Success stories

ಬಿರು ಬಿಸಿಲ ನಾಡು ಯಾದಗಿರಿಯಲ್ಲಿ ಹರಡಿದೆ ಕೆಂಪು ಡ್ರಾಗನ್ ಹಣ್ಣುಗಳ ಕಂಪು

02 August, 2021 3:27 PM IST By:
ರುಕ್ಮಾಪುರದಲ್ಲಿರುವ ತಮ್ಮ ಡ್ರಾಗನ್ ಹಣ್ಣಿನ ತೋಟದಲ್ಲಿ ಮಹಾಂತೇಶ ಬಿ. ಕಲ್ಲೂರ.

ಉತ್ತರ ಕರ್ನಾಟಕದ ಮುಕುಟದಂತಿರುವ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳೆಂದರೆ ರಾಜ್ಯದ ಇತರೆ ಭಾಗಗಳ ಜನರಿಗೆ ನೆನಪಾಗವುದೇ ಮೈ ಬೆವರಿಳಿಸುವ ಬಿರು ಬಿಸಿಲು. ಹಾಗಂತಾ ಈ ಜಿಲ್ಲೆಗಳು ಬರೀ ಬಿಸಿಲಿಗಷ್ಟೇ ಫೇಮಸ್ ಅಲ್ಲ. ಈ ಭಾಗದಲ್ಲಿ ಕೃಷಿ ಕ್ಷೇತ್ರ ದಿನಕ್ಕೊಂದು ಹೊಸ ರೂಪ ಪಡೆಯುತ್ತಿರುತ್ತದೆ. ಕರ್ನಾಟಕದ ಬೇರಾವ ಜಿಲ್ಲೆಗಳಲ್ಲೂ ನಡೆಯದಂತಹ ಕೃಷಿ, ಬೆಳೆ ಪ್ರಯೋಗಗಳು ನಡೆಯುವುದು ಈ ಬಿರು ಬಿಸಿಲ ನಾಡಿನಲ್ಲೇ. ಮೊದಲೆಲ್ಲಾ ಬೇರೆ ಭಾಗಗಳ ರೈತರಂತೆ ಸಾಮಾನ್ಯ ಬೆಳೆಗಳನ್ನೇ ಬೆಳೆಯುತ್ತಿದ್ದ ಈ ತ್ರಿವಳಿ ಜಿಲ್ಲೆಗಳ ರೈತರು, ಈಗೀಗ ಅಲ್ಲಿನ ಬಿಸಿಲನ್ನೇ ದೊಡ್ಡ ಪ್ಲಸ್ ಪಾಯಿಂಟ್ ಮಾಡಿಕೊಂಡು, ಅತಿ ಉಷ್ಣತೆಗೆ ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆದು ಯಶಸ್ವಿಯಾಗುತ್ತಿದ್ದಾರೆ.

ಹೀಗೆ ವಿಭಿನ್ನ ಬೆಳೆಯ ಪ್ರಯೋಗ ಮಾಡಿ ಯಶಸ್ಸಿನ ಹಾದಿಯತ್ತ ಮುಖ ಮಾಡಿರುವವರು ಯಾದಗಿರಿ ಜಿಲ್ಲೆ ಶೋರಾಪುರ ತಾಲೂಕಿನ ರುಕ್ಮಾಪುರ ಗ್ರಾಮದ ರೈತ ಮಹಾಂತೇಶ ಬಸವರಾಜ ಕಲ್ಲೂರ ಅವರು. ಭತ್ತದ ವ್ಯಾಪಾರಿಯಾಗಿರುವ ಮಹಾಂತೇಶ ಅವರು, ರುಕ್ಮಾಪುರ ಗ್ರಾಮದಲ್ಲಿರುವ ತಮ್ಮ 3 ಎಕರೆ ಕೃಷಿ ಭೂಮಿಯನ್ನು ನೀರಿನ ಕೊರತೆಯಿಂದಾಗಿ ಹಲವು ವರ್ಷಗಳಿಂದ ಬೀಳು ಬಿಟ್ಟಿದ್ದರು. ಮೂಲತಃ ವ್ಯಾಪಾರಿಯಾಗಿರುವ ಮಹಾಂತೇಶ ಅವರು ಭತ್ತ ಖರೀದಿಗಾಗಿ ಬೇರೆ ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದರು. ಹೀಗಿರುವಾಗ ಒಮ್ಮೆ ಬಾಗಲಕೋಟೆಗೆ ಹೋದಾಗ ಅಲ್ಲಿ ಡ್ರಾಗನ್ ಹಣ್ಣುಗಳನ್ನು ಬೆಳೆಯುತ್ತಿದ್ದುದು ಕಂಡು ಬೆರಗಾದರು.

ಅದಕ್ಕೂ ಮೊದಲು ಆಂಧ್ರಪ್ರದೇಶದಲ್ಲಿ ಡ್ರಾಗನ್ ಬೆಳೆಯುವುದನ್ನು ಕೂಡ ನೋಡಿದ್ದ ಇವರಿಗೆ ಈ ವಿದೇಶಿ ಹಣ್ಣುಗಳನ್ನು ನಮ್ಮಲ್ಲೂ ಬೆಳೆಯಬಹುದಾ ಎಂಬ ಪ್ರಶ್ನೆ ಮುಡಿತು. ಕೂಡಲೇ ಹೊಲದ ಮಾಲೀಕರ ಜೊತೆ ಮಾತನಾಡಿ ಡ್ರಾಗನ್ ಹಣ್ಣು ಕೃಷಿಯ ಜನ್ಮ ಜಾಲಾಡಿದರು. ಈ ಹಣ್ಣು ಬೆಳೆಯಲೇಬೇಕೆಂಬ ದೃಢ ನಿರ್ಧಾರದೊಂದಿಗೆ ರುಕ್ಮಾಪುರಕ್ಕೆ ಬಂದವರೇ ತಮ್ಮ ಮೂರು ಎಕರೆ ಭೂಮಿಯಲ್ಲಿ ಡ್ರಾಗನ್ ಹಣ್ಣಿನ ಬೆಳೆ ಬೆಳೆಯಲು ಸಿದ್ಧತೆ ನಡೆಸಿದರು.

ಮೊದಲು ಜಮೀನು ಸಿದ್ಧಪಡಿಸಿ, ಮಣ್ಣಿನ ಗುಡ್ಡೆ ಆಕಾರದ ಉದ್ದನೆಯ ಬೆಡ್ ಸಿದ್ಧಪಡಿಸಿದರು. ಬಳಿಕ ಕಲ್ಲು ಕಂಬಗಳನ್ನು ತರಿಸಿ, ಬಿಗಿಯಾಗಿ ನೆಟ್ಟು, ಬೋರ್‌ವೆಲ್ ಕೊರೆಸಿದರೆ ಸಿಕ್ಕಿದ್ದು 2 ಇಂಚು ನೀರು. ಡ್ರಾಗನ್ ಫ್ರೂಟ್ ಒಂದು ಉಷ್ಣವಲಯದ ಬೆಳೆಯಾಗಿರುವುದರಿಂದ ಹೆಚ್ಚು ನೀರು ಬಯಸುವುದಿಲ್ಲ. ಹೀಗಾಗಿ ಮೂರು ಎಕರೆ ಡ್ರಾಗನ್ ಹಣ್ಣು ಬೆಳೆ ನಿರ್ವಹಿಸಲು 2 ಇಂಚು ನೀರು ಸಾಕಾಯಿತು. ಬಳಿಕ ಕೋಲ್ಕತ್ತಾದಿಂದ 38 ರೂಪಾಯಿಗೆ ಒಂದರAತೆ ಕೆಂಪು ತಿರುಳಿನ (ಪಿಂಕ್) ಡ್ರಾಗನ್ ತಳಿಯ 1500 ಸಸಿಗಳನ್ನು ತರಿಸಿ ಹೊಲದಲ್ಲಿ ನಾಟಿ ಮಾಡಿದರು.

ಮಹಾಂತೇಶ ಅವರ ಡ್ರಾಗನ್ ಫ್ರೂಟ್ ತೋಟ.

ಡ್ರಾಗನ್ ಹಣ್ಣಿನ ಗಿಡಗಳಿಗೆ ಆಸರೆಯಾಗಿ ನೀಡುವ ಕಂಬಗಳಿಗೆ ಪೋಲ್ಸ್ ಎನ್ನುತ್ತಾರೆ. ಒಂದು ಪೂಲ್ಸಿನಲ್ಲಿ 4 ಗಿಡಗಳನ್ನು ಬೆಳೆಸುತ್ತಿದ್ದು, ಒಂದು ಎಕರೆ ಹೊಸಲ್ಲಿ ಈ ರೀತಿಯ 500 ಪೋಲ್ಸ್ ಕೂರುತ್ತವೆ (2000 ಸಸಿ). ಮಹಾಂತೇಶ ಅವರು ಹೊಲದಲ್ಲಿ ಶೆಡ್ ನಿರ್ಮಾಣ ಮಾಡಿದ್ದು, 3 ಎಕರೆಯಲ್ಲಿ 1450 ಪೋಲ್ಸ್ಗಳನ್ನು ಕೂರಿಸಿದ್ದಾರೆ.

ಎಕರೆಗೆ 30 ಟನ್ ಇಳುವರಿ

ಪ್ರಸ್ತುತ ಮಹಾಂತೇಶ್ ಅವರ ಡ್ರಾಗನ್ ಬೆಳೆಗೆ ಎರಡೂವರೆ ವರ್ಷದ ಪ್ರಾಯ. ‘ಸಸಿ ನೆಟ್ಟು 18 ತಿಂಗಳಿಗೆ ಡ್ರಾಗನ್ ಗಿಡದಲ್ಲಿ ಹಣ್ಣುಗಳು ಬಿಡಲು ಆರಂಭವಾಗುತ್ತದೆ. ಆರಂಭದ ಬೆಳೆ ಹೆಚ್ಚು ಇಳುವರಿ ನಿರೀಕ್ಷೆ ಮಾಡುವಂತಿಲ್ಲ. ಆದರೆ, ಗಿಡಗಳಿಗೆ 3 ವರ್ಷ ತುಂಬಿದ ಬಳಿಕ ಒಂದು ಪೋಲ್ಸ್ಗೆ 60 ಕೆ.ಜಿ.ವರೆಗೂ ಇಳುವರಿ ಬರುತ್ತದೆ. ಅಂದರೆ ಒಂದು ಎಕರೆಗೆ ಸರಾಸರಿ 30 ಟನ್‌ವರೆಗೆ ಇಳುವರಿ ಪಡೆಯಬಹುದು. ಕೆಲವರು 40-45 ಟನ್ ಇಳುವರಿ ಪಡೆದ ಉದಾಹರಣೆಗಳೂ ಇವೆ’.

ಬೆಲೆ, ಮಾರುಕಟ್ಟೆ ವ್ಯವಸ್ಥೆ

‘ಮೊದಲ ಬೆಳೆಯೇ ನಮ್ಮ ತೋಟದಲ್ಲಿ 8 ಟನ್ ಇಳುವರಿ ಬಂದಿತ್ತು. ಆರಂಭದಲ್ಲಿ ನಾವು ಸ್ಥಳೀಯವಾಗೇ 150 ರೂ.ಗೆ ಒಂದು ಕೆ.ಜಿ ಹಣ್ಣು ಮಾರಾಟ ಮಾಡಿದ್ದೇವೆ. ಹಾಲಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಡ್ರಾಗನ್ ಹಣ್ಣಿಗೆ 180-200 ರೂ. ಇದೆ. ಮೊನ್ನೆಯಷ್ಟೇ ಗ್ರೀನ್ ಹೌಸ್ ಎಂಬ ಕಂಪನಿಯವರು ತೋಟಕ್ಕೆ ಭೇಟಿ ನೀಡಿ, 180 ರೂ.ಗೆ ಕೆ.ಜಿಯಂತೆ ಹಣ್ಣು ಖರೀದಿಸುವುದಾಗಿ ಹೇಳಿದ್ದಾರೆ. ಈಗ ಸ್ಥಳೀಯ ಮಾರುಕಟ್ಟೆ, ಪಕ್ಕದ ಜಿಲ್ಲೆಗಳು ಹಾಗೂ ಹುಬ್ಬಳ್ಳಿಗೆ ಹಣ್ಣುಗಳನ್ನು ಕಳಿಸುತ್ತಿದ್ದೇವೆ. ದೊಡ್ಡಮಟ್ಟದಲ್ಲಿ ಅಂದರೆ, ಟನ್‌ಗಟ್ಟಲೆ ಹಣ್ಣು ಖರೀದಿಸುವವರು ನಮ್ಮ ಭಾಗದಲ್ಲಿ ಸಿಗುವುದಿಲ್ಲ. ಆದರೆ ಹೈದರಾಬಾದ್ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿ ನಡೆಯುತ್ತದೆ. ಹಿಗಾಗಿ ಹಣ್ಣು ಮಾರಾಟಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎಂಬುದು ಮಹಾಂತೇಶ ಅವರ ಅನುಭವದ ಮಾತು.

15 ದಿನಕ್ಕೊಮ್ಮೆ ನೀರು

‘ಆರಂಭದಲ್ಲಿ ಬೆಡ್ ನಿರ್ಮಾಣ ಮಾಡುವಾಗ ಮಣ್ಣಿನ ಜೊತೆ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಬೇವಿನ ಹಿಂಡಿ ಬೆರೆಸಿದ್ದೇವೆ. ಪೋಲ್ಸ್ ನೆಟ್ಟ ನಂತರ ಅದರ ಸುತ್ತ ನಾಲ್ಕು ಕಡೆ ಮೂರರಿಂದ ನಾಲ್ಕು ಇಂಚು ಆಳಕ್ಕೆ ಹೋಗುವಂತೆ ಡ್ರಾಗನ್ ಸಸಿಯನ್ನು ಊರಿದರೆ ಸಾಕು. ಸಸಿಗೆ ಪ್ರತ್ಯೇಕವಾಗಿ ಗುಣಿ ತೆಗೆಯುವ ಅಗತ್ಯವಿಲ್ಲ. ಈ ಬೆಳೆಗೆ ಹೆಚ್ಚು ನೀರು ಬೇಡ. ಮಳೆಗಾಲದಲ್ಲಿ ನಾವು ಬೋರ್‌ವೆಲ್ ಸ್ಟಾರ್ಟ್ ಮಾಡುವುದೇ ಇಲ್ಲ. ಬೇಸಿಗೆ-ಚಳಿಗಾಲದಲ್ಲಿ ಹನಿ ನೀರಾವರಿ ಪದ್ಧತಿ ಮೂಲಕ 15 ದಿನಗಳಿಗೊಮ್ಮೆ ಒಂದೂವರೆ ತಾಸು ನೀರು ಕೊಟ್ಟರೆ ಸಾಕು’ ಎಂದು ಮಹಾಂತೇಶ ಬಿ. ಕಲ್ಲೂರ ಅವರು ವಿವರಿಸುತ್ತಾರೆ.

ಅಂತರ ಎಷ್ಟಿರಬೇಕು?

‘ಡ್ರಾಗನ್ ಹಣ್ಣು ಬೆಳೆಯಲು ಸಾಲಿನಿಂದ ಸಾಲಿಗೆ 8 ಅಡಿ ಮತ್ತು ಒಂದು ಪೋಲ್ಸ್ನಿಂದ ಮತ್ತೊಂದು ಪೋಲ್ಸ್ಗೆ 12 ಅಡಿ ಅಂತರ ಇರಬೇಕು. ಆಗ ಗಿಡಗಳು ಉತ್ತಮವಾಗಿ ಬೆಳೆದು ಇಳುವರಿ ಚೆನ್ನಾಗಿ ಬರುತ್ತದೆ. ಜೊತೆಗೆ ಬಿಸಿಲು, ಗಾಳಿಗೆ ಸೂಕ್ತ ಸ್ಥಳಾವಕಾಶ ಕೂಡ ಸಿಗುತ್ತದೆ. ಡ್ರಾಗನ್ ಬೆಳೆಗೆ ಸಮರ್ಪಕವಾಗಿರುವ ಬಿಸಿಲು ಹಾಗೂ ಗಾಳಿಯ ಸಂಚಾರ ಅತಿ ಮುಖ್ಯ. ಹೀಗಾಗಿ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಲೇಬೇಕು. ಗಿಡಗಳು ಹೂವು ಬಿಟ್ಟ ನಂತರ 45ನೇ ದಿನಕ್ಕೆ ಹಣ್ಣು ಕಟಾವಿಗೆ ಬರುತ್ತದೆ. ಸಾಮಾನ್ಯವಾಗಿ ಜೂನ್‌ನಿಂದ ಡಿಸೆಂಬರ್‌ವರೆಗೆ ಕಟಾವು ಸೀಸನ್ ಇರುತ್ತದೆ’.

ಹೂಡಿಕೆ ಹೆಚ್ಚು, ಆದಾಯವೂ ಅಧಿಕ

ಮಹಾಂತೇಶ ಅವರು ಡ್ರಾಗನ್ ಹಣ್ಣಿನ ತೋಟ ಕಟ್ಟಲು ಆರಂಭದಲ್ಲಿ ಎಕರೆಗೆ 5 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ‘ಆದರೆ ಡ್ರಾಗನ್ ಹಣ್ಣಿನ ಇಳುವರಿ ಹಾಗೂ ಬೆಲೆ ಎರಡೂ ಉತ್ತಮವಾಗಿರುವುದರಿಂದ 2ನೇ ವರ್ಷದಲ್ಲೇ ನೀವು ಹೂಡಿಕೆ ಮಾಡಿದ ಹಣ ನಿಮ್ಮ ಕೈಸೇರುತ್ತದೆ. 3ನೇ ವರ್ಷದಿಂದ ಇಳುವರಿ ಹೆಚ್ಚಾಗುವ ಕಾರಣ ಕೈತುಂಬಾ ಆದಾಯ ಗಳಿಸಬಹುದು. ಜೊತೆಗೆ, 2ನೇ ವರ್ಷದಿಂದ ಹಣ್ಣುಗಳ ಬೀಜ ಹಿಡಿದು ರೈತರೇ ಸಸಿ ಮಾಡಿ ಮಾರಾಟ ಮಾಡಬಹುದು. ನಾವು ಡ್ರಾಗನ್ ಸಸಿ ಬೆಳೆಸಿ 30 ರೂ.ಗೆ ಒಂದು ಸಸಿ ಮಾರಾಟ ಮಾಡುತ್ತಿದ್ದೇವೆ. ಇದರಿಂದ ಹೆಚ್ಚುವರಿ ಆದಾಯ ಬರುತ್ತಿದೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಡ್ರಾಗನ್ ಫ್ರೂಟ್ ಒಂದು ಹೇಳಿಮಾಡಿಸಿದ ಬೆಳೆ’ ಎನ್ನುವುದು ಮಹಾಂತೇಶ ಅವರ ಅಭಿಪ್ರಾಯ.