Agripedia

ಸಾಂಬಾರು ಪದಾರ್ಥಗಳ ರಾಜ ಎಂದೇ ಹೆಸರಾದ ಕಾಳುಮೆಣಸಿನಲ್ಲಿ ವಿವಿಧ ಸಸ್ಯಾಭಿವೃದ್ಧಿ ವಿಧಾನಗಳು

18 December, 2020 5:10 PM IST By:

ಸಾಂಬಾರು ಪದಾರ್ಥಗಳ ರಾಜ ಎಂದೇ ಹೆಸರಾಗಿರುವ ಕಾಳುಮೆಣಸು ಉತ್ತಮ ಲಾಭದಾಯಕ ಬೆಳೆಯಾಗಿದೆ. ಕಾಳು ಮೆಣಸು ಬೆಳೆಗೆ ಕೇವಲ ಭಾರತದ ಮಾರುಕಟ್ಟೆಯಲ್ಲ, ವಿದೇಶಿ ಮಾರುಕಟ್ಟೆಗಳಲ್ಲಿಯೂ ಉತ್ತಮ ಬೇಡಿಕೆಯಿದೆ. ಅಷ್ಟೇ ಅಲ್ಲ ಔಷಧೀಯ ಗುಣವುಳ್ಳ ಈ ಪದಾರ್ಥ ಕಡಿಮೆ ಬಂಡವಾಳ ಹಾಕಿ ಹೆಚ್ಚಿನ ಲಾಭ ತಂದುಕೊಡುತ್ತದೆ.ಹವಾಮಾನಕ್ಕೆ ತಕ್ಕಂತೆ ಕಾಳಮೆಣಸು ಬಳ್ಳಿಯ ನಾಟಿ, ಅಭಿವೃದ್ಧಿ ಕಟಾವು ಮಾಡಿದರೆ ಉತ್ತಮ ಆದಾಯ ತಂದುಕೊಡುತ್ತದೆ.

ಹೌದು,  ಈ ಕರಿಮೆಣಸು (ಪೈಪರ್ ನಿಗ್ರಮ್ ) ಒಂದು ಬಹುವಾರ್ಷಿಕ ಹಬ್ಬುವ ಬಳ್ಳಿ. ಈ ಬೆಳೆಯನ್ನು ಇದರ ಕಾಳುಗಳಿಗೋಸ್ಕರ ಕೃಷಿ ಮಾಡುತ್ತಿದ್ದು, ಹದಮಾಡಿದ ಮೆಣಸಿನ ಕಾಳುಗಳನ್ನು ಪ್ರಮುಖವಾಗಿ ಸಾಂಬಾರು ಪದಾರ್ಥವಾಗಿ ಬಳಸುವುದಲ್ಲದೆ, ಔಷಧಿಗಳ ತಯಾರಿಕೆಯಲ್ಲೂ ಹೆಚ್ಚಿನ ಮಹತ್ವ ಪಡೆದಿದೆ.

ಭಾರತ ಕರಿಮೆಣಸಿನ ಉತ್ಪಾದನೆ, ಬಳಕೆ ಹಾಗೂ ರಫ್ತು ಮಾಡುವಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ಕರಿಮೆಣಸು ಉತ್ಪಾದನೆಯಲ್ಲಿ ಕೇರಳ ಮತ್ತು ಕರ್ನಾಟಕ ಶೇಕಡ 92 ಪಾಲನ್ನು ಹೊಂದಿ ಮುಂಚೂಣಿಯಲ್ಲಿರುವ ರಾಜ್ಯಗಳಾಗಿವೆ. ಹಾಗೆಯೆ ಕರ್ನಾಟಕದಲ್ಲಿ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ಕಾಳು ಮೆಣಸು ಬೆಳೆಯುವ ಪ್ರದೇಶಗಳು ಹೆಚ್ಚಾದಂತೆಲ್ಲ, ಸಸಿಗಳ ಬೇಡಿಕೆ ಹೆಚ್ಚಾಗುತ್ತಿದೆ. ಆದರಿಂದ ಕಾಳು ಮೆಣಸಿನಲ್ಲಿ ಕಂಡು ಬರುವ ವಿವಿಧ ರೀತಿಯ ಕಾಂಡಗಳು, ಯಾವ ಕಾಂಡ ಸಸ್ಯಾಭಿವೃದ್ಧಿಗೆ ಉತ್ತಮ ಮತ್ತು ಬೇರು ಬಳ್ಳಿಗಳ ಉತ್ಪಾದನೆಯ ವಿವಿಧ ವಿಧಾನಗಳನ್ನು ತಿಳಿಯುವುದು ಅವಶ್ಯಕ.

ಸಸ್ಯಾಭಿವೃದ್ಧಿ:

ಕರಿಮೆಣಸಿನ ಸಸಿಗಳನ್ನು ಬಳ್ಳಿಯ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡುವುದು ರೂಢಿಯಲ್ಲಿದೆ. ಕರಿಮೆಣಸು ಬಳ್ಳಿಯು ಮೂರು ವಿಧದ ಕಾಂಡದ ಬಳ್ಳಿಗಳನ್ನು ಹೊಂದಿರುತ್ತದೆ.

1. ಪ್ರಾಥಮಿಕ/ಪ್ರಧಾನ ಕಾಂಡದ ಬಳ್ಳಿ:

ಇದರಲ್ಲಿ ಗೆಣ್ಣುಗಳ ಅಂತರ ಬಹು ದೂರವಿದ್ದು ಗೆಣ್ಣಿನಿಂದ ಹೊರಹೊಮ್ಮುವ ಬೇರುಗಳು ಆಧಾರ ಮರಗಳಿಗೆ ಅಂಟಿಕೊಂಡು ಬಳ್ಳಿ ಮೇಲೆ ಬೆಳೆಯಲು ಸಹಕಾರವಾಗುತ್ತವೆ. ಈ ಕಾಂಡದ ತುದಿ ಬಳ್ಳಿಯನ್ನು ಸಸ್ಯಾಭಿವೃದ್ಧಿಗೆ ಅಲ್ಪಮಟ್ಟಿಗೆ ಬಳಸಲಾಗುವುದು.

2. ಹಂಬು ಬಳ್ಳಿಗಳು:

ಇವುಗಳು ಪ್ರಧಾನ ಕಾಂಡದ ಬಳ್ಳಿಯ ಬುಡಭಾಗದಿಂದ ಚಿಗುರಿ ಬೆಳೆಯುವುವು. ಅಂತರ ಗೆಣ್ಣುಗಳು ಬಹು ದೂರವಿದ್ದು, ನೆಲದ ಮೇಲೆ ಹರಿದು ಹೋಗುವುದಲ್ಲದೆ, ಪ್ರತಿ ಗೆಣ್ಣಿನಿಂದ ಬೇರುಗಳು ಹೊರಹೊಮ್ಮುವುವು. ಈ ಬಳ್ಳಿಯನ್ನು ಸಸ್ಯಾಭಿವೃದ್ಧಿಗೆ ಪ್ರಮುಖವಾಗಿ ಬಳಸಲಾಗುವುದು ಹಾಗೂ ಅತಿ ಸೂಕ ್ತಬಳ್ಳಿಯಾಗಿದೆ.

3. ಹಣ್ಣು ಬಿಡುವ ಅಡ್ಡ ಕೊಂಬೆಗಳು:

ಇವು ಕಾಂಡದಿಂದ ಚಿಗುರೊಡೆದು ಅಡ್ಡವಾಗಿ ಬೆಳೆಯುವುವು ಹಾಗೂ ಹೂಗೊಂಚಲುಗಳನ್ನು ಬಿಟ್ಟು ಹಣ್ಣುಗಳನ್ನು ಕೊಡುವುವು. ಈ ಕೊಂಬೆಗಳನ್ನು ಪೊದೆ ಕರಿಮೆಣಸಿನ ಗಿಡಗಳನ್ನು ವೃದ್ಧಿಮಾಡಲು ಬಳಸುವರು.

ಮೆಣಸಿನ ಬೇರು ಬಳ್ಳಿಗಳ ಉತ್ಪಾದನೆ/ಸಿದ್ಧಪಡಿಸುವಿಕೆಯ ವಿಧಾನಗಳು:

  1. ಸಾಂಪ್ರದಾಯಿಕ ಪದ್ಧತಿ:

ಅಧಿಕ ಇಳುವರಿ ಕೊಡುವ, ಆರೋಗ್ಯವಂತ ಬಳ್ಳಿ (ಗಿಡ)ಗಳನ್ನು ಗುರ್ತಿಸಿ, ಅದರ ಬುಡದ ಭಾಗದಿಂದ ಚಿಗುರಿ, ಹೊರಹೊಮ್ಮಿ ನೆಲದ ಮೇಲೆ ಹರಿದು ಹೋಗುವ ಹಂಬು ಬಳ್ಳಿಗಳನ್ನು ಡಿಸೆಂಬರ್ - ಜನವರಿ ತಿಂಗಳಲ್ಲಿ ಸಿಂಬೆ ಸುತ್ತಿ, ಆಧಾರ ಮರಕ್ಕೆ ಅಥವಾ ಬಳ್ಳಿಯ ಪಕ್ಕ ಮರದ ಕಡ್ಡಿಯನ್ನು ನೆಟ್ಟು ಅದಕ್ಕೆ ಕಟ್ಟಬೇಕು. ಇದರಿಂದ ಬಳ್ಳಿಯು ನೆಲವನ್ನು ಸ್ಪರ್ಶಿಸಿ, ಗೆಣ್ಣಿನಿಂದ ಬೇರು ಹೊರಹೊಮ್ಮುವುದು ನಿಯಂತ್ರಿತವಾಗುತ್ತದೆ. ಹೀಗೆ ಸಿಂಬೆ ಸುತ್ತಿದ ಬಳ್ಳಿಗಳನ್ನು ಫೆಬ್ರವರಿ -ಮಾರ್ಚ್ ತಿಂಗಳಿನಲ್ಲಿ ಬೇರ್ಪಡಿಸಿ ನಂತರ ಬಳ್ಳಿಯಲ್ಲಿರುವ ಎಲೆಗಳನ್ನು ಹಾಗೂ ಮೃದು ತುದಿ ಬಳ್ಳಿಯನ್ನು ಕತ್ತರಿಸಿ ತೆಗೆಯಬೇಕು. ಬಳ್ಳಿಯನ್ನು 2-3 ಗೆಣ್ಣುಗಳಿರುವಂತೆ ತುಂಡುಗಳನ್ನು ಮಾಡಿ ನರ್ಸರಿ ತಾಕುಗಳಲ್ಲಿ ಅಥವಾ 2 ಭಾಗ ಕಾಡುಮಣ್ಣು, 1 ಭಾಗ ಮರಳು ಮತ್ತು 1 ಭಾಗ ಕೊಟ್ಟಿಗೆ ಗೊಬ್ಬರಗಳನ್ನು ಮಿಶ್ರಮಾಡಿ 6 x 3 ಅಂಗುಲದ ಪಾಲಿಥಿನ್ ಚೀಲದಲ್ಲಿ ತುಂಬಿ ಬೇರು ಬಿಡಲು ಬುಡದ ಕಡೆಯ ಒಂದು ಗೆಣ್ಣು ಮಣ್ಣಿನೊಳಗೆ ಇರುವಂತೆ ನೆಡಬೇಕು. ತ್ವರಿತ ಹಾಗೂ ಹೆಚ್ಚಿನ ಬೇರುಗಳನ್ನು ಭರಿಸಲು ಕಾಂಡದ ತುಂಡುಗಳ ಬುಡ ಭಾಗವನ್ನು 500 ಪಿ.ಪಿ.ಎಂ. ಸಾಮಥ್ರ್ಯದ ಇಂಡೋಲ್ ಭ್ಯೂಟ್ರಿಕ್ ಆಮ್ಲದಿಂದ ಉಪಚರಿಸಿ ನೆಡುವುದು ಒಳ್ಳೆಯದು. ಪಾಲಿಥಿನ್ ಚೀಲಗಳನ್ನು ಸಾಕಷ್ಟು ನೆರಳಿರುವ ಕಡೆ ಅಥವಾ ಹಸಿರು ಮನೆಗಳಲ್ಲಿ ಜೋಡಿಸಿ, ಮಿತವಾಗಿ ಪ್ರತಿದಿನ ನೀರನ್ನು ಒದಗಿಸಬೇಕು.

  1. ಕ್ಷಿಪ್ರ ಗುಣಾಕಾರ ವಿಧಾನ:

ಶ್ರೀಲಂಕಾದಲ್ಲಿ ಅಭಿವೃದ್ದಿಪಡಿಸಲಾದ ಪ್ರಸರಣ ತಂತ್ರವು ಕಪ್ಪು ಮೆಣಸು ಬಳ್ಳಿಯ ತ್ವರಿತ ಮತ್ತು ಸುಲಭ ಗುಣಾಕಾರಕ್ಕಾಗಿ ಭಾರತದಲ್ಲಿ ಅಳವಡಿಕೆಗೆ ಮಾರ್ಪಡಿಸಲ್ಪಟ್ಟಿದೆ. ಈ ವಿಧಾನದಲ್ಲಿ, 45 ಸೆಂ. ಮೀ ಆಳ, 30 ಸೆಂ. ಮೀ ಅಗಲ ಮತ್ತು ಅನುಕೂಲಕರ ಉದ್ದದ ಕಂದಕವನ್ನು ತಯಾರಿಸಿಕೊಳ್ಳಬೇಕು. ಕಂದಕವನ್ನು 1:1:1 ಅನುಪಾತದಲ್ಲಿ ಕಾಡು ಮಣ್ಣು ಮರಳು ಮತ್ತು ಕೊಟಿಗೆ ಗೊಬ್ಬರಗಳಿಂದ ತುಂಬಬೇಕು. ನಂತರ ಬಿದಿರಿನ ಅರ್ಧ ಸೀಳನ್ನು ಅಥವಾ ಪಿವಿಸಿ ಪೈಪನ ಅರ್ಧ ಸೀಳನ್ನು (1.5 ಮೀ ಉದ್ದ ಮತ್ತು 8 ರಿಂದ 10 ಸೆಂ. ಮೀ ವ್ಯಾಸವಿರುವ) ಕಂದಕದ ಎರಡು ಬದಿಯಲ್ಲಿ ಬಲವಾದ ಬೆಂಬಲದ ಮೇಲೆ ವಿಭಜಿತ ಭಾಗವನ್ನು ಎದುರಿಸುತ್ತಿರುವ ಮೂಲಕ 45 ಡಿಗ್ರಿ ಕೋನದಲ್ಲಿ ಜೋಡಿಸಬೇಕು (ಕೆಳಕಂಡ ಭಾವಚಿತ್ರದಲ್ಲಿ ತೋರಿಸಿರುವಂತೆ).

ಬಿದಿರಿನ ಸೀಳುಗಳ ಕೆಳ ಭಾಗದಲ್ಲಿ ಬೇರೂರಿಸುವ ಮಾಧ್ಯಮವನ್ನು (1:1 ಅನುಪಾತದಲ್ಲಿ ಕಾಯರ್ ಪಿತ್ ಮತ್ತು ಕೊಟ್ಟಿಗೆ ಗೊಬ್ಬರದ ಮಿಶ್ರಣ) ತುಂಬಿಸಬೇಕು. ಪ್ರತಿ ಬಿದಿರಿನ ಸೀಳಿನ ತಳ ಭಾಗದಲ್ಲಿ ಕಾಳು ಮೆಣಸಿನ, ಉತ್ತಮವಾಗಿ ಬೇರು ಬಿಟ್ಟ ಸಸಿಗಳಿರುವಂತಹ ಒಂದೊಂದು ಪಾಲಿಬ್ಯಾಗ್‍ನ್ನು ಇಡಬೇಕು. ಸಸಿ ಬೆಳೆದಂತೆಲ್ಲ ಅದರ ಬೇರೊಡೆಯುವ ಗೆಣ್ಣುಗಳು ಬಿದಿರಿನ ಸೀಳಿನಲ್ಲಿರುವ ಮಧ್ಯಮಕ್ಕೆ ಸ್ಪರ್ಶಿಸುವಂತೆ, ತೆಂಗಿನ ಗರಿಯ ಕಡ್ಡಿಗಳಿಂದ ಆಧಾರ ನೀಡಬೇಕು. ತಾಯಿ ಸಸಿಗಳಿಗೆ ಪ್ರತಿದಿನ 2 ಬಾರಿ ಮಿತವಾಗಿ ನೀರುಣಿಸಬೇಕು ಮತ್ತು 1 ಕೇ. ಜಿ ಯೂರಿಯ, 1 ಕೇ. ಜಿ ಮ್ಯುರೆಟ್ ಆಫ್ ಪೊಟ್ಯಾಷ್ (ಎಮ್. ಒ. ಪಿ), 1 ಕೇ. ಜಿ ಸಿಂಗಲ್ ಸೂಪರ್ ಫಾಸ್ಪೇಟ್ (ಎಸ್. ಎಸ್. ಪಿ) ಮತ್ತು 0.75 ಕೇ. ಜಿ ಮೆಗ್ನಿಶಿಂ ಸಲ್ಫೇಟ್ ಅನ್ನು 250 ಲೀ ನೀರಿನಲ್ಲಿ ಬೆರೆಸಿ, ಈ ಮಿಶ್ರಣವನ್ನು ಪ್ರತಿ ಸಸಿಗಳಿಗೆ ಒಂದು ಲೀ ನಂತೆ 15 ದಿನಗಳಿಗೊಮ್ಮೆ ನೀಡಬೇಕು.

ಬಳ್ಳಿಯು, ಬಿದಿರು ಸೀಳಿನ ತುದಿ ತಲುಪಿದ ನಂತರ ಅಂದರೆ ಸುಮಾರು ಮೂರರಿಂದ ಮೂರುವರೆ ತಿಂಗಳಾದ ಮೇಲೆ, ಪ್ರತಿ ಬೇರುಬಿಟ್ಟ ಗೆಣ್ಣುಗಳ ಸಮೀಪದಲ್ಲಿ ಕತ್ತರಿಸಿ ಪ್ರತ್ಯೇಕ ಬೇರೊಡೆದ ಕಡ್ಡಿಗಳನ್ನಾಗಿ ಬಳಸಿಕೊಳ್ಳಬಹುದು. ಪುನಃ ತಾಯಿ ಸಸಿಯನ್ನು ಮೊದಲಿನಂತೆ ಬೆಳೆಯಲು ಬಿಡಬೇಕು. ಎರಡನೆಯ ಬಾರಿ ಬಳ್ಳಿಯು ಎರೆಡುವರೆ ತಿಂಗಳಿಗೆ ಬಿದಿರು ಸೀಳಿನ ತುದಿ ತಲುಪುತ್ತದೆ. ಹೀಗೆ ವರ್ಷಕ್ಕೆ 4 ಬಾರಿ ಒಂದೇ ತಾಯಿ ಸಸಿಯಿಂದ ಬೇರೊಡೆದ ಕಡ್ಡಿಗಳನ್ನು ಪಡೆಯಬಹುದು. ಬಳ್ಳಿಯು ಬಿದಿರು ಸೀಳಿನ ತುದಿ ತಲುಪಿದ ನಂತರ ಅಂದರೆ ಸುಮಾರು ಮೂರರಿಂದ ಮೂರುವರೆ ತಿಂಗಳಾದ ಮೇಲೆ, ಪ್ರತಿ ಬೇರುಬಿಟ್ಟ ಗೆಣ್ಣುಗಳ ಸಮೀಪದಲ್ಲಿ ಕತ್ತರಿಸಿ ಪ್ರತ್ಯೇಕ ಬೇರೊಡೆದ ಕಡ್ಡಿಗಳನ್ನಾಗಿ ಬಳಸಿಕೊಳ್ಳಬಹುದು. ಪುನಃ ತಾಯಿ ಸಸಿಯನ್ನು ಮೊದಲಿನಂತೆ ಬೆಳೆಯಲು ಬಿಡಬೇಕು. ಎರಡನೆಯ ಬಾರಿ ಬಳ್ಳಿಯು ಎರೆಡುವರೆ ತಿಂಗಳಿಗೆ ಬಿದಿರು ಸೀಳಿನ ತುದಿ ತಲುಪುತ್ತದೆ. ಹೀಗೆ ವರ್ಷಕ್ಕೆ 4 ಬಾರಿ ಒಂದೇ ತಾಯಿ ಸಸಿಯಿಂದ ಬೇರೊಡೆದ ಕಡ್ಡಿಗಳನ್ನು ಪಡೆಯಬಹುದು. ಒಂದು ಬಾರಿಗೆ ಸುಮಾರು 10 ಕಡ್ಡಿಗಳು ಸಿಗುತ್ತವೆ, ಆದರಿಂದ ವರ್ಷಕ್ಕೆ ಸುಮಾರು 40 ಕಡ್ಡಿಗಳು ಸಿಗುತ್ತವೆ.

ಅನುಕೂಲಗಳು:

  • ಕ್ಷಿಪ್ರ ಗುಣಾಕಾರ ದರ- 1:40
  • ಚೆನ್ನಾಗಿ ಅಭಿವೃದ್ಧಿಗೊಂಡ ಬೇರಿನ ವ್ಯವಸ್ಥೆ.
  • ಉನ್ನತ ಕ್ಷೇತ್ರ ಸ್ಥಾಪನೆ ಮತ್ತು ಹುರುಪಿನ ಬೆಳವಣಿಗೆಯನ್ನು ಕಾಣಬಹುದು. 

3.ಸೆರ್ಪೆಂಟೈನ್ ವಿಧಾನ:

ಇದು ಒಂದು ಸರಳ ವಿಧಾನ. ಈ ವಿಧಾನದಲ್ಲಿ ಉತ್ತಮವಾಗಿ ಬೇರು ಬಿಟ್ಟಿರುವ ಸಸಿಯನ್ನೊಳಗೊಂಡ ಪಾಲಿಬ್ಯಾಗಳನ್ನು ಒಂದು ಬದಿಯಲ್ಲಿ ಜೋಡಿಸಬೇಕು. ನಂತರ 10 ರಿಂದ 20 ಮಧ್ಯಮದಿಂದ (1:1:1 ಅನುಪಾತದಲ್ಲಿ ಕಾಡು ಮಣ್ಣು ಮರಳು ಮತ್ತು ಕೊಟಿಗೆ ಗೊಬ್ಬರ) ಭರ್ತಿಮಾಡಿರುವ ಪಾಲಿಬ್ಯಾಗ್‍ಗಳನ್ನು ಪ್ರತಿಯೊಂದು ಸಸಿ ಸಹಿತ ಪಾಲಿಬ್ಯಾಗ್‍ಗಳ ಮುಂದೆ ಒಂದಾದ ನಂತರ ಒಂದನ್ನು ಜೋಡಿಸಬೇಕು (ಕೆಳಕಂಡ ಭಾವಚಿತ್ರದಲ್ಲಿ ತೋರಿಸಿರುವಂತೆ). ಸಸಿಗಳು ಬೆಳೆದಂತೆಲ್ಲ ಬೇರೊಡೆಯುವ ಗೆಣ್ಣುಗಳು ಪಾಲಿಬ್ಯಾಗ್‍ನಲ್ಲಿ ಪ್ರತಿದಿನ ಸಸಿಗಳಿಗೆ 2 ಬಾರಿ ಮಿತವಾಗಿ ನೀರುಣಿಸಬೇಕು. ಮಾಧ್ಯಮವನ್ನು ಸ್ಪರ್ಶಿಸುವಂತೆ ತೆಂಗಿನ ಗರಿಯ ಕಡ್ಡಿಯನ್ನು ಬಳಸಿ ಭದ್ರಪಡಿಸಬೇಕು. ಹೀಗೆ ಬಳ್ಳಿಯು 20 ಪಾಲಿಬ್ಯಾಗ್‍ಗಳಲ್ಲಿ ಬೇರು ಬಿಟ್ಟ ನಂತರ ಅಂದರೆ ಸುಮಾರು 4 ತಿಂಗಳುಗಳಾದ ಮೇಲೆ, ಸಸಿಯನ್ನು ಬೇರುಬಿಟ್ಟ ಗೆಣ್ಣುಗಳಿಂದ ಒಂದು ಸೆಂ.ಮೀ ಬಿಟ್ಟು ಕತ್ತರಿಸಿ ಎಲ್ಲ ಪಾಲಿಬ್ಯಾಗ್‍ಗಳನ್ನು ಬೇರ್ಪಡಿಸಿ ಪ್ರತ್ಯೇಕ ಸಸಿಗಳನ್ನಾಗಿ ಬಳಸಬಹುದು. ಹಳೇ ಪಾಲಿಬ್ಯಾಗ್‍ಗಳನ್ನು ಪ್ರತ್ಯೇಕಿಸಿರುವ ಜಾಗದಲ್ಲಿ ಹೊಸ ಪಾಲಿಬ್ಯಾಗ್‍ಗಳನ್ನು ಇರಿಸಬೇಕು. ಹೀಗೆ ಒಂದು ತಾಯಿ ಬಳ್ಳಿಯಿಂದ ಒಂದು ವರ್ಷಕ್ಕೆ ಸುಮಾರು 60 ಸಸಿಗಳನ್ನು ವೃಧ್ದಿಸಬಹುದು.

ಅನುಕೂಲಗಳು:

  • ಸರಳ ಮತ್ತು ತ್ವರಿತ ವಿಧಾನವಾಗಿದೆ.
  • ಕಡಿಮೆ ಖರ್ಚಿನಲ್ಲಿ ಹೆಚ್ಚು ಸಸಿಗಳನ್ನು ವೃಧ್ದಿಸಬಹುದು.
  • ಹೆಚ್ಚಿನ ಉಪಕರಣಗಳ ಅವಶ್ಯಕತೆ ಇರುವುದಿಲ್ಲ.

4.ಸ್ತಂಭ ವಿಧಾನ:

ಗುಣಮಟ್ಟದ ನಾಟಿ ಕಡ್ಡಿ ಉತ್ಪಾದನೆಯನ್ನು ತೀವ್ರಗೊಳಿಸುವ ಒಂದು ವಿಧಾನವನ್ನು ಮಣ್ಣು-ರಹಿತ ಮಾಧ್ಯಮದೊಂದಿಗೆ ಲಂಭವಾದ ಸ್ತಂಭಬಳಸಿಕೊಂಡು ಪ್ರಮಾಣೀಕರಿಸಲಾಗಿದೆ. ಈ ತಂತ್ರವು ಅರ್ಧ ಇಂಚಿನ ಪ್ಲಾಸ್ಟಿಕ್ ಲೇಪಿತ ವೆಲ್ಡ್ ತಂತಿ ಜಾಲರಿಯಿಂದ ಮಾಡಿದ ಲಂಬವಾದ 2 ಮೀ ಉದ್ದ ಮತ್ತು 30 ಸೆಂ. ಮೀ ವ್ಯಾಸದ ಸ್ತಂಭವನ್ನು ಒಳಗೊಂಡಿದೆ ಮತ್ತು ಈ ವಿಧಾನವನ್ನು ಹೈಟೆಕ್ ಪಾಲಿಹೌಸ್‍ನಲ್ಲಿ ಅನುಸರಿಸಬೇಕು.

ಈ ಸ್ತಂಭವನ್ನು ಭಾಗಶಃ ಕೊಳೆತ ಕಾಯರ್ ಪಿತ್ ಮತ್ತು ಎರೆಹುಳು ಗೊಬ್ಬರವನ್ನು 3:1 ಅನುಪಾತದಲ್ಲಿ ಟ್ರೈಕೋಡರ್ಮದೊಂದಿಗೆ ಪುಷ್ಟೀಕರಿಸಿ ಭರ್ತಿಮಾಡಬೇಕು. ನಂತರ 8 ರಿಂದ 10 ಉತ್ತಮವಾಗಿ ಬೇರು ಬಿಟ್ಟ ಸಸಿ ಇರುವಂತಹ ಪಾಲಿಬ್ಯಾಗ್‍ನ್ನು ಇಡಬೇಕು. ಜಾಲರಿ ಮೇಲೆ ಬಳ್ಳಿಯನ್ನು ಹಬ್ಬಲು ಬಿಡಬೇಕು ಮತ್ತು ಗೆಣ್ಣುಗಳು ಮಾಧ್ಯಮವನ್ನು ಸ್ಪರ್ಶಿಸುವಂತೆ, ತೆಂಗಿನ ಗರಿಯ ಕಡ್ಡಿಗಳಿಂದ ಆಧಾರ ನೀಡಬೇಕು. ಬಳ್ಳಿಯು 4 ರಿಂದ 5 ತಿಂಗಳಲ್ಲಿ ಸ್ತಂಭದ ತುದಿ ತಲುಪುತ್ತದೆ. ಆಗ ಒಂದು ಸ್ತಂಭದಿಂದ ಸುಮಾರು 10 (5 ಗೆಣ್ಣುಳ್ಳ) ನಾಟಿ ಕಡ್ಡಿ,  10-15 ಹಣ್ಣು ಬಿಡುವ ಅಡ್ಡ ಕೊಂಬೆಗಳು (ಪೊದೆ ಕರಿಮೆಣಸು ಉತ್ಪಾದನೆಗೆ ಸಹಕಾರಿ) ಮತ್ತು ಸುಮಾರು 150 ಒಂದು ಗೆಣ್ಣಿನ ನಾಟಿ ಕಡ್ಡಿಗಳನ್ನು ಪಡೆಯಬಹುದಹು. ಹೀಗೆ ಒಂದು ವರ್ಷದಲ್ಲಿ 3 ಬಾರಿ ನಾಟಿ ಕಡ್ಡಿ ಕತ್ತರಿಸಬಹುದು.

ಅನುಕೂಲಗಳು:

  • ಎಲ್ಲಾ ರೀತಿಯ ನಾಟಿ ಕಡ್ಡಿಗಳು ದೊರೆಯುತ್ತವೆ.
  • ಚೆನ್ನಾಗಿ ಅಭಿವೃದ್ಧಿಗೊಂಡ ಬೇರಿನ ವ್ಯವಸ್ಥೆ.
  • ಉನ್ನತ ಕ್ಷೇತ್ರ ಸ್ಥಾಪನೆ ಮತ್ತು ಹುರುಪಿನ ಬೆಳವಣಿಗೆಯನ್ನು ಕಾಣಬಹುದು.

ಲೇಖನ: 1. ವಿದ್ಯಾ, ಎಸ್. ಪಿ., ಡಾಕ್ಟರೇಟ್ ವಿದ್ಯಾರ್ಥಿನಿ, ತೋಟಗಾರಿಕಾ ಮಹಾವಿದ್ಯಾಲಯ, ಬೆಂಗಳೂರು.

  1. ಪವಿತ್ರ, ಎಸ್, ಸಹಾಯಕ ಪ್ರಾಧ್ಯಾಪಕಿ, ತೋಟಗಾರಿಕಾ ಮಹಾವಿದ್ಯಾಲಯ, ಮೂಡಿಗೆರೆ.
  2. ದಿವ್ಯಶ್ರೀ, ಎನ್., ಡಾಕ್ಟರೇಟ್ ವಿದ್ಯಾರ್ಥಿನಿ, ತೋಟಗಾರಿಕಾ ಮಹಾವಿದ್ಯಾಲಯ, ಬಾಗಲಕೋಟೆ.