Agripedia

ಬೇವಿನ ಕಶಾಯ ಸಿಂಪಡಿಸಿದರೆ ಬೆಳೆಗಳಿಗೆ ಕಾಡುವ 84 ಜಾತಿಯ ಸಂತತಿಯೇ ಅಂತ್ಯ!

16 June, 2021 9:00 AM IST By:
neem seeds

ಕರ್ನಾಟಕ ರಾಜ್ಯ ಮಾತ್ರವಲ್ಲದೇ ಭಾರತ ಕಂಡ ಅತ್ಯಂತ ಯಶಸ್ವಿ, ಪ್ರಗತಿಪರ ಹಾಗೂ ಅಪ್ಪಟ ಸಾವಯವ ಕೃಷಿಕರಾಗಿದ್ದ ನಾಡೋಜ ಡಾ.ಎಲ್.ನಾರಾಯಣ ರೆಡ್ಡಿ ಅವರು ಹೇಳಿರುವಂತೆ, ಬೇವಿನ ಮರಗಳು ಭಾರತಕ್ಕೆ ದೇವರು ನೀಡಿರುವ ಅತ್ಯಂತ ಶ್ರೇಷ್ಠ ವರಳಾಗಿವೆ. ತಮ್ಮ ಕೃಷಿ ಅಭ್ಯಾಸದಲ್ಲಿ ಬೇವಿನ ಬೀಜಗಳನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿದ್ದ ಡಾ.ನಾರಾಯಣ ರೆಡ್ಡಿ ಅವರು, ತಮ್ಮ ಅನುಭವದ ಆಧಾರದಲ್ಲಿ ಈ ಮಾತು ಹೇಳಿದ್ದಾರೆ. ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ ಕೂಡ ಹೌದು.

ತಾನು ಬೆಳೆದು ನಿಂತ ಪ್ರದೇಶವನ್ನು ತಂಪಾಗಿರಿಸುವ ಬೇವು, ಎಲ್ಲ ವಿಧದ ಬೆಳೆಗಳನ್ನು ಭಕ್ಷಕ ಕೀಟಗಳ ಹಾವಳಿಯಿಂದ ರಕ್ಷಿಸುವ ಆಪದ್ಬಾಂಧವನೂ ಹೌದು. ಬೇವಿನಲ್ಲಿರುವ ವಿಶೇಷ ಹಾಗೂ ವಿಷಕಾರಿಯಾಗಿರುವ ಅಂಶಗಳು ಸುಮಾರು 84ಕ್ಕೂ ಅಧಿಕ ಜಾತಿಯ ಬೆಳೆ ಭಕ್ಷಕ ಕೀಟಗಳ ಬದುಕಿಗೆ ಅಂತ್ಯ ಹಾಡುತ್ತವೆ. ಇದೇ ವೇಳೆ ರೈತರ ಮಿತ್ರ ಎನಿಸಿರುವ ಗುಲಗಂಜಿ ಹುಳು ಮತ್ತು ಶಿವನಕುದುರೆ ಹುಳುಗಳಿಗೆ ಈ ಬೇವಿನ ಬೀಜ ಯಾವುದೇ ಹಾನಿ ಮಾಡುವುದಿಲ್ಲ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ.

ಹಾನಿಕಾರಕ ಕೀಟಗಳ ಸಂಹಾರಕ

ವಿವಿಧ ಬೆಳೆಗಳಲ್ಲಿ ಕೀಟಗಳ ಬಾಧೆ ಕಾಣಿಸಿಕೊಂಡಾಗ ರಾಸಾಯನಿಕ ಮಿಶ್ರಿತ ಕೀಟ ನಾಶಕಗಳನ್ನು ಸಿಂಪಡಿಸುವ ಬದಲು ಬೇವಿನ ಕಾಯಿಯ ಬೀಜಗಳಿಂದ ಮನೆಯಲ್ಲೇ ತಯಾರಿಸಿದ ಸಾವಯವ ಬೇವಿನ ಕಶಾಯವನ್ನು ಸಿಂಪಡಿಸುವುದು ಸೂಕ್ತ. ಏಕೆಂದರೆ, ಬೇರು, ಕಾಂಡ, ಕಾಯಿ, ಹಣ್ಣು ಮತ್ತು ಎಲೆಗಳನ್ನು ಕೊರೆಯುವ ಸುಮಾರು 84ಕ್ಕೂ ಹೆಚ್ಚು ಜಾತಿಯ ಹಾನಿಕಾರಕ ಕೀಟಗಳ ಸಂತತಿಯನ್ನೇ ನಾಶ ಮಾಡುವ ಶಕ್ತಿ ಈ ಬೇವಿನ ಕಶಾಕ್ಕೆ ಇದೆ. ಬೇವಿನ ಬೀಜದ ಕಶಾಯ ಕೀಟಗಳ ಮೈ ಸೋಕಿದರೆ ಅಥವಾ ಕೀಟಗಳು ಕಶಾಯವನ್ನು ಸೇವಿಸಿದರೆ ಅವುಗಳಿಗೆ ವಾಕರಿಕೆ ಆರಂಭವಾಗುತ್ತದೆ. ಬಳಿಕ ಹಲವು ದಿನಗಳವರೆಗೆ ಕೀಟಗಳು ಆಹಾರ ಸೇವಿಸದೆ ಇರುವ ಕಾರಣ ನಿತ್ರಾಣಗೊಂಡು ಸತ್ತು ಹೋಗುತ್ತವೆ. ಕೆಲವು ಮೊಂಡು ಕೀಟಗಳು ಬದುಕಿದರೂ ಅವುಗಳ ಸಂತಾನ ಶಕ್ತಿಯನ್ನು ಈ ಬೇವು ನಾಶಪಡಿಸಿರುತ್ತದೆ. ಹೀಗಾಗಿ ಅವುಗಳ ಸಂತತಿ ಬೆಳೆಯುವುದಿಲ್ಲ. ಜಿತೆಗೆ ಕೀಟಗಳು ಚಿಟ್ಟೆಗಳಾಗಿ ಪರಿವರ್ತನೆ ಹೊಂದುವ ಪ್ರಕ್ರಿಯೆಗೂ ಬೇವಿನ ಬೀಜದ ಕಶಾಯ ಕಡಿವಾಣ ಹಾಕುತ್ತದೆ. ಈ ಎಲ್ಲಾ ಕೆಲಸಗಳನ್ನು ಮಾಡುವ ಮೂಲಕ ಹಾನಿಕಾರಕ ಕೀಟಗಳ ಸಂತತಿಯನ್ನು ಬುಡ ಸಮೇತ ನಿರ್ಮೂಲನೆ ಮಾಡುವ ಪ್ರಪಂಚದ ಏಕೈಕ ದ್ರಾವಣ ಅಥವಾ ಔಷಧ ಎಂದರೆ ಅದು, ಬೇವಿನ ಬೀಜದ ಕಶಾಯ ಮಾತ್ರ.

ಪರಿಸರ ಸ್ನೇಹಿ

ಕೀಟಗಳ ಸರ್ವನಾಶ ಮಾಡುವ ಬೇವಿನ ಬೀಜಗಳು ಪರಿಸರ ಸ್ನೇಹಿಯಾಗಿವೆ. ಹಾನಿಕಾರಕ ಕೀಟಗಳನ್ನು ಹೊರತುಪಡಿಸಿ ಬೇರಾವುದೇ ಪ್ರಾಣಿ, ಪಕ್ಷಿ ಅಥವಾ ಮಾನವರಿಗೆ ಅವುಗಳಿಂದ ಕೆಡುಕಾಗುವುದಿಲ್ಲ. ಭೂಮಿಯ ಫಲವತ್ತತೆ ಕೂಡ ಇದರಿಂದ ನಷ್ಟವಾಗುವುದಿಲ್ಲ. ಹಾಗೇ, ಮಣ್ಣಿನಲ್ಲಿನ ಸೂಕ್ಷಾö್ಮಣು ಜೀವಿಗಳಿಗೂ ಬೇವು ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಬದಲಿಗೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೆರವಾಗುತ್ತದೆ.

ಇನ್ನೊಂದೆಡೆ ಜಾಗತಿಕ ತಾಪಮಾನದಿಂದ ಪ್ರಪಂಚದಾದ್ಯAತ ಏನೆಲ್ಲಾ ಅನಾಹುತಗಳು, ಪ್ರಾಕೃತಿಕ ಅಸಮತೋಲನಗಳು ಸಂಭವಿಸುತ್ತಿವೆ. ಆದರೆ ಅದರಿಂದ ಉಪಯೋಗ ಪಡೆಯುತ್ತಿರುವ ಒಂದೇ ಒಂದು ಸಸ್ಯ ಪ್ರಜಾತಿ ಎಂದರೆ, ಬೇವಿನ ಮರಗಳು. ಹೌದು ಅಧಿಕ ಉಷ್ಣಾಂಶವು ಬೇವಿನ ಮರಗಳ ಬೆಳವಣಿಗೆಗೆ ಪೂರಕವಾಗಿರುತ್ತದೆ. ಬಿಸಿಲು ಹೆಚ್ಚಾದಂತೆ ಬೇವಿನ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಡುತ್ತವೆ. ಹೂವು ಹೆಚ್ಚಾದರೆ ಕಾಯಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ.

ಬೇವಿನ ಕಶಾಯ ತಯಾರಿಕೆ ವಿಧಾನ

ಸಾಮಾನ್ಯವಾಗಿ ಜುಲೈ ಅಂತ್ಯದ ವೇಳೆಗೆ ಬೇವಿನ ಕಾಯಿಗಳು ಹಣ್ಣಾಗಿ ಮರದಿಂದ ಬೀಳುವ ಪ್ರಕ್ರಿಯೆ ಮುಗಿದಿರುತ್ತದೆ. ಈ ವೇಳೆಗೆ ಮೊದಲೇ ಬೀಜಗಳನ್ನೆಲ್ಲಾ ಆರಿಸಿ, ಚೆನ್ನಾಗಿ ಒಣಗಿಸಬೇಕು. ಬೀಜಗಳು ಪೂರ್ತಿಯಾಗಿ ಒಣಗಿವೆ ಎಂದೆನಿಸಿದ ನಂತರವೂ ವಾರದಲ್ಲಿ ಒಂದು ಬಾರಿಯಂತೆ 8 ರಿಂದ 10 ಬಾರಿ ಬೀಜಗಳನ್ನು ಚೆನ್ನಾಗಿ ಒಣಗಿಸಬೇಕು. ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬೇಕು. ಒಮ್ಮೆ ಬೇವಿನ ಬೀಜವನ್ನು ಒಡೆದರೆ ಮುಂದಿನ 90 ದಿನಗಳ ಒಳಗಾಗಿ ಅದನ್ನು ಬಳಸಬಿಡಬೇಕು. 90 ದಿನಗಳ ಬಳಿಕ ಬೇವಿನ ಬೀಜವು ತನ್ನಲ್ಲಿನ ರೋಗ ನಿರೋಧಕ ಹಾಗೂ ಕೀಟ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

  • ಒಂದು ಕೆ.ಜಿ ಬೇವಿನ ಬೀಜಗಳನ್ನು ಪುಡಿ ಮಾಡಿ (ನುಣ್ಣಗೆ ಹಿಟ್ಟಿನ ರೀತಿ ಪುಡಿ ಮಾಡುವ ಅಗತ್ಯವಿಲ್ಲ. ಹೆಸರು ಬೇಳೆ ಗಾತ್ರದಷ್ಟು ನುಚ್ಚಾದರೂ ಸಾಕು), 2 ಲೀಟರ್ ಹಸುವಿನ ಗಂಜಲದಲ್ಲಿ ನೆನಸಿಡಬೇಕು.
  • ಬೀಜಗಳನ್ನು ಎರಡು ದಿನಗಳ ಕಾಲ ಗಂಜಲ (ಗೋ ಮೂತ್ರ) ದಲ್ಲಿ ನೆನೆಯಲು ಬಿಡಬೇಕು.
  • ಬೇವಿನ ಬೀಜಗಳಲ್ಲಿರುವ ಕಹಿ ಅಂಶ ಸೇರಿ ಎಲ್ಲ ರೀತಿಯ ಕೀಟನಾಶಕ ಅಂಶಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳುವ ಸಾಮರ್ಥ್ಯ ಇರುವುದು ಹಸುವಿನ ಗಂಜಲಕ್ಕೆ ಮಾತ್ರ.
  • ಬೆಳೆಗಳಿಗೆ ಬೇವಿನ ಕಶಾಯ ಸಿಂಪಡಿಸುವ ಸಮಯದಲ್ಲಿ ಬಳಸಲು ಎಷ್ಟು ಬೇಕೋ ಅಷ್ಟು ಪ್ರಮಾಣದ ಬೀಜಗಳನ್ನು ಮಾತ್ರ ಪುಡಿ ಮಾಡಿಕೊಂಡು, ನೆನೆಯಲು ಇರಿಸಬೇಕು.
  • ಎರಡು ದಿನಗಳ ಬಳಿಕ ಬೇವಿನ ಕಶಾಯ ಸಿದ್ಧವಾಗಿರುತ್ತದೆ. ಒಂದು ಕೆ.ಜಿ ಬೀಜದ ಕಶಾಯವನ್ನು 15 ಲೀಟರ್ ನೀರಿಗೆ ಬೆರೆಸಿ ಬೆಳೆಗಳಿಗೆ ಸಿಂಪಡಿಸಬೇಕು.
  • ಒAದು ಎಕರೆಗೆ 18 ಔಷಧ ಕ್ಯಾನ್‌ಗಳಷ್ಟು (ಸಾಮಾನ್ಯವಾಗಿ ಹೆಗಲಿಗೆ ಹಾಕಿಕೊಂಡು ಕೀಟನಾಶಕಗಳನ್ನು ಸಿಂಪಡಿಸುವ ಪಂಪ್) ಬೇವಿನ ಕಶಾಯ ಸಿಂಪಡಿಸಬೇಕು.

ಉಪಯೋಗಗಳೇನು?

ಸಾಮಾನ್ಯವಾಗಿ ಎಲ್ಲ ಭಾಗಗಳಲ್ಲೂ ಬೆಳೆಗಳನ್ನು ಕಾಡುವಂತಹ ಬೂದಿ ರೋಗ, ಸೊರಗು ರೋಗ, ಚುಕ್ಕೆ ರೋಗ ಹಾಗೂ ಗರಿ ಒಣಗುವಿಕೆಯಂತಹ ನಾಲ್ಕು ಪ್ರಮುಖ ರೋಗಗಳಿಗೆ ಬೇವಿನ ಕಶಾಯ ರಾಮಬಾಣ. 84 ಜಾತಿಯ ಹಾನಿಕಾರಕ ಕೀಟಗಳ ಸಂತತಿಯನ್ನೇ ನಾಶ ಮಾಡುವ ಶಕ್ತಿ ಇದರಲ್ಲಿ ಇರುವುದರಿಂದ ಮತ್ತೆ ಕೀಟಗಳು ವಲಸೆ ಬರುವವರೆಗೂ ಬೆಳೆಗಳು ಸುರಕ್ಷಿತವಾರುತವೆ. ಬೇವಿನ ಬೀಜದ ಕಶಾಯ ಖಾಲಿ ಆದ ನಂತರ ತಳದಲ್ಲಿ ಉಳಿಯುವ ಗಸಿ ಅಥವಾ ತಿಳಿಯನ್ನು ಹಸಿಮೆಣಸು, ಬದನೆ, ಟೊಮೇಟೊ, ಆಲೂಗಡ್ಡೆ ಅಥವಾ ಇನ್ನಾವುದೇ ತರಕಾರಿ ಬೆಳೆಗಳ ಬುಡದಲ್ಲಿ ಹಾಕಿದರೆ ಬೇರು ಗಂಟು ಹುಳುವಿನ ಕಾಟ ಕೂಡ ತಪ್ಪುತ್ತದೆ.