Success stories

ಸಮಗ್ರ ಕೃಷಿ ಮಾಡಿ ಕೈತುಂಬಾ ಸಂಪಾದನೆ ಮಾಡುತ್ತಿದ್ದಾರೆ ಪ್ರವೀಣ ಬಾಳಿಗೇರಿ

31 August, 2020 4:47 PM IST By:

ಇಂದು ಕೃಷಿಯಲ್ಲಿ ಹೊಸ ತಳಿ, ಬೆಳೆ, ತಂತ್ರಜ್ಞಾನಗಳು ಬೆಳಕಿಗೆ ಬಂದಿದ್ದರು ಅವುಗಳನ್ನು ಅಳವಡಿಸಿಕೊಳ್ಳುವವರು ಮಾತ್ರ ಬೆರಳೆಣಿಕೆಯಷ್ಟು. ಬರಗಾಲದಿಂದ ರಾಜ್ಯದ ಹಲವು ಜಿಲ್ಲೆಗಳ ಜನತೆ ಪರದಾಡುತಿದ್ದಾರೆ. ಬರದಿಂದ ಬೆಳೆ ಕೈಹಿಡಿಯದೆ ಮಾಡಿದ ಸಾಲ ತೀರಿಸಲಾಗದೆ ರೈತರು ಸಾವಿಗೆ ಶರಣಾಗಿರುವುದೂ ಉಂಟು, ಇಂತಹ ಕೆಟ್ಟ ಪರಿಸ್ಥಿತಿಯಲ್ಲೂ ಧೃತಿಗೆಡೆದ ಕೆಲವು ರೈತರು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಅಂತಹ ಒಬ್ಬ ಯುವಕ ತೋಟಗಾರಿಕೆ ಪದವಿ ಪಡೆದು, ಬಿಜಾಪುರದಲ್ಲಿ ಸಾವಯವ ಕೃಷಿ ಮಾಡಿ, ಯಶಸ್ಸುಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಬಿಜಾಪುರ ಜಿಲ್ಲೆಯ, ಕೋಲಾರ ತಾಲ್ಲೂಕಿನ ತಡಲಗಿ ಗ್ರಾಮದ ಪ್ರವೀಣ ಬಾಳಿಗೇರಿಯವರೇ ಜನರನ್ನು ಹುಬ್ಬೇರಿಸುವಂತೆ ಮಾಡಿದ ಯುವಕ. ಇವರು ಚಿಕ್ಕಂದಿನಿಂದಲೇ ನೆರೆಹೊರೆಯ ರೈತರ ಕಷ್ಟಗಳನ್ನು ನೋಡಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಏನಾದರು ಸಾಧನೆ ಮಾಡಬೇಕೆಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತಮ್ಮ ಪದವಿ ಪಡೆದರು. ಈಗಿನ ಕಾಲದ ಯುವಕರು ಸರ್ಕಾರಿ ನೌಕರಿಯೆ ಬೇಕು ಅದರಲ್ಲೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲೇಬೇಕು ಎಂದು ಬಯಸುವ ಟ್ರೇಂಡಿಂಗ್ ಕಾಲದಲ್ಲಿ ಅದನ್ನು ತೊರೆದು ಕಳೆದ ಒಂದು ವರ್ಷದಿಂದ ಸಾವಯವ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ತಮ್ಮಲ್ಲಿರುವ ಹತ್ತು ಎಕರೆ ಜಮೀನಿನಲ್ಲಿ, ಅರಣ್ಯ ಬೆಳೆಯಾದ ಮಹಾಗನಿ (750) ಮರವನ್ನು 10 10 ಅಂತರದಲ್ಲಿ 1.5 ಎಕರೆಯಲ್ಲಿ ನಾಟಿ ಮಾಡಿದ್ದು, ಹತ್ತು ವರ್ಷಗಳ ಬಳಿಕ ಇದರಿಂದ ಒಂದು ಕೋಟಿ ಆದಾಯ ಬರುವ ನೀರಿಕ್ಷೆಯಲ್ಲಿದ್ದಾರೆ. ಅಂತರ ಬೆಳೆಗಳಾದ ಸೀಬೆ (470), ನಿಂಬೆ (210), ದಾಳಿಂಬೆ (20), ಮಾವು, ಸಪೋಟ (25), ಲಿಚ್ಚಿ, ಜೊತೆಗೆ  ಹೀರೆಕಾಯಿ, ಹಾಗಲಕಾಯಿ ಇತ್ಯಾದಿ ಬೆಳೆಗಳನ್ನು ತಂತಿ ಮೇಲೆ ಹಬ್ಬಿಸಿ ಬೆಳಸಿದ್ದಾರೆ ಇವುಗಳ ಜೊತೆಗೆ ಈರುಳ್ಳಿಯನ್ನು ಪ್ರಧಾನ ಬೆಳೆಯನ್ನಾಗಿ ಬೆಳೆದು ಈಗಾಗಲೆ ಆರು ಲಕ್ಷದವರೆಗೂ ಆದಾಯ ಪಡೆದಿದ್ದಾರೆ. ಈರುಳ್ಳಿ ಕಟಾವಿನ ನಂತರ ಅದೇ ಜಾಗಕ್ಕೆ ಹಸಿ ಮೆಣಸಿನಕಾಯಿ, ಚೆಂಡು ಹೂವು ಹಾಗೂ ಸಜ್ಜಿ ಹುಲ್ಲನ್ನು (COF -6) ಅರಣ್ಯ+ತೋಟ+ಕೃಷಿ ಮಾದರಿಯಲ್ಲಿ ಬೆಳೆದಿದ್ದಾರೆ.

ಹೀಗೆಯೇ ಸೀತಾಫಲ, ಪರಂಗಿ ಜೊತೆಯಲ್ಲಿ ಕಡಲೆಕಾಯಿಯನ್ನು ಎರಡು ಎಕರೆ, ಮತ್ತೆರಡು ಎಕರೆಯಲ್ಲಿ ಬಾಳೆ ಜೊತೆ ಚೆಂಡು ಹೂವನ್ನು ಅಂತರ ಬೆಳೆಯಾಗಿ ಬೆಳೆದಿದ್ದಾರೆ. ಇನ್ನುಳಿದ ನಾಲ್ಕು ಎಕರೆಯಲ್ಲಿ ಕಬ್ಬನ್ನು ಬೆಳೆದಿದ್ದಾರೆ.

ಕೃಷಿ ಹೊಂಡ ಮತ್ತು ಗೊಬ್ಬರ

ತೋಟದಲ್ಲೇ ಕೃಷಿ ಹೊಂಡ ಮಾಡಿಕೊಂಡು ನೀರಿನ ನಿರ್ವಹಣೆ ಮಾಡಿಕೊಂಡಿದ್ದಾರೆ, ಶೇಖರಿಸಿದ ನೀರನ್ನು ಹನಿ ನೀರಾವರಿ ಮೂಲಕ ಬೆಳೆಗಳಿಗೆ ಹರಿಸಿ ನೀರನ್ನು ಉತ್ತಮವಾಗಿ ಬಳಸಿ ಹೆಚ್ಚಿನ ಪ್ರದೇಶಕ್ಕೆ ನೀರನ್ನು ಕೊಡುತ್ತಿದ್ದಾರೆ.

ರಾಸಯನಿಕ ಗೊಬ್ಬರಗಳನ್ನು ಹಾಗೂ ಕ್ರಿಮಿನಾಶಕಗಳನ್ನು ಬಳಸದೆ ತೋಟದಲ್ಲೇ ಸಿಗುವ ಹಸಿರೆಲೆ ಹಾಗೂ ಎರೆಹುಳು ಗೊಬ್ಬರವನ್ನು ಬಳಸಿ ಸಾವಯವ ಕೃಷಿಯನ್ನು ಮಾಡುತ್ತಿರುವುದು ವಿಶೇಷವಾಗಿದೆ.

ಸಸಿಗಳ ನರ್ಸರಿ- ಅನೇಕ ಗಿಡಗಳನ್ನು ಬೆಳೆಸಿರುವುದಲ್ಲದೇ ತಮ್ಮಲ್ಲಿರುವ ಶೇಡ್ ನೆಟ್‍ನಲ್ಲಿ (ನೆರಳು ಮನೆ) ವಿವಿಧ ರೀತಿಯ ಸಸಿಗಳನ್ನು ತಮ್ಮ ನರ್ಸರಿಯಲ್ಲಿ ಆರಂಭಿಸಿದ್ದಾರೆ. ನರ್ಸರಿಯಲ್ಲಿ ತೆಂಗು, ಮಾವು, ನಿಂಬೆ, ರಾಮಫಲ, ಸೀತಾಫಲ, ನೇರಳೆ, ಸಪೋಟ, ಸಿಹಿ ಹುಣಸೆ, ಶ್ರೀಗಂಧ ಇತ್ಯಾದಿ ಸಸಿಗಳನ್ನು ಬೆಳೆಸುತ್ತಿದ್ದಾರೆ.

ತರಬೇತಿ- ತಮ್ಮ ಜಮೀನಿಗೆ ಭೇಟಿ ನೀಡಿದ ನೂರರು ರೈತರಿಗೆ ಹಾಗೂ ತೋಟಗಾರಿಕೆಯಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡುವಲ್ಲಿಯು ಪ್ರವೀಣರಾಗಿದ್ದಾರೆ.

ಅಭಿಪ್ರಾಯ- ಪದವಿ ಓದುವ ಸಂದರ್ಭದಲ್ಲೇ ಪ್ರಗತಿಪರ ರೈತರ ಯಶೋಗಾಥೆಯನ್ನು ಓದಿ ಮಾಹಿತಿ ಸಂಗ್ರಹಿಸಿ ಹಾಗೂ ಅನೇಕ ಸಾಧಕರ ಜಮೀನುಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ಕೃಷಿ ಮಾಡಲು ಯೋಚಿಸಿದ್ದರು. ಕೈ ಕೆಸರಾದರೆ ಬಾಯಿ ಮೊಸರು ಎಂಬ ನಾನ್ನುಡಿಯಂತೆ ಕಷ್ಟ ಪಟ್ಟು ಕೆಲಸ ಮಾಡಿದರೆ ಸರ್ಕಾರಿ ನೌಕರಿಯಲ್ಲಿ ಬರುವ ಆದಾಯಕ್ಕಿಂತ ಹೆಚ್ಚು ಹಣ ಗಳಿಸಬಹುದು ಎನ್ನುವ ವಿಶ್ವಾಸ ಹೊಂದಿದ್ದಾರೆ ಪ್ರವೀಣ ಬಾಳಿಗೇರಿ.

 

ಲೇಖಕರು:

1. ಕವನ. ಜಿ. ಬಿ. - ಸಹಾಯಕ ಪ್ರಾಧ್ಯಪಕರು, ಪುಷ್ಪ ಕೃಷಿ ಮತ್ತು ಉದ್ಯಾನ ವಿನ್ಯಾಸ, ತೋಟಗಾರಿಕೆ ಕಾಲೇಜು, ಮೂಡಿಗೆರೆ

2.ಪವಿತ್ರ, ಎಸ್ - ಸಹಾಯಕ ಪ್ರಾಧ್ಯಪಕರು, ಹಣ್ಣಿನ ವಿಭಾಗ, ತೋಟಗಾರಿಕೆ ಕಾಲೇಜು, ಮೂಡಿಗೆರೆ