Agripedia

ಮುಸುಕಿನ ಜೋಳ ಬೆಳೆದು ಸಂಕಷ್ಟಕ್ಕಿಡಾದ ಪ್ರತಿ ರೈತರಿಗೆ 5000 ರುಪಾಯಿಗಳ ಆರ್ಥಿಕ ನೆರವು

14 June, 2020 4:22 PM IST By:

ಲಾಕ್‍ಡೌನ್ ಸಮಸ್ಯೆಯಿಂದ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಸಂಕಷ್ಟಕ್ಕಿಡಾದ ಪ್ರತಿ ರೈತರಿಗೆ 5000 ರುಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಇ-ಆಡಳಿತದಿಂದ 2019-20ನೇ ಸಾಲಿನಲ್ಲಿ ಕೈಗೊಳ್ಳಲಾದ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾಗಿರುವ ಬೆಳೆ ವಿವರಗಳ ಆಧಾರದ ಮೇರೆಗೆ ಪಾವತಿಸಲಾಗುತ್ತದೆ.  ಈ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾಗಿರುವ ಮುಸುಕಿನ ಜೋಳದ ಬೆಳೆಗಾರರ ವಿವರವನ್ನು ಪಡೆಯಲು ರೈತರು ಸಂಬಂಧಪಟ್ಟ ಆಯಾ ತಾಲೂಕಿನ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕಾ ಕಚೇರಿಗಳಿಗೆ ಸಂಪರ್ಕಿಸಬೇಕು. ತಮ್ಮ ಹೆಸರು ದಾಖಲಾಗದೇ ಇದ್ದಲ್ಲಿ ಮುಸುಕಿನ ಜೋಳ ಬೆಳೆಗಾರರಾಗಿದ್ದಲ್ಲಿ ಅಂತಹ ರೈತರು ದಾಖಲಾತಿಗಳೊಂದಿಗೆ 2020ರ ಜೂನ್ 23 ರೊಳಗಾಗಿ  ತಮ್ಮ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ.

ಫಲಾನುಭವಿಗಳ ಅರ್ಹತೆ ಇಂತಿದೆ. ಫಲಾನುಭವಿಗಳು ರೈತರಾಗಿದ್ದು, ಜಮೀನು ಅವರ ಹೆಸರಿನಲ್ಲಿರಬೇಕು. ಆಧಾರ ಕಾರ್ಡ ಜಿರಾಕ್ಸ್ ಹಾಗೂ ರೈತರ ಬ್ಯಾಕ್ ಖಾತೆ ಪಾಸ್ ಪುಸ್ತಕದ ಜಿರಾಕ್ಸ ಪ್ರತಿಯನ್ನು ಸಲ್ಲಿಸಬೇಕು. ಜಂಟಿ ಖಾತೆಯಲ್ಲಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪಡೆಯಬೇಕು (ನೋಟರಿರವರಿಂದ ಧೃಢೀಕರಣ ಮಾಡಿಸಬೇಕು),  ಮುಸುಕಿನ ಜೋಳ ಬೆಳೆದ ಪ್ರತಿ ರೈತರು ಒಂದು ಹಂಗಾಮಿಗೆ ಅನ್ವಯವಾಗುವಂತೆ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ತಂದೆ ಅಥವಾ ತಾಯಿಯ ಹೆಸರಿನಲ್ಲಿ ಜಮೀನಿದ್ದು ಅವರು ಮರಣ ಹೊಂದಿದ್ದರೆ ಮಾತ್ರ ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಿಸಿ ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು. ಮಹಿಳೆಯ ಹೆಸರಿನಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಅರ್ಜಿ ಮಾನ್ಯ ಮಾಡಲಾಗುವುದಿಲ್ಲ. ಆದ್ದರಿಂದ ಮಹಿಳೆಯರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಬೇಕು.

ಅದೇ ರೀತಿ 2019-20 ನೇ ಸಾಲಿನ ಮುಂಗಾರಿನಲ್ಲಿ ಪ್ರವಾಹದಿಂದ ಜಿಲ್ಲೆಯಲ್ಲಿ ಮುಸುಕಿನ ಜೋಳ ಹಾನಿಗೊಂಡ ರೈತರಿಗೆ ಎನ್.ಡಿ.ಆರ್.ಎಫ್./ ಎಸ್.ಡಿ.ಆರ್.ಎಫ್.  ಮಾರ್ಗಸೂಚಿಯನ್ವಯ ಈಗಾಗಲೇ ಪರಿಹಾರ ನೀಡಲಾಗಿದೆ. ಪರಿಹಾರ ಪಡೆದ ರೈತರು ಅನರ್ಹರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.