Success stories

ಪಾರ್ಥಸಾರಥಿ ಬೆಳೆದಿದ್ದೆಲ್ಲವೂ ಚಿನ್ನವೇ; ಕಾರಣ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ

02 August, 2021 10:37 PM IST By:

ಆತನ ಹೆಸರು ಪಾರ್ಥಸಾರಥಿ ನಾರಾ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಉಪ್ಪನೇಸಿನಪಲ್ಲಿ ಎಂಬ ಪುಟ್ಟ ಗ್ರಾಮದ ದೊಡ್ಡ  ಕೃಷಿ ಕುಟುಂಬದಿAದ ಬಂದ ಹುಡುಗ. ನೂರಾರು ಎಕರೆ ಕೃಷಿ ಭೂಮಿ, ತಾತನ ನೈಸರ್ಗಿಕ ಕೃಷಿ ಪದ್ಧತಿಯ ಪಟ್ಟುಗಳು, ಎಂದೂ ಕೊರತೆ ಆಗದಂತಿದ್ದ ಆಹಾರ ಧಾನ್ಯಗಳು, ಮನೆ ತುಂಬಾ ಆಳು-ಕಾಳು, ಜೊತೆಗೆ ಅಪ್ಪಟ ಹಳ್ಳಿಯ ಪರಿಸರ. ಓದಿನಲ್ಲಿ ಚುರುಕಾಗಿದ್ದ ಪಾರ್ಥಸಾರಥಿ, ಡಿಗಿ ಮುಗಿಸಿ ಬೆಂಗಳೂರಿನ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ನಂತರ ಐಟಿ ಕ್ಷೇತ್ರ ಕೈಬೀಸಿ ಕರೆಯುತ್ತದೆ. ಆದರೆ, ಹಳ್ಳಿಯ ಹಸಿರು ಹೊಲ-ಗದ್ದೆ, ತೋಟಗಳು, ತಾತನನ್ನು ನೋಡಿ ಕಲಿತ ಅಪ್ಪಟ ಕೃಷಿ ಪಾಠಗಳು ಪಾರ್ಥನ ಮನಸ್ಸಿನಿಂದ ಹೋಗುವುದೇ ಇಲ್ಲ. ಪರಿಣಮ ಪಾರ್ಥಸಾರಥಿ ನಾರಾ ಇಂದು ಒಬ್ಬ ಯಶಸ್ವಿ ನೈಸರ್ಗಿಕ ಕೃಷಿಕ.

‘ಆಗಿನ್ನೂ ನಾನು ಚಿಕ್ಕವನು. ನಮ್ಮ ತಾತ ಹೊಲ, ತೋಟ ನೋಡಿಕೊಳ್ಳುತ್ತಿದ್ದರು. ನಮ್ಮದು ಆಗ 115 ಎಕರೆ ಜಮೀನಿತ್ತು. ದೊಡ್ಡ ಶ್ರೀಮಂತ ಕೃಷಿ ಕುಟುಂಬ. ತಾತ ನೈಸರ್ಗಿಕ ಕೃಷಿ ಮಾಡುತ್ತಿದ್ದರು. ಅವರದು ಪಕ್ಕಾ ಯೋಜನಾಬದ್ಧ ಕೃಷಿ. ಆಗೆಲ್ಲಾ ಮನೆಯಲ್ಲಿ ಆಹಾರಕ್ಕೆ ಅಗತ್ಯವಿರುವ ಕಾಳು-ಕಡಿಗಳನ್ನು ಕೊಂಡು ತಂದದ್ದು ನನಗೆ ನೆನಪೇ ಇಲ್ಲ. ಎಲ್ಲಾ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದ ತಾತ, ಎಂತಹ ಬರಗಾಲದ ಸ್ಥಿತಿ ಬಂದರೂ ಮನೆಯಲ್ಲಿ ಆಹಾರ ಧಾನ್ಯಗಳಿಗೆ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಹಾಗೇ ಬರಗಾಲದ ದಿನಗಳಲ್ಲೂ ನಮ್ಮ ಹೊಲದಲ್ಲಿ ಕೃಷಿ ಚಟುವಟಿಕೆಗಳು ನಿಲ್ಲುತ್ತಿರಲಿಲ್ಲ. ತಾತನಿದ್ದ ಸಮಮಯ ನಮ್ಮ ಪಾಲಿಗೆ ಸುವರ್ಣ ಯುಗದಂತಿತ್ತು,’ ಎಂದು ನೆನಪಿಸಿಕೊಳ್ಳುತ್ತಾರೆ ಪಾರ್ಥ.

‘ಬರುಬರುತ್ತಾ ಸಮಾಜ ಬದಲಾಯಿತು. ಕೃಷಿ ಪದ್ಧತಿಗಳೂ ಬದಲಾಗತೊಡಗಿದವು. 1990ರ ದಶಕದಲ್ಲಿ ದೇಶದ ಕೃಷಿ ವಲಯಕ್ಕೆ ಕೃತಕ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆ ನಾಶಕಗಳು ದಾಪುಗಾಲಿಟ್ಟವು. ಅಲ್ಲಂದ ಶುವುವಾಗಿದ್ದೇ ಕೃಷಿಯ ಅಧಃಪಥನ. ಎಲ್ಲರೂ ಅನಾವಶ್ಯಕವಾಗಿ ಕೃತಕ ಗೊಬ್ಬರ ಬಳಸಲು ಆರಂಭಿಸಿದರು. ಇದಕ್ಕೆ ನಮ್ಮ ಮನೆಯೂ ಹೊರತಗಿರಲಿಲ್ಲ. ಆಗ ತಾತ ಇರಲಿಲ್ಲ. ಅಪ್ಪ-ಚಿಕ್ಕಪ್ಪನ ಕೈಗೆ ಯಜಮಾನಿಕೆ ಬಂದಿತ್ತು. ನಮ್ಮಜ್ಜನ ಕಾಲದ ಸಮೃದ್ಧ ನೈಸರ್ಗಿಕ ಕೃಷಿಗೆ ತಿಲಾಂಜಲಿ ಇಟ್ಟ ಅವರು, ಅತಿಯಾಗೇ ರಾಸಾಯನಿಕ ಕೃಷಿ ಮೊರೆ ಹೋದರು. ಪರಿಣಾಮ, ಕೃಷಿ ವೆಚ್ಚ ಹೆಚ್ಚಾಗಿ ದಿನಕಳೆದಂತೆ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಎದುರಾಯಿತು. ಅಡುಗೆಗೆ ಬೇಕಿದ್ದ  ಎಲ್ಲವನ್ನೂ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿಗೆ ಬಂದಿದ್ದೆವು. ಆಗೆಲ್ಲಾ ತಾತ ಬಹಳ ನೆನಪಾಗುತ್ತಿದ್ದರು,’ ಎನ್ನುತ್ತಾರೆ ಪಾರ್ಥಸಾರಥಿ.

ಅಮೆರಿಕದಿಂದ ಹಳ್ಳಿಗೆ!

2001ರಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಒಂದು ವರ್ಷ ಐಟಿ ಉದ್ಯೋಗ ಮಾಡಿ, ಮತ್ತೆ ಹಳ್ಳಿಗೆ ಮರಳಿ ಪಪ್ಪಾಯ ಕೃಷಿಯಲ್ಲಿ ತೊಡಗಿದ ಪಾರ್ಥಸಾರಥಿ, 2003ರಲ್ಲಿ ಎರಡು ಎಕರೆಯಲ್ಲಿ 10 ಲಕ್ಷ ಮೌಲ್ಯದ ಪಪ್ಪಾಯ ಬೆಳೆಯುತ್ತಾರೆ. ಆದರೆ ಅದರಲ್ಲಿ ಅರ್ಧದಷ್ಟು ಹಣ್ಣುಗಳು ಕೊಳ್ಳುವವರಿಲ್ಲದೆ ಕೊಳೆತು ಹೋಗುತ್ತವೆ. ಅಷ್ಟರಲ್ಲೇ ಅಮೆರಿಕದ ಐಟಿ ಕಂಪನಿಯೊAದರಲ್ಲಿ ನೌಕರಿ ದೊರೆತು ಪಾರ್ಥ, ವಿಮಾನವೇರುತ್ತಾರೆ. ಅಮೆರಿಕದಲ್ಲೂ ಹೆಚ್ಚು ಸಮಯ ನಿಲ್ಲದ ಯುವಕ, 2008ರಲ್ಲಿ ಮತ್ತೆ ಭಾರತಕ್ಕೆ ಮರಳಿ, ಬೆಂಗಳೂರಿನಲ್ಲೇ ಉದ್ಯೋಗಕ್ಕೆ ಸೇರುತ್ತಾರೆ. ಅಲ್ಲಿಂದಲೇ ವಾರಕ್ಕೊಮ್ಮೆ ಊರಿಗೆ ಹೋಗಿ ಬಂದು, ಕೃಷಿ ಮಾಡಿಸಲು ಶುರು ಮಾಡುತ್ತಾರೆ. ಈ ವೇಳೆ ಮೊದಲು ಮೋಸಂಬಿ ಬೆಳೆದು ಯಶಸ್ವಿಯಾಗುವ ನಾರಾ, ಬಳಿಕ ಬಾಳೆ ಬೆಳೆದು ಬಂಪರ್ ಇಳುವರಿ ಪಡೆಯುತ್ತಾರೆ. ಆದರೆ ಮತ್ತದೇ ಮಾರುಕಟ್ಟೆ ಸಮಸ್ಯೆ ಎದುರಾಗಿ ಶೇ.30 ರಷ್ಟು ಬೆಳೆ ಹಾಳಾಗುತ್ತದೆ. ಜೊತೆಗೆ 11 ಲಕ್ಷ ರೂ.ಗೆ ಬಾಳೆ ಕೊಯ್ಯಲು ಗುತ್ತಿಗೆ ತೆಗೆದುಕೊಂಡ ವ್ಯಾಪಾರಿ 6 ಲಕ್ಷವನ್ನಷ್ಟೇ ಕೊಟ್ಟು, ಕಾಣೆಯಾಗುತ್ತಾನೆ.

ಮತ್ತೆ ನೈಸರ್ಗಿಕ ಕೃಷಿಯೆಡೆಗೆ

2012ರಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ನೈಸರ್ಗಿಕ ಕೃಷಿ ಮತ್ತು ಆ ಕುರಿತ ತರಬೇತಿಯ ಲೇಖನ ಓದಿದ ನಾರಾ, ಹೊಸ ಕೃಷಿ ಪ್ರಯೋಗಕ್ಕೆ ಮುಂದಾಗುತ್ತಾರೆ. 2013ರಲ್ಲಿ ‘ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ’ (ಝಡ್‌ಬಿಎನ್‌ಎಫ್) ತರಬೇತಿ ಪಡೆದ ಅವರು, ಜೀವಾಮೃತ ಬಳಸಿ ಅಂತರ ಬೆಳೆ ಪದ್ಧತಿ ಶುರು ಮಾಡುತ್ತಾರೆ. ಆ ಬಾರಿ ಯಾವುದೇ ರಾಸಾಯನಿಕ ಬಳಸದೆ ಉತ್ತಮ ಇಳುವರಿ ಪಡೆಯುತ್ತಾರೆ. ಜೊತೆಗೆ ಮನೆಯವರ ಸಹಕಾರ, ಮೆಚ್ಚುಗೆ ಕೂಡ. ಇನ್ನು 20115ರ ವೇಳೆಗೆ ಅವರ 93 ಎಕರೆ ಕೃಷಿ ಭೂಮಿ ಸಂಪೂರ್ಣವಾಗಿ ರಾಸಾಯನಿಕ ವಿಷ ಮುಕ್ತವಾಗುತ್ತದೆ.

‘ಆರಂಭದಲ್ಲಿ ನಾನು ಒಂದು ಬಾಳೆ ಗಿಡದಿಂದ 40 ಕೆ.ಜಿ ಗೊನೆ ಪಡೆಯುತ್ತಿದ್ದೆ. ಜೀವಾಮೃತ ಬಳಕೆ, ನೈಸರ್ಗಿಕ ಕೃಷಿ ಆರಂಭಿಸಿದ ಬಳಿಕ ಒಂದು ಗಿಡದಿಂದ 70 ಕಿಲೋ ತೂಕದ ಬಾಳೆ ಗೊನೆ ಬೆಳೆಯಲಾರಂಭಿಸಿದೆ. ಕ್ರಮೇಣ ನಾನು ಬೆಳೆಯುತ್ತಿದ್ದ ಎಲ್ಲಾ ಬೆಳೆಗಳಲ್ಲೂ ಇಳುವರಿ ಅಧಿಕವಾಗುತ್ತಲೇ ಸಾಗಿತು. ಬೇರೆ ರೈತರು ಒಂದು ಎಕರೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಬಾಳೆ ಬೆಳೆದರೆ ಅದೇ ಬಾಳೆಯನ್ನು ನಾನು ಒಂದೆರಡು ಸಾವಿರ ರೂ. ನಿರ್ವಹಣಾ ವೆಚ್ಚದಲ್ಲಿ ಬೆಳೆದೆ. ಜೊತೆಗೆ ಅವರಿಗಿಂತಲೂ ಹೆಚ್ಚು ಇಳುವರಿ ಮತ್ತು ಲಾಭ ಪಡೆದೆ’.

ಈ ಯಶಸ್ಸಿನಿಂದ ಮತ್ತಷ್ಟು ಉತ್ತೇಜನ ಗೊಂಡ ಪಾರ್ಥಸಾರಥಿ ಮತ್ತು ಅವರ ಕುಟುಂಬ, ಮೊದಲು 3 ಎಕರೆಯಲ್ಲಿ ತರಕಾರಿ ಬೆಳೆ ಪ್ರಯೋಗ ಮಾಡಲು ಮುಂದಾಯಿತು. ‘3 ಎಕರೆಯಯಲ್ಲಿ ವಿವಿಧ ತರಕಾರಿ ಬೆಳೆದರೆ ಎಲ್ಲದರಲ್ಲೂ ಮತ್ತೊಮ್ಮೆ ಬಂಬರ್ ಬೆಳೆ. ಮಾರುಕಟ್ಟೆಯಲ್ಲಂತೂ ಅತ್ಯದ್ಭುತ ಪ್ರತಿಕ್ರಿಯೆ. ವ್ಯಾಪಾರಿಗಳು ನಮ್ಮ ತೋಟದ ತರಕಾರಿ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಇದು ನನ್ನ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯ ಉತ್ತುಂಗ. ಈ ಸಮಯದಲ್ಲಿ ಕೇವಲ 15 ದಿನಗಳಲ್ಲಿ ನನಗೆ 4000 ಫೋನ್ ಕರೆಗಳು ಬಂದವು. ಕೃಷಿ ಅಧಿಕಾರಿಗಳು, ಸ್ನೇಹಿತರು, ಯುವಕರು, ರೈತರು ಎಲ್ಲರೂ ಕರೆ ಮಾಡಿ ನನ್ನ ಕೃಷಿ ಯಶಸ್ಸಿಗೆ ಅಬಿನಂಧನೆ ಸಲ್ಲಿಸಿದರು. ಆಗ ತರಕಾರಿ ಕೃಷಿಯನ್ನು 20 ಎಕರೆ ಭೂಮಿಗೆ ವಿಸ್ತರಿಸಿದೆ’ ಎನ್ನುವ ಪಾರ್ಥಸಾರಥಿ ಅವರ ಮುಂದಿನ ಪಯಣ ಅತ್ಯಂತ ರೋಚಕ.

ಪಪ್ಪಾಯ, ಬಾಳೆ, ದಾಳಿಂಬೆ, ಮಾವು, ಮೋಸಂಬಿ, ದ್ರಾಕ್ಷಿ ಹಣ್ಣುಗಳು, ಈರುಳ್ಳಿ, ಟೊಮೇಟೊ, ಮೆಣಸಿನಕಾಯಿ, ನುಗ್ಗೆಕಾಯಿ ತರಕಾರಿಗಳು, ಕಡಲೆ, ನೆಲಗಡಲೆ, ಭತ್ತ ಸೇರಿ ಹಲವು ಧಾನ್ಯಗಳು ಹೀಗೆ ಪಾರ್ಥಸಾರಥಿ ಬೆಳೆದದ್ದೆಲ್ಲವೂ ಚಿನ್ನವಾಗುತ್ತಿದೆ. ಜೊತೆಗೆ ತಾನು ಒಬ್ಬನೇ ಬೆಳೆಯುವುದಲ್ಲದೆ, ತನ್ನಂತೆ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡಿರುವ ನೂರಾರು ರೈತರನ್ನು ಜೊತೆ ಸೇರಿಸಿಕೊಂಡ ಪಾರ್ಥಸಾರರ್ಥಿ, ಬೆಂಗಳೂರಿನಲ್ಲಿ ಸಾವಯವ ಉತ್ಪನ್ನಗಳ ‘ಅನಂತ ನ್ಯಾಚುರಲ್ಸ್’ ಎಂಬ ಮಾರುಕಟ್ಟೆಯೊಂದನ್ನು ಆರಂಭಿಸುತ್ತಾರೆ. ಅದು ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುವ ಶುದ್ಧ ಸಾವಯವ ಅಂಗಡಿ. ಈ ಕುರಿತ ಮಾಹಿತಿ ಮುಂದಿನ ಲೇಖನದಲ್ಲಿ.