Agripedia

ತೊಗರಿ ಬೆಳೆ ಆವರಿಸಿದ ಗೊಡ್ಡು ರೋಗದ ಬಾಧೆ: ನಿಯಂತ್ರಣಕ್ಕೆ ತಜ್ಞರ ಸಲಹೆ

24 September, 2021 11:43 AM IST By:
ಗೊಡ್ಡು ರೋಗದ ಬಾಧೆಗೆ ತುತ್ತಾಗಿರುವ ತೊಗರಿ ಗಿಡ.

ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಆರಂಭದಲ್ಲೇ ಬಿತ್ತನೆ ಮಾಡಿದ್ದ ತೊಗರಿ ಬೆಳೆಯಲ್ಲಿ ಗೊಡ್ಡು ರೋಗ ಬಾಧೆ ಕಾಣಿಸಿಕೊಂಡಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಈ ರೋಗ ಬಾಧೆಯಿಂದಾಗಿ ತೊಗರಿ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು, ಎಲೆಗಳು ಮುಟುರಿ ರೋಗಗ್ರಸ್ಥವಾಗಿವೆ. ಇದರಿಂದ ಗಿಡಗಳು ಕಾಯಿ ಕಟ್ಟುತ್ತವೋ ಇಲ್ಲವೋ ಎಂಬ ಚಿಂತೆ ರೈತರನ್ನು ಆವರಿಸಿದೆ.

ಕಲಬುರಗಿ ಜಿಲ್ಲೆಯು ಕರ್ನಾಟಕದ ತೊಗರಿ ಕಣಜ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತದೆ. ಬೀದರ ಜಿಲ್ಲೆಯಾದ್ಯಂತ ಮುಂಗಾರು ಹಂಗಾಮು ಆರಂಭದ ದಿನಗಳಲ್ಲಿ ಬಿತ್ತನೆ ಮಾಡಿರುವ ತೊಗರಿಯು ಈಗ 3 ರಿಂದ 4 ತಿಂಗಳ ಆಸುಪಾಸಿನಲ್ಲಿದೆ. ಇತ್ತೀಚೆಗೆ ಬೆಳೆಯಲ್ಲಿ ಗೊಡ್ಡು ರೋಗ ಬಾಧೆ ಕಾಣಿಸಿಕೊಂಡಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದ ಬೀದರ್‌ನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ತಂಡವು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತೊಗರಿ ಹೊಲಗಳಿಗೆ ಭೇಟಿ ನಈಡಿ, ಬೆಳೆಯನ್ನು ವೀಕ್ಷಿಸಿತು.

ಆಮೀನುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಸವಕಲ್ಯಾಣ, ಭಾಲ್ಕಿ, ಬೀದರ, ಹುಮನಾಬಾದ ಕಮಲನಗರ ಹಾಗೂ ಔರಾದ ತಾಲೂಕುಗಳಲ್ಲಿ ತೊಗರಿ ಬೆಳೆದಿರುವ ಕೆಲವು ರೈತರ ಹೊಲದಲ್ಲಿ ಗೊಡ್ಡು ರೋಗದ ಬಾಧೆ ಕಾಣಿಸಿಕೊಂಡಿದೆ. ಅದರಲ್ಲೂ ಬಸವಕಲ್ಯಾಣ ತಾಲೂಕಿನ ಪರತಾಪುರ, ರಾಜೇಶ್ವರ, ಭಾಲ್ಕಿ ತಾಲೂಕಿನ ಹಲಬರಗಾ, ಲಂಜವಾಡ ಹಾಗೂ ಕಮಲನಗರ ತಾಲೂಕಿನ ಸಾವಳಿ, ಬೀದರ ತಾಲೂಕಿನ ಮನ್ನಳ್ಳಿ ಔರಾದ ತಾಲೂಕಿನ ಕೌಠಾ ಗ್ರಾಮಗಳ ರೈತರ ತೊಗರಿ ಹೊಲಗಳಲ್ಲಿ ಈ ರೋಗದ ಬಾಧೆ ತೀವ್ರವಾಗಿರುವುದು ಕಂಡುಬAದಿದೆ.

ರೋಗದ ಲಕ್ಷಣಗಳು

ಗೊಡ್ಡು ರೋಗದ ಬಾಧಿತ ಗಿಡಗಳು ಸಾಮಾನ್ಯ ಗಿಡಗಳಂತೆ ಇರುವುದಿಲ್ಲ. ಈ ರೋಗಕ್ಕೆ ತುತ್ತಾಗಿರುವ ಗಿಡಗಳಲ್ಲಿ ಹೂವು, ಕಾಯಿ ಬಿಡುವುದಿಲ್ಲ. ಎಲೆಗಳು ಕೂಡ ಹೆಚ್ಚಾಗಿ ಇರುವುದಿಲ್ಲ. ಬದಲಿಗೆ ಗಿಡಗಳು ಬೋಳಾಗಿ, ಗೊಡ್ಡಾಗಿ ಉಳಿಯುತ್ತವೆ. ಇಂತಹ ಗಿಡದ ಎಲೆಗಳು ಸಣ್ಣವಾಗಿದ್ದು, ಮೆಲ್ಭಾಗದಲ್ಲಿ ತಿಳಿ ಮತ್ತು ದಟ್ಟ ಹಳದಿ ಬಣ್ಣದ ಮೊಜಾಯಿಕ ಮಾದರಿಯ ಮಚ್ಚೆಗಳನ್ನು ಹೊಂದಿ ಮುಟುರಿಕೊಂಡಿರುತ್ತವೆ. ಬೆಳೆಯು ಚಿಕ್ಕದಿದ್ದಾಗ ಈ ರೋಗ ಆವರಿಸಿಕೊಂಡರೆ, ಗಿಡ ಆರೋಗ್ಯಕರವಾಗಿರುವ ಇತರೆ ಗಿಡಗಳಂತೆ ಸಮೃದ್ಧವಾಗಿ ಬೆಳೆಯುವುದಿಲ್ಲ. ಮುಟುರಿಕೊಂಡಿರುವ ಎಲೆಗಳ ಗುಂಪಿನಿAದ ಕೂಡಿ ಪೊದೆಯಂತೆ ಗೊಡ್ಡಾಗಿ ಉಳಿಯುತ್ತದೆ. ನಂಜಾಣುಗಳಿAದ ಉಂಟಾಗುವ ಈ ರೋಗವು ಅಂತರ್ವ್ಯಾಪಿ ರೋಗವಾಗಿದೆ.

ಆಸೆರಿಯಾ ಕೆಜನಿ ಎನ್ನುವ ರಸ ಹೀರುವ ಮೈಟ್ ನುಶಿಗಳಿಂದ ಈ ರೋಗ ಪ್ರಸಾರವಾಗುತ್ತದೆ. ಈ ಮೈಟ್ ನುಶಿಗಳು ಗಾಳಿಯ ದಿಕ್ಕಿನಲ್ಲಿ ಗಾಳಿಯ ಜೊತೆ ರೋಗದ ಸ್ಥಳದಿಂದ ಸುಮಾರು 2 ಕಿ.ಮೀ ವರೆಗೂ ಚಲಿಸಬಲ್ಲವು. ಈ ವೇಳೆ ಗಾಳಿ ಜೊತೆಗೆ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಸ್ಥಳಾಂತರಗೊAಡು ಅಲ್ಲಿನ ಬೆಳೆಯನ್ನೂ ಬಾಧಿಸುತ್ತವೆ. ಹೀಗಾಗಿ ಈ ರೋಗವನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸುವ ಅಗತ್ಯವಿದೆ.

ನಿಯಂತ್ರಣ ಕ್ರಮಗಳು

ಈ ರೋಗದಿಂದ ತೊಗರಿ ಬೆಳೆಯನ್ನು ಸಂರಕ್ಷಿಸಲು ಈ ಕೆಳಗಿನ ಸಮಗ್ರ ನಿರ್ವಹಣಾ ಕ್ರಮಗಳನ್ನು ಅಳವಡಿಸಬೇಕು ಎಂದು ಬೀದರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾಗಿರುವ ಡಾ. ಎನ್.ಎಂ.ಸುನೀಲ ಕುಮಾರ ಯರಬಾಗ್ ಅವರು ತಿಳಿಸಿದ್ದಾರೆ..

  • ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕುಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು.
  • ರೋಗದ ಪ್ರಾರಂಭಿಕ ಹಂತದಲ್ಲಿ ರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು.
  • ಬೆಳೆಯಲ್ಲಿ ರೋಗದ ಪ್ರಾರಂಭಿಕ ಹಂತದಲ್ಲಿ ನುಶಿ ನಾಶಕಗಳಾದ ನೀರಿನಲ್ಲಿ ಕರಗುವ ಗಂಧಕ 2.5  ಗ್ರಾಂ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ, ಬೆಳೆಯ ಮೆಲೆ ಸಿಂಪರಿಸಿ, ನುಶಿಗಳ ನಿಯಂತ್ರಣ ಮಾಡಬೇಕು.

ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡಾ. ಎನ್.ಎಂ. ಸುನೀಲ ಕುಮಾರ ಯರಬಾಗ್, ವಿಜ್ಞಾನಿಗಳಾದ ಡಾ. ಆರ್.ಎಲ್.ಜಾಧವ, ಡಾ. ಅಕ್ಷಯಕುಮಾರ್ ಮತ್ತು ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕರಾದ ಡಾ. ಕೆಂಗೇಗೌಡ ಇದ್ದರು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ಅಧಿಕಾರಿಗಳನ್ನು ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಲು ಡಾ.ಸುನೀಲ್ ಕುಮಾರ ತಿಳಿಸಿದ್ದಾರೆ.