Agripedia

ಮಾವಿನ ಬೆಳೆಯಲ್ಲಿ ಬೂದಿ ರೋಗ ಮತ್ತು ಜಿಗಿ ಹುಳು ಕೀಟದ ನಿರ್ವಹಣೆ

17 December, 2020 2:25 PM IST By:

ಮಾವು ನಮ್ಮ ರಾಷ್ಟ್ರದ ಹಾಗೂ ರಾಜ್ಯದ ಪ್ರಮುಖ ಹಣ್ಣಿನ ಬೆಳೆಯಾಗಿದ್ದು ಇದು ಹಣ್ಣುಗಳ ರಾಜ ಎಂದು ಪ್ರಚಲಿತವಾಗಿದೆ. ಮಾವು ಉಷ್ಣವಲಯದ ಹಣ್ಣುಗಳಲ್ಲಿ ಒಂದಾಗಿದ್ದು ಸುಮಾರು 6000 ವರ್ಷಗಳಿಂದಲೂ ನಮ್ಮ ದೇಶದಲ್ಲಿ ಬೆಳೆಯಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಮಾವು ಬೆಳೆಯುವ ಪ್ರದೇಶವೂ ಪ್ರತಿ ವರ್ಷ ಗಣನೀಯವಾಗಿ ಹೆಚ್ಚುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಮಾವು ಒಂದು ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು ಇತ್ತಿಚಿನ ಹವಾಮಾನ ವೈಪರೀತ್ಯ ದಿಂದ ಮೊಡಕವಿದ ವಾತಾವರಣದಿಂದಾಗಿ ಈ ಬೆಳೆಯಲ್ಲಿ ಬೂದಿ ರೋಗ ಹಾಗೂ ಜಿಗಿ ಹುಳುವಿನ ಬಾದೆ ಹೆಚ್ಚಾಗಿದೆ. ಇದರಿಂದ ಬೆಳೆಯನ್ನು ರಕ್ಷಿಸುವುದು ಅನಿವಾರ್ಯವಾಗಿದ್ದು ರೈತರು ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪೂರಕವಾಗಿ ಉತ್ತಮ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಮಾವಿನಲ್ಲಿ ಬೂದಿ ರೋಗ ನಿರ್ವಹಣೆ:

ಈ ಶಿಲೀಂಧ್ರ ರೋಗವು ವಿಶೇಷವಾಗಿ ಹೂ ಬಿಡುವ ಹಂತದಲ್ಲಿ, ಹೆಚ್ಚಾಗಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ನಿಂದ ಜನವರಿ ತಿಂಗಳುಗಳಲ್ಲಿ ರೋಗದ ಲಕ್ಷಣಗಳು  ಕಾಣಿಸಿಕೊಳ್ಳುತ್ತವೆ. ಏಕೆಂದರೆ ಈ ಅವಧಿಯಲ್ಲಿ ಹಗಲು ಹೆಚ್ಚು ಉಷ್ಣಾಂಶದಿಂದ ಕೂಡಿದ್ದು ರಾತ್ರಿಯ ವೇಳೆ ಚಳಿ ವಾತಾವರಣವಿದ್ದಾಗ ಬೂದಿ ರೋಗವು ಬಹಳಷ್ಟು ಬೇಗನೆ ಉಲ್ಭಣಗೊಳ್ಳುತ್ತದೆ.

ರೋಗದ ಲಕ್ಷಣಗಳು :  ಬೂದಿ ಬಣ್ಣದ ಅಥವಾ ದಟ್ಟ ಕಂದು ಬಣ್ಣದ ಚುಕ್ಕೆಗಳು, ಎಲೆಗಳ ಹಾಗೂ ಹಸಿರು ಕಾಂಡದ ಮೇಲೆ ಹಿಟ್ಟಿನ ಪದಾರ್ಥಗಳಂತೆ ಕಂಡುಬರುತ್ತವೆ. ಬಿಳಿ ಬಣ್ಣದ ಶಿಲೀಂಧ್ರಗಳು ಹೂಗಳ ಮೇಲೆ ಪಸರಿಸಿ ಇವುಗಳು ಕೊನೆಯಲ್ಲಿ ಕಂದು ಬಣ್ಣಕ್ಕೆ ತಿರುಗಿ ಒಣಗಿ ಉದುರುತ್ತದೆ.

ನಿರ್ವಹಣಾ ಕ್ರಮಗಳು :

ಬೂದಿ ರೋಗದ ಹತೋಟಿಗೆ ಪ್ರತಿ ವರ್ಷ ಮುಂಜಾಗ್ರತ ಕ್ರಮವಾಗಿ ಹೂ ಬಿಡುವ ಸಮಯದಲ್ಲಿ ಅಂತರವ್ಯಾಪಿ ಶಿಲೀಂಧ್ರ ನಾಶಕಗಳಾದ ಡೈನೋಕಾಪ್ 1 ಮಿ.ಲೀ. ಅಥವಾ ಹೆಕ್ಸಾಕೋನಾಜೋಲ್ 1 ಮಿ.ಲೀ. ಮತ್ತು ಸ್ಪರ್ಶ ಶಿಲೀಂದ್ರ ನಾಶಕಗಳಾದಂತಹ ವೆಟ್ಟೆಬಲ್ ಸಲ್ಫರ್ (ಗಂಧಕ) 3 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಈ ರೋಗದ ತೀವ್ರತೆಗನುಸಾರವಾಗಿ 15 ದಿವಸಗಳಿಗೊಮ್ಮೆ ಸಿಂಪರಣೆಯನ್ನು ಮಾಡಬೇಕು. ಇದರಿಂದ ಪರಿಣಾಮಕಾರಿಯಾಗಿ ಬೂದಿ ರೋಗವನ್ನು ನಿಯಂತ್ರಿಸಬಹುದು. 

ಜಿಗಿ ಹುಳುವಿನ ನಿರ್ವಹಣೆ :

ಜಿಗಿ ಹುಳು : ರೈತರು ಸಾಮಾನ್ಯವಾಗಿ ಜೋನೆ ಎಂದು ಕರೆಯುತ್ತಾರೆ. ಇವುಗಳು ನಸು ಹಳದಿ ಬಣ್ಣದ ಕೀಟಗಳಾಗಿದ್ದು, ನವಂಬರ್ ತಿಂಗಳಿಂದ ಫೆಬ್ರವರಿ ತಿಂಗಳವರೆಗೆ, ಮಾವು ಹೂ ಬಿಡುವ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಹಾಗೂ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ಇವುಗಳ ಸಂತಾನೋತ್ಪತ್ತಿಯಾಗುತ್ತದೆ. ಆದರೆ, ವರ್ಷದ ಉಳಿದ ತಿಂಗುಳುಗಳಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ಕಾಂಡದ ಮೇಲೆ ವಾಸಿಸುತ್ತಾ ಸಂತಾನೋತ್ಪತ್ತಿಯಾಗದೆ ಜೀವಿಸುತ್ತವೆ. ಹೆಣ್ಣು ಜಿಗಿ ಹುಳುಗಳು ಹೂ ಮೊಗ್ಗುಗಳಲ್ಲಿ ಮತ್ತು ಹೂ ಗೊಂಚಲಿನ ಹಸಿರು ಕಾಂಡದ ಮೇಲೆ ತನ್ನ ಮೊಟ್ಟೆಗಳನ್ನು ಇಡುತ್ತವೆ.

ಈ ಮೊಟ್ಟೆಗಳು ಹೊಡೆದು, ಅಪ್ಸರೆ ಹಾಗೂ ಪ್ರೌಢ ಕೀಟಗಳ ಎಲೆ ಹಾಗೂ ಹೂಗೊಂಚಲಿಂದ ರಸ ಹೀರುವುದರಿಂದ ಹೂವಿನ ಮೊಗ್ಗು ಮತ್ತು ಹೂಗಳು ಬಾಡಿ ಉದುರುತ್ತವೆ. ಈ ಕೀಟವೂ ಎಲೆಗಳ ಮೇಲೆ ಅಂಟಾದ ಸಿಹಿ ದ್ರವವನ್ನು ವಿಸರ್ಜಿಸುವುದರಿಂದ ಅವುಗಳ ಮೇಲೆ ಕಪ್ಪು ಬಣ್ಣದ ಶಿಲೀಂದ್ರ ಬೆಳೆದು, ಆಹಾರ ತಯಾರಿಕೆ ಕ್ರಿಯೆಗೆ ಅಡಚಣೆಯಾಗುತ್ತದೆ. ಈ ಕೀಟವನ್ನು ನಿಯಂತ್ರಿಸದಿದ್ದಲ್ಲಿ ಸುಮಾರು ಶೇ.20-60 ರಷ್ಟು ಇಳುವರಿ ಕುಂಠಿತವಾಗಬಹುದು.

ನಿರ್ವಹಣಾ ಕ್ರಮಗಳು :

ಜಿಗಿ ಹುಳುಗಳ ನಿಯಂತ್ರಣಕ್ಕಾಗಿ  0.5 ಮಿ. ಲೀ. ಇಮಿಡಾಕ್ಲೋಪ್ರಿಡ್ ಅಥವಾ 0.5 ಮಿ. ಲೀ. ಲ್ಯಾಮಡಾ ಸೈಹ್ಯಾಲೋಥ್ರಿನ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಕೀಟದ ಹಾವಳಿಗೆ ತಕ್ಕಂತೆ  ಅವಶ್ಯವಿದ್ದಲ್ಲಿ ಎರಡು ಅಥವಾ ಮೂರು ಬಾರಿ 15 ದಿವಸಗಳ ಅಂತರದಲ್ಲಿ ಸಿಂಪರಣೆ ಮಾಡಿ ಜಿಗಿ ಹುಳುಗಳ ನಿರ್ವಹಣೆ ಮಾಡಬಹುದು.

ಲೇಖನ: ಕು.ಶಾಂತಾ ಬಾಲಗೊಂಡ(ವಿಷಯ ತಜ್ಞರು ಕೃಷಿ ಹವಾಮಾನ ಘಟಕ), ಡಾ. ದಿನೇಶ್ ಎಮ್.ಎಸ್.,ಮತ್ತು ಡಾ.ಸವಿತಾ ಎಸ್. ಎಮ್., ಕೃಷಿ ವಿಜ್ಞಾನ ಕೇಂದ್ರ ರಾಮನಗರ