Success stories

ಅರಣ್ಯ ಕೃಷಿ ಪದ್ಧತಿಯಿಂದ ಕೈತುಂಬಾ ಸಂಪಾದನೆ ಮಾಡುತ್ತಿರುವ ಲಕ್ಷ್ಮೀಕಾಂತ

29 June, 2020 9:32 AM IST By:

ಬರಡು ಭೂಮಿಯಲ್ಲಿ ಬಂಗಾರ ಬೆಳೆ ತೆಗೆದು ಕೈತಂಬಾ ಸಂಪಾದನೆ ಮಾಡುತ್ತಿರುವ ಕಲಬುರಗಿ ಜಿಲ್ಲೆಯ ಹಾಗರಗಾ ಗ್ರಾಮದ ಲಕ್ಷ್ಮೀಕಾಂತ ಹಿಬಾರಿಯವರೆಗೆ ಕೈಹಿಡಿದಿದ್ದು ಅರಣ್ಯ ಆಧಾರಿತ ಕೃಷಿ ಪದ್ಧತಿ. ಹಿರಿಯರಿಂದ ಬಂದ ಮೂರುವರೆ ಎಕರೆ ಪಾಳುಬಿದ್ದ ಜಮೀನಿನಲ್ಲಿಯೇ ಬಂಗಾರದ ಬೆಳೆ ತೆಗೆದು ಮಾದರಿಯಾಗಿದ್ದಾರೆ.

ಪಾಲಿಗೆ ಬಂದದ್ದು ಪಂಚಾಮೃತವೆಂದು ಭಾವಿಸಿದ ಲಕ್ಷ್ಮೀಕಾಂತ ಹಿಬಾರೆಯವರು ಧೈರ್ಯಮಾಡಿ ಅರಣ್ಯ ಆಧಾರಿತ ಕೃಷಿಯತ್ತ ಒಲವು ತೋರಿ ಭರಪೂರ ಸಾವಯವ ನಿಂಬೆ, ವಿವಿಧ ತರಕಾರಿ ಬೆಳೆದು ಕೃಷಿ ಅಧಿಕಾರಿಗಳು ಹಾಗೂ ಪ್ರಗತಿಪರ ರೈತರೂ ಅವರ ಹೊಲದತ್ತ ಹಾಯುವಂತೆ ಮಾಡಿದ್ದಾರೆ.

ಇವತ್ತಿನ ಯುವಪೀಳಿಗೆ ಕೃಷಿ ಜೀವನದಿಂದ ವಿಮುಖವಾಗಿ ನಗರ ಜೀವನಕ್ಕೆ ಮುಖ ಮಾಡುವುದು ಜಾಸ್ತಿ. ಆದರೆ ಇವರು  ಹಾಗಲ್ಲ, ಭೂತಾಯಿಯನ್ನು ನಂಬಿದರೆ ಎಂದೂ ಕೈಕೊಡಲ್ಲ ಎಂಬ ಗಟ್ಟಿ ನಿರ್ಧಾರದಿಂದಾಗಿ ಸಹಜಕೃಷಿಯತ್ತ ಒಲವು ತೋರಿ ಯಶಸ್ವಿಯಾಗಿದ್ದಾರೆ. ಓದಿದ್ದು ಎಸ್.ಎಸ್.ಎಲ್.ಸಿ ಆದರೆ ಅವರಲ್ಲಿ ಅಪಾರ ಪ್ರಮಾಣದ ಪಾಂಡಿತ್ಯ ತುಂಬಿದೆ. ಅವರೊಂದಿಗೆ ಮಾತಿಗಿಳಿದರೆ ಸಾಕು ಸಾವಯವ ಕೃಷಿ, ಮಿಶ್ರ ಬೇಸಾಯ, ವ್ಯವಸಾಯದೊಂದಿಗೆ ಕೋಳಿ ಸಾಕಾಣಿಕೆ ಹೀಗೆ ಹಲವಾರು ಬಗೆಯ ಕೃಷಿ ಪದ್ದತಿಯ ಜ್ಞಾನಭಂಢಾರ ಅವರ ಮಾತಿನಲ್ಲಿ ಹರಿದುಬರುತ್ತದೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಪಡೆದು ಇನ್ನೊಬ್ಬರಿಗೆ ಸ್ಪೂರ್ತಿಯಾಗಬೇಕೆಂಬುದು ಇವರ ಉದ್ದೇಶ. ವರ್ಷಕ್ಕೆ ಒಂದೆರಡು ಬೆಳೆ ತೆಗೆಯುವುದು ಮುಖ್ಯವಲ್ಲ. ದಿನನಿತ್ಯ ಹಣ ಬರುತ್ತಿರಬೇಕೆಂಬ ಉದ್ದೇಶದಿಂದ ಕೋಳಿ ಸಾಕಾಣಿಕೆ ಮಾಡಿ ಪ್ರತಿನಿತ್ಯ ಸಾವಿರಾರು ರುಪಾಯಿಯ ತತ್ತಿ ಮಾರಾಟ ಮಾಡಿ ಸಂಪಾದಿಸುತ್ತಿದ್ದಾರೆ.

ಸಾವಯವ ಗೊಬ್ಬರದಿಂದ ಹೆಚ್ಚಿಸಿದ ಭೂಮಿಯ ಫಲವತ್ತತೆ:

ತನ್ನ ಪಾಲಿಗೆ ಬಂದ ಬರಡು ಭೂಮಿಯಲ್ಲಿ ಕಾಂಪೋಸ್ಟ್, ಹಸಿರೆಲೆಗೊಬ್ಬರ, ಜೀವಾಮೃತ ಮತ್ತು ಸೂಕ್ಷ್ಮ ಜೀವಾಣುವಿರುವ ವೇಸ್ಟ್-ಡಿ ಕಾಂಪೋಸ್ಟ್ ನಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿದ್ದಾರೆ.  ಮಣ್ಣನ್ನು ಸಡಿಲಗೊಳಿಸಿ ತಲಾ ಒಂದು ಮೀಟರ್ ಅಂಗಲ ಮತ್ತು ಆಳದ ಗುಂಡಿಗಳಲ್ಲಿ ಶೇ. 60 ರಷ್ಟು ಕೆಂಪು ಮಣ್ಣು, ತಲಾ ಶೇ. 20 ರಷ್ಟು ಕಾಂಪೋಸ್ಟ್, ಬೇವಿನ ಹಿಂಡಿಯನ್ನು ಸೇರಿಸಿದ್ದಾರೆ. ಕೋಳಿ ಗೊಬ್ಬರವನ್ನು ಸಹ ವ್ಯವಸಾಯಕ್ಕೆ ಬಳಸಿ ಫಲವತ್ತತೆ ಹೆಚ್ಚಿಸಿದ್ದಾರೆ. ಶ್ರೀಗಂಧ, ರಕ್ತಚಂದನ, ನುಗ್ಗೆ, ಲಿಂಬೆ, ನೆಲ್ಲಿಕಾಯಿ, ನೇರಳೆ, ಹೆಬ್ಬೇವು, ಪೇರಲ ಹೀಗೆ ಬಗೆಬಗೆಯ ಗಿಡಗಳನ್ನು ನೆಟ್ಟಿದ್ದಾರೆ. ಈ ಗಿಡಗಳ ಮಧ್ಯೆದಲ್ಲಿಯೇ ಮಿಶ್ರಬೆಳೆ ಹಾಕಿ ಕೈ ತುಂಬಾ ಸಂಪಾದನೆ ಮಾಡುತ್ತಾರೆ. ಗಿಡಗಳ ಮಧ್ಯದಲ್ಲಿ ಚೆಂಡುಹೂವು, ಎಲೆಕೋಸು, ಬದನೆಕಾಯಿ, ಸೇವಂತಿಗೆ, ಕಲ್ಲಂಗಡಿ ಅಂತರ್ ಬೆಳೆ ಹಾಕಿದ್ದಾರೆ. ನೆರಳೆ, ಹೆಬ್ಬೇವು ಪೇರಲ ಜೊತೆ ಜೊತೆಗೆ ವರ್ಷದೊಳಗೆ ಆದಾಯ ತರುವ ನಿಂಬೆ, ನುಗ್ಗೆ, ಬದನೆ ಮತ್ತಿತರ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕೀಟ-ರೋಗಗಳ ಹತೋಟಿಗೆ ಸಾವಯವ ಔಷಧಿಗಳನ್ನು ಬಳಸುತ್ತಾರೆ. ರಾಸಾಯನಿಕ ಮುಕ್ತ ತರಕಾರಿ, ಬೆಲೆ ಹಾಗೂ ಹಣ್ಣು-ಹಂಪಲುಗಳನ್ನ ಬೆಳೆಯುತ್ತಿದ್ದಾರೆ.

ಆರಂಭದ ಹಂತದಲ್ಲಿ ಆದಾಯದ ಮೂಲ:

ಕಲ್ಲಂಗಡಿ 2 ಲಕ್ಷ, ಚೆಂಡುಹೂವು 30 ಸಾವಿರ, ಬದನೆಕಾಯಿ 30 ಸಾವಿರ, ನುಗ್ಗೆ 50 ಸಾವಿರ,ಪೇರಲ ಹಣ್ಣು 20 ಸಾವಿರ ಹೀಗೆ ಒಂದು ವರ್ಷಕ್ಕೆ ಸುಮಾರು 3.30ಲಕ್ಷ ನಿವ್ವಳ ಲಾಭ ಪಡೆದಿದ್ದಾರೆ.

ಜೀವನಪರ್ಯಂತ ಆದಾಯದ ಮೂಲ:

ಶ್ರೀಗಂಧ, ಹೆಬ್ಬೇವು, ಬೆಟ್ಟದ ನೆಲ್ಲೆ, ನೇರಳೆ ಗಿಡಗಳಿಂದ ಮೂರ್ನಾಲ್ಕು ವರ್ಷಗಳ ನಂತರ ನಿರಂತರವಾಗಿ ಜೀವನಪರ್ಯಂತ ಲಾಭ ಕೊಡುತ್ತದೆ. ನಿರಂತರವಾಗಿ ಹಣ ಬರಬೇಕು. ಮಿಶ್ರ ಬೆಳೆಯೂ ಆಗುಬೇಕೆಂಬ ಉದ್ದೇಶದಿಂದಲೇ ಅರಣ್ಯ ಆಧಾರಿತ ಕೃಷಿ ಪದ್ಧತಿ ಅನುಸರಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಲಕ್ಷ್ಮೀಕಾಂತ ಹಿಬಾರೆ.

---------------------

ಅರಣ್ಯ ಆಧಾರಿತ ಕೃಷಿ ಮಾಡಲು ಜಾಸ್ತಿ ಹಣ ಬೇಕಾಗಿಲ್ಲ. ಆದರೆ ಸಾಕಷ್ಟು ತಾಳ್ಮೆ ಬೇಕು. ರೈತರು ಪೇರಲ, ನೇರಳೆ, ನಿಂಬೆ ಈ ಥರದ ಬೆಳೆಗಳ ಜೊತೆಗೆ ನುಗ್ಗೆ, ತರಕಾರಿ ಮತ್ತಿತರ ಮಿಶ್ರಬೆಳೆಗಳನ್ನೂ ಬೆಳೆಯಬಹುದು. ತೋಟಗಾರಿಕಾ ಬೆಳೆದರೆ ಕೈ ಸುಟ್ಟುಕೊಳ್ಳಬೇಕಾಗುತ್ತದೆ ಎಂಬ ತಪ್ಪುಕಲ್ಪನೆ ಸಾಕಷ್ಟು ರೈತರಲ್ಲಿದೆ. ಕಡಿಮೆ ಭೂಮಿಯಲ್ಲಿ, ಕಡಿಮೆ ಬಂಡವಾಳದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದು ಎನ್ನುತ್ತಾರೆ ಲಕ್ಷ್ಮೀಕಾಂತ ಹಿಬಾರೆ.

ಕಲಬುರಗಿ ತಾಲೂಕು

ಮೊ.9886108951