Agripedia

ನುಗ್ಗೆ ಬೇಸಾಯ ಮಾಡಿ: ನುಗ್ಗಿ ಬರುವುದು ಆದಾಯ

18 September, 2020 12:13 PM IST By:

ನುಗ್ಗೆ ಬೆಳೆಯುವುದು ಅತೀ ಕಷ್ಟದ ಕೆಲಸ ಅಲ್ಲವೇ ಅಲ್ಲ, ಕಡಿಮೆ ಶ್ರಮ, ಅತೀ ಕಡಿಮೆ ನಿರ್ವಹಣೆಯಿಂದ  ಹೆಚ್ಚು ಲಾಭ ತಂದುಕೊಡುವ  ನುಗ್ಗೆಯನ್ನು ತಮ್ಮ ಹೊಲಗದ್ದೆಗಳಲ್ಲಿ ಅಥವಾ ಪಾಳು ಬಿದ್ದರುವ ಜಮೀನುಗಳಲ್ಲಿ ಬೆಳೆಸಿದರೆ ಕೈತುಂಬ ಸಂಪಾದನೆ ನಿಶ್ಚಿತ. ಅಂದಹಾಗೇ, ನುಗ್ಗೆ ಬೆಳೆಯುವುದು ಹೇಗೆ ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ...... 

ನುಗ್ಗೆ, ಒಂದು ಬಹುವಾರ್ಷಿಕ ತರಕಾರಿ ಬೆಳೆಯಾಗಿದೆ. ಅದನ್ನು ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಈ ಬೆಳೆಗೆ, ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ಈ ಬೆಳೆಯನ್ನು ನಾಟಿ ಮಾಡಲು ಜೂನ್‌- ಜುಲೈ ಪ್ರಶಸ್ತ ತಿಂಗಳು. ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲಾ ಕಾಲದಲ್ಲಿಯೂ ನಾಟಿ ಮಾಡಬಹುದು.

 ಬೇರೆ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿಯೂ ನುಗ್ಗೆ ಸಾಕಷ್ಟು ಆದಾಯವನ್ನು ತಂದುಕೊಡಬಲ್ಲುದು. ರಾಸಾಯನಿಕ ಬಳಸಿ ನುಗ್ಗೆ ಬೆಳೆಯುತ್ತೇನೆ ಅಂದರೆ ಪ್ರಯೋಜನವಿಲ್ಲ. ಸಾವಯವ ಪದ್ಧತಿಯಲ್ಲಿ ಬೆಳೆದು ನೋಡಿ, ಬಂಪರ್‌ ಇಳುವರಿ ಗ್ಯಾರಂಟಿ.

ಮನೆಯ ಅಕ್ಕ-ಪಕ್ಕ ತೋಟ ಗದ್ದೆಗಳಲ್ಲಿಯ ಬೇಲಿಯ ಗುಂಟಗಳಲ್ಲಿ ಬೆಳಸಬಹುದು. ಅತ್ಯಂತ ಕನಿಷ್ಟ ವೆಚ್ಚದಲ್ಲಿ ಭಾರಿ ಲಾಭ ತಂದುಕೊಡುವ ಈ ನುಗ್ಗೆ ಮರ ಕಲ್ಪ ವಕ್ಷವಿದ್ದಂತೆ, ಇದರ ಯಾವ ಭಾಗವೂ ನಿರುಪಯುಕ್ತವಿಲ್ಲ. ಭೌಗೋಳಿಕವಾಗಿ ಯಾವ ಪ್ರದೇಶದಲ್ಲಿಯೂ ನುಗ್ಗೆ ಮರಗಳು ಹೇರಳವಾಗಿ ಬೆಳೆಯುತ್ತವೆ. ಅತಿ ಕಡಿಮೆ ತೇವಾಂಶದಲ್ಲಿಯೂ ಹುಲುಸಾಗಿ ಬೆಳೆಯುವ ಈ ಮರಗಳು ಪ್ರಕತಿಯ ಎಂತಹ ವೈಪರೀತ್ಯ ಸ್ವರೂಪಕ್ಕೂ ಜಗ್ಗದ ನುಗ್ಗೆ ಬೆಳೆ ಕ್ಷೀಣಗೊಳ್ಳುವುದಿಲ್ಲ.

ತಳಿಗಳು:

ಭಾಗ್ಯ (ಕೆ.ಡಿ.ಎಮ್‌-01), ಪಿ.ಕೆ.ಎಮ್‌-01, ಧನರಾಜ್‌ (ಸೆಲೆಕ್ಷನ್‌ 64) ಮತ್ತು ಜಿ.ಕೆ.ವಿ.ಕೆ- 2, 3 ಎಂಬ ಗಿಡ್ಡ ತಳಿಗಳಿವೆ. ಎಕರೆಗೆ 100 ಗ್ರಾಂ ಬೀಜ ಹಾಗೂ ಸಸಿಗಳಾದಲ್ಲಿ 370 ಬೇಕಾಗುತ್ತದೆ.

ರಾಸಾನಿಕದ ಬಳಸಿದರೆ ಪ್ರಯೋಜನವಿಲ್ಲ:

ರಾಸಾಯನಿಕ ಗೊಬ್ಬರಗಳನ್ನು ಸುರಿದು ಕೃಷಿ ಮಾಡುತ್ತೇನೆಂದರೆ ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಸಾವಯವ ಜೈವಿಕ ವಸ್ತುಗಳಲ್ಲೇ ನುಗ್ಗೆ ಹುಲುಸಾಗಿ ಬೆಳೆಯುವುದು. ಎರೆಹುಳು ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ನೀಡಿ ನಿರ್ವಹಿಸಲು ಸಾಧ್ಯ. ಜತೆಗೆ ಜೀವಾಮೃತ ತಯಾರಿಸಿಕೊಂಡು ಪ್ರತಿ ಇಪ್ಪತ್ತು ದಿನಕ್ಕೊಮ್ಮೆ ಸಿಂಪಡಿಸಿದರೆ ಯಾವುದೇ ರೋಗ-ಕೀಟ ಬಾಧೆಯಿಲ್ಲದೇ ಹುಸುಲಾಗಿ ಬೆಳೆಯುತ್ತವೆ.

ಬೆಳೆಯುವ ಪದ್ಧತಿ:

ನುಗ್ಗೆ ತೀರ ದೊಡ್ಡ  ಗಿಡವಾಗುವ ಬೆಳೆ ಅಲ್ಲ, ಆರೇಳು ಅಡಿ ಎತ್ತರಕ್ಕೆ ಪೊದೆಯಾಕಾರದಲ್ಲಿ ಬೆಳೆಸಬೇಕು, ಹೀಗಾಗಿ ಜಾಸ್ತಿ ಅಂತರ ಇಟ್ಟು ಬೆಳೆಯುವ ಅವಶ್ಯಕತೆ ಇಲ್ಲ. ಸಾಲಿನಿಂದ ಸಾಲಿಗೆ ಏಳು ಅಡಿ, ಗಿಡದಿಂದ ಗಿಡಕ್ಕೆ ಆರು ಅಡಿ ಸಾಕು. ಹೀಗೆ ನಿಮ್ಮ ಜಮೀನಿನಲ್ಲಿ ಅಳತೆ ಪ್ರಕಾರ ಗುರುತು ಮಾಡಿಕೊಂಡು ಒಂದೂವರೆ ಅಡಿ ಆಳ-ಅಗಲದ ಗುಂಡಿ ತೆಗೆಸಬೇಕು.  ಗುಂಡಿಯಿಂದ ತೆಗೆದ ಮಣ್ಣು ಹಾಗೂ ಅಷ್ಟೇ ಪ್ರಮಾಣದ ಒಳ್ಳೆಯ ಕೊಟ್ಟಿಗೆ ಗೊಬ್ಬರ ಬೆರೆಸಿ ಅದೇ ಗುಂಡಿಗೆ ತುಂಬಬೇಕು. ಹೀಗೆ ರೆಡಿಯಾದ ಗುಂಡಿಯಲ್ಲಿ ಸದೃಢವಾದ ಸಸಿ ನೆಡಬೇಕು. ನುಗ್ಗೆ ಟ್ರಿಮ್ ಮಾಡುತ್ತಿದ್ದರೆ ಚೆನ್ನಾಗಿ ಚಿಗುರಿ ಬೇಗ ಬೇಗ ಇಳುವರಿ ಪಡೆಯಲು ಸಾಧ್ಯ. ಅಡಕೆ, ತೆಂಗು, ಶ್ರೀಗಂಧ, ಮಾವು, ಸೀಬೆ, ನಿಂಬೆ ಹೀಗೆ ಯಾವುದೇ ತೋಟಗಾರಿಕೆ ಬೆಳೆಗಳ ನಡುವೆ ಸೂಕ್ತ ಅಂತರದಲ್ಲಿ ಮಿಶ್ರ ಬೆಳೆಯಾಗಿ ನುಗ್ಗೆಯನ್ನು ಕೂರಿಸಬಹುದು.ಮನೆಯ ಅಕ್ಕಪಕ್ಕದಲ್ಲಿಯೂ, ತೋಟ ಗದ್ದೆಗಳ ಬೇಲಿಯ  ಗುಂಟಗಳಲ್ಲಿ ಅತೀ ಸರಳವಾಗಿ ಇದನ್ನು ಬೆಳೆಸಬಹುದು.

ಆರೋಗ್ಯಕಾರಿ ಮರದಲ್ಲಿ ಬೆಳೆಯುವ ಒಂದು ಕಾಯಿ 60-70 ಸೆಂ.ಮೀ. (ಎರಡು ಅಡಿ) ಉದ್ದ ಇರುತ್ತದೆ. ಒಂದು ಕಾಯಿ ಕನಿಷ್ಠ 100-120 ಗ್ರಾಂ. ತೂಕ ಇರಬೇಕು. ಒಂದು ಗಿಡ ಒಂದು ವರ್ಷಕ್ಕೆ ಕಮ್ಮಿಯೆಂದರೂ 250-300 ಕಾಯಿ ಬಿಡುತ್ತದೆ. ಹೆಚ್ಚಿನ ಕೂಲಿ ಕಾರ್ಮಿಕರ ಅಗತ್ಯವೂ ಬೀಳುವುದಿಲ್ಲ. ಉತ್ತಮ ಆರೈಕೆ ಮಾಡಿದರೆ ಕೇವಲ ನಾಲ್ಕು ತಿಂಗಳಲ್ಲಿ ಫಸಲನ್ನು ಪಡೆಯಬಹುದು.