ (12/12) ಸಸಿಗಳನ್ನು ನೆಡಲಾಗಿದೆ. ಒಂದು ಎಕರೆಯಲ್ಲಿ 300 ಸಸಿಗಳು ಕುಳಿತಿದ್ದು, ಆರಂಭದಲ್ಲಿ ಪ್ರತಿ ಗಿಡಕ್ಕೂ ಒಂದರಿಂದ ಒಂದೂವರೆ ಪುಟ್ಟಿ ಸಗಣಿ ಗೊಬ್ಬರ ನೀಡಲಾಗಿದೆ. ಬಳಿಕ ಯಾವುದೇ ಕೀಟನಾಶಕ ಬಳಸಿಲ್ಲ. ಸಾಮಾನ್ಯವಾಗಿ ಗಿಡಗಳಿಗೆ ಎರಡು ವರ್ಷ ತುಂಬುವವರೆಗೂ ಅವು ಹಣ್ನು ಬಿಡದಂತೆ ನೋಡಿಕೊಳ್ಳಬೇಕು. ಅಂದರೆ, ಹೂವು ಬಿಟ್ಟಾಗಲೇ ಅವುಗಳನ್ನು ಕತ್ತರಿಸಬೇಕು. ಆದರೆ ಕೂತೂಹಲಕ್ಕಾಗಿ ಸುನೀಲ್ ಹಾಗೂ ಇತರ ಇಬ್ಬರೂ ರೈತರು ಹೂಗಳನ್ನು ಅಳಿಸದೇ ಹಣ್ಣಾಗಲು ಬಿಟ್ಟಿದ್ದಾರೆ. ಮೊದಲ ಒಂದು ವರ್ಷ ಗಿಡಗಳನ್ನು ಗ್ರೂಮಿಂಗ್ ಮಾಡುವಂತಿಲ್ಲ. ಒಂದು ವರ್ಷದ ಬಳಿಕ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಗಿಡಗಳನ್ನು ಗ್ರೂಮಿಂಗ್ (ಟ್ರಿಮ್) ಮಾಡಿ, ಐದು ಅಥವಾ ಆರು ಕೊಂಬೆಗಳನ್ನು ಮಾತ್ರ ಬಿಟ್ಟುಕೊಳ್ಳಬೇಕು. ಹೀಗೆ ಮಾಡಿದರೆ ಗಿಡಗಳು ಉತ್ತಮವಾಗಿ ಚಿಗುರೊಡೆಯುತ್ತವೆ.
ನವೆಂಬರ್‌ನಲ್ಲಿ ಗಿಡಗಳನ್ನು ಟ್ರಿಮ್ ಮಾಡಿದರೆ ಡಿಸೆಂಬರ್‌ನಲ್ಲಿ ಹೂ ಬಿಡಲು ಆರಂಭಿಸುತ್ತವೆ. ಮುಂದಿನ ಮೇ-ಜೂನ್ ತಿಂಗಳ ವೇಳೆಗೆ ಹಣ್ಣುಗಳು ಕಟಾವಿಗೆ ಬಂದಿರುತ್ತವೆ. ಪ್ರಸ್ತುತ ಒಂದೂವರೆ ವರ್ಷದ ಸೇಬು ಗಿಡಗಳು 12 ಅಡಿ ಎತ್ತರಕ್ಕೆ ಬೆಳೆದಿವೆ. ಒಂದೊಂದು ಗಿಡದಲ್ಲೂ 15ರಿಂದ 40 ಹಣ್ಣುಗಳು ಬಿಟ್ಟಿವೆ. ಜೊತೆಗೆ ಈ ಬೆಳೆ ಬೆಳೆಯಲು ಹೆಚ್ಚೇನೂ ನೀರು ಬೇಕಾಗುವುದಿಲ್ಲ. ಅಡಕೆಗೆ ನೀಡುವ ನೀರಿನಲ್ಲಿ ಅರ್ಧ ನೀರಾದರೂ ಸಾಕು’ ಎನ್ನುತ್ತಾರೆ ಸುನೀಲ್.
ರೈತ ಸುನೀಲ್ ಹೇಳುವುದೇನು?
‘ಈ ಬಾರಿ ಹೂವುಗಳನ್ನು ಕಟಾವು ಮಾಡಬೇಕಿತ್ತು. ಆದರೆ ಕುತೂಹಲಕ್ಕಾಗಿ ಹಣ್ಣಾಗಲು ಬಿಟ್ಟಿದ್ದೇವೆ. ಒಂದೂವರೆ ವರ್ಷದ ಗಿಡಗಳಲ್ಲಿ ಫಸಲು ಚೆನ್ನಾಗೇ ಬಂದಿದೆ. ಪ್ರತಿ ಗಿಡದಲ್ಲೂ ಹಣ್ಣುಗಳ ಗಾತ್ರ, ಆಕಾರ, ಬಣ್ಣ ಹಾಗೂ ರುಚಿ ಕೂಡ ಉತ್ತಮವಾಗಿದೆ. ಈ ಬಾರಿ ಹಣ್ಣುಗಳನ್ನು ಕಟಾವು ಮಾಡಿ ಮಾರಾಟ ಮಾಡಿಲ್ಲ. ಬದಲಿಗೆ ಕುಟುಂಬ ಸದಸ್ಯರು, ಸಂಬಂಧಿಗಳಿಗೆ ಕೊಡಲಾಗಿದೆ. ಇನ್ನು ತೋಟಕ್ಕೆ ಭೇಟಿ ನೀಡುವ ಅತಿಥಿಗಳಿಗೂ ರುಚಿ ನೀಡಲು ಒಂದೊಂದು ಹಣ್ಣು ಕೊಡುತ್ತಿದ್ದೇವೆ. ಮುಂದಿನ ಬೆಳೆ ಇಳುವರಿ ಹೆಚ್ಚು ಬರುವ ನಿರೀಕ್ಷೆಯಿದ್ದು, ಆಗ ಮಾರುಕಟ್ಟೆಗೆ ಕೊಂಡೊಯ್ಯುತ್ತೇನೆ’ ಎನ್ನುತ್ತಾರೆ ಸುನೀಲ್.
ಸೇಬು ಬೆಳೆ ಕಾಶ್ಮೀರಕ್ಕೆ ಸೀಮಿತವಲ್ಲ, ಅದನ್ನು ನಮ್ಮ ಬಿಸಿಲು ನಾಡಿನಲ್ಲೂ ಬೆಳೆಯಯಬಹುದು ಎಂದು ಸಾಬೀತುಪಡಿಸಿರುವ ಸುನೀಲ್, ಈಗ ಮಧ್ಯ ಕರ್ನಾಟಕ ಹಾಗೂ ಬಯಲು ಸೀಮೆಯಲ್ಲಿ ಮನೆಮಾತಾಗಿದ್ದಾರೆ. ‘ಅರೆ, ದುರ್ಗದಾಗೆ ಸೇಬು ಬೆಳದಾರಂತೆ!’ ಎಂದು ಜನ ಅಚ್ಚರಿಯಿಂದ ಮಾತನಾಡುತ್ತಿದ್ದಾರೆ. ಜೊತೆಗೆ ಹಲವು ಯುವ ರೈತರು ತಾವೂ ಸೇಬು ಬೆಳೆಯಲು ಮನಸು ಮಾಡುತ್ತಿದ್ದಾರೆ. ಚಿತ್ರದುರ್ಗದ ಸುನೀಲ್, ಜ್ಯೋತಿ ಪರಕಾಶ್ ಹಾಗೂ ರಾಮ್ ಮೋಹನ್ ಅವರ ಈ ಪ್ರಯತ್ನ ರಾಜ್ಯದಲ್ಲಿ ಸೇಬು ಕೃಷಿಯ ಕ್ರಾಂತಿಗೆ ನಾಂದಿ ಹಾಡುವುದೇ ಎಂದು ಕಾದು ನೋಡಬೇಕಿದೆ.