Agripedia

ಟೊಮೇಟೊ ಬೆಳೆಯನ್ನು ಕಾಡುವ ಪ್ರಮುಖ ಕೀಟಗಳು ಹಾಗೂ ಅವುಗಳ ನಿರ್ವಹಣೆ ಕ್ರಮಗಳು

30 June, 2021 5:04 PM IST By:

ಟೊಮೇಟೊ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದು. ರೈತರಿಗೆ ಅತಿ ಹೆಚ್ಚು ಲಾಭ ತಂದುಕೊಡುವ ಬೆಳೆ ಎಂಬ ಹೆಗ್ಗಳಿಕೆ ಜೊತೆಗೆ, ರೈತರನ್ನು ಸಂಕಷ್ಟಕ್ಕೆ ದೂಡುವ ಬೆಳೆ ಎಂಬ ಅಪಖ್ಯಾತಿ ಸೇರಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳೆರಡೂ ಈ ಬೆಳೆಗೆ ಇವೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಳೆಯಲಾಗುವ ಟೊಮೇಟೊ ಬೆಳೆಗಾರರ ನಸೀಬು ಚೆನ್ನಾಗಿದ್ದ ದಿನಗಳಲ್ಲಿ ಕೆ.ಜಿ.ಗೆ 30 ರಿಂದ 50 ರೂ.ಗೆ ಮಾರಾಟವಾಗಿದ್ದೂ ಇದೆ. ಅದೃಷ್ಟ ಕೆಟ್ಟಾಗ ಬಿಡಿಗಾಸಿಗೂ ಕೇಳುವವರಿಲ್ಲದೆ ರಸ್ತೆ ಬದಿಗೆ ಚೆಲ್ಲುವುದೂ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಲಾಭಕ್ಕಿಂತಲೂ ನಷ್ಟ ಅನುಭವಿಸಿದ ರೈತರ ಸಂಖೆಯೇ ಹೆಚ್ಚು.

ಆದರೆ ಇತ್ತೀಚೆಗೆ ಕೆಲ ಬುದ್ಧಿವಂತ ರೈತರು ದಲ್ಲಾಳಿಗಳ ಮೊರೆ ಹೋಗದೆ, ತಾವೇ ಸ್ವತಃ ಸಂತೆಗಳಲ್ಲಿ ಕುಳಿತು ಟೊಮೇಟೊ ಮಾರುವ ಮೂಲಕ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಈ ಪ್ರಕ್ರಿಯೆ ಒಂದೂರಿಗೆ ಸೀಮಿತವಾಗುತ್ತಿಲ್ಲ. ಬದಲಿಗೆ, ಪ್ರತಿ ದಿನ ಒಂದಿಲ್ಲೊಂದು ಊರಿನಲ್ಲಿ ಸಂತೆ ನಡೆಯುತ್ತದೆ. ಅದರ ಪ್ರಕಾರ ಪ್ರತಿ ದಿನವೂ ಸಂತೆ ನಡೆಯುವ ಊರುಗಳಿಗೆ ಹೋಗಿ ಟೊಮೇಟೊ ಮಾರುವ ರೂಢಿಯನ್ನು ಈಗ ಬಹಳ ರೈತರಲ್ಲಿ ಕಾಣಬಹುದಾಗಿದೆ.

ಆದರೆ, ಬೆಳೆ ಬಂದು ಅವುಗಳನ್ನು ಮಾರಾಟ ಮಾಡುವುದು ಒಂದೆಡೆ ಇರಲಿ, ಉತ್ತಮ ಬೆಳೆ ಪಡೆಯಬೇಕೆಂದರೆ ಅಲ್ಲೂ ಹಲವಾರು ಕಂಟಕಗಳಿವೆ. ಸಂತೆ, ಮಾರುಕಟ್ಟೆಯಲ್ಲಿ ಕೊಳ್ಳಲು ಸಿಗುವ ಟೊಮೇಟೊ ಹಣ್ಣುಗಳು ನೋಡಲು ಫಳ ಫಳ ಹೊಳೆಯುತ್ತಾ ಇರುತ್ತವಾದರೂ ಅವುಗಳನ್ನು ಬೆಳೆಯುವ ಜಮೀನಿನಲ್ಲಿ ಬೆಳೆಯನ್ನು ಕಾಡುವ ರೋಗ, ಕೀಟ ಬಾಧೆಗಳು ಒಂದೆರಡಲ್ಲ. ಈ ದಿನಗಳಲ್ಲಿ ಟೊಮೇಟೊ ಬೆಳೆಯನ್ನು ಕಾಡುವ ಕೀಟ ಬಾಧೆಗಳ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ (ಕೃಷಿ ವಿಸ್ತರಣೆ) ಡಾ. ನಾಗೇಶ್ ಬಸಪ್ಪ ಜಾನೇಕಲ್ ಅವರು ರೈತರಿಗೆ ಮಾಹಿತಿ ನೀಡಿದ್ದಾರೆ.

ಜಿಗಿಹುಳು, ಹೇನು ಮತ್ತು ಬಿಳಿ ನೊಣ

ಟೊಮೇಟೊ ಬೆಳೆಯನ್ನು ಕಾಡುವ ಪ್ರಮುಖ ಕೀಟ ಜಿಗಿಹುಳು. ಅಪ್ಸರೆ ಹಂತದಲ್ಲಿರುವ ಮತ್ತು ಪ್ರಾಯಕ್ಕೆ ಬಂದಿರುವ ಜಿಗಿ ಹುಳುಗಳು ಎಲೆಗಳ ಭಾಗದಿಂದ ರಸ ಇರುತ್ತವೆ. ಇಂಥಹ ಎಲೆಗಳು ಹಳದಿಯಾಗಿ ಕೆಳಮುಖವಾಗಿ ಮುಟುರಿಕೊಳ್ಳುತ್ತವೆ. ಇದರೊಂದಿಗೆ ಸಸ್ಯ ಹೇನುಗಳು ಸಹ ಎಲೆ ಮತ್ತು ಕಾಂಡದ ಭಾಗದಿಂದ ರಸ ಹೀರುತ್ತವೆ. ಹೀಗೆ ರಸ ಹೀರಲ್ಪಟ್ಟ ಭಾಗಗಳು ನಂತರದಲ್ಲಿ ಒಣಗುತ್ತವೆ. ಇನ್ನು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬಿಳಿ ನೊಣಗಳು ಎಲೆಗಳ ಕೆಳಭಾಗದಿಂದ ರಸ ಹಿರುವ ಮುಲಕ ಎಲೆಗಳು ಮುಟುರುವಂತೆ ಮಾಡುತ್ತವೆ. ಇದರಿಂದ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ನಿರ್ವಹಣೆ ವಿಧಾನ

ಟೊಮೇಟೊ ಬೆಳೆಯನ್ನು ಕಾಡುವ ಜಿಗಿಹುಳು, ಸಸ್ಯ ಹೆನುಹುಳು ಮತ್ತು ಬಿಳಿ ನೊಣಗಳ ಹತೋಟಿ ಮಾಡಲು; ಪ್ರತಿ ಒಂದು ಲೀಟರ್ ನೀರಿಗೆ 0.25 ಎಂ.ಎಲ್. ಇಮಿಡಾಕ್ಲೋಪ್ರಿಡ್ 17.8ಎಸ್‌ಎಲ್ ಅಥವಾ 1.7 ಎಂ.ಎಲ್ ಡೈಮಿಥೋಯೇಟ್ 30ಇಸಿ ಅಥವಾ 1 ಎಂ.ಎಲ್ ಫಾಸ್ಫಾಮಿಡಾನ್ 40ಎಸ್‌ಎಲ್ ಇಲ್ಲವೇ 2 ಎಂ.ಎಲ್ ಟ್ರೆöÊಜೋಫಾಸ್ 40ಇಸಿ ಅಥವಾ ಶೇ.4ರ ಬೇವಿನ ಬೀಜದ ಕಷಾಯವನ್ನು ಬೆರೆಸಿ ಬೆಳೆಗೆ ಸಿಂಪಡಿಸಬೇಕು.

ಎಲೆ ಸುರಂಗ ಕೀಟ

ಎಲೆ ಸುರಂಗ ಕೀಟದ ಮರಿ ಹುಳುಗಳು, ಟೊಮೇಟೊ ಗಿಡದ ಎಲೆಯ ಪದರಗಳ ಒಳಗೆ ಸೇರಿಕೊಂಡು ಹಸಿರು ಪದಾರ್ಥವನ್ನು ಕೆರೆದು ತಿನ್ನುತ್ತವೆ. ಈ ಬಾಧೆ ಇರುವ ಗಿಡಗಳ ಎಲೆಗಳ ಮೇಲೆ ಹಾವಿನ ಹರಿವಿನ ಆಕಾರದಲ್ಲಿ ಬಿಳಿ ಗುರುತುಗಳು ಕಂಡುಬರುತ್ತವೆ. ಹಾಳಾದ ಎಲೆಗಳನ್ನು ಗಿಡದಿಂದ ಕಿತ್ತು ನಾಶಪಡಿಸುವುದು ಈ ಕೀಟ ನಿರ್ವಹಣೆಗೆ ಇರುವ ಮೂಲ ವಿಧಾನವಾಗಿದೆ. ಕೀಟ ಬಾಧೆ ಅಧಿಕವಾಗಿದ್ದರೆ ಮೊದಲು ಶೇ.4ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಿದರೆ ಕೀಟ ಬಾಧೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ.

ಹಣ್ಣು ಕೊರೆಯುವ ಹುಳು

ಇನ್ನೇನು ಟೊಮೇಟೊ ಕಾಯಿಗಳು ಹಣ್ಣಾಗುವ ಹಂತದಲ್ಲಿ ಹೆಚ್ಚು ಬಾಧಿಸುವ ಹಣ್ಣು ಕೊರೆಯುವ ಹುಳುಗಳು, ಹೂವು ಬಿಡುವ ಹಂತದಲ್ಲೇ ಬೆಳೆಯನ್ನು ತಿನ್ನಲು ಆರಂಭಿಸುತ್ತವೆ. ಮೊದಲ ಹಂತದ ಮರಿ ಹುಳುಗಳು ಹೂವನ್ನು ತಿನ್ನುತ್ತವೆ. ನಂತರದ ಮರಿ ಹುಳುಗಳು ಹೂವಿನ ಮೊಗ್ಗುಗಳನ್ನು ಮತ್ತು ಹಣ್ಣನ್ನು ಕೊರೆದು ಒಳ ಭಾಗವನ್ನು ತಿನ್ನುತ್ತವೆ. ಅಂತಹ ಹಣ್ಣುಗಳು ನಂತರದಲ್ಲಿ ಕೊಳೆಯುತ್ತವೆ.

ಇದರ ನಿರ್ವಹಣೆಗೆ 25 ಸಾಲು ಟೊಮೇಟೊ, ನಂತರ ಒಂದು ಸಾಲು ಚೆಂಡು ಹೂ ಬೆಳೆಸುವುದರಿಂದ ಶೇ.10ರಷ್ಟು ಬಾಧೆಯನ್ನು ತಡೆಯಬಹುದು. ಟೊಮೇಟೊ ಬೆಳೆಯಲ್ಲಿ ಪ್ರತಿ ಎರಡು ಸಾಲುಗಳ ಮಧ್ಯೆ ಒಂದು ಸಾಲು ಮೂಲಂಗಿಯನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ಹಣ್ಣು ಕೊರಕದ ಬಾಧೆ ಕಡಿಮೆಯಾಗುತ್ತದೆ.

ಪ್ರತಿ ಲೀಟರ್ ನೀರಿನಲ್ಲಿ 0.4 ಎಂ.ಎಲ್ ಇಂಡಾಕ್ಸಿಕಾರ್ಬ್ 15.8ಇಸಿ ಅಥವಾ 1 ಗ್ರಾಂ. ಥೈಯೋಡಿಕಾರ್ಬ್ 75ಡಬ್ಲೂಪಿ, ಅಥವಾ 0.3 ಎಂ.ಎಲ್ ಕ್ಲೋರಾಂಟ್ರನಿಲಿ ಪ್ರೊಲ 18.5ಎಸ್‌ಎಲ್ ಅನ್ನು ಬೆರೆಸಿ ಸಿಂಪಡಿಸಿದರೆ ಈ ಕೀಟವನ್ನು ನಿವಾರಣೆ ಮಾಡಬಹುದು.

ಎಲೆ ತಿನ್ನುವ ಕೀಟ

ಈ ಕೀಟದ ಮೊದಲ ಹಂತದ ಮರಿ ಹುಳುಗಳು ಎಲೆಯ ಹಸಿರು ಪದಾರ್ಥವನ್ನು ಕೆರೆದು ತಿನ್ನುತ್ತವೆ. ನಂತರ ಬೆಳೆದ ಎಲೆಗಳನ್ನು ತಿಂದು ಹಾನಿ ಮಾಡುತ್ತವೆ. ಈ ಮರಿ ಹುಳಗಳನ್ನು ನಾಶಪಡಿಸಲು ಶೇ.5ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ಕೀಟಗಳಿಗೆ ವಿಷ ಪಾಷಣ ಬಳಸಬೇಕು. 25 ಗ್ರಾಂ. ಅಕ್ಕಿ ಅಥವಾ ಗೋಧಿ ತೌಡು, 2 ಗ್ರಾಂ. ಬೆಲ್ಲ ಮತ್ತು 125 ಎಂ.ಎಲ್ ಮೋನೋಕ್ರೊಟೊಪಾಸ್ 36ಎಸ್‌ಎಲ್ ಅನ್ನು 5 ಲೀಟರ್ ನೀರಿನೊಂದಿಗೆ ಬೆಳೆಯ ಮೇಲೆ ಎರಚಬೇಕು. ಈ ವಿಷಕ್ಕೆ ಆಕರ್ಷಿತವಾಗಿ ಬರುವ ಕೀಟಗಳು ಅದನ್ನು ತಿಂದು ನಾಶವಾಗುತ್ತವೆ.

ಇದರೊಂದಿಗೆ 1 ಎಂ.ಎಲ್ ಸಾಯಂಟ್ರನಿಲಿಪ್ರೊಲ 10.26ಓಡಿ ಅಥವಾ 1 ಎಂ.ಎಲ್ ಪೆನಾಜಿ ಕ್ವಿನ್ 10ಇಸಿ ಅಥವಾ 0.5 ಎಂ.ಎಲ್ ಅಜಾಡಿ ರೆಕ್ವಿನ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.