Agripedia

ಸಾಂಪ್ರದಾಯಿಕ ಆಹಾರಗಳ ಪಟ್ಟಿ ಸೇರಿದ ಕರಾವಳಿಯ ಪಾರಂಪರಿಕ ತಿನಿಸು ಪತ್ರೊಡೆ

03 July, 2021 8:31 PM IST By:

ಇದು ಕೊರೊನಾ ಕಾಲ. ನಾವು ಎಷ್ಟೇ ಎಚ್ಚರಿಕೆಯಿಂದಿದ್ದರೂ ಈ ಮಾರಕ ವೈರಸ್ ಅದಾವುದೋ ಮಾಯದಲ್ಲಿ ನಮ್ಮ ದೇಹವನ್ನು ಹೊಕ್ಕುಬಿಡುತ್ತದೆ. ಹೀಗಾಗಿ, ಈ ಸಾಂಕ್ರಾಮಿಕ ವೈರಸ್ ನಮ್ಮನ್ನು ಸೋಂಕದಂತೆ ದೇಹಕ್ಕೆ ಬಾಹ್ಯ ರಕ್ಷಣೆ ನೀಡುವ ಜೊತೆಗೆ ಆಂತರಿಕ ಸುರಕ್ಷತೆಯನ್ನು ಒದಗಿಸುವದೂ ಅತಿ ಮುಖ್ಯವಾಗಿದೆ. ಹಾಗಾದರೆ, ದೇಹಕ್ಕೆ ಆಂತರಿಕ ಸುರಕ್ಷತೆ ಒದಗಿಸುವದು ಹೇಗೆ? ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ದೇಹಕ್ಕೆ ಆಂತರಿಕ ರಕ್ಷಣೆ ನೀಡುವ ಪ್ರಮುಖ ಮೂಲವಾಗಿದೆ.

ಇನ್ನು ಈ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಎಂದು ಕೇಳಿದರೆ ಹೆಚ್ಚಿನವರು ಅಂಗಡಿಗಳಲ್ಲಿ ಸಿಗುವ ಔಷಧ, ಮತ್ರೆ, ಪೌಡರ್ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆದರೆ, ನಾವು ನಿತ್ಯ ಸೇವಿಸುವ ಆಹಾರದಲ್ಲೇ ರೋಗ ನಿರೋಧಕ ಶಕ್ತಿ ವೃದ್ಧಿಸುವ ಅಂಶಗಳು ಅಡಕವಾಗಿವೆ. ಈ ಅಂಶಗಳ ಮೇಲೆ ಬೆಳಕು ಚೆಲ್ಲಿರುವ ಕೇಂದ್ರ ಆಯುಷ್ ಸಚಿವಾಲಯ ದೇಶದಾದ್ಯಂತ ಅಧ್ಯಯನ ನಡೆಸಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೂರಕವಾಗಿರುವ 26 ಬಗೆಯ ಪಾರಂಪರಿಕ ಆಹಾರಗಳನ್ನು ಗುರುತಿಸಿದೆ. ಇಲ್ಲಿ ಕರ್ನಾಟಕದ ಜನ ಹೆಮ್ಮೆ ಪಡುವ ವಿಷಯವೇನೆಂದರೆ, ನಮ್ಮ ಕರಾವಳಿಯ ಪಾರಂಪರಿಕ ಆಹಾರ ‘ಪತ್ರೊಡೆ’ ಕೂಡ ಈ ಪಟ್ಟಿಲ್ಲಿ ಸೇರಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಕೊರೊನಾ ವೈರಾಣುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಪೋಷಕಾಂಶಗಳನ್ನು ನೀಡುವ ಆಹಾರಗಳನ್ನು ಆಯುಷ್ ಇಲಾಖೆ ಗುರುತಿಸಿದ್ದು, ಇಂತಹ 26 ಆಹಾರಗಳನ್ನು ‘ಸಾಂಪ್ರದಾಯಿಕ ಆಹಾರ’ಗಳು ಎಂದು ಪಟ್ಟಿ ಮಾಡಿದೆ. ಈ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಜೊತೆಗೆ, ಆ ಎಲ್ಲಾ 26 ಬಗೆಯ ಖಾದ್ಯಗಳನ್ನು ತಯಾರಿಸುವ ವಿಧಾನವನ್ನೂ (ರೆಸಿಪಿ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಡುಗೆಯ ಚಿತ್ರ, ಬೇಕಾಗುವ ಸಾಮಗ್ರಿಗಳು, ತಯಾರಿಸುವ ವಿಧಾನ, ಅದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಹಾಗೂ ಯಾವುದನ್ನು ಅತಿಯಾಗಿ ಬಳಸಬಾರದು ಎಂಬ ಎಚ್ಚರಿಕೆಯೂ ಇದರಲ್ಲಿದೆ. ಪತ್ರೊಡೆ ಮಾಡುವ ವಿಧಾನ ಮತ್ತು ಇದರಿಂದ ಇರುವ ಆರೋಗ್ಯ ಪ್ರಯೋಜನಗಳ ಕುರಿತು ಎರಡು ಪುಟಗಳ ರೆಸಿಪಿಯು ಆಯುಷ್ ಇಲಾಖೆಯ ಜಾಲತಾಣದಲ್ಲಿ ಪ್ರಕಟವಾಗಿದೆ.

ಪತ್ರೊಡೆ ಏಕೆ?

ಕೊರೊನಾ ಸಮಯಯದಲ್ಲಿ ಪೌಷ್ಟಿಕಾಂಶಗಳಿAದ ಶ್ರೀಮಂತವಾಗಿರುವ ಆಹಾರಗಳನ್ನು ಸೇವಿಸುವಂತೆ ಕೇಂದ್ರ ಆಯುಷ್ ಸಚಿವಾಲಯ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪತ್ರೊಡೆ ಕೂಡ ಸೇರಿರುವುದು, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಇತರ ಭಾಗಗಳಲ್ಲಿ ಪ್ರಸಿದ್ಧವಾಗಿರುವ ಪತ್ರೊಡೆಗೆ ರಾಷ್ಟ್ರಮಟ್ಟದ ಮನ್ನಣೆ ತಂದುಕೊಟ್ಟಿದೆ. ಕೆಸುವಿನ ಎಲೆಯಲ್ಲಿ ತಯಾರಿಸಲಾಗುವ ಪತ್ರೊಡೆ, ನಾರಿನ ಅಂಶದಿAದ ಶ್ರೀಮಂತವಾಗಿದೆ. ಇದು ವಿವಿಧ ರೋಗಕಾರಕ ಜೀವಾಣುಗಳನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪತ್ರೊಡೆಯ ಆರೋಗ್ಯ ಲಾಭಗಳು

ಕೆಸುವಿನ ಎಲೆಯಲ್ಲಿ ನಾರಿನ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ. ಈ ನಾರಿನ ಅಂಶವು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಇದರಿಂದ ಮನುಷ್ಯ ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ನಾರಿನ ಅಂಶದ ಜೊತೆಗೆ, ವಿಟಮಿನ್ ಸಿ, ಕಬ್ಬಿಣಾಂಶ, ಹಾಗೂ ಬೀಟಾ ಕೆರೊಟೀನ್ ಅಂಶ ಕೆಸುವಿನ ಎಲೆಗಳಲ್ಲಿ ಹೆಚ್ಚಾಗಿರುತ್ತದೆ. ಇದರಿಂದಾಗಿ ರಕ್ತದಲ್ಲಿ ಹಿಮೊಗ್ಲೋಬಿನ್ ಮಟ್ಟ ವೃದ್ಧಿಸಲು ಅನುಕೂಲವಾಗುತ್ತದೆ. ಇದರೊಂದಿಗೆ ರುಮಟಾಯ್ಡ್ ಆಥ್ರೆಂಟೀಸ್ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಉರಿಯೂತ ಕಡಿಮೆ ಮಾಡಲು ಪತ್ರೊಡೆ ಸಹಕಾರಿ ಎಂದು ಆಯುಷ್ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ವಿವರಿಸಿದೆ.

ಆಯುಷ್ ಇಲಾಖೆ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಪತ್ರೊಡೆ ರೆಸಿಪಿ.

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಮಲೆನಾಡಿಗೆ ಹೊಂದಿಕೊಂಡಿರುವ ಕೆಲ ಜಿಲ್ಲೆಗಳಲ್ಲಿ ಪತ್ರೊಡೆಯನ್ನು ಹೆಚ್ಚಾಗಿ ಮಾಡುತ್ತಾರೆ. ಅದರಲ್ಲೂ ಕರಾವಳಿ ಭಾಗದ ಮನೆಗಳಲ್ಲಿ ಪತ್ರೊಡೆ ಪ್ರಮುಖ ಖಾದ್ಯವಾಗಿದೆ. ಕರ್ನಾಟಕ ಮಾತ್ರವಲ್ಲದೆ, ಸಮುದ್ರದಂಚಿನ ರಾಜ್ಯಗಳಾಗಿರುವ ಕೇರಳ, ಮಹಾರಾಷ್ಟ್ರ, ಗೋವಾ, ಜೊತೆಗೆ ಹಿಮಾಚಲ ಪ್ರದೇಶ, ಗುಜರಾತ್ ಹಾಗೂ ಈಶಾನ್ಯ ಭಾಗದ ಕೆಲವು ರಾಜ್ಯಗಳಲ್ಲಿ ಪತ್ರೊಡೆ ತಯಾರಿಸಿ, ಸೇವಿಸಲಾಗುತ್ತದೆ. ಆದರೆ ಪ್ರತಿ ರಾಜ್ಯದಲ್ಲೂ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಪತ್ರೊಡೆ ಖಾದ್ಯವು ಹೆಚ್ಚು ತಯಾರಾಗುವುದು ಮಳೆಗಾಲದ ದಿನಗಳಲ್ಲಿ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಕೆಸುವಿನ ಗಿಡಗಳು ಹೆಚ್ಚಾಗಿ ಬೆಳೆದು ಅವುಗಳ ಎಲೆಗಳ ಲಭ್ಯತೆ ಹೆಚ್ಚಾಗುವ ಕಾರಣದಿಂದ ಇದನ್ನು ಮಳೆಗಾಲದಲ್ಲಿ ತಯಾರಿಸುವುದು ವಾಡಿಕೆ.

26 ಬಗೆಯ ಆಹಾರಗಳು

ಪತ್ರೊಡೆ, ಅಮಲಕಿ ಪಾನಕ, ಬೆಟ್ಟದ ನೆಲ್ಲಿಕಾಯಿ ಪಾನಕ, ಮಜ್ಜಿಗೆ, ಖಾಲಮ್ (ಹದಗೊಳಿಸಿದ ಮಜ್ಜಿಗೆ), ಯುಶ (ಔಷಧೀಯ ಸೂಪು), ರಸಾಲ (ಔಷಧೀಯ ಮೊಸರು), ಖರ್ಜೂರಾದಿ ಮಂತ್ರ (ಶಕ್ತಿವರ್ಧಕ ಪೇಯ), ಮಮ್ಸಾ (ಔಷಧೀಯ ಮಟನ್ ಸೂಪ್), ರಾಗಿ ಮತ್ತು ಬಾಳೆಹಣ್ಣಿನ ರಸಾಯನ, ಬೀಟ್ರುಟ್ ಹಲ್ವಾ, ಕುಲಟ್ಟಾ ರಸಂ (ಹುರುಳಿ ಕಾಳು ರಸಂ), ಪೇಯ (ಔಷಧೀಯ ಅಕ್ಕಿ ಅಂಬಲಿ ಅಥವಾ ಗಂಜಿ), ಅರ್ದ್ರಕ ಪಾಕ (ಶುಂಟಿ ಮಿಠಾಯಿ), ಮಧುಕ ಲೇಹ್ಯ (ಗಿಡಮೂಲಿಕೆ ಜಾಮ್), ಲಜಾರ್ದ್ರಕ (ಹುರಿದ ಭತ್ತ, ಶುಂಟಿ ನುಚ್ಚು), ಗುಲ್ಕಂದ್ (ಗುಲಾಬಿ ಎಲೆ ಜಾಮ್), ಕರ್ಜೂರದ ಲಾಡು, ಕುಚ್ಚೆಳ್ಳು ಅಥವಾ ಕುರುಸೆಣ್ಣೆ ಲಾಡು, ಅಪೂಪಂ (ಅಕ್ಕಿ ಪಾನ್‌ಕೇಕ್), ಕುಂಬಳ ಹಾಗು ರಾಜ್ಮಾ ಸಿಹಿ ಪಾಕ, ನೆಲ್ಲಿಕಾಯಿ ಪ್ರೈ ಸಿರಿಧಾನ್ಯ ಹಾಗೂ ನುಗ್ಗೆ ಸೊಪ್ಪಿನ ದೋಸೆ, ಬೇಸನ್-ಸೂಜಿ ಪಾನ್‌ಕೇಕ್ ಜೊತೆ ಎಳ್ಳಿನ ಚಟ್ನಿ ಹಾಗೂ ವಿವಿಧ ಚಟ್ನಿಗಳು.