Agripedia

ಬದುಕು ಹಸನಾಗಿಸುವ ಬಿಳಿ ರಾಗಿಯ ಹೊಸ ತಳಿ

04 October, 2020 6:21 AM IST By: KJ Staff

 “ರಾಗಿ ತಂದಿರಾ ಭಿಕ್ಷೆಗೆ ರಾಗಿ ತಂದಿರ” ಎನ್ನುವ ಹಾಡನ್ನು ಸರ್ವೇ ಸಾಮಾನ್ಯವಾಗಿ ಕೇಳಿರುತ್ತೀರಿ. ಇನ್ನೂ ದಕ್ಷಿಣ ಕರ್ನಾಟಕ ಅದರಲ್ಲೂ ತುಮಕೂರು, ಕೋಲಾರ, ಮಂಡ್ಯ, ಹಾಸನ, ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮುಖ್ಯ ಆಹಾರವೆಂದರೆ ಮುದ್ದೆ. ಇದನ್ನು ಇಂಗ್ಲಿಷ್ ನಲ್ಲಿ ಡಂಪ್ಲಿಂಗ್  ಎಂದು (Dumpling) ಕರೆಯುತ್ತಾರೆ.

ಸಾಮಾನ್ಯವಾಗಿ ಹಳ್ಳಿಗರು “ಹಿಟ್ಟಂತಿಂದಂಬೆಟ್ಟಂಕಿತ್ತಿಟ್ಟಂ”ಎಂಬ ನಾಣ್ಣುಡಿಯಾಡುತ್ತಾರೆ. ಇಲ್ಲಿ ಹಿಟ್ಟು ಎಂದರೆ ರಾಗಿಯ ಹಿಟ್ಟಿನಿಂದ ಮಾಡಿದ ಮುದ್ದೆ. ಇದೆಲ್ಲಾ ಪೀಠಿಕೆ ಏಕೆ ಹೇಳುತ್ತಿದ್ದಾರೆ? ಎಂದು ನೀವು ಯೋಚಿಸುತ್ತಿರಬಹುದು. ಹೌದು! ನಾನು ಇಂದು ವಲಯ ಕೃಷಿ ಸಂಶೋಧನಾ ಕೇಂದ್ರ-ಮಂಡ್ಯದಲ್ಲಿ ಸಂಶೋಧಿಸಿರುವ “ಬಿಳಿ ರಾಗಿ ತಳಿ”ಯ ಬಗ್ಗೆ ಹೇಳುತ್ತಿದ್ದೇನೆ.

ಇತ್ತೀಚಿಗೆ ಮಧುಮೇಹಿಗಳಿಗೆ ಅತಿಪ್ರಿಯವಾಗುತ್ತಿರುವ  ಈ ರಾಗಿಯು ಸಾಮಾನ್ಯವಾಗಿ ಕೆಂಪು, ಗಾಢ ಕೆಂಪು, ಕಂದು ಬಣ್ಣದಿಂದ ಕೂಡಿದ್ದು, ಅದಕ್ಕೆ ಮೂಗು ಮುರಿಯುವವರು ಹೆಚ್ಚು. ಆದರೆ ಈಗ ಬಿಳಿ ಬಣ್ಣದ ರಾಗಿ ತಳಿಯು ಎಲ್ಲರನ್ನು ನಿಬ್ಬೆರಗಾಗಿಸಿದೆ.

ಡಾ.ಸಿ.ಆರ್. ರವಿಶಂಕರ ಹೊಸ ತಳಿ ಕೆ.ಎಂ.ಆರ್-340 ತೋರಿಸುತ್ತಿರುವುದು.

“ಕೆಎಂಆರ್-340” ತಳಿ:

ಯಾವುದು ತಳಿಯ ಹೆಸರು ? ಎಂದು ನೀವು ಕೇಳಬಹುದು. ಅದೇ“ಕೆ.ಎಂ.ಆರ್-340”. ವಲಯ ಕೃಷಿ ಸಂಶೋಧನಾ ಕೇಂದ್ರದ  ಡಾ.ಸಿ.ಆರ್. ರವಿಶಂಕರ ಮತ್ತು ಅವರ ವಿಜ್ಞಾನಿಗಳ ತಂಡ ಬಿಳಿ ರಾಗಿಯನ್ನು ಸಂಶೋಧಿಸುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಭಾರತದಲ್ಲಿ ಪ್ರಸ್ತುತ ಈಗಾಗಲೇ ಸುಮಾರು 2500 ರಾಗಿ ತಳಿಗಳಿದ್ದು, ಆದರೆ ಈ ಬಿಳಿರಾಗಿ ತನ್ನ ಬಣ್ಣದಿಂದ ಹಿಡಿದು ಪೌಷ್ಟಿಕಾಂಶಗಳ ಸಮೇತ ಇತರ ತಳಿಗಳಿಗಿಂತ ವಿಭಿನ್ನವಾಗಿದೆ.

ತಳಿಯ ವಿಶೇಷತೆಗಳು:

ಇದೊಂದು ಅಲ್ಪಾವಧಿಯ ತಳಿಯಾಗಿದ್ದು 90 ರಿಂದ 95 ದಿನಗಳಲ್ಲಿ ಕಟಾವು ಮಾಡಬಹುದಾಗಿದೆ.ಅದೇ ರೀತಿ ಈ ತಳಿಯು ಬೆಂಕಿರೋಗ, ಕುತ್ತಿಗೆ ಬೆಂಕಿರೋಗ, ಇಲುಕು ರೋಗ ಮತ್ತು ಅಂಗಮಾರಿ ರೋಗದ ನಿರೋಧಕತೆಯನ್ನು ಹೊಂದಿರುವುದರ ಜೊತೆಯಲ್ಲಿ ಕಾಂಡಕೊರಕ ಮತ್ತು ಕರಿ  ಸಸ್ಯಹೇನಿನ ಬಾಧೆಗೆ ಸಹಿಷ್ಣುತೆಯ ಗುಣವನ್ನುಹೊಂದಿದೆ. ಪ್ರತಿ ಹೆಕ್ಟೆರಿನಲ್ಲಿ ನೀರಾವರಿ ಪ್ರದೇಶದಲ್ಲಿ ಸುಮಾರು 45 ರಿಂದ 50 ಕ್ವಿಂಟಾಲ್ ಧಾನ್ಯದ ಇಳುವರಿ ಮತ್ತು 6 ರಿಂದ 7 ಟನ್ ಇಳುವರಿ ಪಡೆಯಬಹುದಾಗಿದೆ. ಅದೇ ರೀತಿ ಮಳೆಯಾಶ್ರಿತ ಬಿತ್ತನೆಯಲ್ಲಿ 35 ರಿಂದ 40 ಕ್ವಿಂಟಾಲ್ ಧಾನ್ಯ ಹಾಗೂ 5 ರಿಂದ 6 ಟನ್ ಇಳುವರಿಯನ್ನು ಪಡೆಯಬಹುದು. ಈ ಒಂದು ಬಿಳಿ ರಾಗಿಯಲ್ಲಿ ನಾರಿನಂಶ, ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಂಶಗಳು ಹೇರಳವಾಗಿವೆ. ಅನೇಕರಾಗಿ ತಳಿಗಳಿಗೆ ಹೋಲಿಸಿದರೆ ಇದರಲ್ಲಿ ಶೇಕಡಾ ಎರಡರಷ್ಟು ಅಧಿಕ ಪೋಷಕಾಂಶಗಳಿವೆ. 70 ಗ್ರಾಂ ಕ್ಯಾಲ್ಸಿಯಂ ಅಕ್ಕಿಯಲ್ಲಿದ್ದರೆ, ಬಿಳಿ ರಾಗಿಯಲ್ಲಿ 380 ರಿಂದ 390 ಗ್ರಾಂ ಕ್ಯಾಲ್ಸಿಯಂ ಇದೆ. ಇತರ ಆಹಾರದಲ್ಲಿ 0.5 ಗ್ರಾಂ ನಾರಿನಂಶ ಇದ್ದರೆ, ಬಿಳಿರಾಗಿಯಲ್ಲಿ 4-10 ಗ್ರಾಂ ನಾರಿನಂಶವಿದೆ.

ಆದಾಯ ಹೆಚ್ಚಿಸಲು ಬಿಳಿ ರಾಗಿಯ ಪಾತ್ರ:

ಹೆಚ್ಚು ಪೌಷ್ಟಿಕತೆ ಇರುವಂತಹ ಈ ರಾಗಿಯು ಬೇಕರಿಯ ಮೌಲ್ಯವರ್ಧಕರನ್ನು ಆಕರ್ಷಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಬೇಕರಿಯಲ್ಲಿ ಮಾಡುವ ತಿಂಡಿ-ತಿನಿಸುಗಳನ್ನು ಹೆಚ್ಚಾಗಿ ಬಿಳಿರಾಗಿಯಿಂದ ತಯಾರಿಸಬಹುದು. ಬೇಕರಿಯ ತಿಂಡಿ-ತಿನಿಸುಗಳನ್ನು ತಯಾರಿಸಲು ಮೈದಾ ಹಿಟ್ಟನ್ನು ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಅದರ ಬದಲಾಗಿ ಹೆಚ್ಚು ಪೌಷ್ಟಿಕಾಂಶಯುಕ್ತ ಈ ಬಿಳಿರಾಗಿಯ ಹಿಟ್ಟನ್ನು ಸಹ ಬಳಸಬಹುದು.

ಹಲವಾರು ತಿನಿಸುಗಳನ್ನು ಮಾಡಬಹುದು:

ಮುದ್ದೆಯ ಜೊತೆಯಲ್ಲಿ ಬಿಳಿರಾಗಿ ಹಿಟ್ಟಿನಿಂದ ಮಿಕ್ಸ್ಚರ್, ಸೇವ್, ಹುರಿಹಿಟ್ಟು,  ಮಾಲ್ಟ್, ಸಂಡಿಗೆ, ಶಾವಿಗೆ, ಬಿಳಿ ರಾಗಿರೊಟ್ಟಿ, ಬಿಸ್ಕೆಟ್,  ರಾಗಿಹಲ್ವಾ, ಇಡ್ಲಿ, ದೋಸೆ,ರಾಗಿಲಡ್ಡು, ರಾಗಿಹಲ್ವಾ, ರಾಗಿಪಾಯಸ, ರಾಗಿನಿಪ್ಪಟ್ಟು, ಚಕ್ಕುಲಿ, ರಾಗಿ ಶಾವಿಗೆ ಉಪ್ಪಿಟ್ಟು, ಕೇಕ್, ಬರ್ಫಿ, ರಾಗಿಗಂಜಿ, ರಾಗಿ ಪಡ್ಡು ಹೀಗೆ ಹಲವಾರು ತಿನಿಸುಗಳನ್ನು ಮಾಡಬಹುದು.

ಹೀಗೆ ಬೇಕರಿ ಹಾಗೂ ಆಹಾರೋತ್ಪನ್ನಗಳ ಮೌಲ್ಯವರ್ಧಕರನ್ನು ಆಕರ್ಷಿಸುವುದಲ್ಲದೆ, ವರ್ತಕರಿಗೆ ಲಾಭ ನೀಡುವುದರೊಂದಿಗೆ, ಆರೋಗ್ಯವಂತ ಸಮಾಜವನ್ನು ಸೃಷ್ಟಿಸುವತ್ತ ಹೆಜ್ಜೆಯಿಟ್ಟಿದೆ. ಸಾಮಾನ್ಯವಾಗಿ ಕೆಂಪು, ಕಡು ಕೆಂಪು, ಕಂದುಬಣ್ಣದ ರಾಗಿಯಿಂದ ತಯಾರಿಸಿದ ಬೇಕರಿ ತಿನಿಸುಗಳು ಹೆಚ್ಚಿನ ಜನಸಾಮಾನ್ಯರನ್ನು ಅಥವಾ ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಆದರೆ ಬಿಳಿ  ರಾಗಿ  ಅಥವಾ ಅದರ ಹಿಟ್ಟನ್ನು ಗೋಧಿ ಮತ್ತು ಅಕ್ಕಿಯ ಹಿಟ್ಟಿಗೆ ಸಮಾನವಾಗಿ ಹೋಲಿಸಬಹುದು. ಹಾಗೂ ಈ ಬಿಳಿ ಹಿಟ್ಟಿನಿಂದ ತಯಾರಿಸಿದ ತಿಂಡಿ-ತಿನಿಸುಗಳು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತದೆ. ಅದೇ ರೀತಿ ಇದು ಬರಿ ಬೇಕರಿ ಮತ್ತು ಆಹಾರೋತ್ಪನ್ನಗಳ ವರ್ತಕರಿಗೆ/ವರ್ಧಕರಿಗೆ  ಲಾಭಾಂಶ ನೀಡುವುದಲ್ಲದೆ, ತನ್ನ ಹಸ್ತವನ್ನು ರೈತರಿಗೂ ಸಹ ಚಾಚಿದೆ ಎನ್ನುವುದು ಬಹಳ ಖುಷಿಯ ವಿಚಾರ. ಈ ಬಿಳಿ ರಾಗಿಯ ಪ್ರತಿ ಕ್ವಿಂಟಾಲಿಗೆ 3000 ದಿಂದ 4000 ಬೆಲೆಸಿಗುತ್ತಿದ್ದು, ಗ್ರಾಮೀಣ ಭಾಗದ ರೈತರಿಗೆ ಹಾಗೂ ಅವರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ.

ಆರೋಗ್ಯವಂತ ಸಮಾಜ ಸೃಷ್ಟಿಸಲು ಬಿಳಿರಾಗಿ ಸೇವಿಸಿ:

ಹೆಚ್ಚು ಪೋಷಕಾಂಶಗಳು ಇರುವಂತಹ ಆಹಾರದ ಬದಲು, ಬಾಯಿ ರುಚಿಯ ಆಹಾರ ಪದಾರ್ಥಗಳ ಹಿಂದೆ ಬಿದ್ದು ಅಧಿಕ ಗ್ಲುಕೋಸ್ ಯುಕ್ತ, ಕಡಿಮೆ ನಾರಿನ,  ರಾಸಾಯನಿಕ ಯುಕ್ತ ಆಹಾರ ಸೇವನೆಯಿಂದ ರೋಗಗ್ರಸ್ಥ ಸಮಾಜ ನಿರ್ಮಾಣವಾಗುತ್ತಿರುವುದು ಅಚ್ಚರಿಯ ಸಂಗತಿಯೇನಲ್ಲ. ಇದರಿಂದ ಪಾರಾಗಲು ಹಾಗೂ ಆರೋಗ್ಯವಂತ ಸಮಾಜವನ್ನು ಸೃಷ್ಟಿಸಲು ಈ ಬಿಳಿರಾಗಿ  ಒಂದು ಕೊಡುಗೆ ಎಂದು ಹೇಳುತ್ತಾ, ನನ್ನ ಈ ಲೇಖನಕ್ಕೆ ಪೂರ್ಣವಿರಾಮ ವಿಚಾರಗಳಿಗಲ್ಲ.

ಲೇಖಕರು:

1. ರಾಖೇಶ್.ಎಸ್

ಪ್ರಥಮ ವರ್ಷದ ಎಂ.ಎಸ್ಸಿ(ಕೃಷಿ), ಕೃಷಿ ಕೀಟಶಾಸ್ತ್ರ ವಿಭಾಗ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಮೊ.8105008348

2.ಡಾ.ಎಸ್.ಜಿ.ಹಂಚಿನಾಳ್

ಸಹಾಯಕ ಪ್ರಾಧ್ಯಾಪಕರು, ಮುಖ್ಯ ಕೃಷಿ ಸಂಶೋಧನಾ ಕೇಂದ್ರ,

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104.