Agripedia

ತೊಗರಿಗೆ ಆತಂಕ ತಂದ ಮಂಜು: ಹೂ ಉದುರುವಿಕೆ ತಡೆಯಲು ಮುಂಜಾಗ್ರತ ಕ್ರಮಕೈಗೊಳ್ಳಲು ಸಲಹೆ

23 October, 2020 9:42 AM IST By:

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಸೇರಿದಂತೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸದ್ಯ ತೊಗರಿ ಮೊಗ್ಗು ಹಾಗೂ ಆರಂಭದ ಹೂವಾಡುವಿಕೆ ಹಂತದಲ್ಲಿದೆ. ಆದರೆ ಇತ್ತೀಚೆಗೆ ಮಂಜಿನ ವಾತಾವರಣದಿಂದಾಗಿ ತೊಗರಿ ಬೆಳೆದ ರೈತರಿಗೆ ಆತಂಕ ಶುರುವಾಗಿದೆ.

 ಬೆಳಿಗ್ಗೆ ಮಂಜಿನ ವಾತಾವರಣದಿಂದ ಎಲೆ, ದೇಟು ಹಾಗೂ ಹೂವಿನ ಮೇಲೆ ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವ ಲಕ್ಷಣಗಳು ಕಂಡಬರುತ್ತಿದೆ. ಇದರಿಂದ ಮೊಗ್ಗು ಹಾಗೂ ಹೂ ಉದುರುವ ಸಾಧ್ಯತೆಯೂ ಇದೆ.. ಇದರ ನಿರ್ವಹಣೆಗೆ ರೈತರು ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‌ಗಿಂತ ಕಡೆಮೆ ಹಾಗೂ ಮೋಡಕವಿದ ವಾತವರಣ, ತುಂತುರು ಮಳೆ, ಮಂಜು ಇದ್ದಾಗ ರೋಗದ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ. ಈ ರೋಗದ ಚಿಹ್ನೆಗಳು ಕಂಡು ಬಂದಾಗ ಪ್ರತಿ ಲೀಟರ್ ನೀರಿಗೆ 1 ಗ್ರಾಂ. ಕಾರ್ಬಂಡೈಜಿಮ್ ಬೆರೆಸಿ ಸಿಂಪಡಿಸಬೇಕು. ತೊಗರಿಯಲ್ಲಿ ಹೂ ಉದಿರುವಿಕೆ ನಿಲ್ಲಿಸಲು ಪಲ್ಸ್‌  ಮ್ಯಾಜಿಕ್ 2 ಕೆ.ಜಿ 200 ಲೀಟರ್‌ ನೀರಿನ ಬ್ಯಾರಲ್‌ ಅನ್ನು ಪ್ರತಿ ಎಕರೆಗೆ ಸಿಂಪಡಿಸಬೇಕು.

ಬೆಳೆಯ ಮೇಲೆ ಮಂಜಿನ ಹನಿಗಳು ಬಿದ್ದ ನಂತರ ಮೊಗ್ಗು ಮತ್ತು ಹೂ ಕಪ್ಪಾಗಿ ಸುಟ್ಟು ಎಲೆಗಳಲ್ಲೂ ಕೂಡ ಎಲೆಚುಕ್ಕೆ ರೋಗ ಕಂಡು ಬಂದಿದೆ. ಪ್ರತಿ ವಾರ ಆಗುತ್ತಿರುವ ವಾತಾವರಣದ ಹವಾಮಾನ ಬದಲಾವಣೆ, ಭೂಮಿಯ ತೇವಾಂಶ ರೋಗದ ತೀವ್ರತೆ ಮೇಲೆ ಪರಿಣಾಮ ಬೀರುತ್ತಿದೆ. ಚಳಿಯ ಅಂಶ ಹೆಚ್ಚಾದಲ್ಲಿ ಮಾತ್ರ, ಹೊಸ ಮೊಗ್ಗು ಮತ್ತು ಹೂಗಳ ರಚನೆ ಉತ್ತಮ ಆಗಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ರಾಜು ಜಿ. ತೆಗ್ಗೆಳ್ಳಿ ಹಾಗೂ ಜಹೀರ್ ಅಹಮ್ಮದ್ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ 60 ಮಳೆಯ ದಿನಗಳು ಪೂರೈಸಿದ್ದು ಒಟ್ಟಾರೆ 1352 ಮಿ.ಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮಂಜಿನ ವಾತಾವರಣ ನಸುಕಿನ ವೇಳೆ ಇರುವುದರಿಂದ ತೊಗರಿಯ ಹೂವು ಮತ್ತು ಮಗ್ಗು ಕಪ್ಪಾಗಿ ಸುಡದಂತೆ ಹಾಗೂ ಉದರದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 94484 08397 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.