Agripedia

World Environment Day: "ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣ ನಮ್ಮೆಲರ ಹೊಣೆ"

05 June, 2023 5:36 PM IST By: Kalmesh T
ಲೇಖಕರು : ಡಾ. ಸೌಜನ್ಯ, ಎಸ್., ಡಾ. ಲತಾ ಆರ್.ಕುಲಕರ್ಣಿ, ಡಾ. ದೀನೇಶ, ಎಂ.ಎಸ್., ಶ್ರೀಮತಿ. ಪ್ರೀತು, ಡಿ.ಸಿ. ಮತ್ತು ಶ್ರೀಮತಿ. ಶಾಂತ ಬಾಲಗೊಂಡ

World Environment Day 2023: ವೇಗದ ಜೀವನಶೈಲಿಯಲ್ಲಿ ಮಾನವರ ಬದುಕು ಯಾಂತ್ರಿಕರಣವಾಗುವುದರ ಜೊತೆಗೆ ಅವರ ಮನಸ್ಸು ಕೂಡ ಯಂತ್ರವಾದಂತಿದೆ. ಮೊನ್ನೆಯಷ್ಟೆ ನೋಡಿದ ಕಾಡು, ಕೃಷಿ ಭೂಮಿ ಇಂದು ಲೇಜೌಟ್‌ಗಳಾಗಿ ಬದಲಾಗಿದೆ. ನಗರೀಕರಣ, ಜಾಗತೀಕರಣ, ಅಭಿವೃದ್ಧಿಯ ಹೆಸರಿನಲ್ಲಿ ತನಗೆ ದೊರೆತ ಅತ್ಯಮೂಲ್ಯ ಸಂಪತ್ತಾದ “ಪರಿಸರ”ವನ್ನೇ ಮಾನವ ಮರೆತಂತಿದೆ. ಪ್ರತಿ ದಿನ ಅದೆಷ್ಟೋ ಮರಗಳು ನೆಲ್ಕಕುರುಳುತ್ತಿದೆ, ತೈಲ ಸೋರಿಕೆ, ಆಮ್ಲ ಮಳೆ ಮತ್ತು ನಗರ ಹರಿವುಗಳು ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ, ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ವಿವಿಧ ಅನಿಲಗಳು, ಇಂಧನಗಳ ದಹನವು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಉಂಟುಮಾಡುತ್ತಿದೆ.

ಹಾಗೇ ಮಣ್ಣಿನ ಮಾಲಿನ್ಯವು ಕೈಗಾರಿಕಾ ತ್ಯಾಜ್ಯದಿಂದ ಉಂಟಾಗಿ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತಿದೆ. ಇದೆಲ್ಲದರ ಜೊತೆಗೆ ನಮ್ಮ ಕಾಲದ ಅತಿದೊಡ್ಡ ಪರಿಸರ ಸಮಸ್ಯೆಯೆಂದರೆ “ಪ್ಲಾಸ್ಟಿಕ್”. ಹೀಗೆ ಹತ್ತು ಹಲವಾರು ಸಮಸ್ಯೆಗಳ ನಡುವೆ ತನ್ನ ಹಾಗೂ ಪ್ರಕೃತಿಯ ಅವನತಿಯತ್ತ ಸಾಗುತ್ತಿರುವ ಮಾನವ ಮತ್ತು ಪರಿಸರವನ್ನು ಕಾಪಾಡುವ ಉದ್ದೇಶದಿಂದ ವಿಶ್ವಸಂಸ್ಥೆಯು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು 1972ರಲ್ಲಿ ಮುಂದಿಟ್ಟಿತು

ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಹಾಗೂ ಪರಿಸರ ಕಾಳಜಿಯ ವಿವಿಧ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಪ್ರಪಂಚದಾದ್ಯಂತ ಪ್ರತಿ ವರ್ಷ ವಿಶ್ವಸಂಸ್ಥೆಯ ಮಾರ್ಗದರ್ಶನದಲ್ಲಿ ಜೂನ್ 5 ರಂದು ವಿವಿಧ ದೇಶಗಳು ಪ್ರತ್ಯೇಕ ಧ್ಯೇಯೋಧ್ಯೇಶದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತದೆ. ಈ ನಿಟ್ಟಿನಲ್ಲಿ ಸದಸ್ಯ ರಾಷ್ಟ್ರಗಳಿಗೆ ಮಾರ್ಗಸೂಚನೆ ಹಾಗೂ ಸಲಹೆಗಳನ್ನು ನೀಡುತ್ತದೆ. ಮೊದಲ ವಿಶ್ವ ಪರಿಸರ ದಿನವನ್ನು ಜೂನ್ 5, 1974ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ದೇಶ ಆಚರಿಸಿತ್ತು. ಭಾರತವು 2011 ಮತ್ತು 2018ರಲ್ಲಿ ಎರಡು ಭಾರಿ ವಿಶ್ವ ಪರಿಸರ ದಿನದ ಆತಿಥ್ಯವನ್ನು ವಹಿಸಿಕೊಂಡಿದೆ.

ಈ ವರ್ಷ ಪರಿಸರ ದಿನಾಚರಣೆಯ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವಿಕೆ ಮತ್ತು ಮಾಲಿನ್ಯಕ್ಕೆ ಸೂಕ್ತ ಪರಿಹಾರ ಕೈಗೊಳ್ಳುವುದರ ಮೇಲೆ 2023ರ ಧ್ಯೇಯವನ್ನು ಕೇಂದ್ರಿಕರಿಸಲಾಗಿದ್ದು, ನೆದರ್ಲ್ಯಾಂಡ್ಸ್ ಸಹಭಾಗಿತ್ವದಲ್ಲಿ ಕೋಟ್ ಡಿ ಐವೊಯಿರ್ ರಾಷ್ಟ್ರ ಪ್ಲಾಸ್ಟಿಕ್ ವಿರುದ್ಧದ ಅಭಿಯಾನದ ನಾಯಕತ್ವವನ್ನು ಹೊಂದಿದ್ದು, 2014ರಿಂದಲೇ ಇದು ಪ್ಲಾಸ್ಟಿಕ್ ಚೀಲಗಳ ಬಳಕೆ ನಿಷೇಧಿಸಿ, ಮರುಬಳಕೆ ಮಾಡಬಹುದಾದ ಪ್ಯಾಕೇಜಿಂಗ್ ವಸ್ತುಗಳನ್ನು ಬೆಂಬಲಿಸುತ್ತಾ ಬಂದಿದೆ.

ಪ್ಲಾಸ್ಟಿಕ್ ಇಂದು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ, ಕಡಿಮೆ ದರದಲ್ಲಿ ದೊರೆಯುವುದರಿಂದ ಮಾನವ ಪ್ಲಾಸ್ಟಿಕ್ ವಸ್ತುವಿನ ಮೇಲೆ ಹೆಚ್ಚು ಅವಲಂಬಿತನಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶಕ್ಕೆ ಈ ಪ್ಲಾಸ್ಟಿಕ್ ತ್ಯಾಜ್ಯ ಬಹುದೊಡ್ಡ ಸವಾಲಾಗಿದೆ. ಕೇವಲ ಪರಿಸರ ಮಾಲಿನ್ಯ ಅಷ್ಟೇ ಅಲ್ಲದೆ ಮನುಷ್ಯ, ಪ್ರಾಣಿಗಳು, ಸಸ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪ್ಲಾಸ್ಟಿಕ್‌ಗಳಲ್ಲಿ ಬಿಸೆನಾಲ್ ಎ (ಬಿಪಿಎ), ಆಂಟಿಮಿನಿಟ್ರಾಕ್ಸೆಡ್, ಪಾಲಿ-ಫ್ಲೋರಿನೇಟೆಡ್, ಥಾಲೇಟ್‌ಗಳು, ಸೀಸದಂತಹ ಅನೇಕ ರಾಸಾಯನಿಕ ಮತ್ತು ಅಪಾಯಕಾರಿ ಪದಾರ್ಥಗಳಿದ್ದು ಅವು ಪರಿಸರಕ್ಕೆ ಹಾನಿ ಉಂಟು ಮಾಡುವ ಅಂಶಗಳಾಗಿವೆ. ಅಮೇರಿಕದ ಪರಿಸರ ಸಂರಕ್ಷಣಾ ಸಂಸ್ಥೆ 1986ರಲ್ಲಿ ತೀರಾ ಅಪಾಯಕಾರಿ ತ್ಯಾಜ್ಯವನ್ನು ತಯಾರಿಸುವ ಇಪ್ಪತ್ತು ರಾಸಾಯನಿಕಗಳ ಪಟ್ಟಿಯೊಂದನ್ನು ತಯಾರಿಸಿತ್ತು, ಅದರಲ್ಲಿ ಮೊದಲ ಐದು ರಾಸಾಯಿನಿಕಗಳು ಪ್ಲಾಸ್ಟಿಕ್ ಕಾರ್ಖಾನೆಗಳಲ್ಲಿ ಉಪಯೋಗ ಮಾಡುವಂತದ್ದಾಗಿದ್ದು ಇದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ.

ಪ್ಲಾಸ್ಟಿಕ್ ಬಳಕೆಯಿಂದ ಅನುಕೂಲಕ್ಕಿಂತ ಅನಾನೂಕೂಲತೆಯೇ ಹೆಚ್ಚಾಗಿದ್ದು, ಪ್ರತಿ ವರ್ಷ 400 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಉತ್ಪಾದಿಸಲಾಗುತ್ತಿದ್ದು ಅದರಲ್ಲಿ ಅರ್ಧದಷ್ಟು ಒಮ್ಮೆ ಮಾತ್ರ ಬಳಸಲು ಯೋಗ್ಯವಾಗಿದ್ದು, ಅಂದಾಜು 19-23 ಟನ್‌ಗಳಷ್ಟು ಸರೋವರಗಳು, ನದಿಗಳು ಮತ್ತು ಸಮುದ್ರಗಳಲ್ಲಿ ಕೊನೆಗೊಳ್ಳುತ್ತಿದೆ. ಜನರು ಪ್ಲಾಸ್ಟಿಕ್ ಬಳಸಿ ಎಲ್ಲೆಂದರಲ್ಲಿ ಎಸೆಯುತ್ತಾರೆ ಇದು ಅಸ್ವಚತೆಯ ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಿದೆ.

ಪ್ಲಾಸ್ಟಿಕ್ ನೂರು ವರ್ಷ ಕಳೆದರೂ ಮಣ್ಣಿನಲ್ಲಿ ಕೊಳೆಯುವುದಿಲ್ಲ, ಹರಿಯುವ ಚರಂಡಿಗೆ ಹಾಕುವುದರಿಂದ ಜಲ ಮಾಲಿನ್ಯ ಉಂಟಾಗುತ್ತದೆ, ಪ್ಲಾಸ್ಟಿಕ್ ತಟ್ಟೆ- ಲೋಟಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ ಇದರಿಂದ ಮಲೇರಿಯಾ, ಫೈಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾದಂಥ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ, ಪ್ಲಾಸ್ಟಿಕ್ ಸುಟ್ಟರೆ ಮುದ್ದೆಯಾಗುತ್ತದೆ ವಿನಃ ನಾಶವಾಗುವುದಿಲ್ಲ ಮತ್ತು ವಿಷಾನಿಲ ವಾತಾವರಣ ಸೇರುತ್ತವೆ, ಇದು ವಾಯುಮಾಲಿನ್ಯಕ್ಕೆ ಕಾರಣವಾಗಿ ಮನುಷ್ಯನ ದೇಹ ಸೇರಿ ಉಸಿರಾಟದ ತೊಂದರೆಗಳು ಕಂಡುಬರುತ್ತದೆ.

ಸಾಮಾನ್ಯವಾಗಿ ಪ್ಲಾಸ್ಟಿಕ್‌ಗಳು ಯಾವ ವಸ್ತುವಿನೊಂದಿಗೂ ವರ್ತಿಸುವುದಿಲ್ಲ, ಆದರೆ ಧೀರ್ಘಕಾಲದ ಸಂಪರ್ಕದಿAದ ರಾಸಾಯನಿಕ ಪ್ರಕ್ರಿಯೆಯಾಗಿ ವಿಷವಾಗಿ ಪರಿವರ್ತನೆಗೊಂಡು ಅನೇಕ ರೀತಿಯ ರೋಗಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಪ್ರಮುಖವಾಗಿ ಪ್ಲಾಸ್ಟಿಕ್‌ಗಳಲ್ಲಿ ಬಳಸುವ ರಾಸಾಯನಿಕದಿಂದ ವಿವಿಧ ಬಗೆಯ ಕ್ಯಾನ್ಸರ್ ರೋಗ, ನರರೋಗ, ಮೆದುಳು ಮತ್ತು ಕಣ್ಣುಗಳಿಗೆ ಹಾನಿ, ಚರ್ಮರೋಗ, ಮಕ್ಕಳ ಎಲುಬುಗಳು ವಿರೂಪ, ಬೆಳವಣಿಗೆ ಕುಂಟಿತ, ಉಸಿರಾಟದ ತೊಂದರೆ, ತಲೆನೋವು, ಆಯಾಸ, ಬಂಜೆತನÀ ಮತ್ತು ಹಾರ್ಮೋನುಗಳ ಬದಾಲಾವಣೆ ಉಂಟುಮಾಡಬಲ್ಲದು.

ಇನ್ನೂ ಪ್ರಾಣಿ- ಪಕ್ಷಿಗಳಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ಆಹಾರವನ್ನು ನೀಡುವುದರಿಂದ, ಅದನ್ನು ನುಂಗಿ ಪ್ರಾಣವನ್ನು ಕಳೆದುಕೊಳ್ಳುತ್ತವೆ. ಒಟ್ಟಾರೆ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದ ಪರಿಸರಕ್ಕೆ, ಪ್ರಾಣಿಗಳಿಗೆ, ಮಾನವರಿಗೆ ಎಲ್ಲರಿಗೂ ಅಪಾರವಾದ ಹಾನಿಯುಂಟು ಮಾಡುತ್ತಿದೆ. ನಮಗೆ ತಿಳಿದೋ ತಿಳಿಯದೇನೋ ನಮ್ಮ ಪಾತ್ರ ಹೆಚ್ಚಾಗಿದ್ದು ಇನ್ನಾದರೂ ಎಚ್ಚೆತ್ತು ಪ್ಲಾಸ್ಟಿಕ್‌ನ ದುರ್ಭಳಕೆ ಮಾಡದೇ, ಕಡಿಮೆ ಬಳಕೆ, ಮರುಬಳಕೆ ಹಾಗೂ ದೊರೆಯುವ ಇತರೆ ಪರ್ಯಾಯ ವಸ್ತುಗಳನ್ನ ಬಳಸಿ ಪರಿಸರದ ಕಾಳಜಿ ವಹಿಸೋಣ.

ಇನ್ನು ಮುಖ್ಯವಾಗಿ ಕೃಷಿಯಲ್ಲಿ ರೈತರು ಪ್ಲಾಸ್ಟಿಕ್‌ನ್ನು ಹೊದಿಕೆಯಾಗಿ ಬಳಸುತ್ತಿದ್ದು, ವಿವಿಧ ಪ್ಲಾಸ್ಟಿಕ್ ಪೇಪರ್‌ಗÀಳನ್ನು ಬಳಕೆಯ ನಂತರ ಕೆಲವು ರೈತರು ಅದನ್ನು ತೆಗೆಯಲು ಕಷ್ಟ ಎಂದು ರೋಟರಿ ಹೊಡೆದು ಮಣ್ಣಿಗೆ ಸೇರಿಸುತ್ತಿದ್ದಾರೆ. ಈಗಾಗಲೇ ತಿಳಿಸಿದ ಹಾಗೆ ಪ್ಲಾಸ್ಟಿಕ್ ಸೂಕ್ಷಾಣು ಜೀವಿಗಳಿಂದ ವಿಕಟಿಸಲಾದ ವಸ್ತುವಾಗಿದೆ ಮತ್ತು ಮಣ್ಣಿಗೆ ಸೇರುವುದರಿಂದ ಮಣ್ಣಿನ ರಚನೆ, ನೀರು ಇಂಗುವಿಕೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತಿದೆ. ಆದುದರಿಂದ ಯಾವುದೇ ಕಾರಣಕ್ಕೂ ಕೃಷಿಯಲ್ಲಿ ಬಳಸುವ ವಿವಿಧ ಪ್ಲಾಸ್ಟಿಕ್ ಜೌಷಧಿ ಬಾಟೆಲ್‌ಗಳು, ಪ್ಲಾಸ್ಟಿಕ್ ಪೇಪರ್‌ಗಳನ್ನು ಮುತುವರ್ಜಿವಹಿಸಿ ಮಣ್ಣಿಗೆ ಮತ್ತು ಸುತ್ತಮುತ್ತಲಿನ ನೀರಿನ ಮೂಲಗಳಿಗೆ ಸೇರದಹಾಗೆ ನಿರ್ವಹಿಸುವುದು ಅವಶ್ಯಕವಾಗಿದೆ.

ಕೊನೆಯದಾಗಿ ಯಾವ ಬದಲಾವಣೆಯಾದರು ನಮ್ಮಿಂದಲೇ ಪ್ರಾರಂಭವಾಗಬೇಕು ಆಗಲೇ ನಿರೀಕ್ಷಿತ ಪ್ರತಿಫಲ ದೊರೆಯುತ್ತದೆ. ಮುಖ್ಯವಾಗಿ ಬಾಟಲ್ ನೀರಿನ ಖರೀದಿ ಕಡಿಮೆ ಮಾಡಿ ಮನೆಯಿಂದಲೇ ನೀರು ತೆಗೆದುಕೊಂಡು ಹೋಗೋಣ, ಸ್ಟೀಲ್ ಡಬ್ಬ ಮತ್ತು ಸ್ಟೀಲ್ ನೀರಿನ ಬಾಟಲ್ ಉಪಯೋಗಿಸೋಣ, ಪ್ಲಾಸ್ಟಿಕ್ ಕವರ್‌ಗಳ ಬದಲಾಗಿ ಸೆಣಬು, ಬಟ್ಟೆಯ ಚೀಲ ಮತ್ತು ಪರಿಸರ ಸ್ನೇಹಿ ವಸ್ತುಗಳನ್ನ ಬಳಸುವುದು, Pಇಖಿ ಬಾಟಲ್‌ಗಳನ್ನು ಮರುಉಪಯೋಗ ಮಾಡದಿರುವುದು, ಹಾಗೂ ಎಲ್ಲೆಂದರಲ್ಲೇ ತ್ಯಾಜ್ಯಗಳ ಎಸೆಯುವಿಕೆಯನ್ನು ತಡೆಗಟ್ಟುವುದು. ಹೀಗೆ ಚಿಕ್ಕ ಚಿಕ್ಕ ಬದಲಾವಣೆಗಳನ್ನ ನಮ್ಮಿಂದಲೇ ಪ್ರಾರಂಭಮಾಡಿ ಈ ವರ್ಷದ ಧ್ಯೇಯವಾದ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವಿಕೆಗೆ ಕೈ ಜೋಡಿಸೋಣ.

Authors : ಡಾ. ಸೌಜನ್ಯ, ಎಸ್., ಡಾ. ಲತಾ ಆರ್.ಕುಲಕರ್ಣಿ, ಡಾ. ದೀನೇಶ, ಎಂ.ಎಸ್., ಶ್ರೀಮತಿ. ಪ್ರೀತು, ಡಿ.ಸಿ. ಮತ್ತು ಶ್ರೀಮತಿ. ಶಾಂತ ಬಾಲಗೊಂಡ