Success stories

ಕೃಷಿಯಲ್ಲಿ ತಿಂಗಳಿಗೆ 45,000 ಆದಾಯ ಗಳಿಸುವ ದಂಪತಿಯ ಯಶೋಗಾಥೆ

20 September, 2021 10:42 AM IST By:
ಹೊಲದಲ್ಲಿರುವ ಪೇರಲ ಗಿಡದ ಬಳಿ ಹರಿವರ್ತ ಪ್ರಜೀತ್ ಮತ್ತು ಡಾ.ಮಾಂಗ ದಂಪತಿ.

‘ಮನೆಯಲ್ಲಿ ಕುಳಿತೇ ಕೆಲವೇ ಗಂಟೆ ಕೆಲಸ ಮಾಡುವ ಮೂಲಕ ತಿಂಗಳಿಗೆ 30,000 ರೂ. ಸಂಪಾದಿಸಿ. ಇಂತಹ ಸುವರ್ಣಾವಕಾಶ ಮತ್ತೆಂದೂ ಸಿಗುವುದಿಲ್ಲ. ಕೂಡಲೇ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...’ ಈ ರೀತಿಯ ಆಕರ್ಷಕ ಆಹ್ವಾನವಿರುವ, ನೋಡಿದ ಕೂಡಲೆ ಟ್ರೆ ಮಾಡಬೇಕು ಎಂದೆನಿಸುವ ಪೋಸ್ಟ್ಗಳನ್ನು ನೀವು ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಮ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರ. ಆದರೆ ಈಗ ಹೇಳುತ್ತಿರುವುದು ಅಂತಹ ಕೆಲಸಕ್ಕೆ ಬಾರದ, ಮ್ಯಾಜಿಕ್ ಮಾಡಿದ ರೀತಿ ಸಂಪಾದಿಸುವ ಸುಳ್ಳು ಭರವಸೆಯ ವೇಸ್ಟ್ ಪೋಸ್ಟ್ ಬಗ್ಗೆ ಅಲ್ಲ. ಬದಲಿಗೆ ಕೃಷಿಯಲ್ಲಿ ತೊಡಗಿಕೊಂಡು, ಒಂದು ರೂಪಾಯಿ ಕೂಡ ಖರ್ಚು ಮಾಡದೆ, ಜೊತೆಗೆ ಕೃಷಿ ಭೂಮಿಯಲ್ಲಿ ಏನೆಂದರೆ ಏನೂ ಕೆಲಸ ಮಾಡದೆ ತಿಂಗಳಿಗೆ 40,000 ರಿಂದ 45,000 ರೂಪಾಯಿ ಗಳಿಸುತ್ತಿರುವ ವಿದ್ಯಾವಂತ ದಂಪತಿಯ ಬಗ್ಗೆ.

ತಮಿಳುನಾಡಿನ ವೆಲ್ಲುಪುರಂ ಜಿಲ್ಲೆಯ ರಾಮನಾಥಪುರಂ ಗ್ರಾಮದ ಹರಿವರ್ತ ಪ್ರಜೀತ್ ಹಾಗೂ ಡಾ. ಮಾಂಗಯರ್ಕರೆಸೆ ಲೀಲಾ (ಡಾ.ಮಾಂಗ) ದಂಪತಿ, ತಮ್ಮ ಸ್ವಗ್ರಾಮದಲ್ಲಿ 3 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಈ ಜಮೀನಿನಿಂದಲೇ ಅವರು ಮಾಸಿಕ 45,000 ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ವಿಶೇಷ ಏನೆಂದರೆ ಈ ಹೊಲದಲ್ಲಿ ಅವರು ಉಳುಮೆ ಮಾಡುವುದಿಲ್ಲ, ಬಿತ್ತುವುದಿಲ್ಲ, ಕಳೆ ತೆಗೆಯುವುದಿಲ್ಲ, ರೋಗ ಬಂದಿದೆ ಎಂದು ಔಷಧ ಸಿಂಪಡಿಸುವುದಿಲ್ಲ, ಗೊಬ್ಬರ ಹಾಕುವುದಿಲ್ಲ ಅಷ್ಟೇ ಏಕೆ ಬಹುತೇಕ ಸಂದರ್ಭದಲ್ಲಿ ನೀರು ಕೂಡ ಹಾಯಿಸುವುದಿಲ್ಲ..!!

ಅರೆ, ನಾವೆಲ್ಲಾ ರೈತರು ದಿನವಿಡೀ ಶ್ರಮಿಸಿ, ರಾತ್ರಿ ನಿದ್ದೆಗೆಟ್ಟು ಕೃಷಿ ಮಾಡಿದರೂ ಬೆಳೆ ಕೈಗೆ ಬರುವ ಹೊತ್ತಿಗೆ ಹತ್ತಾರು ಸಾವಿರ ಆದಾಯ ಬಂದಿದ್ದರೆ ಹೆಚ್ಚು. ಆದರೆ, ಈ ದಂಪತಿ ಏನೂ ಮಾಡದೆ ಇಷ್ಟೊಂದು ಆದಾಯ ಗಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಈ ದಂಪತಿ ಅನುಸರಿಸುತ್ತಿರುವುದು ನೈಸರ್ಗಿಕ ಕೃಷಿ ಪದ್ಧತಿ. ಈ ಪದ್ಧತಿಯ ವಿಶೇಷತೆಯೇ ‘ಏನೂ ಮಾಡದೆ ಆದಾಯ ಗಳಿಸುವುದು’.

ಪ್ರಾಣಿಗಳಿಗಾಗಿ ನಿರ್ಮಿಸಿರುವ ಗುಡಿಸಲ ಬಳಿ ಹರಿವರ್ತ ದಂಪತಿ.

ರಾಮನಾಥಪುರಂ ಗ್ರಾಮದಲ್ಲಿರುವ ಇವರ 3 ಎಕರೆ ತೋಟ ನೋಡಲು ದಟ್ಟ ಅರಣ್ಯದಂತೆ ಕಾಣುತ್ತದೆ. ಅಲ್ಲಿ ನೂರಾರು ಬಗೆಯ ಮರಗಳಿವೆ. ಅವುಗಳ ಪೈಕಿ ಹತ್ತಾರು ವಿಧದ ಹಣ್ಣಿನ ಮರಗಳಿವೆ. ಹಲವು ಹಣ್ಣು-ಕಾಯಿಗಳ ಬಳ್ಳಿಗಳಿವೆ. ತರಕಾರಿ, ಸೊಪ್ಪು ಸೊಂಪಾಗಿ ಬೆಳೆಯುತ್ತದೆ. ಜೊತೆಗೆ ಸಾಕಷ್ಟು ಕಳೆ-ಪೆಳೆ ಎಲ್ಲವೂ ಇದೆ. ಇದರ ನಡುವೆ ಹುಲುಸಾದ ಬೆಳೆ ಕೂಡ ಬರುತ್ತದೆ.

ಪಾಂಡಿಚೆರಿ ವಿಶ್ವವಿದ್ಯಾಲಯದಿಂದ ಎಲೆಕ್ಟಾçನಿಕ್ ಮೀಡಿಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಹರಿವರ್ತ ಪ್ರಜೀತ್, ಒಂದು ದೊಡ್ಡ ಬಹುರಾಷ್ಟ್ರೀಯ ಕಂಪನಿಯಲ್ಲಿ ಲಕ್ಷ ಗಟ್ಟಲೆ ಸಂಬಳ ಬರುವ ಕೆಲಸದಲ್ಲಿದ್ದರು. ಆದರೆ, ಕೃಷಿ ಮೇಲಿನ ಒಲವಿನಿಂದಾಗಿ ಕೆಲಸ ಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಇನ್ನು ಇವರ ಅರ್ಧಾಂಗಿ ಡಾ.ಮಾಂಗ, ವೃತ್ತಿಯಲ್ಲಿ ವೈದ್ಯೆ. ಎಂಬಿಬಿಎಸ್ ಪೂರ್ಣಗೊಳಿಸಿದ ಬಳಿಕ ಹರಿವರ್ತ ಅವರನ್ನು ವರಿಸಿ, ಅವರ ಕಷ್ಟ-ಸುಖಗಳಲ್ಲಿ ಸಹಭಾಗಿಯಾಗಿದ್ದಾರೆ. ದಿನದ ಕೆಲವು ಗಂಟೆಗಳ ಕಾಲ ಕ್ಲೀನಿಕ್‌ನಲ್ಲಿ ರೋಗಿಗಳ ಆರೈಕೆ ಮಾಡುವ ಡಾ.ಮಾಂಗ, ಉಳಿದ ಸಮಯವನ್ನು ಪತಿಯೊಂದಿಗೆ ನಿಸರ್ಗದ ಮಡಿಲಿನಂತಿರುವ ತಮ್ಮ ಕೃಷಿ ಭೂಮಿಯಲ್ಲಿ ಕಳೆಯುತ್ತಾರೆ.

ಎಲ್ಲವೂ ನೈಸರ್ಗಿಕ

‘ನಾವು ಆದಾಯಕ್ಕಾಗಿ ಕೃಷಿ ಮಾಡುತ್ತಿಲ್ಲ. ಬದಲಿಗೆ ಕೃಷಿ ಭೂಮಿಯನ್ನು ಅದರಪಾಡಿಗೆ ಬಿಟ್ಟಿದ್ದೇವೆ. ಅಲ್ಲಿ ನಾವು ಸಾಮಾನ್ಯ ಕೃಷಿ ಪದ್ಧತಿಯಲ್ಲಿ ಮಾಡಿವಂತೆ ಉಳುಮೆ-ಬಿತ್ತನೆ ಮಾಡುವುದಿಲ್ಲ. ಬದಲಿಗೆ ಅಲ್ಲಿ ಏನು ಹುಟ್ಟಿ ಬೆಳೆಯುತ್ತದೋ ಅದರ ನೆರವಿನಿಂದಲೇ ಜೀವನ ನಡೆಸುತ್ತೇವೆ. ಇದರಿಂದ ನಮಗೆ ಸಾಕಷ್ಟು ಪ್ರಯೋಜನಗಳಿವೆ. ಮೊದಲನೆಯದು ನಮ್ಮ ಕುಟುಂಬಕ್ಕೆ ವಿಷಮುಕ್ತ ನೈಸರ್ಗಿಕ ಆಹಾರ ಸಿಗುತ್ತದೆ. ಉಸಿರಾಡಲು ಶುದ್ಧ ಗಾಳಿ ಲಭ್ಯವಿದೆ. ಜೊತೆಗೆ ಹಣಕಾಸಿನ ಕೊರತೆ ನೀಗಿಸಲು ಆದಾಯ ಕೂಡ ನೈಸರ್ಗಿಕವಾಗೇ ಬರುತ್ತಿದೆ. ಹೀಗಿರುವಾಗ ಗೊಬ್ಬರ, ಔಷಧಿಗೆ ಹಣ ಕರ್ಚು ಮಾಡುವ ಮತ್ತು ಆ ಮೂಲಕ ಬೆಳೆದ ಬೆಳೆ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುವ ಅಗತ್ಯವೇನಿದೆ?,’ ಎಂದು ಪ್ರಶ್ನಿಸುತ್ತಾರೆ ಡಾ.ಮಾಂಗ.

ಆದಾಯದ ಮೂಲವೇನು?

ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ (ಶೇಂಗಾ), ಸಿರಿ ಧಾನ್ಯಗಳಾದ ಸಾವೆ, ಸಜ್ಜೆ, ನವಣೆ, ರಾಗಿ ಇತ್ಯಾದಿ.., ಹಲಸಿನ ಹಣ್ಣು, ಬಾಳೆ ಹಣ್ಣು, ತೆಂಗು, ಪೇರಲ (ಸೀಬೆ) ಮೊದಲಾದ ಹಣ್ಣುಗಳು ಮತ್ತು ಕುಂಬಳ ಕಾಯಿ ಹಾಗೂ ಹತ್ತು ಹಲವು ತರಕಾರಿಗಳು ಹರಿವರ್ತ-ಮಾಂಗ ದಂಪತಿಯ ಹೊಲದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ಇವುಗಳನ್ನು ಕಟಾವು ಮಾಡಿ ಮಾರಾಟ ಮಾಡುವ ಮೂಲಕ ದಂಪತಿ ಉತ್ತಮ ಆದಾಯ ಗಳಿಸುತ್ತಾರೆ. ಅದರಲ್ಲೂ ಇವರ ಹೊಲದಲ್ಲಿ ಬೆಳೆಯುವ ಪೇರಲ ಹಣ್ಣುಗಳು ಅತ್ಯದ್ಭುತ ರುಚಿಯ ಮೂಲಕ ಸುತ್ತಲ ಪ್ರದೇಶದಲ್ಲಿ ಜನಪ್ರಿಯವಾಗಿವೆ. ‘ಈ ಬಾರಿ ಸೀಸನ್‌ನಲ್ಲಿ ಪ್ರತಿ ದಿನ 40 ಕೆ.ಜಿ ಪೇರಲೆ ಹಣ್ಣುಗಳನ್ನು ಕಟಾವು ಮಾಡಿ ಮಾರಾಟ ಮಾಡಿದ್ದೇವೆ. ಜೊತೆಗೆ, ಏಪ್ರಿಲ್ ತಿಂಗಳಲ್ಲಿ ಕುಂಬಳಕಾಯಿ, ಹಲಸಿನ ಹಣ್ಣು ಮತ್ತು ಬಾಳೆ ಹಣ್ಣುಗಳನ್ನು ಮಾರಿ 20,000 ರೂ. ಆದಾಯ ಗಳಿಸಿದ್ದೇವೆ. ನಮ್ಮ ಹೊಲದಲ್ಲಿ ಬೆಳೆಯುತ್ತಿರುವ ಎಲ್ಲಾ ಹಣ್ಣು, ತರಕಾರಿ, ಧಾನ್ಯಗಳನ್ನು ಮಾರಾಟ ಮಾಡುವುದರಿಂದ ಪ್ರತಿ ತಿಂಗಳು 40,000 ರಿಂದ 45,000 ರೂಪಾಯಿ ಆದಾಯ ಗಳಿಸುತ್ತಿದ್ದೇವೆ’ ಎನ್ನುತ್ತಾರೆ ಹರಿವರ್ತ.