ಸುಮಾರು 3000 ವರ್ಷಗಳ ಹಿಂದೆ ಆ ಮಹಾ ಪ್ರವಾಹ ಬಾರದೇ ಇದ್ದಿದ್ದರೆ ನಾನಿಂದು ನಿಮಗೆ ನನ್ನ ಪರಿಚಯ ಮಾಡಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲವೇನೋ. ಆದರೆ, ಯಾರಿಗೂ ಬೇಡವಾಗಿದ್ದರೂ ಬಂದಪ್ಪಳಿಸಿದ ಆ ಪ್ರವಾಹ, ನಾನು ಇಂದು ನಿಮ್ಮ ನಡುವೆ ಬಂದು ನಿಂತಿರಲು ಕಾರಣ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಳೆದು, ಆನೆ ಸೇರಿ ಇತರೆ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವಾಗುತ್ತಾ ನೆಮ್ಮದಿಯಾಗಿ ಉಸಿರಾಡುತ್ತಿದ್ದ ನನ್ನ ಹೆಸರು ಪೊಕ್ಕಾಲಿ. ಬಹಳಷ್ಟು ಮಂದಿ ಹೇಳುವಂತೆ ನಾನೇ ಜಗತ್ತಿನ ಅತ್ಯಂತ ಪುರಾತನ ಹಾಗೂ ಅತಿ ಎತ್ತರವಾಗಿ ಬೆಳೆಯುವ ಭತ್ತದ ತಳಿ. ನನಗೆ ಸುಮಾರು 3000 ವರ್ಷಗಳ ಸುಧೀರ್ಘ ಇತಿಹಾಸವಿದೆ.
ಮೊದಲೇ ಹೇಳಿದಂತೆ ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾನು ಹಾಯಾಗಿದ್ದೆ. ಆದರೆ, ಘನಘೋರವಾಗಿ ಬಂದಪ್ಪಳಿಸಿದ ಪ್ರವಾಹವೊಂದು, ನನ್ನನ್ನು ಸಮುದ್ರ ತೀರದ ಜನವಸತಿ ಪ್ರದೇಶಕ್ಕೆ ತಂದು ಬಿಟ್ಟಿತು. ಅಲ್ಲಿಗೆ ಪಶ್ಚಿಮ ಘಟ್ಟದ ಕಾಡುಗಳಲ್ಲಿ ನನ್ನ ಕುರುಹುಗಳು ನಾಮಾವಶೇಷವಾದವು. ಈ ಸಮುದ್ರ ತೀರದಲ್ಲೋ ಬರೀ ಉಪ್ಪು ಮಿಶ್ರಿತ ಮಣ್ಣು. ನೀರೂ ಉಪ್ಪೇ. ಆದರೂ ಅದಕ್ಕೆ ಹೊಂದಿಕೊAಡೇ ನಾನು ಬೆಳೆದೆ. ಮೊಳಕೆಯೊಡೆದು, ಬೆಳೆದು, ತೆನೆ ಬಿಟ್ಟು, ಒಣಗಿ ನಿಂತಿದ್ದ ನನ್ನನ್ನು ನೋಡಿದ ಆಸಾಮಿಯೊಬ್ಬ, ಕಟಾವು ಮಾಡಿಕೊಂಡು ಮನೆಗೆ ಕೊಂಡೊಯ್ದ. ನನ್ನ ಸಿಪ್ಪೆ ತೆಗೆದು ನೀರಲ್ಲಿ ಬೇಯಿಸಿ, ಹೊಟ್ಟೆಗಿಳಿಸಿದ. ಅವನಿಗೆ ನಾನು ಇಷ್ಟವಾದೆ! ಆತ ನನ್ನನ್ನು ತನ್ನ ಹೊಲಕ್ಕೆ ಕೊಂಡೊಯ್ದು ಬಿತ್ತಿ, ಬೆಳೆದ. ಹೀಗೆ ಆರಂಭವಾಗುವದು ನನ್ನ ಕೃಷಿ ಕಥೆ.
ಬಹು ದಿನಗಳ ಬಳಿಕ ನನಗೆ ಗೊತ್ತಾದದ್ದು ನಾನು ಹುಟ್ಟಿ ಬೆಳೆಯುತ್ತಿರುವುದು ಕೇರಳ ರಾಜ್ಯದಲ್ಲಿ. ಅತಿ ಹೆಚ್ಚು ನೀರಿನಲ್ಲಿ ಬೆಳೆಯುವ ನನ್ನನ್ನು ಕೇರಳದ ಅಲಪ್ಪುಳ, ತ್ರಿಶ್ಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳ ಸಮುದ್ರದ ಹಿನ್ನೀರಿನಲ್ಲಿ, ಸುಮಾರು 6000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ನಾನೆಷ್ಟು ಅದೃಷ್ಟಶಾಲಿ ಎಂದರೆ, ಮೂರು ಸಾವಿರ ವರ್ಷಗಳ ಹಿಂದೆ ನನ್ನನ್ನು ಬೆಳೆದದ್ದು ಸಾವಯವ ಪಪದ್ಧತಿಯಲ್ಲಿ. ಈಗಲೂ ನನ್ನ ರೈತಬಾಂಧವರು ನನ್ನನ್ನು ಬೆಳೆಯುತ್ತಿರುವುದು ಅದೇ ಸಾವಯವ ಪದತಿಯಲ್ಲಿ. ಯಾರೊಬ್ಬರೂ ನನಗೆ ರಾಸಾಯನಿಕ ಬಳಸುವ ಮನಸ್ಸು ಮಾಡಿಲ್ಲ. ಹೀಗಾಗಿ ನಾನು ಈಗಲೂ ಸ್ವಚ್ಛ, ವಿಶಮುಕ್ತ ಹಾಗೂ ಆರೋಗ್ಯದಾಯಕ. ಈ ಕಾರಣದಿಂದಲೇ ಸಹಸ್ರಾರು ವರ್ಷಗಳು ಉರುಳಿದರೂ ನನ್ನ ರುಚಿ ಇಂದಿಗೂ ಬದಲಾಗಿಲ್ಲ.
ನನ್ನದೇ ಒಂದು ಪರತ್ಯೇಕ ಕೃಷಿ!
ಇತರೆ ಭತ್ತದ ತಳಿಗಳ ಬೇಸಾಯವನ್ನು ಭತ್ತದ ಕೃಷಿ ಎಂದು ಕರೆದರೆ, ನನ್ನನ್ನು ಬಿತ್ತಿ ಬೆಳೆಯುವ ಕ್ರಮವನ್ನು ನನ್ನ ಹೆಸರಿನಿಂದಲೇ ಅಂದರೆ ‘ಪೊಕ್ಕಾಲಿ ಕೃಷಿ’ ಎಂದು ಕರೆಯಲಾಗುತ್ತದೆ. ಸಮುದ್ರ ತೀರದ ಗರಿಷ್ಠ ಪ್ರಮಾಣದ ಲವಣಾಂಶವನ್ನೂ ಸಹಿಸಿಕೊಳ್ಳುವ ಗುಣವನ್ನು ನಾನು ಹೊಂದಿದ್ದೇನೆ. ಹಾಗೇ ನನ್ನಷ್ಟು ಪ್ರೋಟೀನ್ ಹೊಂದಿರುವ, ರುಚಿಕರವಾಗಿರುವ ಅಕ್ಕಿ ಮತ್ತೊಂದಿಲ್ಲ. ಬೇರೆಲ್ಲಾ ಭತ್ತದ ತಳಿಗಳಿಗಿಂತಲೂ ಎತ್ತರ ಬೆಳೆಯುವ ನಾನು, ಔಷಧೀಯ ಅಂಶಗಳನ್ನು ಅಡಕವಾಗಿಸಿಕೊಂಡಿದ್ದೇನೆ.
ನನ್ನ ಅನ್ನ ಮಾಡಿಕೊಂಡು ಸೇವಿಸುವುದರಿಂದಲೇ ಮೀನುಗಾರರಿಗೆ, ದಿನಗಟ್ಟಲೆ ಸಮುದ್ರದೊಳಗೆ ವಿಹರಿಸಿ, ಮೀನುಗಳನ್ನು ಹಿಡಿದು ತರಲು ಶಕ್ತಿ ಬರುತ್ತದೆ. ನನ್ನಲ್ಲಿರುವ ಸಂಪದ್ಭರಿತ ಅಂಶಗಳನ್ನು ಸಂಶೋಧನೆ ಮೂಲಕ ಕಂಡುಕೊAಡ ಅಮೆರಿಕದ ಅರಿಝೋನಾ ವಿಶ್ವವಿದ್ಯಾಲಯವು ನನಗಾಗಿ ಪ್ರತ್ಯೇಕ ಡಿಎನ್‌ಎ ಗ್ರಂಥಾಲಯವನ್ನು ತೆರೆದಿದೆ ಎಂದರೆ ನೀವು ನಂಬಲೇಬೇಕು!
ನನ್ನನ್ನು ಬೆಳೆಯುವ ವಿಧಾನ
ಸಾಮಾನ್ಯವಾಗಿ ಜೂನ್-ನವೆಂಬರ್ ತಿಂಗಳುಗಳ ನಡುವೆ ನೀರಿನಲ್ಲಿ ಲವಣಾಂಶ ಪ್ರಮಾಣ ಕಡಿಮೆಯಾಗುತ್ತದೆ. ಈ ಅವಧಿಯಲ್ಲೇ ನನ್ನನ್ನು ಬಿತ್ತಿ, ನಾಟಿ ಮಾಡಿ ಬೆಳೆಯಲಾಗುತ್ತದೆ. ಬಳಿಕ ನವೆಂಬರ್‌ನಿಂದ ಏಪ್ರಿಲ್ ತಿಂಗಳ ನಡುವೆ, ನನ್ನನ್ನು ನಾಟಿ ಮಾಡುವ ಹೊಲದಲ್ಲೇ ಸಮುದ್ರ ಜೀವಿ ಪ್ರಾನ್ (ಸೀಗಡಿ) ಅನ್ನು ಬೆಳೆಸಲಾಗುತ್ತದೆ. ಈ ಸೀಗಡಿಗಳ ತ್ಯಾಜ್ಯದಿಂದಾಗಿ ನನಗೆ ಅತಿ ಹೆಚ್ಚು ಪೋಷಕಾಂಶಗಳು ದೊರೆಯುವುದರಿಂದ ನಾನು ಅತ್ಯಂತ ಫಲವತ್ತಾಗಿ ಬೆಳೆಯುತ್ತೇನೆ. ಜೊತೆಗೆ ಅತಿ ಹೆಚ್ಚು ಇಳುವರಿ ಕೊಡುತ್ತೇನೆ. ನಾನು ಸುಮಾರು 130-150 ಸೆಂ.ಮೀ ಉದ್ದ ಬೆಳೆಯುತ್ತೇನೆ. ಜೂನ್ ಎರಡು ಅಥವಾ ಮೂರನೇ ವಾರ ನನ್ನನ್ನು ನಾಟಿ ಮಾಡುವ ರೈತರು, ಅಕ್ಟೋಬರ್ ಕೊನೆಯ ವಾರದಿಂದ ಕೊಯ್ಲು ಆರಂಭಿಸುತ್ತಾರೆ. ವಿಶೇಷ ಏನೆಂದರೆ ಶ್ರೀಲಂಕಾದ ರೈತರೂ ನನ್ನನ್ನು ಬೆಳೆಯುತ್ತಾರೆ. ಕೇರಳದಿಂದ ಶ್ರೀಲಂಕಾಗೆ ಹೋದ ಬೌದ್ಧ ಬಿಕ್ಕುಗಳು, ಮಿಷನರಿಗಳು ನನ್ನನ್ನು ಅಲ್ಲಿಗೆ ಕೊಂಡೊಯ್ದಿದ್ದರು ಎಂಬುದು ಇಲ್ಲಿನ ರೈತರ ವಾದ.
ಪೊಕ್ಕಾಲಿ ಎಂದರೆ ಏನು?
ಮಲಯಾಳಂ ಭಾಷೆಯಲ್ಲಿ ಪೊಕ್ಕಾಲಿ ಎಂದರೆ ‘ಎತ್ತರ ಬೆಳೆಯುವವನು’ ಎಂಬ ಅರ್ಥವಿದೆ. ಮೊದಲೇ ನಾನು ಐದೂವರೆಯಿಂದ ಆರು ಅಡಿ ಎತ್ತರ ಬೆಳೆಯುವುದರಿಂದ ನನಗೆ ಮಲಯಾಳಿ ಜನ ಈ ಹೆಸರು ಕೊಟ್ಟಿದ್ದಾರೆ. ನನ್ನ ಮತ್ತೊಂದು ವಿಶೇಷತೆ ಏನೆಂದರೆ ಹವಾಮಾನ ಸ್ಥಿತಿಸ್ಥಾಪಕತ್ವ. ಅಂದರೆ ಹವಾಮಾನ ಎಷ್ಟೇ ಬದಲಾದರೂ, ವಿಕೋಪಕ್ಕೆ ಹೋದರೂ ನಾನು ಮಾತ್ರ ದೃತಿಗೆಡುವುದಿಲ್ಲ. ಹಾಗೇ ನನ್ನನ್ನು ಸೇವಿಸುವವರ ಆರೋಗ್ಯದ ಕಾಳಜಿ ಮಾಡುತ್ತೇನೆ. ನಾನು ಉಪ್ಪು ನೀರು ಕುಡಿದೇ ಬೆಳೆದರೂ ನನ್ನನ್ನು ಸೇವಿಸುವವರಿಗೆ ಮಾತ್ರ ಉಪ್ಪಿನಿಂದ ಬರುವ ಕಾಯಿಲೆಗಳಿಂದ ರಕ್ಷಣೆ ನೀಡುತ್ತೇನೆ! ಇದು ನಾನೇ ನನ್ನ ಬಗ್ಗೆ ಹೇಳಿಕೊಳ್ಳುತ್ತಿರುವುದಲ್ಲ. ನನ್ನ ಮೇಲೆ ಎರಡು ದಶಕಗಳ ಕಾಲ ಅಧ್ಯಯನ ನಡೆಸಿದ ಜೆಎನ್‌ಯು ಪ್ರಾಧ್ಯಾಪಕರೊಬ್ಬರು ಹೇಳಿರುವ ಮಾತಿದು.
ವಾತಾವರಣ ಬದಲಾವಣೆಗೆ ಉತ್ತರ?
ಮನುಷ್ಯ ಇಂದು ವಾತಾವರಣ ಬದಲಾವಣೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದರೆ, ಪ್ರಕೃತಿಯೊಳಗೇ ಇರುವ ಪರಿಹಾರಗಳನ್ನು ಬಿಟ್ಟು, ವಿಜ್ಞಾನ, ತಂತ್ರಜ್ಞಾನದ ಮುಲಕ ಪರಿಹಾರ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದಾನೆ. ಆದರೆ ವಾತಾವರಣ ಬದಲಾವಣೆಗೆ ನಾನು ಪರಿಹಾರವಾಗಬಲ್ಲೆ. ಅದಕ್ಕಾಗಿ ಮನುಷ್ಯ ಮಾಡಬೇಕಿರುವುದು ಏನೆಂದರೆ ನಾನು ಹಾಗೂ ನನ್ನಂತೆಯೇ ಇರುವ ದೇಶೀಯ ಭತ್ತದ ತಳಿಗಳನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಬೇಕು. ಹಾಗಂತಾ, ಯಾವುದೇ ರಾಸಾಯನಿಕ ಬಳಸ ಕೂಡದು. ಸಾವಯವ ಪದ್ಧತಿಯಲ್ಲಿ ಮಾತ್ರ ಬೆಳೆಯಬೇಕು. ನೀರಿನಲ್ಲಿ ಬೆಳೆಯುವ ನಾನು, ಮನುಷ್ಯರಿಗೆ ಮಾತ್ರವಲ್ಲದೆ ನೀರಿನಲ್ಲಿರುವ ಜೀವಿಗಳಿಗೂ ಅಂದರೆ, ಜಲಚರಗಳಿಗೂ ಆಹಾರವಾಗುತ್ತೇನೆ. ಬಳಿಕ ನಾನು ಬೆಳೆಯಲು ಅಗತ್ಯವಿರುವ ಪೋಷಕಾಂಶಗಳನ್ನು ಆ ಜಲಚರಗಳಿಂದಲೇ ಪಡೆಯುತ್ತೇನೆ. ನನ್ನ ಮತ್ತು ಜಲಚರಗಳ ನಡುವಿನ ಈ ಅವಿನಾಭಾವ ಸಂಬAಧ ಪರಿಸರ ವ್ಯವಸ್ಥೆಯಲ್ಲಿ ಸಮತೋಲನವನ್ನು ಕಾಪಾಡುತ್ತದೆ.
ಪ್ರವಾಹಕ್ಕೂ ಜಗ್ಗಲಿಲ್ಲ!
ಕೆಲವು ವರ್ಷಗಳ ಹಿಂದೆ ಇತಿಹಾಸದಲ್ಲೇ ಎಂದೂ ಕಂಡಿರದAತಹ ಪ್ರಚಂಡ ಪ್ರವಾಹ ಕೇರಳ ರಾಜ್ಯದ ಮೇಲೆ ಬಂದೆರಗಿತು. ಆದರೆ, ಅಂತಹ ಪ್ರಚಂಡ ಪರವಾಹವೂ ನನ್ನನ್ನು ಏನೂ ಮಾಡಲಾಗಲಿಲ್ಲ. ರಾಜ್ಯದಲ್ಲಿ ನಾನು ಎಲ್ಲೆಲ್ಲಿ ಬೆಳೆದಿದ್ದೆನೋ ಅಲ್ಲೆಲ್ಲಾ ಒಂದು ಪೈಸೆಯಷ್ಟೂ ಹಾನಿಗೊಳಗಾಗದೆ ನಾನು ಬದುಕುಳಿದಿದ್ದೆ. ಇದು ನನ್ನ ಗಟ್ಟಿತನಕ್ಕೆ ಒಂದು ಉದಾಹರಣೆ!