Success stories

ಜೀವನಕ್ಕೆ ಹಾಲ್ಜೇನಾದ ಹೈನುಗಾರಿಕೆ

30 September, 2018 9:25 AM IST By:

ಮನಸ್ಸೊಂದು ಇದ್ದರೆ ಮಾರ್ಗ ಎಂಬ ಗಾದೆ ಮಾತು ಸುಳ್ಳಲ್ಲ. ಮನಸ್ಸು ಇದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಆದರೆ ತಾನು ಮಾಡುತ್ತಿರುವ ಪ್ರಯತ್ನ ಮತ್ತು ವೃತ್ತಿಯಲ್ಲಿ ಪ್ರೀತಿ, ಆತ್ಮವಿಶ್ವಾಸ ಅತಿ ಮುಖ್ಯ. ಇವುಗಳನ್ನು ಜೀವನದಲ್ಲಿ ರೂಡಿಸಿಕೊಂಡವರು ತಮ್ಮ ಸಾಧನೆಯಲ್ಲಿ ಯಶಸ್ಸು ಕಾಣುತ್ತಾರೆ, ಕಂಡಿದ್ದಾರೆ.

ಸುಳ್ಯ ತಾಲ್ಲೂಕಿನ ತೊಡಿಕಾನ ಗ್ರಾಮದ ಉರಿಮಜಲು ಕದಳಿವನ ಕೆ.ಜಿ.ಈಶ್ವರ ಭಟ್ಟರ ಮಗ ಶ್ರೀನಿಧಿಯವರು ಪಿ.ಯು.ಸಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ತನ್ನ ತಂದೆ ಹಿಂದಿನಿಂದಲೂ ಪ್ರಾರಂಭಿಸಿಕೊಂಡು ಬಂದ ಹೈನುಗಾರಿಕೆಯತ್ತ ಆಕರ್ಷಿತರಾದರು. ಅದನ್ನು ಆಧುನಿಕವಾಗಿ ಮುಂದುವರಿಸಿಕೊಂಡು ಹೋಗುವ ಕನಸು ಕಂಡು ಇಂದು ಹೈನುಗಾರಿಕೆಯಲ್ಲಿ ತಾಲ್ಲೂಕಿನ ಮಾದರಿ ರೈತರಾಗಿದ್ದಾರೆ. 

ಪಿ.ಯು.ಸಿ ಬಳಿಕ ಕಾನೂನು ಶಿಕ್ಷಣ ಮುಂದುವರಿಸಿದ ಇವರು ಕಾನೂನು ಅಧ್ಯಯನವನ್ನು ಬಿಟ್ಟು ಹೈನುಗಾರಿಕೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ನ್ಯಾಯಾಲಯದಲ್ಲಿ ಕಪ್ಪು ಕೋಟ್ ಧರಿಸಿ ವಾದ ಮಂಡಿಸಬೇಕಾಗಿದ್ದ ಶ್ರೀನಿಧಿ ಇಂದು ಹೈನೋದ್ಯಮಿಯಾಗಿ ನಮ್ಮ ಮುಂದೆ ನಿಂತಿದ್ದಾರೆ. ತಂದೆ ಈಶ್ವರ್ ಭಟ್ ರವರಿಗೆ ಸುಮಾರು 4ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಅಡಿಕೆ, ಕೊಕ್ಕೊ, ಕಾಳು ಮೆಣಸು, ಬಾಳೆ ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ. ಕೃಷಿ ಬೆಳೆಗಳಿಗೆ ಧಾರಣೆ ಕುಸಿತದ ಸಂದರ್ಭದಲ್ಲಿ ಹೈನುಗಾರಿಕೆ ಅರ್ಥಿಕ ಚೇತರಿಕೆ ನೀಡಿದೆ ಎಂದು ಶ್ರೀನಿಧಿ ಮಾತಿಗಿಳಿಯುತ್ತಾರೆ.

ತಂದೆ ಈಶ್ವರ್ ಭಟ್ ರೊಂದಿಗೆ ಶ್ರೀನಿಧಿ

ಸ್ವ-ಉದ್ಯೋಗದ ತುಡಿತಕ್ಕೊಳಗಾದ ಶ್ರೀನಿಧಿ, 1996-97ನೇ ಸಾಲಿನಲ್ಲಿ ಹೆಚ್.ಎಫ್ 1 ಆಕಳಿನಿಂದ ಹೈನುಗಾರಿಕೆ ಆರಂಭಿಸಿದರು. ಆ ಕಾಲದಲ್ಲಿ ಅದು ದಿವಸಕ್ಕೆ 10 ಲೀಟರ್ ಹಾಲು ಕೊಡುತ್ತಿತ್ತು. ಹಾಗೇ ದಿನಗಳೆದಂತೆ ಹೈನುಗಾರಿಕೆ ಮುಂದುವರೆಸಿ 2002ರಲ್ಲಿ 15 ಜಾನುವಾರುಗಳಲ್ಲಿ 10 ಹಾಲು ಕೊಡುವ ದನಗಳಾದವು. ಆ ಅವಧಿಯಲ್ಲಿ ದಿವಸಕ್ಕೆ 110 ರಿಂದ 115 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿದ್ದೆವು. ಈಗ ೨ ಜರ್ಸಿ ಮತ್ತು 5 ಹೆಚ್.ಎಫ್ ಹಾಲು ಕರೆಯುವ ಜಾನುವಾರುಗಳಿದ್ದು ದಿವಸಕ್ಕೆ ಸರಾಸರಿ 80-85 ಲೀಟರ್ ಹಾಲು ಡೇರಿಗೆ ಹಾಕುತ್ತಿದ್ದೇವೆ. ದಿವಸಕ್ಕೆ 1700 ರೂಪಾಯಿ ಆದಾಯ ದೊರೆಯುತ್ತಿದ್ದು, ಖರ್ಚು ಹೋಗಿ ದಿನವೊಂದಕ್ಕೆ 600 ರೂಪಾಯಿ ಉಳಿತಾಯ ಇದೆ ಎಂದು ತಿಳಿಸುತ್ತಾರೆ.

ಜಾನುವಾರುಗಳಿಗೆ 2 ಹೊತ್ತು ಸ್ನಾನ ಮಾಡಿಸುತ್ತಾರೆ. ಸಗಣಿಯನ್ನು ಗೋಬರ್ ಗ್ಯಾಸ್ ಗೆ ಉಪಯೋಗಿಸುತ್ತಾರೆ. ಇದರಿಂದ ಮನೆಯ ದಿನ ನಿತ್ಯದ ಖರ್ಚಿಗೆ ಗ್ಯಾಸ್ ಸಾಕಾಗುತ್ತದೆ. ಸಗಣಿಯನ್ನು ಕೃಷಿ ಬೆಳೆಗಳಿಗೆ ಉಪಯೋಗಿಸುತ್ತಾರೆ. ಇದರಿಂದ ಕೃಷಿ ಇಳುವರಿಯು ಹೆಚ್ಚುತ್ತಿದೆ. ಜಾನುವಾರುಗಳಿಗೆ ಬೆಳಿಗ್ಗೆ ಹಿಂಡಿ ಕೊಡುತ್ತಾರೆ. ಸಂಜೆ ಹಿಂಡಿ ಮತ್ತು ಹುಲ್ಲು ಕೊಡುತ್ತಾರೆ. ದಿವಸದ 24 ಗಂಟೆಯು ಕುಡಿಯು ನೀರನ್ನು ಇಡಲಾಗುತ್ತದೆ. ಸಾಕುವ 2 ಕರುಗಳಿಗೆ ದಿವಸಕ್ಕೆ 2ಲೀಟರ್ ಹಾಲು ಕೊಡುತ್ತಾರೆ.

ತನ್ನ ಹೈನುಗಾರಿಕೆಗೆ ತಂದೆ ಕೆ.ಜಿ ಈಶ್ವರ್ ಭಟ್ ಮತ್ತು ತಾಯಿ ಸಾವಿತ್ರಿ,ಪತ್ನಿ ಸೌಮ್ಯ ಸಂಪೂರ್ಣ ಸಹಕಾರ ನೀಡುತ್ತಿದ್ದು ಇದರಿಂದ ತಾನು ಈ ವೃತ್ತಿಯಲ್ಲಿ ಯಶಸ್ವಿಯಾಗಿದ್ದೇನೆ ಎಂದು ಶ್ರೀನಿಧಿ ಹೇಳುತ್ತಾರೆ. ಜಾನುವಾರನ್ನು 3 ಕರು ಆದ ಬಳಿಕ ಮಾರಿದರೆ ಅದರಿಂದ ಲಾಭ ಇನ್ನೂ ಜಾಸ್ತಿ, ಇದರಲ್ಲಿ ಶ್ರಮಕಿಂತ ಹೆಚ್ಚಾಗಿ ಜಾನುವಾರುಗಳ ಬಗ್ಗೆ ಕಾಳಜಿ ಮುಖ್ಯ.ಅವುಗಳ ಆರೋಗ್ಯ ಕುರಿತು ನಿಗ ವಹಿಸಬೇಕು. ಹೈನುಗಾರಿಕೆಯಲ್ಲಿ ಲಾಭ ಇದೆ, ಆದರೆ ಸ್ವಲ್ಪ ತಾಳ್ಮೆ ಬೇಕು ಎಂದು ಹೇಳುತ್ತಾರೆ.