ಈಗಾಗಲೇ ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದರಿಂದ ಈರುಳ್ಳಿ ಬೆಳೆಗಾರರು ಮುಂಜಾಗ್ರತೆ ವಹಿಸುವುದರೊಂದಿಗೆ ಸಿದ್ದತೆ ಮಾಡಿಕೊಂಡರೆ ಉತ್ತಮ. ಕರ್ನಾಟಕ ರಾಕ್ಯದ ಹಲವು ಜಿಲ್ಲೆಗಳಾದ ಚಿತ್ರದುರ್ಗ, ಗದಗ, ಬಿಜಾಪುರ ಮತ್ತು ಬಾಗಲಕೋಟೆ ಮುಂತಾದ ಕಡೆ ಮುಂಗಾರಿನಲ್ಲಿ ಈರುಳ್ಳಿ ಮುಖ್ಯ ಬೆಳೆಯಾಗಿದೆ.
ಬಿತ್ತನೆ ಮಾಡುವ ಮೋದಲು ಬೆಳೆಗಾರರು ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ತಿಳಿದುಕೊಂಡು ಅದಕ್ಕನುಗುಣವಾಗಿ ಪೋಷಕಾಂಶಗಳನ್ನು ನೀಡುವುದು ಉತ್ತಮ. ಒಳ್ಳೆಯ ತಳಿಯನ್ನು ಆಯ್ಕೆ ಮಾಡುವುದರ ಜೊತೆಗೆ ರೋಗ ಮತ್ತು ಕೀಟಗಳ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಸುರಕ್ಷಿತ ಬೆಳೆ ವಿಧಾನಗಳನ್ನು ಅಳವಡಿಸಿಕೊಂಡರೆ ಒಳ್ಳೆಯ ಲಾಭ ಪಡೆಯುವಲ್ಲಿ ಯಶಸ್ವಿಯಾಗಬಹುದು.
ಮುಂಜಾಗ್ರತಾ ಕ್ರಮಗಳು:
- ಈರುಳ್ಳಿ ಬೆಳೆಗೆ, ನೀರು ಬಸಿದು ಹೋಗುವಂತಹ ಜಮೀನನ್ನು ಆಯ್ಕೆ ಮಾಡಿಕೊಳ್ಳಬೇಕು.
- ಬಿತ್ತನೆ ಮಾಡುವ ಮೊದಲು ಬೀಜೋಪಚಾರಕ್ಕೆ 4-5 ಗ್ರಾಂ ಟ್ರೈಕೋಡರ್ಮಾ ಶಿಲೀಂಧ್ರನಾಶಕವನ್ನು 1 ಕೆ.ಜಿ ಬೀಜಕ್ಕೆ ಉಪಚರಿಸಬೇಕು.
- ಬೀಜ ಬಿತ್ತಮೆ ಮಾಡಿದ ಒಂದು ತಿಂಗಳ ಬಳಿಕ ದಟ್ಟವಾಗಿ ಬೆಳೆದಿದ್ದಲ್ಲಿ ಸಸಿಯಿಂದ ಸಸಿಗೆ 8-10 ಸೆಂ.ಮೀ. ಅಳತೆಯಂತೆ ಕೀಳಬೇಕು.
- ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಅಷ್ಟೇ ಪ್ರಮಾಣದಲ್ಲಿ 2 ರಿಂದ 2.5 ತಿಂಗಳೊಳಗೆ ನೀಡಬೇಕು.
ಪೋಷಕಾಂಶ ನಿರ್ವಹಣೆ:
- ಕೊಟ್ಟಿಗೆ ಗೊಬ್ಬರ – 10-12 ಟನ್ /ಎಕರೆಗೆ.
- 50:30:50 ಕೆ.ಜಿ ಸಾರಜನಕ: ರಂಜಕ: ಪೊಟ್ಯಾಶ್.
- 50 ಕೆ,ಜಿ ಯೂರಿಯಾ, 175 ಕೆ.ಜಿ ಸೂಪರ್ ಫಾಸ್ಪೇಟ್ ಹಾಗು 65 ಕೆ.ಜಿ ಎಂ.ಓ.ಪಿಯನ್ನು ಬಿತ್ತನೆ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು.
- ಬಿತ್ತಿದ 4-5 ದಿನಗಳ ನಂತರ ಮೇಲು ಗೊಬ್ಬರವಾಗಿ 50 ಕೆ.ಜಿ ಅಮೋನಿಯಂ ಸಲ್ಪೇಟ್‌ನ್ನು ನೀಡಬೇಕು.
ರೋಗ ಮತ್ತು ಕೀಟಗಳ ನಿಯಂತ್ರಣ:
- ಈರುಳ್ಳಿ ಬೆಳೆಯ ಸುತ್ತಲೂ, ಗೋವಿನ ಜೋಳವನ್ನು ದಟ್ಟವಾಗಿ ತಡೆಗೋಡೆಯ ಮಾದರಿಯಲ್ಲಿ ಬೆಳೆಸಬೇಕು. ಇದರಿಂದ ಸಾಂಕ್ರಾಮಿಕ ರೋಗಹಳನ್ನು ಹರಡುವ ರಸಹೀರುವ ಕೀಟಗಳನ್ನು ನಿಯಂತರಿಸಬಹುದು.
- ಈರುಳ್ಳಿ ಬೆಳೆಯಲ್ಲಿ ಥ್ರಿಪ್ಸ್ ನುಸಿಯ ಸಮರ್ಪಕ ಹತೋಟಿಗಾಗಿ ಹಳದಿ ಬಣ್ಣದ ಅಂಟನ್ನು ಎಕರೆಗೆ 8-10 ಸಂಖ್ಯೆಯಲ್ಲಿ ನೆಲದಿಂದ 1 ರಿಂದ 1.5 ಅಡಿ ಎತ್ತರ ಗೂಟವನ್ನು ಕಟ್ಟಿ ನೆಡಬೇಕು.
ಕೊಯ್ಲು: ಬಿತ್ತನೆ ಮಾಡಿದ 110-120 ದಿನಗಳ ನಂತರ ಬೆಳೆಯು ಕಟಾವಿಗೆ ಬರುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಶೇ. 50 ರಷ್ಟು ಬಾಡಿದಾಗ ಕಟಾವು ಮಾಡಬೇಕು. ಕೊಯ್ಲಿಗೆ ಒಂದು ವಾರ ಮುಂಚಿತವಾಗಿ ಬೆಳೆಗೆಡ ನೀರು ಒದಗಿಸಬೇಕು. ಕೊಯ್ಲು ಮಾಡಿದ ನಂತರ ಗೆಡ್ಡೆಯ ಮೇಲೆ ಇರುವ ಎಲೆಗಳನ್ನು ತೆಗೆದು ಹಾಕಿ ಗೆಡ್ಡೆಗಳನ್ನು ನೆರಳಿನಲ್ಲಿ ಒಣಗಿಸಬೇಕು.
ಲೇಖನ: ಡಾ. ಪ್ರಿಯಾಂಕ .ಎಂ., ಮತ್ತು ಡಾ. ಕಿರಣ್ ಬಿ.ಓ.
ಸಹಾಯಕ ಪ್ರಾಧ್ಯಾಪಕರು (ಗುತ್ತಿಗೆ), ತೋಟಗಾರಿಕೆ ವಿಶ್ವ ವಿದ್ಯಾಲಯ, ಮೂಡಿಗೆರೆ, ಸಹಾಯಕ ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ, ವಿಜಯಪುರ