ಇಂದು ಹಳ್ಳಿ ಬಿಟ್ಟು ನಗರಕ್ಕೆ ವಲಸೆ ಬಂದ ಅನೇಕರನ್ನು ಪ್ರಶ್ನೆ ಮಾಡಿದಾಗ ಯಾವ ರೀತಿಯ ಉತ್ತರ ಬರಬಹುದು. ಸ್ವಾಮಿ ನಮ್ಮಲ್ಲಿ ಬೆಳೆ ಬೆಳೆಯೋಕೆ ನೀರಿಲ್ಲ. ಮತ್ತೆ ಹೇಗೆ ವ್ಯವಸಾಯ ಮಾಡೋದು? ನಮಗಿರೋದು ಅಲ್ಪ ಜಮೀನು . ಇಷ್ಟೊಂದು ಕಡಿಮೆ ಜಮೀನಿನಲ್ಲಿ ದುಡ್ಡು ಗಳಿಸೋಕೆ ಆಗುತ್ತಾ? ಕೈಯಲ್ಲಿ ದುಡ್ಡಿಲ್ಲ. ಇನ್ನು ಕೃಷಿ ಮಾಡೋಕೆ ಏನು ಮಾಡಲಿ? ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಕೃಷಿ ನಂಬಿ ಬಂಡವಾಳ ಹಾಕೋದು ಹೇಗೆ? ಎನ್ನುವ ನೂರಾರು ಪ್ರಶ್ನೆಗಳು ಸಹಜ. ಹಾಗಾದರೆ ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಮಾಡೋಕೆ ಸಾಧ್ಯನೇ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟಾಗ ಸಿಕ್ಕದ್ದು ಎನ್.ಆರ್.ಚಂದ್ರಶೇಖರ್ರವರ ಅಸಮಾನ್ಯ ಕೃಷಿತೋಟ. ಶ್ರೀಯುತರು, ಕೋಲಾರ ತಾಲೂಕಿನ ನೆನುಮನಹಳ್ಳಿಯ ರೈತ. ಕೋಲಾರ ಜಿಲ್ಲೆ ಎಲ್ಲರಿಗೂ ತಿಳಿದಂತೆ ನೀರಿನ ಅಭಾವಕ್ಕೆ ಒಳಗಾದ ಬಯಲುಸೀಮೆ ಜಿಲ್ಲೆಗಳಲ್ಲಿ ಒಂದು. 1000 ದಿಂದ 2000 ಅಡಿ ಆಳಕ್ಕೆ ಕೊಳವೆಬಾವಿ (ಬೋರ್ವೆಲ್) ಕೊರೆದರೂ ನೀರು ಸಿಗುವ ಸಂಭವ ತೀರಾ ಕಡಿಮೆ. ಬಹುಶಃ ಇಲ್ಲ ಎನ್ನಬಹುದು. ಈ ಪ್ರಮಾಣದ ನೀರಿನ ಸಮಸ್ಯೆ ಇದ್ದರೂ ನೀರು ಸಿಗಬಹುದೆಂಬ ಆಶಾಭಾವನೆಯೊಂದೊಗೆ ಅನೇಕ ರೈತರು ಇಂದಿಗೂ ಬೋರ್ವೆಲ್ ಕೊರೆಸುತ್ತಲೇ ಇದ್ದಾರೆ. ಶ್ರಮವಹಿಸಿ ದುಡಿದ ಹಣವೆಲ್ಲಾ ಬೋರ್ವೆಲ್ ಖರ್ಚಿಗೆ ವ್ಯಯಿಸುವಂತಾಗಿದೆ. ಕೃಷಿಕ ಎನ್.ಆರ್.ಚಂದ್ರಶೇಖರ್ರವರೂ ಸಹ 2007ರವರೆಗೂ ಬೋರ್ವೆಲ್ಗಳಿಂದ ದೊರೆಯುವ ನೀರಿನ ಮೇಲೆಯೇ ಆಧಾರವಾಗಿ ಕೃಷಿ ಮಾಡುತ್ತಿದ್ದರು. ಕಾಲಕ್ರಮೇಣ ಕೊಳವೆಬಾವಿಗಳೆಲ್ಲಾ ಬತ್ತಿ ಹೋದವು. ನೀರಿನ ಪೂರೈಕೆ ಇಲ್ಲದೆ ಬೆಳೆಗಳೆಲ್ಲಾ ಒಣಗಿದವು. ಮುಂದೆ ಕೃಷಿ ನಡೆಸಲು ಸಾಧ್ಯವಿಲ್ಲ ಎಂಬುವ ಸ್ಥಿತಿ ಏರ್ಪಟ್ಟಿತು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ದೃತಿಗೆಡದೆ ಪ್ರಕೃತಿಯ ವಿಕೋಪಕ್ಕೆ ಎದೆಯೊಡ್ಡಿ ಕೃಷಿ ನಡೆಸಲು ಮುಂದಾದರು. ನೀರಿನ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಬೇಕು ಎಂಬ ಛಲ ತೊಟ್ಟರು. 2010ರಲ್ಲಿ ತಮ್ಮ ಜಮೀನಿನಲ್ಲಿ ಪ್ರಾಯೋಗಿಕವಾಗಿ 1ಎಕರೆ ಪ್ರದೇಶವನ್ನು ಮಳೆಯಾಧಾರಿತ ಕೃಷಿ ವಿಧಾನ ಅಳವಡಿಸಲು ಮುಂದಾದರು. `ಪ್ರಕೃತಿಗೆ ವಿರುದ್ಧವಾದದ್ದು ಶಾಶ್ವತ ಅಲ್ಲ. ಪ್ರಕೃತಿಯೊಂದಿಗೆ ಬೆರೆತು ಕೃಷಿ ನಡೆಸುವುದೇ ಶಾಶ್ವತ ವಿಧಾನ’ ಎಂಬ ಸೂತ್ರವನ್ನು ಮನಗಂಡರು. ಇದಕ್ಕಾಗಿ ಮೊಟ್ಟಮೊದಲಿಗೆ ಮಳೆ ನೀರನ್ನು ಜಮೀನಿನಲ್ಲಿ ಹಿಡಿದಿಟ್ಟುಕೊಳ್ಳಲು ಅಗತ್ಯ ತಯಾರಿ ನಡೆಸಿದರು. 1 ಎಕರೆ ಪ್ರದೇಶದಲ್ಲಿ 50\70\12 ಅಡಿ ಸುತ್ತಳತೆಯ ಕೃಷಿ ಹೊಂಡ ತೆಗೆಸಿದರು. ಜಮೀನಿನಲ್ಲಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಿದರು. ಇಳಿಜಾರಿಗೆ ಅಡ್ಡಲಾಗಿ ಪ್ರತಿ 10 ಅಡಿಗೊಂದರಂತೆ ಟ್ರಂಚ್ಗಳನ್ನು ತೆಗೆದರು. ಇದರಿಂದ ಜಮೀನಿನಲ್ಲಿ ಬಿದ್ದ ಪ್ರತಿ ಮಳೆ ಹನಿಯೂ ಜಮೀನಿನಿಂದ ಹೊರ ಹೋಗದಂತಾಯಿತು. ಮಳೆ ನೀರು ಮಣ್ಣಿನಲ್ಲಿ ಇಂಗುವಂತಾಯಿತು. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗ ನೀರು ಕೃಷಿ ಹೊಂಡ ತುಂಬಿಕೊಳ್ಳುವಂತಾಯಿತು. ಇಷ್ಟೆಲ್ಲಾ ಆದ ಕೂಡಲೇ ಮಣ್ಣಿನ ಫಲವತ್ತತೆ ಉತ್ತಮ ಪಡಿಸುವ ಆಲೋಚನೆ ಮಾಡಿದರು. ಜಮೀನಿನಲ್ಲಿ ಹುರುಳಿ, ಡಯಾಂಚಾ ಮತ್ತಿತರೆ ಹಸಿರಲೆ ಗೊಬ್ಬರದ ಬೆಳೆಗಳನ್ನು ಬಿತ್ತಿದರು. ಬೆಳೆದ ಹಸಿರೆಲೆ ಗಿಡಗಳನ್ನು ಮಣ್ಣಿನಲ್ಲಿ ಬೆರೆಸಿದರು. ರಾಸಾಯನಿಕ ಗೊಬ್ಬರಗಳ ಬದಲಾಗಿ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಬಳಸಿದರು. ಜಮೀನಿನ ಸುತ್ತಲೂ ಹಾಗೂ ಬದುಗಳಲ್ಲಿ ಗ್ಲಿರಿಸಿಡಿಯಾ ಗಿಡಗಳನ್ನು ಬೆಳೆಸಿ ಅದರ ಸೊಪ್ಪನ್ನು ಸಹ ಮಣ್ಣಿಗೆ ಸೇರಿಸುತ್ತಾ ಬಂದರು. ಕ್ರಮೇಣ ಮಣ್ಣಿನ ಫಲವತ್ತತೆ ಉತ್ತಮಗೊಳ್ಳತೊಡಗಿತು. 2012ರ ಹೊತ್ತಿಗೆ ಈ ಜಮೀನು ಸಂಪೂರ್ಣ ಫಲವತ್ತತೆಯಿಂದ ಕೃಷಿಗೆ ಯೋಗ್ಯ ಜಮೀನಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಮಳೆಯಾಶ್ರಿತ ತೋಟಗಾರಿಕಾ ಬೆಳೆಗಳ ಬೇಸಾಯಕ್ಕೆ ಮುಂದಾದರು. ಸಮಗ್ರ ಕೃಷಿ ಪದ್ದತಿಗಳನ್ನು ಅನುಸರಿಸಿ ನಿರಂತರ ಆದಾಯ ಪಡೆಯುವ ಯೋಜನೆ ರೂಪಿಸಿದರು.
ಒಂದು ಎಕರೆ ಪ್ರದೇಶದಲ್ಲಿ 10ಗುಂಟೆ ಜಾಗದಲ್ಲಿ ರೇಷ್ಮೆ ಹುಳು ಸಾಕಣೆಗೆ ಮನೆ, ಕೃಷಿ ಹೊಂಡ, ಹಾಗೂ ಒಕ್ಕಣೆ ಕಣ ಮಾಡಿಕೊಂಡಿದ್ದಾರೆ. ಉಳಿದ 30 ಗುಂಟೆ ಪ್ರದೇಶದಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆಸಿದ್ದಾರೆ. ಅತಿ ಸಾಂದ್ರತೆ ವಿಧಾನದಲ್ಲಿ ಮಾವು, ನುಗ್ಗೆ, ಪಪ್ಪಾಯಿ, ಹಿಪ್ಪುನೇರಳೆ, ತೊಗರಿ, ಬಾಳೆ, ಅಲಸಂದಿ, ಅವರೆ,.. ಹೀಗೆ ಬಹುಬೆಳೆ ಪದ್ದತಿಯಲ್ಲಿ ಹಲವು ಬೆಳೆಗಳನ್ನು ಬೆಳೆಸಿದ್ದಾರೆ. ತಮ್ಮ ಜಮೀನು ಕೃಷಿಗೆ ಯೋಗ್ಯವಾದ ಕೂಡಲೆ 30 ಗುಂಟೆ ಪ್ರದೇಶದಲ್ಲಿ 500 ಪಪ್ಪಾಯಿ ಗಿಡಗಳನ್ನು ಅತಿ ಸಾಂದ್ರೆತೆ ವಿಧಾನದಲ್ಲಿ ಬೆಳೆಸಿದ್ದಾರೆ. ಇದರೊಂದಿಗೆ ಅಂತರ ಬೆಳೆಗಳಾಗಿ ನುಗ್ಗೆ, ಮಾವು, ಹಿಪ್ಪುನೇರಳೆ, ಬಾಳೆ, ತೊಗರಿ, ಜೊತೆಗೆ ಉಳಿಕೆ ಖಾಲಿ ಜಾಗದಲ್ಲಿ ಅಲಸಂದೆ, ಸೋಯಾ ಅವರೆ ಹಾಗೂ ಮನೆ ಅಡುಗೆಗೆ ಅಗತ್ಯ ತರಕಾರಿ ಬೆಳೆಗಳನ್ನು ಸಹ ಬೆಳೆಯಲಾರಂಭಿಸಿದರು. ನಾಟಿ ಮಾಡಿದ ಒಂದೂವರೆ ವರ್ಷದಲ್ಲಿ ಪಪ್ಪಾಯಿ ಬೆಳೆಯಿಂದ ಹೆಚ್ಚಿನ ಲಾಭ ಪಡೆದುಕೊಂಡಿದ್ದಾರೆ.
ಪಪಾಯಿ ಬೆಳೆಯ ಆರ್ಥಿಕತೆ:
ಗಿಡಗಳ ಸಂಖ್ಯೆ : 500
ಇಳುವರಿ ಪ್ರತಿ ಗಿಡಕ್ಕೆ 70-80 ಕೆ.ಜಿ.
ಬೆಲೆ: ಕೆ.ಜಿ.ಗೆ 8ರೂ.
ಪ್ರತಿ ಗಿಡಕ್ಕೆ ಆದಾಯ : 560 ರೂ
ಪಪಾಯದಿಂದ ಒಟ್ಟು ಆದಾಯ: 2,80,000 ರೂಪಾಯಿ
ಪಪಾಯಿ ಬೆಳೆ ಮುಗಿಯುತ್ತಿದ್ದಂತೆ ಇದೇ ಜಮೀನಿನಲ್ಲಿ ಇನ್ನಿತರೆ ಬೆಳೆಗಳ ಬೇಸಾಯಕ್ಕೆ ಮುಂದಾದರು. ಕಳೆದ ವರ್ಷ ಬೆಳೆದ ಬೆಳೆ ವೈವಿದ್ಯತೆಯನ್ನು ಗಮನಿಸೋಣ. 300 ಮಾವು, 300 ನುಗ್ಗೆ, 1750 ಹಿಪ್ಪುನೇರಳೆ ಗಿಡ, 20 ಬಾಳೆಗಿಡ, 1500 ತೊಗರಿ ಗಿಡಗಳು 30 ಗುಂಟೆ ಪ್ರದೇಶದಲ್ಲಿದ್ದವು. ಜೊತೆಗೆ ಬಾಳೆ, ತೊಗರಿ, ಅಲಸಂದೆ, ಸೋಯಾ ಅವರೆ, ಹಾಗೂ ಮನೆ ಅಡುಗೆಗೆ ಅಗತ್ಯ ತರಕಾರಿ ಬೆಳೆಗಳನ್ನು ಸಹ ಪಡೆಯುತ್ತಿದ್ದಾರೆ.
ನುಗ್ಗೆ ಬೆಳೆಯ ಆರ್ಥಿಕತೆ:
ಗಿಡಗಳ ಸಂಖ್ಯೆ : 300
ಇಳುವರಿ ಪ್ರತಿ ಗಿಡಕ್ಕೆ : 300ಕಾಯಿಗಳು
ಬೆಲೆ: 2ರೂ. ಪ್ರತಿ ಕಾಯಿಗೆ
ಪ್ರತಿ ಗಿಡಕ್ಕೆ ಆದಾಯ : 600ರೂ
ನುಗ್ಗೆಯಿಂದ ಒಟ್ಟು ಆದಾಯ: 1,80,000 ರೂಪಾಯಿ
ಮಾವು ಬೆಳೆಯ ಆರ್ಥಿಕತೆ:
ಗಿಡಗಳ ಸಂಖ್ಯೆ : 300
ಇಳುವರಿ ಪ್ರತಿ ಗಿಡಕ್ಕೆ : 7 ಕೆ.ಜಿ
ಬೆಲೆ: 50 ರೂ. ಪ್ರತಿ ಕೆ,ಜಿ.ಗೆ ( ಸಾವಯವ ಮಾವನ್ನು ನೇರ ಮಾರಾಟ ಮಾಡಿದ್ದರಿಂದ ಹೆಚ್ಚು ಬೆಲೆ ದೊರೆತಿದೆ.)
ಪ್ರತಿ ಗಿಡಕ್ಕೆ ಆದಾಯ : 350ರೂ
ಮಾವಿನಿಂದ ಒಟ್ಟು ಆದಾಯ: 1,05,000 ರೂಪಾಯಿ
ರೇಷ್ಮೆ ಕೃಷಿಯಿಂದ ಆರ್ಥಿಕತೆ:
ಹಿಪ್ಪುನೇರಳೆ ಗಿಡಗಳ ಸಂಖ್ಯೆ : 1750
ಸೊಪ್ಪಿನ ಇಳುವರಿ: 100 ಮೊಟ್ಟೆ ಹುಳು ಸಾಕಣೆಗೆ
ವರ್ಷಕ್ಕೆ ರೇಷ್ಮೆ ಹುಳುಗಳ ಬ್ಯಾಚ್ : 6ಬ್ಯಾಚ್ಗಳು
ಪ್ರತಿ ಬ್ಯಾಚ್ನಿಂದ ಗೂಡಿನ ಇಳುವರಿ : 90ಕೆ.ಜಿ.
ಪ್ರತಿ ಕೆ.ಜಿ. ಗೂಡಿನ ಬೆಲೆ: 300ರೂ.
ಪ್ರತಿ ಬ್ಯಾಚ್ನಿಂದ ಆದಾಯ : 27,000ರೂಪಾಯಿ
ರೇಷ್ಮೆ ಕೃಷಿಯಿಂದ ವಾರ್ಷಿಕ ಒಟ್ಟು ಆದಾಯ: 1,62,000 ರೂಪಾಯಿ
ತೊಗರಿ ಬೆಳೆಯ ಆರ್ಥಿಕತೆ:
ಗಿಡಗಳ ಸಂಖ್ಯೆ : 1500
ಪ್ರತಿ ಗಿಡಕ್ಕೆ ಇಳುವರಿ: 1ಕೆ.ಜಿ.
ಒಟ್ಟು ಇಳುವರಿ – 1500ಕೆ.ಜಿ
ಬೆಲೆ : ಪ್ರತಿ ಕೆ.ಜಿ.ಗೆ 40ರೂ. (ಅತಿ ಬೇಗನೆ ಮಾರುಕಟ್ಟೆಗೆ ಬರುವಂತೆ ನಾಟಿ ಮಾಡುವುದರಿಂದ ಹೆಚ್ಚು ಬೆಲೆ ಲಭ್ಯ.)
ಒಟ್ಟು ಆದಾಯ : 60,000 ರೂಪಾಯಿ
30ಗುಂಟೆ ಪ್ರದೇಶದಲ್ಲಿ ಒಟ್ಟು ಆದಾಯ (ರೂಪಾಯಿ)
ನುಗ್ಗೆ 1,80,000
ಮಾವು 1,05,000
ರೇಷ್ಮೆ 1,62,000
ತೊಗರಿ 60,000
ಒಟ್ಟು 5,07,000 ರೂಪಾಯಿಗಳು
ಒಟ್ಟು ಆದಾಯದ ಚಿತ್ರಣವನ್ನು ನೋಡಿದರೆ ನಂಬಲಸಾಧ್ಯ. ಆದರೂ ಇದು ಸತ್ಯ. ವಿವಿಧ ಬೆಳೆಗಳನ್ನು ಹಲವು ಹಂತಗಳಲ್ಲಿ ಮಾರುಕಟ್ಟೆ ಆಧಾರಿತವಾಗಿ ಬೆಳೆದಾಗ ಖಂಡಿತವಾಗಿಯೂ ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂಬುದನ್ನು ಚಂದ್ರಶೇಖರ್ ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ. ಅದು ನೀರಿನ ಸೌಲಭ್ಯವಿಲ್ಲದೆ, ಮಳೆಯಾಶ್ರಯದ ನೀರಿನಲ್ಲಿ ಇಷ್ಟೆಲ್ಲಾ ಬೆಳೆಗಳನ್ನು ಪಡೆಯಬಹುದೇ ಎಂಬ ಕುತೂಹಲ ಎಲ್ಲರಿಗೂ ಕಾಡುವುದು ಸಹಜ. ಈ ಕುತೂಹಲದಿಂದಲೇ ಸಾವಿರಾರು ರೈತರು, ಅಧಿಕಾರಿಗಳು ಈ ಜಮೀನಿಗೆ ಭೇಟಿ ನೀಡಿ ಚಂದ್ರಶೇಖರ್ರವರ ಒಣಬೇಸಾಯದ ಗುಟ್ಟನ್ನು ತಿಳಿದುಕೊಳ್ಳುತ್ತಿದ್ದಾರೆ. ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿಯವರಿಗೆ ಚಂದ್ರಶೇಖರ್ರ ಜಮೀನೆಂದರೆ ಅಚ್ಚು ಮೆಚ್ಚಿನ ತಾಣವಾಗಿತ್ತು. ಅನೇಕ ಬಾರಿ ಇಲ್ಲಿಗೆ ಭೇಟಿ ನೀಡಿ ಒಣ ಬೇಸಾಯದ ವಿಧಾನಗಳನ್ನು ವೀಕ್ಷಿಸಿ ಪ್ರೋತ್ಸಾಹ ನೀಡುತ್ತಿದ್ದರು.
ರಾಜ್ಯ, ದೇಶ, ವಿದೇಶಗಳ ಅನೇಕರು ಚಂದ್ರಶೇಖರ್ರವರ ಜಮೀನಿಗೆ ಭೇಟಿ ನೀಡಿ ಅಳವಡಿಸಿಕೊಂಡಿರುವ ಕೃಷಿ ಮಾದರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಸಾಧನೆಗೆ ಸಂದ ಪ್ರಶಸ್ತಿ - ಗೌರವಗಳು ಹಲವು. ಜಿಲ್ಲಾ ಅತ್ಯುತ್ತಮ ಕೃಷಿಕ ಪ್ರಶಸ್ತಿಯಿಂದ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯವರೆಗೆ ಹಲವು ಪ್ರಶಸ್ತಿಗಳನ್ನು ಪಡೆದು ಕೋಲಾರ ಜಿಲ್ಲೆಗೆ ಗೌರವ ತಂದಿದ್ದಾರೆ. ಇವರ ಯಶಸ್ಸಿನ ಗುಟ್ಟನ್ನು ರಾಜ್ಯದ ಎಲ್ಲಾ ರೈತರು ಅಳವಡಿಸಿಕೊಂಡಿದ್ದೇ ಆದಲ್ಲಿ ರೈತರು ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಬೆಳೆ ವೈವಿಧ್ಯತೆ, ಬಹುಬೆಳೆ ಪದ್ದತಿ, ಶೂನ್ಯ ಬಂಡವಾಳ ವಿಧಾನ, ಅಧಿಕ ಸಾಂದ್ರತೆ ಬೇಸಾಯ, ಮಳೆ ನೀರು ಸಂಗ್ರಹಣೇ, ಮಣ್ಣಿನ ಸಂರಕ್ಷಣೆ ಹಾಗೂ ಪ್ರಕೃತಿಗೆಗೆ ಹೊಂದಾಣಿಕೆಯಾಗಿ ಕೃಷಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂಬ ಸಲಹೆ ನೀಡುತ್ತಾರೆ ಕೃಷಿಕ ಚಂದ್ರಶೇಖರ್. ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಆಯಾ ಪ್ರದೇಶಕ್ಕೆ ಸೂಕ್ತ ಕಾಲಕ್ಕೆ ಅಗತ್ಯ ಬೆಳೆಗಳನ್ನು ಬೆಳೆಯುವುದು. ಸಾಧ್ಯವಾದಷ್ಟೂ ಸ್ವಂತ ಮಾರಾಟ ವ್ಯವಸ್ಥೆ ಅಳವಡಿಸಿಕೊಂಡಲ್ಲಿ ಆರ್ಥಿಕವಾಗಿ ಅಭಿವೃದ್ಧಿಗೆ ಸಹಕಾರಿ. ಕಡಿಮೆ ಜಮೀನು ಹೊಂದಿದ್ದರೂ ಹೆಚ್ಚಿನ ಲಾಭ ಪಡೆಯಬಹುದು ಎನ್ನುತ್ತಾರೆ. ಹೆಚ್ಚಿನ ವಿವರಗಳಿಗೆ ಚಂದ್ರಶೇಖರ್ ಅವರನ್ನು ಈ ದೂರವಾಣಿ ಸಂಕ್ಯೆಯಲ್ಲಿ ಸಂಪರ್ಕಿಸಬಹುದು. ( 9448342803 )