ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2023- 24ನೇ ಸಾಲಿನಲ್ಲಿ ಭತ್ತ, ರಾಗಿ, ಜೋಳ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿಸಲು ಡಿ.01 ರಿಂದ ರೈತರ ನೊಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ರೈತರ ನೊಂದಣಿ ಪ್ರಕ್ರಿಯೆಯು ರಾಗಿ ಮತ್ತು ಜೋಳ ಬೆಳೆಗಳಿಗೆ ಡಿ.01 ರಿಂದ ನಡೆಯಲಿದ್ದು, ಭತ್ತ ಬೆಳೆಗೆ ಈಗಾಗಲೇ ಆರಂಭವಾಗಿದೆ ಹಾಗೂ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಯು 2024ನೇ ಜನವರಿ 1ರಿಂದ 2024ನೇ ಮಾರ್ಚ್ 31ರವರೆಗೆ ನಡೆಯಲಿದೆ.
ಕೃಷಿ ಉತ್ಪನ್ನಗಳಾದ ಸಾಮಾನ್ಯ ಭತ್ತಕ್ಕೆ( ಪ್ರತಿ ಕ್ವಿಂಟಲ್‍ಗೆ) ರೂ.2183, ಗ್ರೇಡ್ ಎ- ಭತ್ತಕ್ಕೆ ರೂ.2203, ರಾಗಿಗೆ ರೂ.3846, ಹೈಬ್ರೀಡ್- ಬಿಳಿ ಜೋಳಕ್ಕೆ ರೂ.3180, ಮಾಲ್ದಂಡಿ- ಬಿಳಿ ಜೋಳಕ್ಕೆ ರೂ.3225 ಕನಿಷ್ಠ ಬೆಂಬಲ ಬೆಲೆಗಳಾಗಿವೆ.
ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕು ಕೇಂದ್ರ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಭತ್ತ, ರಾಗಿ, ಜೋಳ ಮಾರಾಟ ಮಾಡಲು ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನೋಂದಣಿ ಮತ್ತು ಖರೀದಿ ಕೇಂದ್ರಗಳ ವಿವರ
ಬಳ್ಳಾರಿಯ ತಾಲ್ಲೂಕಿನ ಎಪಿಎಂಸಿ ಯಾರ್ಡ್, ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಹಾಗೂ ಎಸ್‍ಡಬ್ಲ್ಯೂಸಿ ಗೋದಾಮು- 01 ಮತ್ತು 02. ಕುರುಗೋಡು ತಾಲ್ಲೂಕಿನ ಎಪಿಎಂಸಿ ಯಾರ್ಡ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. ಸಿರುಗುಪ್ಪ ತಾಲ್ಲೂಕಿನ ಎಪಿಎಂಸಿ ಯಾರ್ಡ್, ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ. ಸಂಡೂರು ತಾಲ್ಲೂಕಿನ ಎಪಿಎಂಸಿ ಯಾರ್ಡ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಂಪ್ಲಿ ತಾಲ್ಲೂಕಿನ ಎಪಿಎಂಸಿ ಯಾರ್ಡ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನೊಂದಣಿ ಮತ್ತು ಖರೀದಿ ಕೇಂದ್ರಗಳಾಗಿವೆ.
ಸೂಚನೆಗಳು
ಎಲ್ಲಾ ಹೋಬಳಿ ಮಟ್ಟದ ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮುಖಾಂತರ ರೈತರ ನೊಂದಣಿಯನ್ನು ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಅವರ ಫ್ರೂಟ್ಸ್ಐ.ಡಿ.( ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ( Farmer Registration and Unified Beneficiary Information System- FRUITS) ಮತ್ತು ಆಧಾರ್‍ನೊಂದಿಗೆ ನೊಂದಣಿ ಕೇಂದ್ರಕ್ಕೆ ಬರಬೇಕು. ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೊಂದಾಯಿಸದೇ ಕೇವಲ ಅವರ ಫ್ರೂಟ್ಸ್ಐ.ಡಿ.ಯ ಮೂಲಕ ಖರೀದಿಗೆ ನೊಂದಾಯಿಸಲಾಗುತ್ತದೆ.