ತುಂಡು ಭೂಮಿಯಲ್ಲಿ ಹಿಂಡು ಬೆಳೆ ಎಂದರೆ ನೆನಪಾಗುವುದು ಬನವಾಸಿಯ ಹನುಮಂತಪ್ಪ ಮಡ್ಲೂರು. ಹಿಂಡು ಹಿಂಡಾಗಿ ತರಾವರಿ ಬೆಳೆಗಳನ್ನು ಸಣ್ಣ ಭೂಮಿಯಲ್ಲಿ ಬೆಳೆದ ಮಾತ್ರಕ್ಕೆ ಇವರು ಪ್ರಸಿದ್ಧಿಯಾದುದಲ್ಲ. ನೀರಾವರಿ ಸೌಕರ್ಯಗಳಿಲ್ಲದೇ ಮಳೆಯಾಶ್ರಿತವಾಗಿ 70ಕ್ಕೂ ಅಧಿಕ ಬೆಳೆ ವೈವಿಧ್ಯತೆ ತಮ್ಮ ಹೊಲದಲ್ಲಿರುವಂತೆ ನೋಡಿಕೊಂಡಿದ್ದರಿಂದ 'ಹಿಂಡು ಬೆಳೆಯ ಹನುಮಂತಪ್ಪ' ಎನ್ನುವ ಹೆಸರು ದಕ್ಕಿದ್ದು.ಹನುಮಂತಪ್ಪ ಬನವಾಸಿಯ ಕಪಗೇರಿ ಗ್ರಾಮದವರು.
70 ಬಗೆಯ ಬೆಳೆಗಳು: ಹನುಮಂತಪ್ಪರ ಹೊಲದಲ್ಲೀಗ ಪ್ರತಿ ವರ್ಷ ಎಪ್ಪತ್ತಕ್ಕೂ ಅಧಿಕ ಬೆಳೆಗಳಿರುತ್ತವೆ. ಮಳೆಯಾಶ್ರಿತ ಕೃಷಿ. ಅಂತರ್ ಬೇಸಾಯಕ್ಕೆ ಒತ್ತು ನೀಡುತ್ತಾರೆ. ತುಂಡು ಭೂಮಿಯಲ್ಲಿ ಹಿಂಡು ಬೆಳೆ ಬೆಳೆಯುವ ಪ್ರಕ್ರಿಯೆಯಲ್ಲಿ ನಿರತರಾಗುತ್ತಾರೆ. ಜೂನ್ ಮೊದಲ ವಾರ ಅಥವಾ ಎರಡನೆಯ ವಾರ ಭೂಮಿ ಸಿದ್ಧತೆ ಆರಂಭಿಸುತ್ತಾರೆ. ಮೊದಲ ಮಳೆ ಬಿದ್ದು ಭೂಮಿ ಹದಗೊಂಡರೆ ಸಾಕು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸುತ್ತಾರೆ. ದೊಡ್ಡ ನೇಗಿಲು, ರೋಟರ್ ಯಾವುದು ಸೂಕ್ತವೋ ಅದರ ಬಳಕೆ. ಹದಗೊಂಡ ಭೂಮಿಯಲ್ಲಿ ಬೀಜ ಬಿತ್ತನೆಗೆ ತಯಾರಾಗುತ್ತಾರೆ.
ಕಾಲೆಕರೆಯಲ್ಲಿ ಊಟದ ಜೋಳ ಬಿತ್ತನೆ. ಬೀಜ ಬಿತ್ತುವಾಗ ಸಾಸಿವೆ, ಹರಿವೆ, ಉದ್ದು ಬೀಜಗಳನ್ನು ಜೊತೆಗೆ ಸೇರಿಸುತ್ತಾರೆ.ಸಾಲಿನ ನಡುವೆ ಒಂದೂವರೆ ಅಡಿ ಅಂತರದಲ್ಲಿ ಬೀಜದ ಮಿಶ್ರಣ ಬಿತ್ತನೆ. ಬಿತ್ತನೆಗಾಗಿ ಸಾಲು ತೆಗೆಯಲು ಕುಂಟಾಣಿ ಬಳಸುತ್ತಾರೆ. ಹಗ್ಗದ ಸಹಾಯದಿಂದ ಅಳತೆ ತಪ್ಪದಂತೆ ನೋಡಿಕೊಳ್ಳುತ್ತಾರೆ. ಹುಡಿಯಾದ ತಿಪ್ಪೆ ಗೊಬ್ಬರವನ್ನು ಬೀಜ ಬಿತ್ತುವಾಗಲೇ ಸಾಲಿನಲ್ಲಿ ಸೇರಿಸುತ್ತಾರೆ. ಸಡಿಲವಾದ ಗೆರೆ ಸಾಲಿನಲ್ಲಿ ಬಿತ್ತಿದ ಬೇರೆ ಬೇರೆ ಬೀಜಗಳು ಮಣ್ಣಿನೊಳಗೆ ನೀರಿನ ತೇವ ದೊರೆಯುತ್ತಿದ್ದಂತೆ ಮೊಳಕೆಯೊಡೆದು ಬೆಳೆಯಲು ತೊಡಗುತ್ತದೆ.
ಇಪ್ಪತ್ತು ದಿನಕ್ಕೆ ಹರಿವೆ ಕೀಳಲು ಸಿಗುತ್ತದೆ. ಮೂವತ್ತು ದಿನದೊಳಗೆ ಹರಿವೆ ಸೊಪ್ಪಿನ ಕಟಾವು ಮುಗಿಯುತ್ತದೆ.ಅರವತ್ತು ದಿನಕ್ಕೆ ಸಾಸಿವೆ ಕಟಾವಿಗೆ ಸಿದ್ಧಗೊಳ್ಳುತ್ತದೆ.ಜೊತೆ ಜೊತೆಗೆ ಉದ್ದು ಕಟಾವಾಗುತ್ತದೆ. ಮೂರು ತಿಂಗಳಿಗೆ ಜೋಳ ಕಟಾವಿಗೆ ಸಿಗುತ್ತದೆ. ಹೀಗೆ ಕಾಲೆಕರೆಯಲ್ಲಿನ ಬೆಳೆ ವೈವಿಧ್ಯತೆ ಕಡಿಮೆ ಸ್ಥಳದಲ್ಲಿ ಹೆಚ್ಚಿನ ಗಳಿಕೆಗೆ ನೆರವಾಗುತ್ತದೆ.
ಇನ್ನೊಂದು ಕಾಲೆಕರೆಯಲ್ಲಿ ಬೆಂಡೆ ಕೃಷಿ. ಬೆಂಡೆಯೊಂದಿಗೆ ಮೂಲಂಗಿ ಬೆಳೆಯುತ್ತಾರೆ.ಬೀಜ ಬಿತ್ತುವಾಗಲೇ ಎರಡೂ ಬೀಜಗಳು ಒಟ್ಟಿಗೆ ಮಣ್ಣಿನೊಳಗೆ ಸೇರುತ್ತದೆ. ಇಪ್ಪತ್ತು ದಿನಕ್ಕೆ ಕಟಾವಿಗೆ ಆರಂಭವಾಗುವ ಮೂಲಂಗಿ ಮೂವತ್ತು ದಿನದ ಒಳಗೆ ಸಂಪೂರ್ಣ ಕಟಾವಾಗಿರುತ್ತದೆ. ಈ ವೇಳೆಗೆ ಹೂವು ಅರಳಿಸಿಕೊಂಡಿರುವ ಬೆಂಡೆ ಗಿಡಗಳು ನಲವತ್ತೈದು ದಿನಕ್ಕೆ ಬೆಂಡೆ ಕಾಯಿಗಳನ್ನು ಕಟಾವಿಗೆ ಒದಗಿಸುತ್ತದೆ. ವಾರಕ್ಕೆ ಮೂರು ಬಾರಿ ಕಟಾವು ಮಾಡುತ್ತಾರೆ.
ಕಾಲೆಕರೆ ಮುಳ್ಳು ಸೌತೆ: ಮುಳ್ಳು ಸೌತೆ ಕಾಲೆಕರೆಗೆ ಮೀಸಲು. ಸಾಲಿನಿಂದ ಸಾಲಿಗೆ ಎಂಟು ಅಡಿ. ಗಿಡದಿಂದ ಗಿಡ ಎರಡು ಅಡಿ ಅಂತರ ಕಾಯ್ದುಕೊಳ್ಳುತ್ತಾರೆ. ಪ್ರತಿ ಗುಣಿಗೆ ಎರಡು ಬೀಜ ಬಿತ್ತನೆ. ಎರಡು ಸಾಲಿನ ಮಧ್ಯೆ ಮೂಲಂಗಿ ಬೆಳೆಸುತ್ತಾರೆ. ಸೌತೆ ಬಳ್ಳಿ ನೆಲದಲ್ಲಿ ಹಬ್ಬಿ ಮಧ್ಯದಲ್ಲಿರುವ ಮೂಲಂಗಿ ಗಿಡಗಳನ್ನು ಸಮೀಪಿಸುವ ವೇಳೆ ಮೂಲಂಗಿ ಕಟಾವಾಗಿರುತ್ತದೆ.ಮೂವತ್ತೈದು ದಿನಕ್ಕೆ ಸೌತೆ ಕಟಾವಿಗೆ ಲಭ್ಯ. ಎರಡು ತಿಂಗಳು ಕಾಯಿ ಕೊಯ್ಯಬಹುದು. 2-3 ದಿನಕ್ಕೆ ಒಮ್ಮೆ ಕೊಯ್ಲು ಮಾಡುತ್ತಾರೆ. ಮುಳ್ಳು ಸೌತೆಯ ಎಳೆ ಕಾಯಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ. ಹಾಗಾಗಿ ಎಳೆ ಕಾಯಿಗಳನ್ನೇ ಮಾರಾಟ ಮಾಡುತ್ತಾರೆ.
ಮುಳ್ಳು ಸೌತೆ ಬೆಳೆದ ಕಾಲೆಕರೆಯ ಸುತ್ತಲೂ ಬೆಳೆ ಇರುವಂತೆ ನೋಡಿಕೊಳ್ಳುತ್ತಾರೆ. ಒಂದು ಪಾಶ್ರ್ವದಲ್ಲಿ ಹೀರೆ ಬೆಳೆಯುತ್ತಾರೆ. ಇನ್ನೊಂದು ಪಕ್ಕದಲ್ಲಿ ಡಬಲ್ ಬೀನ್ಸ್ ಹಚ್ಚುತ್ತಾರೆ. ಕಾಲೆಕರೆಯ ಪರೀದಿಯೊಳಗೆ ಬರುವ ಇವುಗಳಲ್ಲಿ ಹೀರೆ ಎರಡು ತಿಂಗಳಿಗೆ ಕಟಾವಿಗೆ ಸಿಗುತ್ತದೆ.ಅದೇ ಸಮಯ ಡಬಲ್ ಬೀನ್ಸ್ ಕೂಡ ಕೊಯ್ಲಿಗೆ ಸಿಗುತ್ತದೆ.
ಟೊಮೆಟೋಗೆ ಪ್ರತ್ಯೇಕ ಸ್ಥಳ: ನಾಲ್ಕು ಗುಂಟೆಯಲ್ಲಿ ಟೊಮೆಟೋ ಕೃಷಿ. ಈ ಸ್ಥಳದಲ್ಲಿ ಬೇರೆ ಬೆಳೆಗೆ ಅವಕಾಶವಿಲ್ಲ. ಗಿಡ ಎರಡು ಮೂರು ಅಡಿ ಬೆಳೆಯುವುದರಿಂದ ಬುಡದಲ್ಲಿ ನೆರಳು ಜಾಸ್ತಿ. ಹೀಗಾಗಿ ಇತರೇ ಗಿಡಗಳನ್ನು ಊರಿದರೆ ಯಾವ ಬೆಳೆಯಿಂದಲೂ ಇಳುವರಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಒಂದೇ ಬೆಳೆಯ ಜಾಣ ನಡೆ ಅನುಸರಿಸುತ್ತಾರೆ .ಟೊಮೆಟೋ ಬೀಜಗಳನ್ನು ಸಸಿ ಮಡಿಯಲ್ಲಿ ಬಿತ್ತುತ್ತಾರೆ. ಇಪ್ಪತ್ತೈದು ದಿನದ ಟೊಮೆಟೊ ಸಸಿಗಳನ್ನು ಗಿಡದಿಂದ ಗಿಡ ಸಾಲಿನಿಂದ ಸಾಲಿಗೆ ಎರಡುವರೆ ಅಡಿ ಅಂತರದಲ್ಲಿ ನಾಟಿ ಮಾಡುತ್ತಾರೆ. ಒಂದುವರೆ ತಿಂಗಳಿಗೆ ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ವಾರದಲ್ಲಿ 2-3 ಕೊಯ್ಲು ಮಾಡುತ್ತಾರೆ. ಪ್ರತಿ ಕೊಯ್ಲಿನಲ್ಲಿ 30-50 ಕಿಲೋ ಗ್ರಾಂ ಟೊಮೆಟೋ ಸಿಗುತ್ತದೆ.
ತಲಾ ನಾಲ್ಕು ಗುಂಟೆ ಬದನೆ, ಶೇಂಗಾ : ಮಡಿ ತಯಾರಿಸಿ ಬದನೆ ಸಸಿ ತಯಾರಿಸಿಕೊಳ್ಳುತ್ತಾರೆ.ಇಪ್ಪತ್ತೈದು ದಿನದ ಸಸಿ ನಾಟಿಗೆ ಬಳಸುತ್ತಾರೆ. ಅರವತ್ತು ದಿನಕ್ಕೆ ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ವಾರದಲ್ಲಿ ಮೂರು ಸಲ ಕೊಯ್ಲು ಮಾಡುತ್ತಾರೆ. ಪ್ರತಿ ಕೊಯ್ಲಿನಲ್ಲಿ 25-30 ಕಿಲೋಗ್ರಾಂ ಇಳುವರಿ ಸಿಗುತ್ತದೆ. ಕೆಲ ಬಾರಿ ಒಂದು ವರ್ಷದ ವರೆಗೆ ಬದನೆ ಗಿಡ ಉಳಿಸಿಕೊಂಡು ಇಳುವರಿ ಪಡೆದದ್ದೂ ಇದೆ ನೆನಪಿಸಿಕೊಳ್ಳುತ್ತಾರೆ. ಶೇಂಗಾ ಕೃಷಿಗೆಂದು ನಾಲ್ಕು ಗುಂಟೆ ಮೀಸಲಿಡುತ್ತಾರೆ. ಇದರೊಂದಿಗೆ ಹರಿವೆ ಹಾಗೂ ಸಾಸಿವೆ ಬಿತ್ತುತ್ತಾರೆ. ಮೊದಲಿಗೆ ಕಟಾವಿಗೆ ಬರುವುದು ಹರಿವೆ. ಮೂವತ್ತು ದಿನದೊಳಗೆ ಹರಿವೆ ಸೊಪ್ಪಿನ ಕೊಯ್ಲು ಮುಗಿದಿರುತ್ತದೆ. ಅರವತ್ತು ದಿನಕ್ಕೆ ಸಾಸಿವೆ ಕೊಯ್ಲು, ಮೂರು ತಿಂಗಳಿನಲ್ಲಿ ಶೇಂಗಾ ಕೊಯ್ಲಿಗೆ ಸಿದ್ಧಗೊಂಡಿರುತ್ತದೆ. ನಾಲ್ಕು ಗುಂಟೆಯಲ್ಲಿ 2-3 ಕ್ವಿಂಟಾಲ್ ಶೇಂಗಾ ಇಳುವರಿ ಸಿಗುತ್ತದೆ. ಬೆಳೆದ ಶೇಂಗಾವನ್ನು ಬೀಜಕ್ಕಾಗಿ ಮಾರಾಟ ಮಾಡುತ್ತಾರೆ. ಸುತ್ತಲಿನ ರೈತರು ಇವರ ಹೊಲದಲ್ಲಿನ ಶೇಂಗಾವನ್ನೇ ಬಿತ್ತನೆಗಾಗಿ ಖರೀದಿಸಿ ಒಯ್ಯುತ್ತಾರೆ. ಬೀಜದ ಶೇಂಗಾ ಕಿಲೋಗ್ರಾಂ ಒಂದಕ್ಕೆ ಅರವತ್ತು ರೂಪಾಯಿ ದರ.
ಅರ್ಧ ಎಕರೆ ಹತ್ತಿ: ಹತ್ತಿ ಬೆಳೆಗೆ ಅರ್ಧ ಎಕರೆ ಮೀಸಲು. ಅಂತರ್ ಬೇಸಾಯವಾಗಿ ಚಳಿ ಅವರೆ, ಸಿಡಿ ಅವರೆ, ಔಡಲ, ಕೆಕ್ಕಳಕೆ ಹಣ್ಣು(ಇಬ್ಬಳ ಹಣ್ಣು), ಬಡೆಸೊಪ್ಪು ಬೀಜಗಳನ್ನು ಬಿತ್ತುತ್ತಾರೆ. ಅಲ್ಲಲ್ಲಿ ಶೇಂಗಾ ಹಾಕುವುದೂ ಇದೆ. ನಾಲ್ಕನೆಯ ತಿಂಗಳಿನಲ್ಲಿ ಹತ್ತಿ ಕೊಯ್ಲಿಗೆ ಸಿಗುತ್ತದೆ. ಚಳಿ ಅವರೆ ಐದು ತಿಂಗಳ ನಂತರ ಕಟಾವು. ಸಿಡಿ ಅವರೆ ನಾಲ್ಕು ತಿಂಗಳಿನಲ್ಲಿ ಕಟಾವು ಮುಗಿದಿರುತ್ತದೆ. ಔಡಲ ಕೊಯ್ಲು ಮಾಡಲು ಐದು ತಿಂಗಳು ಕಳೆದಿರಬೇಕು. ಇಬ್ಬಳಗಿ ಹಣ್ಣು ಎರಡು ತಿಂಗಳಿನಲ್ಲಿಯೇ ಕಟಾವಿಗೆ ಸಿಕ್ಕಿರುತ್ತದೆ. ವರ್ಷಕ್ಕೆ 500-600 ಇಬ್ಬಳಗಿ ಹಣ್ಣು ಸಿಗುತ್ತದೆ. ಪ್ರತಿ ಹಣ್ಣಿಗೆ 60-80 ರೂಪಾಯಿ ದರ ಸಿಗುತ್ತದೆ. ಹತ್ತಿ ಮಧ್ಯೆ ಕಲ್ಲಂಗಡಿ ಹಾಕುವುದೂ ಇದೆ. ಮಾರುಕಟ್ಟೆಯಲ್ಲಿ ಉತ್ತಮ ದರ ಲಭ್ಯವಾಗಬಹುದು ಎನ್ನಿಸಿದರೆ ಬಿತ್ತನೆ ಮಾಡುತ್ತಾರೆ.ಇದರಿಂದ 100-150 ಕಾಯಿ ಇಳುವರಿ ಸಿಗುತ್ತದೆ.
ಒಂದು ಎಕರೆ ಮೆಕ್ಕೆ ಜೋಳ: ಒಂದು ಎಕರೆಯಲ್ಲಿ ಮೆಕ್ಕೆ ಜೋಳ ಕೃಷಿ ಮಾಡುತ್ತಾರೆ. ಅಂತರ ಬೇಸಾಯವಾಗಿ ಚೆನ್ನಿಗುಂಬಳ, ಮುಳ್ಳುಸೌತೆ, ಜವಾರಿ ಮುಳ್ಳುಸೌತೆ ಬಿತ್ತುತ್ತಾರೆ. ಮೊದಲಿಗೆ ಕಟಾವಿಗೆ ಸಿಗುವುದು ಜೋಳ. ಮೂರುವರೆ ತಿಂಗಳಿಗೆ ಕಟಾವಾಗಿರುತ್ತದೆ. ಜೋಳದ ಕಟಾವು ಮುಗಿಸುತ್ತಿದ್ದಂತೆ ಚಿನ್ನಿಗುಂಬಳ, ಸೌತೆ ಕೊಯ್ಲಿಗೆ ತಯಾರಿರುತ್ತದೆ. ಈ ಬಾರಿಯ ಮುಂಗಾರಿನಲ್ಲಿ(2018) ಮೆಕ್ಕೆಜೋಳ 43 ಕ್ವಿಂಟಾಲ ಇಳುವರಿ ಬಂದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಎಕರೆ ಪ್ರದೇಶದಲ್ಲಿ ಬಿತ್ತನೆಗೆ ಬಳಸಿದ ಬೀಜ ಏಳು ಕೇಜಿ ಮಾತ್ರ. ಸೂರ್ಯ ಕಾಂತಿಯನ್ನು ಎರಡು ಗುಂಟೆ ಸ್ಥಳದಲ್ಲಿ ಬೆಳೆಯುತ್ತಾರೆ.ಈ ಬೆಳೆಯ ಮದ್ಯೆ ಉದ್ದು ಬಿತ್ತುತ್ತಾರೆ.ಎರಡು ಗುಂಟೆಯಲ್ಲಿ ಬಿತ್ತಿದ ಇವೆರಡೂ ಮೂರು ತಿಂಗಳಲ್ಲಿ ಕಟಾವಿಗೆ ಸಿಗುತ್ತದೆ.
ಹೂವಿನ ಕೃಷಿ: ಬಹು ಬೆಳೆಯ ಹನುಮಂತಪ್ಪ ಈಗ ಹಿಂಡು ಬೆಳೆಯಲ್ಲಿ ಪ್ರಸಿದ್ಧಿ ಪಡೆದ ವಿಷಯದ ಮಾಹಿತಿ ರಾಜ್ಯ ಪೂರ್ತಿ ಪಸರಿಸಿದೆ. ಹಾಗಾಗಿ ಕುತೂಹಲದಿಂದ ಕೃಷಿ ತಂತ್ರ ಅರಿಯಲು ನೂರಾರು ರೈತರು ಇವರ ಹೊಲವನ್ನು ಸಂದರ್ಶನ ಮಾಡುತ್ತಾರೆ. ಕೃಷಿ ತಾಕು ಅಧ್ಯಯನಕ್ಕೆ ಅನುಕೂಲವಾಗಲೆಂದು ಹೊಲದ ಮಧ್ಯೆ ಒಂದುವರೆ ಅಡಿ ಅಗಲದ ಕಾಲು ದಾರಿ ಮಾಡಿದ್ದಾರೆ. ಈ ದಾರಿಯ ಇಕ್ಕೆಲಗಳಲ್ಲಿ ಹೂ ಗಿಡಗಳನ್ನು ಬೆಳೆದಿದ್ದಾರೆ. 280 ಬಗೆಯ ಡೇರೆ ಹೂವಿನ ಗಿಡಗಳು ಇವರಲ್ಲಿದೆ.ಮೂವತ್ತು ಬಣ್ಣದ ಹೂವುಗಳು ಕಾಲು ದಾರಿಯ ಇಕ್ಕೆಲಗಳಲ್ಲಿ ಅರಳಿ ನಿಲ್ಲುತ್ತವೆ. ಗುಲಾಬಿ ಹೂವಿನಲ್ಲಿಯೇ ಹತ್ತು ಬಗೆಯ ತಳಿ ವೈವಿಧ್ಯತೆ ಇವರಲ್ಲಿದೆ.ಅರ್ಧ ಗುಂಟೆಯಲ್ಲಿ ಸುಗಂಧರಾಜ ಕೃಷಿಯಿದೆ.
ಹೂವು ಗಿಡಗಳನ್ನು ನಾಟಿ ಮಾಡುವಲ್ಲಿ ಹನುಮಂತಪ್ಪರ ಬುದ್ದಿವಂತಿಕೆಯಿದೆ. ಶ್ರಾವಣ ತಿಂಗಳಿನಲ್ಲಿ ಕೊಯ್ಲಿಗೆ ಸಿಗುವಂತೆ, ಗಣೇಶ ಚತುರ್ಥಿಯಲ್ಲಿ ಹೂವು ಸಿಗುವಂತೆ, ದಸರಾ ವೇಳೆಗೆ ಗಿಡದಲ್ಲಿ ಹೂವು ನೆರೆತಿರುವಂತೆ ನೋಡಿಕೊಳ್ಳುತ್ತಾರೆ. ಈ ಅವಧಿಯಲ್ಲಿ ದರ ಜಾಸ್ತಿ ಸಿಗುವುದರಿಂದ ಈ ಚಾಣಾಕ್ಷತೆ! ಈ ಬಾರಿ ಕಾಲು ದಾರಿಯ ಬದುವಲ್ಲಿ ನೆಟ್ಟಿದ್ದ ಹೂವಿನ ಗಿಡಗಳಿಂದ ಇವರು ಪಡೆದ ಆದಾಯ 22 ಸಾವಿರ ರೂಪಾಯಿಗಳು.
ಹೈನುಗಾರಿಕೆ: ಹೈನುಗಾರಿಕೆಯಲ್ಲಿಯೂ ಇವರಿಗೆ ಅಪರಿಮಿತ ಆಸಕ್ತಿ. ಬಾಲ್ಯದಲ್ಲಿ ಇನ್ನೊಬ್ಬರ ಮನೆಯಲ್ಲಿ ದನ ಕಾಯುವ ಕೆಲಸಕ್ಕಿದ್ದಾಗ ತಾನೂ ಸ್ವಂತವಾಗಿ ಆಕಳನ್ನು ಸಾಕಬೇಕು ಎನ್ನುವ ಕನಸು ಕಂಡಿದ್ದರು.ಈಗ ಆ ಕನಸು ಈಡೇರಿದೆ.ಮೂರು ಗಿರ್ ತಳಿಯ ಆಕಳನ್ನು ಹೊಂದಿದ್ದಾರೆ.ಆಕಳು ದೂರದ ಗುಜರಾತ್‌ನಿಂದ ಇವರ ಮನೆ ತಲುಪಿದರ ಹಿಂದೆ ಚಿಕ್ಕದಾದ ಕತೆಯೊಂದಿದೆ. ತುಂಡುಭೂಮಿಯಲ್ಲಿ ಬಹುಬೆಳೆ ಬೆಳೆದ ಹನುಮಂತಪ್ಪರ ಬಗ್ಗೆ ತಿಳಿದ ತುಮಕೂರಿನ ಸ್ವದೇಶಿ ಮಂದಿರದ ಪ್ರಬಂಧಕರಾದ ಉಮಾ ಮಂಜುನಾಥ್ ಅವರು ಕುತೂಹಲದಿಂದ ಹನುಮಂತಪ್ಪರ ಮನೆ ತಲುಪಿದ್ದರು. ಇವರ ಕೃಷಿ ಚಟುವಟಿಕೆಗೆ ಬೆರಗಾದ ಅವರು ಎರಡು ದಿನ ಕೃಷಿ ಅಧ್ಯಯನ ಮಾಡುತ್ತಾ ಇವರ ಮನೆಯಲ್ಲಿಯೇ ತಂಗಿದ್ದರು.ಹನುಮಂತಪ್ಪರಿಂದ ಪ್ರೀತಿಯ ಆತಿಥ್ಯ ಪಡೆದ ಇವರು ಊರಿಗೆ ಮರುಪ್ರಯಾಣ ಮಾಡುತ್ತಿದ್ದಂತೆಯೇ ಮೂರು ಗಿರ್ ತಳಿಯ ಆಕಳನ್ನು ಲಾರಿಯಲ್ಲಿ ತುಂಬಿಸಿ ಕಳುಹಿಸಿದ್ದರು! ಕೃಷಿಯಲ್ಲಿ ಸೋಲದಿರುವ ನಿರ್ಧಾರ ತಳೆಯುವವರು ತಾವು ಬೆಳೆದ ಬೆಳೆಯನ್ನು ಸಂತೆಯಲ್ಲಿ ಕುಳಿತು ಮಾರಲು ನಾಚಲೇ ಬಾರದು ಎನ್ನುವ ದೃಢ ನುಡಿ ಇವರದು. ಕೃಷಿಯಿಂದ ಹಸನಾದ ಬದುಕು ರೂಪಿಸಿಕೊಂಡ ಹನುಮಂತಪ್ಪರ ಕೃಷಿ ಅನುಭವ ತೆರೆದ ಪುಸ್ತಕದಂತೆ. ಮುಚ್ಚು ಮರೆಯಿಲ್ಲದೇ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.ಇತರರೂ ತಮ್ಮಂತೆ ಕೃಷಿ ಪದ್ದತಿ ಅನುಸರಿಸಬೇಕೆಂದು ಬಯಸುತ್ತಾರೆ.
ವರ್ಷಕ್ಕೊಮ್ಮೆ ಉಳುಮೆ: ಹಲವು ಬೆಳೆಗಳ ಸರದಾರ ಹನುಮಂತಪ್ಪ ಭೂಮಿಯನ್ನು ಯಂತ್ರದ ಮೂಲಕ ಉಳುಮೆ ಮಾಡುವುದು ಒಂದು ಬಾರಿ ಮಾತ್ರ. ಮುಂಗಾರಿನ ಮೊದಲ ಮಳೆ ಹನಿಸಿ ಭೂಮಿ ತೇವಗೊಳ್ಳುತ್ತಿದ್ದಂತೆ ಟ್ರಾಕ್ಟರ್ ಮೂಲಕ ಮೂರು ಎಕರೆಯನ್ನು ಉಳುಮೆ ಮಾಡಿಸಿ ಬಿಡುತ್ತಾ ಬಿಳಿ ಜೋಳ ಕೃಷಿಯನ್ನು ಐದು ಗುಂಟೆಯಲ್ಲಿ ಮಾಡುತ್ತಾರೆ. ಅಂತರ್ ಬೇಸಾಯವಾಗಿ ತೊಗರಿ ಬಿತ್ತುತ್ತಾರೆ. ನಾಲ್ಕು ಸಾಲಿಗೆ ಒಂದರಂತೆ ತೊಗರಿ ಸಾಲು ಇರುವಂತೆ ನೋಡಿಕೊಳ್ಳುತ್ತಾರೆ. ಜೋಳದ ಹೊಲದ ಸುತ್ತಲೂ ಹುಚ್ಚೆಳ್ಳು, ಕರಿ ಎಳ್ಳು, ಬಿಳಿ ಎಳ್ಳು, ಕೆಂಪೆಳ್ಳು, ಅಂಗಿಕಸೆ, ಮೀಟರ್ ಅಲಸಂದೆ, ಹಾಗಲ, ಚೌಳಿ, ಅಲಸಂದೆ ಬಿತ್ತನೆ ಮಾಡುತ್ತಾರೆ.ಉಳಿದಂತೆ ಬಟಾಣಿ, ಸೋಯಾಬಿನ್, ಉದ್ದು, ಹೆಸರು, ಶುಂಠಿ, ಅರಿಶಿನ, ಅಂಬೆಕೊಂಬು, ಆಲೂಗಡ್ಡೆ, ಕಡ್ಡಿ ಮೆಣಸು, ಬ್ಯಾಡಿಗೆ ದಪ್ಪ ಮೆಣಸು, ದೊಣ್ಣೆ ಮೆಣಸು, ನೀರುಳ್ಳಿ, ಬೆಳ್ಳುಳ್ಳಿ ಮುಂತಾದವುಗಳನ್ನು ಬೆಳೆಯುತ್ತಾರೆ. ನಾಲ್ಕು ಗುಂಟೆಯಲ್ಲಿ ಭತ್ತ ಕೃಷಿ. ಹದಿನೈದು ಗುಂಟೆಯಲ್ಲಿ ರಾಗಿ ಕೃಷಿ ಮಾಡುತ್ತಾರೆ. ಊದಲು, ಹಾರಕ ,ಕೊರಲೆ, ಸಾಮೆ, ಬರಗು ಮುಂತಾದ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ.
ವರ್ತಕರೂ ಇವರೇ : ಸಾಮಾನ್ಯವಾಗಿ ರೈತರು ಬೆಳೆದ ಫಸಲಿಗೆ ವರ್ತಕರು ಬೆಲೆ ಕಟ್ಟುತ್ತಾರೆ. ಬೆವರು ಸುರಿಸಿ ದುಡಿದ, ನಿದ್ದೆಗೆಟ್ಟು ಕಾಯ್ದುಕೊಂಡ ಕೃಷಿ ಫಸಲು ವ್ಯಾಪಾರಿ ಕೇಳುವ ಕನಿಷ್ಠ ಕಾಸಿಗೆ ಮಾರಾಟ ಮಾಡುವ ಸಂದಿಗ್ಧತೆಗೆ ಅನಿವಾರ್ಯವಾಗಿ ರೈತರು ಒಳಗಾಗುವುದಿದೆ. ಪರಿಣಾಮ ಸಾಗುವಳಿಗೆ ಮಾಡಿದ ಖರ್ಚು, ದುಡಿದ ಶ್ರಮ ಲೆಕ್ಕ ಹಾಕಿದರೆ ಬಂದ ಆದಾಯ ಲಾಭದಾಯಕ ಎನ್ನಿಸುವುದಿಲ್ಲ. ಆದರೆ ಹನುಮಂತಪ್ಪ ತಮ್ಮ ಹೊಲದಲ್ಲಿ ಬೆಳೆದ ಬೆಳೆಗೆ ತಾವೇ ಬೆಲೆ ಕಟ್ಟುತ್ತಾರೆ. ಬೆಳೆದ ತರಕಾರಿಗಳು, ಧಾನ್ಯಗಳು, ಹೂವುಗಳು ಹೀಗೆ ಏನೇ ಬೆಳೆದಿದ್ದರೂ ಅವುಗಳನ್ನು ತಾವೇ ಸ್ವತಃ ಮಾರಾಟ ಮಾಡುತ್ತಾರೆ.ಸುತ್ತಮುತ್ತಲು ನಡೆಯುವ ಸಂತೆಗಳಲ್ಲಿ ವಿಕ್ರಯಿಸುತ್ತಾರೆ. ಮಂಗಳವಾರ ನಡೆಯುವ ಸೊರಬ ಸಂತೆ, ಬುಧವಾರ ನಡೆಯುವ ಬನವಾಸಿ ಸಂತೆ, ಭಾನುವಾರ ನಡೆಯುವ ದಾಸನಕೊಪ್ಪ ಸಂತೆಯಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ವಾರಕ್ಕೊಮ್ಮೆ ನಡೆಯುವ ಈ ಸಂತೆಯಲ್ಲಿ ವ್ಯಾಪಾರಕ್ಕಾಗಿ ಹನುಮಂತಪ್ಪ ಕುಳಿತುಕೊಳ್ಳುವ ಸ್ಥಳ ಗ್ರಾಹಕರಿಗೆ ಪರಿಚಿತ. ಸಂತೆಯಲ್ಲಿ ಕುಳಿತು ಮಾರಾಟ ಮಾಡುವ ಕ್ರಿಯೆಗೆ ಪತ್ನಿ ಸಹಕರಿಸುತ್ತಾರೆ. ಳುವುದು ಕೈಯಿಂದಲೇ ಆಗಬೇಕೆನ್ನುವ ಹಠವನ್ನು ಕೃಷಿ ಆರಂಭಿಸಿದ ಮೊದಲಿನಿಂದಲೇ ಸಾಧಿಸಿಕೊಂಡು ಬಂದಿದ್ದಾರೆ.
ತುಂಡು ಭೂಮಿಯಲ್ಲಿ ಹಿಂಡು ಕೃಷಿ
21 February, 2019 9:28 PM IST