Agripedia

ಶುಂಠಿಯಲ್ಲಿ ಉತ್ತಮ ಗುಣಮಟ್ಟದ ಬೀಜ ಕೊಂಬುಗಳ ಉತ್ಪಾದನೆ

12 September, 2021 1:57 PM IST By:

ಶುಂಠಿಯು ‘ಜಿಂಜಿಬರೇಸಿ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ವಾರ್ಷಿಕ ಸಾಂಬಾರು ಬೆಳೆಯಾಗಿದೆ. ಇದು ತನ್ನದೇ ಆದಂತಹ ಸುವಾಸನೆ ಮತ್ತು ಔಷಧಿ ಗುಣಗಳನ್ನು ಹೊಂದಿದ್ದು ಉಷ್ಣವಲಯದ ಬೆಳೆಯಾಗಿದ್ದರೂ ಸಹ ಸಮಶೀತೋಷ್ಣ ವಲಯಗಳಿಗೆ ಹೊಂದಿಕೊಂಡಂತಹ ಬೆಳೆಯಾಗಿದೆ. ಶುಂಠಿಯು ಒಂದು ಮಣ್ಣಿನ ಮೇಲ್ಬಾಗದಲ್ಲಿ ತನ್ನ ಬೇರುಗಳನ್ನು ಹರಡಿಕೊಂಡು, ಸ್ವಲ್ಪ ಪ್ರಮಾಣದ ನೆರಳನ್ನು ಇಷ್ಟಪಡುವ ಬೆಳೆಯಾದ್ದರಿಂದ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಅಂತರ ಬೆಳೆಯಾಗಿ ಮತ್ತು ಮನೆಯ ಹಿತ್ತಲಲ್ಲಿಯೂ ಸಹ ಬೆಳೆಯಲು ಸೂಕ್ತವಾದ ಬೆಳೆ. ಶುಂಠಿಯನ್ನು ಮಳೆಯಾಶ್ರಿತ ಬೆಳೆಯಾಗಿ ಕೇರಳದಲ್ಲಿ ಬೆಳೆಯುತ್ತಾರೆ. ಭಾರತದ ಉತ್ತರ ಮಧ್ಯಭಾಗಗಳಲ್ಲಿ ನೀರಾವರಿ ನೆರವಿನಿಂದ ಬೆಳೆಯಲಾಗುತ್ತಿದೆ. ಭಾರತವು ಶುಂಠಿಯನ್ನುಅತೀ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ದೇಶವಾಗಿದ್ದು, ಸುಮಾರು 1.60 ಲಕ್ಷ ಹೆಕ್ಟರ್‌ ಕ್ಷೇತ್ರದಿಂದ 7.45 ಲಕ್ಷಟನ್ ಸಾಂಬಾರು ಶುಂಠಿಯನ್ನು ಉತ್ಪಾದಿಸಲಾಗುತ್ತಿದೆ. ಶುಂಠಿ ಬೆಳೆಯಲ್ಲಿ ಉತ್ತಮ ತಳಿಯು ಅಧಿಕ ಪ್ರಮಾಣದ ‘ಓಲಿಯೋರೆಸಿನ್’ ಮತ್ತು ಸುಗಂಧದೆಣ್ಣೆ ಹೊಂದಿರಬೇಕಾಗಿದ್ದು ನಾರಿನ ಪ್ರಮಾಣ ಕಡಿಮೆ ಇರಬೇಕು.

ಉತ್ತಮ ಗುಣಮಟ್ಟದ ಶುಂಠಿ ಬೀಜ ಕೊಂಬುಗಳ ಉತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳು:

ಶುಂಠಿ ಬೆಳೆಯನ್ನು ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ, ಮಳೆಯಾಶ್ರಯದಲ್ಲಿ ಹಾಗೂ ಕಡಿಮೆ ಮಳೆಯಾಗುವ ಪ್ರದೇಶದಲ್ಲಿ, ನೀರಾವರಿ ಬೆಳೆಯಾಗಿ ಬೆಳೆಯುತ್ತಾರೆ. ಭಾರತದಲ್ಲಿ ಮಣ್ಣಿನ ವಿಧ, ಇಳಿಜಾರು, ಮಳೆಯ ಪ್ರಮಾಣ ಮತ್ತು ನಿರ್ವಹಣೆಗೆ ಅನುಗುಣವಾಗಿ ವಿವಿಧ ರೀತಿಯ ಉತ್ಪಾದನಾ ವಿಧಾನವನ್ನು ಅನುಸರಿಸಲಾಗುತ್ತದೆ. ತಗ್ಗು ಮತ್ತು ದಿಬ್ಬ ಹಾಗೂ ಏರು ವಿಧಾನಗಳಲ್ಲಿ ಬೆಳೆಯಲಾಗುತ್ತಿದೆ.

ಶುಂಠಿಯು ಸಾಮಾನ್ಯವಾಗಿ 7 ರಿಂದ 8 ತಿಂಗಳ ಅವಧಿಯ ಬೆಳೆಯಾಗಿದ್ದು ಸಾಮಾನ್ಯವಾಗಿ ಜನೇವರಿ-ಫೆಬ್ರುವರಿ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.   ಇಂತಹ ಶುಂಠಿ ಕೊಂಬುಗಳನ್ನು ಮುಂದಿನ ಬೆಳೆಗಾಗಿ ಬಳಸಲು ಮೇ- ಜೂನ್‌ ತನಕ ಕಾಯ್ದಿರಿಸಬೇಕಾಗುತ್ತದೆ. ರೈತರು ವಿವಿಧ ಸಂಗ್ರಹಣಾ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ಸಂಗ್ರಹಣೆಯಲ್ಲಿ ಶೇಕಡಾ 10 ರಿಂದ 50 ರಷ್ಟು ಬೀಜ ನಾಶವಾಗುತ್ತದೆ. ಅಂದರೆ ಸಾಮಾನ್ಯವಾಗಿ 3 ರಿಂದ 4 ತಿಂಗಳುಗಳವರೆಗೆ ಗಡ್ಡೆಗಳು ಚಿಗುರದಂತೆ, ಒಣಗದಂತೆ ಮತ್ತು ರೋಗಮತ್ತು ಕೀಟಗಳ ಭಾದೆಗೆತುತ್ತಾಗಿ ಕೊಳೆಯದಂತೆ ನೋಡಿಕೊಳ್ಳಬೇಕಾಗುತ್ತದೆ.  ಈ ಹಿನ್ನೆಲೆಯಲ್ಲಿ ಬೀಜೋಪಚಾರ ಮಾಡಿ ಸೂಕ್ತ ರೀತಿಯಲ್ಲಿ ಸಂಗ್ರಹಿಸಿಡುವುದರ ಕುರಿತು ವಿಶೇಷ ಗಮನ ಕೊಡಬೇಕಾಗುತ್ತದೆ.

  • ಕೀಟ ಮತ್ತು ರೋಗಗಳಿಂದ ಶುಂಠಿ ಬೀಜಗಳ ಸಂರಕ್ಷಣೆ

ಪೂರ್ತಿಯಾಗಿ ಬಲಿತ ಬೀಜವನ್ನು ಆರಿಸಿ ಶೇಕಡಾ 0.05ರ ಕ್ವಿನಾಲ್‌ಪಾಸ್ ಮತ್ತು ಶೇಕಡಾ 0.3ರಡೈಥೇನ್ ಎಂ. 45 ದ್ರಾವಣದಲ್ಲಿ 30 ನಿಮಿಷಗಳ ಕಾಲ ಅದ್ದಿ ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಬೇಕು. ನಾಟಿ ಮಾಡುವ ಸಲುವಾಗಿ ಆಯ್ದ ಶುಂಠಿ ಕೊಂಬುಗಳನ್ನು 3 ಗ್ರ‍್ರಾಂ ಮ್ಯಾಂಕೋಜೆಬ್ 75 ಡಬ್ಲೂ. ಪಿ. ಅಥವಾ 6 ಗ್ರಾಂ ಮೆಟಲಾಕ್ಸಿಲ್ ಎಂ.ಝಡ್-72 ಡಬ್ಲೂ. ಪಿ. ಮತ್ತು 2 ಮಿ.ಲೀ. ಕ್ವಿನಾಲ್‌ಫಾಸ್‌ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ತಯಾರಿಸಿದ ದ್ರಾವಣದಲ್ಲಿ ಸುಮಾರು 30 ನಿಮಿಷಗಳ ಕಾಲ ನೆನೆಸಬೇಕು. ನಂತರ ನೆರಳಿನಲ್ಲಿ ಆರಲು ಬಿಡಬೇಕು. ಈ ರೀತಿ ಬೀಜೋಪಚಾರವನ್ನು ಸಂಗ್ರಹಣೆಗೆ ಮುನ್ನ ಮತ್ತು ನಾಟಿ ಮಾಡುವುದಕ್ಕಿಂತ ಮೊದಲು ಕೈಗೊಳ್ಳುವುದರಿಂದ ಗಡ್ಡೆ ಕೊಳೆ ಮತ್ತು ಸಂಗ್ರಹಣೆಯಲ್ಲಿ ಬರುವ ಶಲ್ಕ (ಸ್ಕೇಲ್) ಕೀಟಗಳ ಬಾಧೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.  ದುಂಡಾಣುವಿನ ಸಮಸ್ಯೆಯಿದ್ದರೆ 200 ಪಿಪಿಎಮ್ ಸ್ಟೈಪ್ಟೊಸೈಕ್ಲಿನ್‌ ದ್ರಾವಣದಲ್ಲಿ ಮಿಶ್ರ ಮಾಡಿ ಬಳಸಬೇಕು.

  • ಶುಂಠಿ ಬೀಜಗಳ ಸಂಗ್ರಹಣೆ

ಈಬೀಜಗಳನ್ನು 220 ರಿಂದ 250 ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಸಂಗ್ರಹಿಸಿಡುವುದರಿಂದ ಮೊಳಕೆಯ ಮೊಗ್ಗು ದಪ್ಪವಾಗಿ ಮತ್ತು ಸದೃಢವಾಗಿರುತ್ತದೆ. ಸಂಗ್ರಹಣೆಯಲ್ಲಿ ತೇವಾಂಶ ಕಡಿಮೆಯಾದರೆ ಬೀಜದಿಂದ ತೇವಾಂಶ ಆವಿಯಾಗಿ ಗಡ್ಡೆಗಳು ಕುಗ್ಗುತ್ತವೆ, ಮೊಗ್ಗಿನ ಗುಣಮಟ್ಟ ಮತ್ತು ಮೊಳಕೆಯ ಪ್ರಮಾಣ ಕಡಿಮೆಯಾಗುತ್ತದೆ. ಬೀಜೋಪಚಾರ ಮಾಡಿದ ಶುಂಠಿಯನ್ನು ನೆರಳಿರುವ ಸ್ಥಳಗಳಲ್ಲಿ ಇಲ್ಲವೆ ಹೊದಿಕೆ ಹಾಕಿದ ಗುಡಿಸಲುಗಳಲ್ಲಿ ಮರಳಿನ ಮೇಲೆ ತೆಳ್ಳಗೆ ಹರಡಿ, ಒಣ ಎಲೆಗಳಿಂದ ಮುಚ್ಚಿ ಸಂಗ್ರಹಿಸಬೇಕು. ಶುಂಠಿಯ ಬೀಜಕೊಂಬುಗಳನ್ನು ಶೂನ್ಯ ಶಕ್ತಿ ಶೀತಗ್ರಹದಲ್ಲಿ (ಝಡ್.ಈ.ಸಿ.ಸಿ) ಇಡುವುದರಿಂದ ನಾಟಿಕಾಲದವರೆಗೆ (ಮೇ-ಜೂನ್) ಕೆಡದಂತೆ ಕಾಯ್ದುಕೊಳ್ಳಬಹುದಾಗಿದೆ. ಸಂಗ್ರಹಣೆಯಲ್ಲಿ ತಿಂಗಳಿಗೊಮ್ಮೆ ಪರೀಕ್ಷಿಸಿ ಕೊಳೆತ ಗಡ್ಡೆಗಳನ್ನು ತೆಗೆದು ಹಾಕುತ್ತಿರಬೇಕು.

  • ಬೀಜಗಳ ನಾಟಿ

ಒಂದು ಹೆಕ್ಟರ್ ಪ್ರದೇಶಕ್ಕೆ ಬೀಜದ ಪ್ರಮಾಣವು 1.50 ರಿಂದ 2.00 ಟನ್‌ರ ಬೀಜದ ಕೊಂಬುಗಳು ಬೇಕಾಗುತ್ತದೆ. ಬಿತ್ತನೆ ಬೀಜಕೊಂಬುಗಳು ಸುಮಾರು 20 ರಿಂದ 25 ಗ್ರಾಂತೂಕ ಹೊಂದಿರಬೇಕು.  ಬಿತ್ತನೆ ಕೊಂಬುಗಳನ್ನು ಸುಮಾರು 5 ಸೆಂ. ಮೀ ಆಳದಲ್ಲಿ ನಾಟಿ ಮಾಡುವುದು ಉತ್ತಮವಾಗಿದೆ.

  • ನಾಟಿ ನಂತರದ ಬೇಸಾಯ ಕ್ರಮಗಳು

ಶುಂಠಿಯು ಒಂದುಗಡ್ಡೆ ಬೆಳೆಯಾಗಿರುವುದರಿಂದ, ಗಡ್ಡೆ ಬೆಳವಣಿಗೆ ಆಗಲು ಮಣ್ಣನ್ನು ಎರಿಸುವುದು ಅತೀ ಮುಖ್ಯವಾದ ಕೆಲಸವಾಗಿದೆ. ಸಾಮಾನ್ಯವಾಗಿ ಎರಡರಿಂದ ಮೂರು ಬಾರಿ ಮಣ್ಣನ್ನು ಏರಿಸುವುದು, ಕಳೆ ತೆಗೆಯುವುದು ಮತ್ತುಗೊಬ್ಬರವನ್ನು ಹಾಕುವ ಕೆಲಸಗಳು ಒಂದೇ ಸಮಯದಲ್ಲಿ ಮಾಡಬಹುದು. ನೆಲಕ್ಕೆ ಹೊದಿಕೆ / ಮುಚ್ಚಿಗೆ ಮಾಡುವುದು ಮಳೆಯಾಶ್ರಿತ ಪ್ರದೇಶದಲ್ಲಿ ಅನುಸರಿಸುವ ಮುಖ್ಯ ಪದ್ಧತಿಯಾಗಿದೆ.

ನಾಟಿ ಮಾಡಿದ ಮೇಲೆ ಸುಮಾರು 15.00 ಟನ್‌ಗಳಷ್ಟು ಮತ್ತು ನಾಟಿಯಾದ 45 ದಿನಗಳ ನಂತರ (ಕಳೆ ತೆಗೆದು, ಗೊಬ್ಬರ ಪೂರೈಸಿದ ಮೇಲೆ) 7.50 ಟನ್‌ ಹಾಗು ನಾಟಿ ಮಾಡಿದ 90 ದಿನಗಳ ನಂತರ ಸುಮಾರು 5.0 ಟನ್ ಪ್ರಮಾಣದಲ್ಲಿ ಮುಚ್ಚಿಗೆಗೆ ಲಭ್ಯವಿರುವ ಸಾವಯವ ತ್ಯಾಜ್ಯ ಪದಾರ್ಥಗಳನ್ನು ಬಳಸಬೇಕು. ಇದರಿಂದ ಕಳೆನಿಯಂತ್ರಣ ವಾಗುವುದಲ್ಲದೇ ತೇವಾಂಶ ಸಂರಕ್ಷಣೆಯಾಗಿ ಉತ್ತಮವಾದ ಇಳುವರಿಯನ್ನು ಪಡೆಯಬಹುದಾಗಿದೆ. ಸಾಂಪ್ರದಾಯಿಕವಾಗಿ ಕಳೆಯನ್ನು ಕೈಯಿಂದ ತೆಗೆಯುತ್ತಾರೆ. ಆದರೆ ಭಾರತದ ಪ್ರತಿಯೊಂದು ರಾಜ್ಯ ಅಥವಾ ಪ್ರದೇಶಗಳಲ್ಲಿ ತಮ್ಮ ಸ್ಥಳೀಯ ವಾತಾವರಣಕ್ಕೆ ಹೊಂದಾಣಿಕೆಯಾಗುವಂತಹ ಪದ್ಧತಿಗಳನ್ನು ಅನುಸರಿಸುತ್ತಾರೆ.

ಇದು ಒಂದು ವಾರ್ಷಿಕ ಬೆಳೆಯಾಗಿರುವುದರಿಂದ ಅಂತರ ಬೆಳೆ ಅಥವಾ ಮಿಶ್ರ ಬೆಳೆಯಾಗಿಯೂ ಸಹ ಬೆಳಯಬಹುದು. ಶುಂಠಿಯು ನೆರಳನ್ನು ಇಷ್ಟಪಡುವ ಬೆಳೆಯಾಗಿರುವುದರಿಂದ ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈ ಬೆಳೆಗಳಿಗೆ ಶೇಕಡಾ 25 ರಷ್ಟು ನೆರಳಿನ ಅವಶ್ಯಕತೆಇದೆ. ಹೆಚ್ಚು ನೆರಳು ಇಳುವರಿಯನ್ನು ಕಡಿಮೆ ಮಾಡುತ್ತದೆ. ಸಮತಟ್ಟಾದ ಪ್ರದೇಶಗಳಲ್ಲಿ ಯಾಂತ್ರೀಕರಣಗಳನ್ನು ಬಳಸಬಹುದು. ಸಂಪನ್ನೂಲಗಳನ್ನು ಮಿತವ್ಯಯಿಸಲು ಮತ್ತು ಇಳುವರಿಯನ್ನು ಹೆಚ್ಚಿಸಲು ಏರು ಮಡಿಯಲ್ಲಿ ಬೆಳೆಸಿ ಹನಿ ನೀರಾವರಿ, ರಸಾವರಿ ಮತ್ತು ತುಂತುರು ನೀರಾವರಿ ವಿಧಾನಗಳನ್ನು ಬಳಸಬಹುದಾಗಿದೆ.

ಶುಂಠಿ ಬೆಳೆಯಲ್ಲಿ ಸಸ್ಯ ನಾಟಿ ಮಾಡುವ ಪದ್ದತಿ :

ಈ ಪದ್ದತಿಯು ಇತ್ತೀಚಿನ ದಿನಗಗಳಲ್ಲಿ ಪ್ರಚಲಿತದಲ್ಲಿದ್ದು ಇದೊಂದು ಲಾಭದಾಯಕ ವಿಧಾನವೆಂದು ಕAಡುಬಂದಿದೆ. ಈ ಪದ್ದತಿಯಲ್ಲಿ ಸುಮಾರು 5 ಗ್ರಾಂತೂಕದ ಬೀಜ ಕೊಂಬುಗಳ ತುಂಡನ್ನು ಬಳಸುವದರಿಂದ ಬೀಜದ ಕೊಂಬುಗಳ ಪ್ರಮಾಣದಲ್ಲಿ ಗಣನೀಯವಾಗಿ ಉಳಿತಾಯವಾಗುತ್ತದೆ. ಇದಲ್ಲದೇ ಈ ವಿಧಾನದಲ್ಲಿ ಪಡೆಯಲಾಗುವ ಇಳುವರಿ ಸಾಂಪ್ರದಾಯಿಕ ವಿಧಾನದಿಂದ ಪಡೆಯುವ ಇಳುವರಿಯಷ್ಟೇ ಆಗಿರುತ್ತದೆಯಲ್ಲದೇ ಉತ್ತಮಗುಣಮಟ್ಟ ಹೊಂದಿರುತ್ತದೆ. ಈ ಪದ್ದತಿಯಲ್ಲಿ ಶುಂಠಿ ಸಸ್ಯಗಳನ್ನು ನಾಟಿ ಮಾಡುವ 30 ರಿಂದ 40 ದಿನಗಳ ಮುಂಚಿತವಾಗಿ ಪ್ರೋ-ಟ್ರೇಇಲ್ಲವೇ ಉಸುಕಿನ ಮಡಿಯಲ್ಲಿ ಈ ಕೆಳಗೆ ಸೂಚಿಸಿದಂತೆ ಬೆಳೆಸಿಕೊಳ್ಳಬೇಕಾಗುತ್ತದೆ.

             ಆರೋಗ್ಯಯುತ ಸಸಿಗಳಿಂದ ಬೆಳೆಸಲಾದ ಪೂರ್ತಿಯಾಗಿ ಬಲಿತ ಬೀಜಕೊಂಬುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

             ಶಿಫಾರಸ್ಸಿನಂತೆ ಶಿಲೀಂಧ್ರ‍್ರನಾಶಕ ಮತ್ತು ಕೀಟನಾಶಕವನ್ನು ಬಳಸಿ 30 ನಿಮಿಷಗಳ ಕಾಲ ಬೀಜೋಪಚಾರ ಮಾಡಬೇಕು ಮತ್ತು ಸೂಕ್ತ ರೀತಿಯಲ್ಲಿ ಬೀಜಕೊಂಬುಗಳನ್ನು ಶೇಖರಿಸಿಡಬೇಕು.

             ನಾಟಿ ಮಾಡುವ ಸುಮಾರು ಒಂದು ತಿಂಗಳು ಮುಂಚಿತವಾಗಿ ಬೀಜಕೊಂಬುಗಳನ್ನು ಕತ್ತರಿಸಿ ಸುಮಾರು 4 ರಿಂದ 6 ಗ್ರಾಂ ತೂಕದ ತುಂಡುಗಳನ್ನು ತಯಾರಿಸಬೇಕು. ಪ್ರತೀ ಬೀಜ ಕೊಂಬಿನ ತುಂಡುಗಳಲ್ಲಿ ಒಂದು ಉತ್ತಮವಾದ ಗಣ್ಣು ಇರುವಂತೆ ನೋಡಿಕೊಳ್ಳಬೇಕು.

             ಶಿಫಾರಸ್ಸು ಮಾಡಿದ ಶಿಲೀಂಧ್ರ‍್ರನಾಶಕ ಮತ್ತು ಕೀಟನಾಶಕವನ್ನು ಬಳಸಿ ಬೀಜ ಕೊಂಬಿನ ತುಂಡುಗಳನ್ನು ನಾಟಿ ಮಾಡುವ ಮುನ್ನ 30 ನಿಮಿಷಗಳ ಕಾಲ ಬೀಜೋಪಚಾರ ಮಾಡಬೇಕು.

ಪ್ರೋ-ಟ್ರೇಯಲ್ಲಿ ಸೂಕ್ತವಾದ ನರ್ಸರಿ ಮೀಡಿಯಾ (ತೆಂಗಿನ ನಾರಿನ ಪುಡಿ ಮತ್ತು ಟ್ರೆಕೋಡರ್ಮಾ ಜೈವಿಕ ಶಿಲೀಂಧ್ರ‍್ರನಾಶಕದಿಂದ ಉಪಚರಿಸಿದ ಎರೆಹುಳು ಗೊಬ್ಬರ ಮಿಶ್ರಿಣ) ತುಂಬಿ ಬೀಜಕೊಂಬುಗಳನ್ನು ನಾಟಿ ಮಾಡಬೇಕು. ನಾಟಿ ಮಾಡಿದ ಪ್ರೋಟ್ರೇಯನ್ನು ನೆರಳುಮನೆಯಲ್ಲಿಡಬೇಕು.

  •              ಅವಶ್ಯಕತೆಗನುಗುಣವಾಗಿ ಬೀಜಕೊಂಬುಗಳಿಗೆ ನೀರುಣಿಸುತ್ತಿರಬೇಕು ಮತ್ತು ಇತರೆ ನರ್ಸರಿ ಕಾಳಜಿಗಳನ್ನು ವಹಿಸುತ್ತಿರಬೇಕು. ಸಸಿಗಳು ಸುಮಾರು 30 ದಿನಗಳ ಬೆಳವಣಿಗೆ ಹೊಂದಿದ ನಂತರ ನಾಟಿಗೆ ಬಳಸಬೇಕು.

ಲೇಖನ: ಮಹಂತೇಶ್ ಪಿ. ಎಸ್. ಮತ್ತುಸ್ವಾತಿ ಶೆಟ್ಟಿ ವೈ ಸಂಶೋಧನಾ ಸಹಾಯಕರು, ನೈಸರ್ಗಿಕ ಕೃಷಿ (ZBNF) ಯೋಜನೆ,  ZAHRS, ಬ್ರಹ್ಮಾವರ, ಉಡುಪಿ