ಕೋಳಿ, ಆಡು, ಕುರಿ ಸಾಕಾಣಿಕೆ ಬಗ್ಗೆ ಕೇಳಿದ್ದೀರಿ. ಇದಷ್ಟೇ ಅಲ್ಲ, ಮೊಲ ಸಾಕಾಣಿಕೆ, ಜೇನುಸಾಕಾಣಿಕೆ, ಮೀನು ಸಾಕಾಣಿಕೆ, ಹೈನುಗಾರಿಕೆ ಬಗ್ಗೆ ಕೇಳಿದ್ದೀರಿ. ಆದರೆ ಸಿಗಡಿ ಮೀನು ಸಾಕಾಣಿಕೆ ಬಗ್ಗೆ ಕೇಳಿದವರು ತುಂಬಾ ವಿರಳ. ಸಿಗಡಿ ಮೀನು ಸಾಕಾಣಿಕೆ ಮಾಡಲು ತಂತ್ರಜ್ಞಾನವೇ ಇಲ್ಲದ ಸಮಯದಲ್ಲಿ ಸಿಗಡಿ ಮೀನು ಸಾಕಾಣಿಕೆ ಮಾಡಿ ದೇಶವಿದೇಶಗಳಲ್ಲಿ ಹೆಸರು ಮಾಡಿ ಸಂಶೋಧಕರ ಆದರ್ಶ ಕೇಂದ್ರವಾಗಿದ್ದಾರೆ. ಹೌದು, ಇಲ್ಲೊಬ್ಬ ರೈತ ಬ್ಲ್ಯಾಕ್ ಟೈಗರ್ ಎಂದೇ ಹೆಸರು ಪಡೆದ ಸಿಗಡಿ ಮೀನು ಸಾಕಾಣಿಕೆಯಲ್ಲಿ ಇಸ್ರೇಲ್ ತಂತ್ರಜ್ಞಾನವನ್ನೇ ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ನೀರಮಾರ್ಗ ಗ್ರಾಮದ ಸನ್ನಿ ಡಿಸೋಜಾ.
ಭಾರತದಲ್ಲಿ ಯಾವುದೇ ತಂತ್ರಜ್ಞಾನವಿಲ್ಲದೆ, ಸಿಗಡಿ ಮೀನಿಗೆ ಆರೋಗ್ಯ ಸಮಸ್ಯೆಯಾದರೆ ಕೇಳಲು ತಜ್ಞರಿಲ್ಲದ ಸಮಯದಲ್ಲಿ ಬೆಟ್ಟದಷ್ಟಿದ್ದ ಕಷ್ಟಗಳನ್ನು ಎದುರು ಹಾಕಿಕೊಂಡು ಅಸಾಧ್ಯವಾದುದನ್ನು ಸಾಧ್ಯ ಮಾಡಿಯೇ ತೋರಿಸುತ್ತೇನೆ ಎಂಬ ಛಲದಿಂದ ಸಿಗಡಿ ಮೀನು ಸಾಕಾಣಿಕೆ ಮಾಡಿ ಇಂದು ದೇಶಾದ್ಯಂತ ಚಿರಪರಿಚಿತರಾಗಿದ್ದಾರೆ. ದೇಶ ವಿದೇಶಗಳಿಂದ ತಂತ್ರಜ್ಞರು, ಮೀನುಗಾರಿಕೆ ಕಾಲೇಜು ಪ್ರಾಧ್ಯಾಪಕರು, ರೈತರು, ವಿದ್ಯಾರ್ಥಿಗಳು ಇವರಲ್ಲಿಗೆ ಬಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇವರು ಯಾವ ಯಾವ ತಂತ್ರಜ್ಞಾನಗಳನ್ನು ಬಳಸಿ ಸಿಗಡಿ ಮೀನಿನಲ್ಲಿ ಇಂದು ಯಶಸ್ವಿಯಾಗಿದ್ದಾರೆಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಮಾಹಿತಿ ಒಮ್ಮೆ ಓದಿ ನೋಡಿ.......
ಕೆಲಸದ ಅನುಭವವವನ್ನೇ ಬಂಡವಾಳವಾಗಿಸಿಕೊಂಡ:
ಕೃಷಿ ಕುಟುಂಬಕ್ಕೆ ಸೇರಿದ ಸನ್ನಿ ಡಜಿಸೋಜಾರವರು ಬಿ.ಎಸ್‌ಸಿ. ಪದವೀಧರ. ಆಂಧ್ರಪ್ರದೇಶದಲ್ಲಿ ಸಿಗಡಿ ಕೃಷಿಯ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಕೃಷಿಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ ಅವರು ತಾವು ಸಹ ಕೃಷಿಯಲ್ಲಿ ಹೊಸ ಸಂಶೋಧನೆ ಮಾಡಿ ಕೃಷಿ ಮಾಡಬೇಕೆಂಬ ವಿಚಾರ ಅವರನ್ನು ಆಗಾಗ ಕಾಡುತ್ತಲೇ ಇತ್ತು. ಅವರ ತಂದೆಯವರು ನಿಧನರಾದನಂತರ ಕುಟುಂಬದ ಹಿರಿಯರಾಗಿದ್ದರಿಂದ ಕುಟುಂಬದ ಜವಾಬ್ದಾರಿ ಇವರ ಹೆಗಲಮೇಲೆ ಬಿತ್ತು. ಮತ್ತೆ ಆಂಧ್ರಪ್ರದೇಶಕ್ಕೆ ಹೋಗಿ ಕೆಲಸ ಆರಂಭಿಸುವುದರ ಬದಲು ಸಿಗಡಿ ಕೃಷಿ ಪ್ರಯೋಗಾಲಯದಲ್ಲಿ ಕೆಲಸದ ಅನುಭವವನ್ನೇ ಬಂಡವಾಳವಾಗಿಸಿಕೊಂಡು ನಮ್ಮೂರಲ್ಲೇ ಏಕೆ ಕೃಷಿ ಮಾಡಬಾರದು ಎಂದು ಯೋಚನೆಯಲ್ಲಿದ್ದ ಅವರು ಸಹೋದರ ಜತೆ ಚರ್ಚಿಸಿ ಊರಲ್ಲೇ ಸಿಗಡಿ ಮೀನು ಕೃಷಿ ಮಾಡಲು ನಿರ್ಧರಿಸಿಯೇ ಬಿಟ್ಟ.
ಮೀನು ಕೃಷಿಕರ ದೃಷ್ಟಿಯನ್ನು ಸೆಳೆಯುವ ಕೇಂದ್ರ:
ಸದ್ಯ ಡಿಸೋಜಾರವರು ಇಸ್ರೇಲಿನ ಬಯೋ ಫ್ಲಾಕ್ ಟೆಕ್ನಾಲಜಿ (ಬಿಎಫ್ ಟಿ) ಬಳಿಸಿಕೊಂಡು ಸಿಗಡಿ ಕೃಷಿ ಮಾಡುತ್ತಿದ್ದಾರೆ. ಇಸ್ರೇಲಿನ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನದ ಮಾಹಿತಿ ಪಡೆದು ಪ್ರಯೋಗಕ್ಕೆ ಇಳಿದಿದ್ದರಿಂದ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದ್ದಾರೆ ಇವರ ಈ ಕೃಷಿ ಮೀನು ಕೃಷಿಕರ ದೃಷ್ಟಿಯನ್ನು ಸೆಳೆಯುವ ಕೇಂದ್ರವೂ ಆಗಿದೆ..
ಸಿಗಡಿ ಕೃಷಿ ಮಾಡಿದ್ದು ಹೀಗೆ:
ಮೀನು ಸಾಕಾಣಿಕೆ ಕೊಳದಲ್ಲಿ ತಳಕ್ಕೆ ಜಿಯೋ ಮೆಂಬ್ರೇನ್ ಎಂಬ ದಪ್ಪದ ಪ್ಲಾಸ್ಟಿಕ್ ಹಾಕಿ, ನೀರು ತುಂಬಿಸಿ, ಸಿಗಡಿ ಮರಿಗಳನ್ನು ಬಿಟ್ಟಿದ್ದಾರೆ. ಕೊಳಕ್ಕೆ ಮರಿ ಬಿಟ್ಟ ನಂತರ 90 ರಿಂದ 110 ದಿನಗಳ ಅವಧಿಯಲ್ಲಿ ಫಸಲು ಬರುತ್ತದೆ. ಒಂದೊಂದು ಸಿಗಡಿ 30 ರಿಂದ 40 ಗ್ರಾಂ ತೂಕವಿರುತ್ತದೆ. ಒಂದು ಎಕರೆಯ ಕೊಳದಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯಬಹುದು. ಒಂದು ಬಾರಿಗೆ 10 ಟನ್ ಇಳುವರಿ ಪಡೆಯಬಹುದು. ಒಂದು ಕೆಜಿಯನ್ನು 300 ಮಾರಾಟ ಮಾಡಿದರೂ ಎಕರೆಗೆ ವರ್ಷಕ್ಕೆ 90 ಲಕ್ಷ ಸಿಗುತ್ತದೆ. ಖರ್ಚು 50 ಲಕ್ಷ ಎಂದು ತೆಗೆದರೂ 40 ಲಕ್ಷ ಲಾಭ ಎಂಬುದು ಇವರ ಲೆಕ್ಕಾಚಾರ. ಇದಕ್ಕೊಂದು ವ್ಯವಸ್ಥಿತ ಮಾರುಕಟ್ಟೆ ಬೇಕು ಎಂಬುದು ಅವರ ಒತ್ತಾಯ
ರಾಸಾಯನಿಕ ರಹಿತ:
ಕೊಳದಲ್ಲಿ ಒಮ್ಮ ಸಂಗ್ರಹಿಸಿದ ನೀರನ್ನು ಮರು ಬಳಕೆ ಮಾಡುತ್ತಾರೆ. ಫಸಲನ್ನು ಪಡೆದ ಬಳಿಕ ನೀರನ್ನು ಶೋಧಿಸಿ ಹೊರ ಬಿಡುತ್ತಾರೆ. ಕೊಳದಲ್ಲಿ ಉಳಿಯುವ ತ್ಯಾಜ್ಯವನ್ನು ಕೃಷಿಗೆ ಬಳಕೆ ಮಾಡುತ್ತಾರೆ. ಬ್ಲೋವರ್ ಮತ್ತು ಡಿಪ್ಯೂಸರ್ ಏರೇಷನ್ (ಅಕ್ವೇರಿಯಂನಲ್ಲಿರುವಂತೆ) ಮೂಲಕ ಕೊಳಗಳಿಗೆ ಗಾಳಿ ಹಾಯಿಸಿ ನೀರಿನಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗುವಂತೆ ಮಾಡುತ್ತಾರೆ. ಈ ಕೃಷಿಗೆ ರಾಸಾಯನಿಕ ಬಳಸುವುದಿಲ್ಲ. ಉತ್ತಮ ಆಹಾರ, ಪರಿಶುದ್ಧ ನೀರು ಪೂರೈಸುವ ಮೂಲಕ ಆರೋಗ್ಯಕರ ಸಿಗಡಿ ಉತ್ಪಾದನೆ ಮಾಡುತ್ತಾರೆ.
ಬಯೋಫ್ಲಾಕ್ಸ್ ತಂತ್ರಜ್ಞಾನ:
ಸಾಮಾನ್ಯವಾಗಿ ಸಿಗಡಿ ಕೃಷಿಯ ತ್ಯಾಜ್ಯದಿಂದ ಅಮೋನಿಯಾ ಉತ್ಪಾದನೆಗೊಂಡು ಪರಿಸರಕ್ಕೆ ಹಾನಿಯಾಗುತ್ತದೆ. ಈ ಬಗ್ಗೆ ಮಾಹಿತಿ ಹೊಂದಿದ್ದ ಸನ್ನಿ ಡಿಸೋಜ, ಸಿಗಡಿ ತ್ಯಾಜ್ಯವನ್ನೇ ಅವುಗಳಿಗೆ ಆಹಾರವಾಗಿ ಕೊಡುವ ಬಿಎಫ್‌ಟಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಈ ತಂತ್ರಜ್ಞಾನದ ಪ್ರಕಾರ ಇಂಗಾಲ (ಕಾರ್ಬನ್) ಮತ್ತು ಸಾರಜನಕದ (ನೈಟ್ರೋಜನ್) ಪ್ರಮಾಣದ ನಿರ್ವಹಣೆ ವೇಳೆ ಅದರ ತ್ಯಾಜ್ಯ ಕೊಳೆತು, ಜಲವರ್ತನ (ಹೈಡ್ರೋ ಟ್ರೋಫಿಕ್ ) ಬ್ಯಾಕ್ಟೀರಿಯಾ ಉತ್ಪಾದನೆಗೊಂಡು ಸಿಗಡಿಯ ಆಹಾರವಾಗಿ ಪರಿವರ್ತನೆ ಮಾಡಲಾಗುತ್ತದೆ. ಈ ಮೂಲಕ ನೈಸರ್ಗಿಕವಾಗಿ ಸಿಗಡಿ ಬೆಳೆಯುವಂತೆ ಮಾಡುವುದು ಬಿಎಫ್‌ಟಿ ತಂತ್ರಜ್ಞಾನ. ಇದರಿಂದ ನೀರಿನ ಮಿತ ಬಳಕೆ ಸಾಧ್ಯವಿದೆ ಎನ್ನುತ್ತಾರೆ ಡಿಸೋಜಾ.
ಬಿಎಫ್‌ಟಿ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆಹಾಕಿದ ನಂತರ ಲಾಭವಾದರೆ ಆದಾಯ, ನಷ್ಟವಾದರೆ ಅನುಭವ ಎಂದುಕೊಂಡು ಪ್ರಯೋಗಕ್ಕೆ ಇಳಿದ ಡಿಸೋಜಾ ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಸಿಗಡಿ ಲಾಭದಾಯಕ. ಯಾರೋ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆಂದು ನಂಬಿ ಅದರ ಬಗ್ಗೆ ಜ್ಞಾನವಿಲ್ಲದೆ ಮಾಡಕ್ಕೆ ಹೋಗಬಾರದು. ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಸಿಗಡಿ ಮೀನು ಸಮುದ್ರದಲ್ಲಿ ಬೆಳೆಯುವ ಮೀನಿಗೆ ಸ್ಪರ್ಧೆ ಮಾಡಕ್ಕಾಗುವುದಿಲ್ಲ. ಆಗ ಬೆಲೆ ಕುಸಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಮುದ್ರ ಮೀನು ಇರದ ಸಂದರ್ಭದಲ್ಲಿ ಮೀನು ಉತ್ಪಾದನೆ ಮಾರುಕಟ್ಟೆಗೆ ಬಂದರೆ ಮಾತ್ರ ಹೆಚ್ಚು ಲಾಭ ಗಳಿಸಬಹುದು ಎನ್ನುತ್ತಾರೆ ಸನ್ನಿ ಡಿಸೋಜಾ.
ಹೆಚ್ಚಿನ ಮಾಹುತಿಗಾಗಿ ಸನ್ನಿ ಡಿಸೋಜ ಮೊಬೈಲ್ ಸಂಖ್ಯೆ– 93417 18808 ಗೆ ಸಂಪರ್ಕಿಸಬಹುದು.