Agripedia

ಮನೆಯಲ್ಲಿಯೇ ಬೀಜಾಮೃತ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಿ

05 June, 2021 9:16 PM IST By:
beejamrutha

ಬೀಜಾಮೃತ ಸಾವಯವ ವಿಧಾನವಾಗಿದ್ದು, ಇಳುವರಿ ಹೆಚ್ಚಿಸುವುದಕ್ಕಾಗಿ ಬೀಜಾಮೃತ ಅತ್ಯಂತ ಅಗತ್ಯವಾದದ್ದು, ಬೀಜ ಮೊಳಕೆಯೊಡೆಯುವಿಕೆ ಹಾಗೂ ಸಸಿಗಳ ಬೆಳವಣಿಗೆ ಉತ್ತಮಗೊಳಿಸಲು ಈ ವಿಧಾನ ತುಂಬಾ ಸಹಕಾರಿಯಾಗಿದೆ. ಬೀಜಾಮೃತ ಎಂದರೇನು? ಬೀಜಮೃತ ಮಾಡುವುದು ಹೇಗೆ ಹಾಗೂ ಬೀಜಾಮೃತದಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಬೀಜಾಮೃತ- ಇದು ರಾಸಾಯನಿಕ ರಹಿತ ನೈಸರ್ಗಿಕ ಕೃಷಿಯಲ್ಲಿ ಎಲ್ಲಾ ಬಿತ್ತನೆ ಬೀಜಗಳನ್ನು ಮತ್ತು ಸಸಿಗಳನ್ನು ಉಪಚರಿಸಿ ರೋಗ ನಿರೋಧಕ ಶಕ್ತಿಯನ್ನು ಹಾಗು ಮೊಳಕೆ ಹೊಡೆಯುವಿಕೆಯನ್ನು  ವೃದ್ದಿಸುವ ಅಮೃತ.

ಬೀಜಾಮೃತ ಎಂದರೇನು ?

ಬೀಜ ಬಿತ್ತನೆಗೂ ಮೊದಲು ಬೀಜೋಪಚಾರ ಮಾಡಲು ಗೋಮೂತ್ರ, ಗೋಮಾಯ ಮತ್ತು ಸುಣ್ಣ ಸೇರಿಸಿ ಮಾಡುವ ಮಿಶ್ರಣಕ್ಕೆ ಬೀಜಾಮೃತ ಎಂದು ಕರೆಯುತ್ತಾರೆ.

ಬೀಜಾಮೃತ ಬಳಸುವ ಉದ್ದೇಶ :

ಬೀಜ ಬಿತ್ತನೆ ಮಾಡಿದ ನಂತರ ಮೊಳಕೆಯೊಡೆದು, ಬೆಳವಣಿಗೆ ಆಗುವ ಸಂದರ್ಭದಲ್ಲಿ ಹಲವಾರು ರೋಗಗಳಿರುತ್ತದೆ. ಬೀಜ ಮತ್ತು ಮಣ್ಣಿಂದ ಹರಡುವ ರೋಗಗಳನ್ನು ಮುಂಚೆಯೇ ತಡೆಗಟ್ಟಲು ಬೀಜಾಮೃತ ಸಹಾಯ ಮಾಡುತ್ತದೆ.

ಬೀಜಾಮೃತ ತಯಾರಿಕೆಗೆ ಬೇಕಾಗಿರುವ ಸಾಮಾಗ್ರಿಗಳು:

ಗೋಮೂತ್ರ-5 ಲೀಟರ್

ಗೋವಯ- 5ಕೆ.ಜಿ

ಸುಣ್ಣ–50 ಗ್ರಾಂ

ಬೀಜಾಮೃತ ತಯಾರಿಕೆ ಹೇಗೆ ಮಾಡುವುದು ?

ಮೊದಲಿಗೆ ಒಂದು ತೆಳುವಾದ ಹತ್ತಿ ಬಟ್ಟಯಲ್ಲಿ 5ಕೆ.ಜಿ ಗೋಮಾಯವನ್ನು ಹಾಕಿ ಗಂಟನ್ನು ಕಟ್ಟಿಕೊಳ್ಳಬೇಕು. ಆ ಗಂಟನ್ನು ಒಂದು ಕೋಲಿನ ಸಹಾಯದಿಂದ 20 ಲೀಟರ್ ನೀರಿನಲ್ಲಿ ಇಳಿ ಬಿಡಬೇಕು. ಗೋಮಾಯಗಂಟು ನೀರಿನ ತಳವನ್ನು ಸ್ಪರ್ಶಮಾಡಬಾರದು. ಆದರೆ ಸಂಪೂರ್ಣವಾಗಿ ಮುಳುಗಬೇಕು. ನಂತರ 50 ಗ್ರಾಂ ಸುಣ್ಣವನ್ನು 1 ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಬೇಕು. ಈ ಎರಡು ಮಿಶ್ರಣವನ್ನು 12ರಿಂದ1 3 ಗಂಟೆಗಳ ಕಾಲ ಹಾಗೆಯೇ ಬಿಡಬೇಕು.

ಬೀಜಾಮೃತದ ಉಪಯೋಗಗಳು:

 ಮೊಳಕೆ ಹೊಡೆಯುವಿಕೆಯನ್ನು ಹೆಚ್ಚುಗೊಳಿಸುವುದು.

 ಬೀಜ ಮತ್ತು ಮಣ್ಣಿನಿಂದ ಹರಡುವ ರೋಗವನ್ನು ಕಡಿಮೆ ಮಾಡುತ್ತದೆ.

 ಸೂಕ್ಷ್ಮ ಜೀವಾಣುವನ್ನು ಸ್ಥಿರೀಕರಿಸಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚು  ಮಾಡುತ್ತದೆ.

ಬೀಜದ ಒಳಗೆ ಇರುವ ಕೀಟ ಮತ್ತು ಶಿಲೀಂದ್ರಗಳ ಮೇಲೆ ಪರಿಣಾಮ ಬೀರುತ್ತದೆ.

ಸಾರಜನಕ ಮತ್ತು ರಂಜಕವನ್ನು ಬೀಜಕ್ಕೆ ಸ್ಥಿರೀಕರಿಸಿ ಮೊಳಕೆಯೊಡೆದು ಒಳ್ಳೆಯ ರೋಗ ನಿರೋಧಕ ಸಸಿಗಳು ಬೆಳೆದು ಉತ್ತಮ ಇಳುವರಿಯನ್ನು ನೀಡಲು ಸಹಕರಿಸುತ್ತದೆ.

ಲೇಖನ: ಡಾ. ಪ್ರಿಯಾಂಕ .ಎಂ., ಡಾ. ಶಿವಶರಣಪ್ಪ ಎಸ್. ಪಾಟೀಲ್ ಮತ್ತು ಡಾ. ಕಿರಣ್ ಬಿ.ಓ.

ಸಹಾಯಕ ಪ್ರಾಧ್ಯಾಪಕರು (ಗುತ್ತಿಗೆ), ತೋಟಗಾರಿಕೆ ವಿಶ್ವ ವಿದ್ಯಾಲಯ, ಮೂಡಿಗೆರೆ,

ಸಂಶೋಧನಾ ಸಹಾಯಕರು, ಕೃಷಿ ವಿಶ್ವವಿದ್ಯಾಲಯ, ಜಿ.ಕೆ.ವಿ.ಕೆ ಬೆಂಗಳೂರು

ಸಹಾಯಕ ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ, ಬಿಜಾಪುರ