Agripedia

ಕಬ್ಬಿನಲ್ಲಿ ಗೊಣ್ಣೆಹುಳು /ಬೇರುಹುಳು ಮತ್ತು ಅದರ ನಿರ್ವಹಣೆ

25 December, 2020 7:30 PM IST By:
sugercane

ಕಬ್ಬು ಬೆಳೆದ ರೈತರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಿಸುತ್ತಲೇ ಇದ್ದಾರೆ ಕಳೆದೆರಡು ತಿಂಗಳ ಹಿಂದೆ ಅತೀವೃಷ್ಟಿಯಿಂದಾಗಿ ಬೆಳೆ ಹಾಳಾದರೆ ಈಗ ಹುಳಗಳ ಹಾವಳಿಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೌದು ಮಂಡ್ಯ, ಬೆಳಗಾವಿ, ಬಾಗಲಕೋಟೆ,ವಿಜಯಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕಬ್ಬು ಬೆಳೆಯುವ ರೈತರ ಪರಿಸ್ಥಿತಿ ಇದಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಬೆಳೆಗೆ ಒಂದು ಪ್ರಮುಖವಾದ ಕೀಟ ಬಾಧಿಸುತ್ತಿದೆ. ಈ ಕೀಟದ ಹಾವಳಿಯಿಂದ ಶೇಕಡಾ10ರಿಂದ 100ರ ವರೆಗೂ ಬೆಳೆ ನಾಶವಾದ ಉದಾಹಣೆಗಳು ಇವೆ. ಆ ಕೀಟ ಯಾವುದು ಮತ್ತು ಅದರ ನಿರ್ವಹಣೆ ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಕಬ್ಬಿನಲ್ಲಿ ಗೊನ್ನೆಹುಳು /ಬೇರುಹುಳು ಮತ್ತು ಅದರ ನಿರ್ವಹಣೆ:

 ಗೊನ್ನೆ ಹುಳು ಅಥವಾ ಬೇರು ಹುಳು ಇದರ ವೈಜ್ಞಾನಿಕ ಹೆಸರು ಹೊಲೊಟ್ರೈಕಿಯ ಸೆರ್ರೆಟಾ. ಇದು ಕೊಲಿಯೊಪ್ಟೆರ್ ಗುಂಪಿನ ಮೆಲಲೊಂಥಿಡೆ ಕುಟುಂಬಕ್ಕೆ ಸೇರಿದೆ.

 ಜೀವನ ಚಕ್ರ : ‌ ಪ್ರೌಢ ಕೀಟವು ಏಪ್ರಿಲ್ ಮೇ ತಿಂಗಳಿನ ಮಳೆಗಳ ನಂತರ ಹೊರಬರುತ್ತದೆ,ಹಾಗೂ ಇದು ರಾತ್ರಿಯಲ್ಲಿ ತುಂಬಾ ಚಟುವಟಿಕೆ ಹೊಂದಿರುತ್ತದೆ.

‌ಇವು ಬೇವು, ಅಕೇಶಿಯ,ಮೊರಿಂಗ ಗಿಡಗಳ ಎಲೆಗಳನ್ನು ತಿಂದು, ಈ ಗಿಡಗಳ ಮೇಲೆಯೇ ಗಂಡು ಮತ್ತು ಹೆಣ್ಣು ಕೀಟ ಮಿಲನ ಹೊಂದಿ ಸಂತಾನೋತ್ಪತ್ತಿ ಮಾಡುತ್ತವೆ.‌ ಒಂದು ಹೆಣ್ಣು ಕೀಟವು ಸರಾಸರಿ 26 ಮೊಟ್ಟೆಯಿಡುವ ಸಾಮರ್ಥ್ಯ ಹೊಂದಿದೆ. ಮುಂದೆ ಈ ಮೊಟ್ಟೆಯಿಂದ ಲಾರ್ವ ( ಗ್ರಬ್ಸ್) ಹೊರಬರುತ್ತದೆ, ಇವು ಪ್ರೌಢ ಕೀಟಗಳಿಗಿಂತ ತುಂಬಾ ಹಾನಿಕಾರಕ.

‌ ಗ್ರಬಗಳು ಮೆತ್ತನೆಯ ದೇಹ ಹೊಂದಿದ್ದು, 'C' ಆಕಾರದಲ್ಲಿ ಇರುತ್ತವೆ. ‌ ಗ್ರಬ್ಸ್ ಮುಂದಿನ 170-180 ದಿನಗಳಲ್ಲಿ ರೂಪಾಂತರ ಹೊಂದಿ (instars) ಕೋಶಾವಸ್ಥೆಯನ್ನು (pupal stage) ತಲುಪುತ್ತವೆ,ಮುಂದೆ ಇದರಿಂದ ಪ್ರೌಢ ಕೀಟ ಹೊರ ಬರುತ್ತದೆ.

ಕೀಟ ಭಾದೆಯ ಪರಿಣಾಮಗಳು:

‌ ಮೊದಲ ರೂಪಾಂತರ (first instar) ಹೊಂದಿದ ಗ್ರಬ್ ಸಾವಯುವ ಪದಾರ್ಥವನ್ನು ಮತ್ತು ಮುಂದಿನ ಬೆಳೆವಣಿಗೆ ಹೊಂದಿದ ಗ್ರಬ್ ಸಸ್ಯದ ಬೇರುಗಳನ್ನು ತಿನ್ನುತ್ತವೆ. ‌ಇದರ ಪರಿಣಾಮವಾಗಿ ಸಸ್ಯಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ,ಹಾಗೂ ಬಾಧೆಗೊಳಗಾದ ಕಬ್ಬು ಸರಾಗವಾಗಿ ಕಿತ್ತು ಬರುತ್ತದೆ.

ನಿಯಂತ್ರಣ:

‌ ಏಪ್ರಿಲ್ ಮತ್ತು ಮೇ ತಿಂಗಳಿನ ಮಳೆಯ ತಕ್ಷಣವೇ ರಾತ್ರಿ ಹೊತ್ತು (7:30-8:30) ಬೆಳಕು ಬಲೆಗಳನ್ನು ಬಳಸಿ ಪ್ರೌಢ ಕೀಟಗಳನ್ನು ಸೆರೆ ಹಿಡಿದು ಕೊಲ್ಲುವುದು. ಆಳವಾದ ಉಳುಮೆ ಮಾಡುವುದರಿಂದ ಭೂಮಿಯಲ್ಲಿನ ಕೀಟದ ಕೋಶಗಳು ( pupa) ನಾಶವಾಗುತ್ತವೆ. ‌ ಗೊನ್ನೆಹುಳು ಭಾದಿತ ಕಬ್ಬಿನ ಹೊಲದಲ್ಲಿ 24 ಗಂಟೆಗಳ ಕಾಲ ನೀರು ನಿಲ್ಲಿಸುವುದರಿಂದ ಗ್ರಬ್ಗಳು ಮಣ್ಣಿನ ಮೇಲ್ಮೈಗೆ ಬಂದು ಸಾಯುತ್ತವೆ.‌ ಕೀಟನಾಶಕಗಳಾದ ಕ್ವಿನಲ್ಫಾಸ್, ಫೋರೆಟ್ 25ಕೆಜಿ ಪ್ರತಿ ಹೆಕ್ಟೇರಿಗೆ ಬಳಸಬಹುದು .

‌ಯಾವ ಗಿಡದ ಟೊಂಗೆಯ ಎಲೆಗಳನ್ನು ಪ್ರೌಢ ಕೀಟ ತಿಂದಿರುತ್ತದೆಯೋ ಆ ಗಿಡದ ಟೊಂಗೆಗಳನ್ನು ಯಾವುದಾದರೂ ಒಂದು ಕೀಟನಾಶಕದದಲ್ಲಿ (dichlorovos ಉದಾಹರಣೆಗೆ) ಅದ್ದುವುದರಿಂದ ಪ್ರೌಢ ಕೀಟಗಳನ್ನು ನಿಯಂತ್ರಿಸಬಹುದು.

ಸೂಚನೆ : ಕೀಟನಾಶಕದ ಪ್ರಭಾವವು ಬೆಳೆದ ಗ್ರಬ್ಸ್ ಮೇಲೆ ತುಂಬಾ ಕಡಿಮೆ .ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಹಲವು ಜೈವಿಕ ಕೀಟನಾಶಕಗಳ ಉಪಯೋಗ ಈ ಕೀಟದ ಮೇಲೆ ಬಹಳ ಪರಿಣಾಮಕಾರಿಯಾಗಿದೆ. ಅದೆಂದರೆ ಮೆಟ್ಯಾರೈಜಿಯಮ್ ಅನಿಸೋಪ್ಲಿಯೆ . ಇದು ಒಂದು ಶಿಲೀಂಧ್ರವಾಗಿದ್ದು, ಇದು ಗ್ರಬಗಳನ್ನು green muscardine ಎಂಬ ರೋಗಕ್ಕೆ ತುತ್ತಾಗಿಸಿ ಅವುಗಳನ್ನು ಕೊಲ್ಲುತ್ತದೆ .

ಇದು ಈಗಿನ ಎಲ್ಲಾ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಅನೇಕ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. ಇದು ಪುಡಿ ರೂಪದಲ್ಲಿ ದೊರೆಯುತ್ತದೆ. ಇದನ್ನು 4-5ಕೆಜಿ ಪ್ರತಿ ಎಕರೆಗೆ ಬಳಸಬೇಕು,ಕೊಟ್ಟಿಗೆ ಗೊಬ್ಬರದ ಜೊತೆಯೂ ಸಹ ಇದನ್ನು ಬಳಸಬಹುದು.(ಮೇ- ಜೂನ್ ತಿಂಗಳಲ್ಲಿ ಬಳಸಿದರೆ ಇನ್ನೂ ಉತ್ತಮ). ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲೂ ಲಭ್ಯವಿದ್ದು , ಪ್ರತಿ ಕೆಜಿಗೆ 250₹ ದರ ಹೊಂದಿದ್ದು, ಒಂದು ಮತ್ತು ಐದು ಕೆಜಿ ಪ್ಯಾಕೆಟ್ಗಳಲ್ಲಿ ಸಿಗುತ್ತದೆ.

ಲೇಖಕರು: ಆತ್ಮಾನಂದ ಹೈಗರ್