Agripedia

ಹಣ್ಣಿನ ರಾಜನಿಗೆ ಉಂಟು ಹತ್ತಾರು ಕೀಟಗಳ ಕಾಟ

25 November, 2021 5:23 PM IST By: KJ Staff
mango farming

ಮಾರುಕಟ್ಟೆಯಲ್ಲಿ ಹಲವು ವಿಧದ ಹಣ್ಣುಗಳಿರುತ್ತವೆ. ರೈತರು ಕೂಡ ತಮ್ಮ ತೋಟಗಳಲ್ಲಿ ನೂರಾರು ವಿಧದ ಹಣ್ಣುಗಳನ್ನು ಬೆಳೆಯುತ್ತಾರೆ. ಆದರೆ ಈ ಹಣ್ಣುಗಳೆಲ್ಲಾ ಕೇವಲ ಪ್ರಜೆಗಳಿದ್ದಂತೆ. ಈ ಎಲ್ಲಾ ಹಣ್ಣುಗಳಿಗೂ ರಾಜನೆಂದರೆ ಅದು, ಮಾವು. ಹಣ್ಣುಗಳ ರಾಜನಾಗಿರುವ ಮಾವು, ಕರ್ನಾಟಕದ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ಒಂದು. ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ಹಾವೇರಿ, ಕೊಪ್ಪಳ, ಕಲಬುರಗಿ, ಬೀದರ್ ಸೇರಿ ಹಲವು ಜಿಲ್ಲೆಗಳಲ್ಲಿ ಮಾವಿನ ಹಣ್ಣನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತದೆ.

ರಾಜ್ಯದಲ್ಲಿ ಮಖ್ಯವಾಗಿ ರಸಪುರಿ, ಬಾದಾಮಿ, ಸೆಂದೂರ, ಬಂಗನಪಲ್ಲಿ (ಬೆನೇಶಾನ), ಮಲ್ಲಿಕಾ, ಮಲಗೋವಾ, ನೀಲಂ ಮತ್ತು ತೋತಾಪುರಿ ತಳಿಯ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶವನ್ನು ಹೊಂದಿದ್ದರೂ, ರಾಜ್ಯದ ಮಾರುಕಟ್ಟೆಗೆ ಮೊದಲು ಮಾವಿನ ಸಿಹಿಯನ್ನು ನೀಡುವ ಜಿಲ್ಲೆ ರಾಮನಗರ. ಹೌದು, ಪ್ರತಿ ವರ್ಷ ರಾಜ್ಯದ ಮಾರುಕಟ್ಟೆಗೆ ಮೊದಲು ಪ್ರವೇಶ ಪಡೆಯುವುದು ರಾಮನಗರ ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಮಾಗಡಿ ಹಾಗೂ ರಾಮನಗರ ತಾಲೂಕಿನ ರೈತರು ಬೆಳೆಯುವ ಮಾವಿನ ಹಣ್ಣುಗಳು ಎಂಬುದು ವಿಶೇಷ.

ರಾಜ್ಯದಲ್ಲಿ ಮಾವು ಬೆಳೆಯುವ ಪ್ರದೇಶ ಬೇರೆ ಬೇರೆಯಾದರೂ, ಈ ಬೆಳೆಯನ್ನು ಕಾಡುವ ರೋಗಗಳು ಮಾತ್ರ ಎಲ್ಲ ಪ್ರದೇಶದಲ್ಲೂ ಒದೇ ವಿಧವಾಗಿವೆ. ಹೀಗಾಗಿ ಮಾವು ಬೆಳೆಯಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಕೀಟ ಬಾಧೆಗಳು ಹಾಗೂ ಅವುಗಳನ್ನು ನಿಯಂತ್ರಿಸುವ, ನಿವಾರಿಸುವ ಮತ್ತು ನಿರ್ವಹಿಸುವ ವಿಧಾನಗಳ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ (ಕೃಷಿ ವಿಸ್ತರಣೆ) ಡಾ.ನಾಗೇಶ್ ಬಸಪ್ಪ ಜಾನೇಕಲ್ ಹಾಗೂ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

ಜಿಗಿಹುಳುಗಳ ಬಾಧೆ

ಜಿಗಿ ಹುಳುಗಳು ಸಾಮಾನ್ಯವಾಗಿ ಬೆಣೆ ಆಕಾರದಲ್ಲಿರುತ್ತವೆ. ಪ್ರೌಢಾವಸ್ಥೆ ಮತ್ತು ಅಪ್ಸರೆ ಹಂತದಲ್ಲಿರುವ ಹುಳುಗಳು ಮಾವಿನ ಹೂವುಗಳ ಗೊಂಚಲಿನಿAದ ರಸ ಹೀರುತ್ತವೆ. ಪರಿಣಾಮ, ಹೂಗಳು ಉದುರುತ್ತವೆ. ಜೊತೆಗೆ ಹುಳುಗಳು ಅಂಟು ಪದಾರ್ಥವನ್ನು ಹೊರಹಾಕುವುದರಿಂದ ಗೊಂಚಲಿನಲ್ಲಿ ಕಪ್ಪುಬೂಷ್ಟು ಬೆಳವಣಿಗೆ ಹೊಂದುತ್ತದೆ.

ನಿರ್ವಹಣೆ ಕ್ರಮ

ಹೂವು ಹಾಗೂ ಕಾಯಿ ಕಟ್ಟಿದ ಕೂಡಲೇ ಜಿಗಿಹುಳು ನಿಯಂತ್ರಣಕ್ಕಾಗಿ ಪ್ರತಿ ಒಂದು ಲೀಟರ್ ನೀರಿಗೆ 0.25 ಗ್ರಾಂ ಥೈಯೋಮೆಥಾಕ್ಸಾಮ್, ಪ್ರತಿ ಒಂದು ಲೀಟರ್ ನೀರಿಗೆ 0.5 ಎಂ.ಎಲ್ ಲ್ಯಾಮ್ಡಾ ಸೈಲೋಥ್ರಿನ್, ಲೀಟರ್ ನೀರಿಗೆ 2 ಎಂ.ಎಲ್ ಮೆಲಾಥಿಯನ್ ಬೆರೆಸಿ ಸಿಂಪಡಿಸಬೇಕು. ಜಿಗಿಹುಳುಗಳ ಹಾವಳಿ ಹೆಚ್ಚಾಗಿದ್ದರೆ ಪ್ರತಿ ಲೀಟರ್ ನೀರಿನಲ್ಲಿ 5 ಎಂಎಲ್ ‘ಅಜಾಡಿರೆಕ್ಟಿನ್ 3000ಪಿಪಿಎಂ’ ಬೆರೆಸಿ ಸಿಂಪಡಿಸಿದರೆ ಜಿಗಿಹುಳು ನಿಯಂತ್ರಿಸಬಹುದು.

ಹಣ್ಣಿನ ನೊಣ

ತಿಳಿ ಕಂದು ಬಣ್ಣದ ಹಣ್ಣಿನ ಮೇಲೆ ತಾಯಿ ನೊಣಗಳು ಮೊಟ್ಟೆಯಿಟ್ಟು, ಆ ಮೊಟ್ಟೆಗಳಿಂದ ಹೊರಬರುವ ಹಳದಿ ಬಣ್ಣದ ಮರಿಗಳು ಮಾವಿನ ಹಣ್ಣನ್ನು ತಿನ್ನುತ್ತವೆ. ಇದರಿಂದ ಹಣ್ಣಿನ ಮೇಲೆ ಕಪ್ಪು ಚುಕ್ಕೆಗಳಾಗಿ, ನಂತರ ಹಣ್ಣು ಕೊಳೆತು ಹೋಗುತ್ತದೆ. ಕೊಳೆತ ಹಣ್ಣುಗಳು ಮರದಿಂದ ಕೆಳಗೆ ಬೀಳುತ್ತವೆ.

ನಿಯಂತ್ರಣ ವಿಧಾನ

ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಹತ್ತು ಮೋಹಕ ಬಲೆಗಳನ್ನು ತೂಗು ಹಾಕಿ, ಪ್ರತಿ ಲೀಟರ್ ನೀರಿನಲ್ಲಿ 1 ಎಂ.ಎಲ್ ಮಿಥೈಲ್ ಯುಜಿನಾಲ್ ಮತ್ತು 1 ಎಂ.ಎಲ್ ಡೈಕ್ಲೋರ್ ವಾಸ್ ಅಥವಾ 1 ಎಂ.ಎಲ್ ಮೆಲಾಥಿಯಾನ್ ಬೆರೆಸಿ ದ್ರಾವಣವನ್ನು ಬಲೆಗಳಲ್ಲಿ ಸಿಂಪಡಿಸಬೇಕು. ಪ್ರತಿ ಬಲೆಗೆ 100 ಎಂ.ಎಲ್ ದ್ರಾವಣ ಉಪಯೋಗಿಸಬೇಕು. ಇಲ್ಲವೇ ಪ್ರತಿ ಲೀಟರ್ ನೀರಿಗೆ 1.7 ಎಂ.ಎಲ್ ಡೈಮಿಥೊಯೆಟ್ ಅನ್ನು ಹತ್ತು ಗ್ರಾಂ. ಬೆಲ್ಲದೊಂದಿಗೆ ಕರಗಿಸಿ ಹಣ್ಣು ಮಾಗುವ ಅವಧಿಯಲ್ಲಿ ಸಿಂಪಡಣೆ ಮಾಡಬೇಕು. ಅಥವಾ ಮಾವಿನ ಕಾಯಿಗಳು ನಿಂಬೆ ಹಣ್ಣಿನ ಗಾತ್ರದಲ್ಲಿ ಇರುವಾಗ 1 ಎಂ.ಎಲ್ ಡೆಲ್ಟ್ರಾಮೈಥ್ರಿನ್ ಅನ್ನು ಸಿಂಪಡಣೆ ಮಾಡಿದರೆ ಹಣ್ಣಿನ ನೊಣಗಳ ಹಾವಳಿ ನಿಯಂತ್ರಿಸಬಹುದು.

ಓಟೆ ಕೊರಕ ಹುಳು

ಇಲ್ಲಿ ಮರಿಹುಳು ಹಣ್ಣಿನ ತಿರುಳಿನ ಮೂಲಕ ಓಟೆಯನ್ನು ಸೇರಿ ತಿರುಳನ್ನು ತಿನ್ನುತ್ತವೆ. ಹೀಗೆ ತಿರುಳು ತಿಂದು ಪ್ರೌಢಾವಸ್ತೆ ತಲುಪುವ ಓಟೆ ಕೊರಕ ಹುಳು, ಹಣ್ಣಿನಿಂದ ಹೊರಬರುವಾಗ ಹಾಕುವ ಹಿಕ್ಕೆಯಿಂದ ಹಣ್ಣು ಸಂಪೂರ್ಣ ಹಾಳಾಗುತ್ತದೆ. 1 ಎಂ.ಎಲ್ ಡೆಲ್ಟ್ರಾಮೈಥ್ರಿನ್ ಅಥವಾ 1 ಗ್ರಾಂ. ಅಸಿಫೇಟ್ ಅಥವಾ 2 ಎಂ.ಎಲ್ ಡೈಮಿಥೊಯೇಟ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಿದರೆ ಈ ಹುಳುಗಳ ಬಾಧೆ ನಿಯಂತ್ರಣಕ್ಕೆ ಬರುತ್ತದೆ.

ಎಲೆಗಂಟು ಮಸುಕು

ಎಲೆಗಂಟು ಮಸುಕು (ಗಾಲ್ ಮಿಡ್ಜ್) ಕೀಟವು ಚಿಗುರು ಎಲೆಗಳನ್ನು ಬಾಧಿಸಿ ಎಲೆಗಳ ಮೇಲೆ ನರುಲಿ (ನಾರುಳ್ಳೆ) ಮಾದರಿಯ ಗಂಟುಗಳನ್ನು ಉಂಟು ಮಾಡುತ್ತದೆ. ಮಾವು ಚಿಗುರು ಬರುವ ಸಮಯದಲ್ಲಿ ಅಂತರ್ವ್ಯಾಪಿ ಕೀಟನಾಶಕ ಕ್ವಿನಾಲ್ ಫಾಸ್ ಅನ್ನು ಪ್ರತಿ ಲೀಟರ್ ನೀರಿಗೆ 2 ಎಂ.ಎಲ್‌ನAತೆ ಬೆರೆಸಿ ಬೆಳೆಗೆ ಸಿಂಪಡಣೆ ಮಾಡಬೇಕು. ಇದೇ ಔಷಧವನ್ನು ಹದಿನೈದು ದಿನಗಳ ಅಂತರದಲ್ಲಿ ಪುನರಾವರ್ತನೆ ಮಾಡಿದರೆ ಎಲೆಗಂಟು ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.

ರೆಂಬೆ ಕುಡಿ ಕೊರಕ

ರೆಂಬೆ ಕುಡಿ ಕೊರಕ ಹುಳುವಿನ ಮರಿ ಹುಳುಗಳು ರೆಂಬೆಗಳನ್ನು ಕೊರೆದು ಒಳಗಡೆ ಸೇರಿ ಕುಡಿಗಳನ್ನು ತಿನ್ನುತ್ತವೆ. ಹುಳುಗಳು ಹೀಗೆ ಕುಡಿ ತಿಂದ ನಂತರ ರೆಂಬೆಗಳು ಬಾಡಿ, ಒಣಗುತ್ತವೆ. ಈ ಕೀಟ ಬಾಧೆ ನಿಯಂತ್ರಿಸಲು 2 ಎಂ.ಎಲ್ ಕ್ವೀನಾಲ್ಫಾಸ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಚಿಗುರು ಬಂದಾಗ ಸಿಂಪಡಣೆ ಮಾಬೇಕು. 15 ದಿನಗಳ ಅಂತರದಲ್ಲಿ ಮತ್ತೊಮ್ಮೆ ಇದೇ ದ್ರಾವಣ ಸಿಂಪಡಿಸಬೇಕು.

ಹಿಟ್ಟು ತಿಗಣೆ

ಸಾಮಾನ್ಯವಾಗಿ ಎಲ್ಲ ಬೆಳೆಗಳನ್ನೂ ಕಾಡುವ ಕೀಟ ಹಿಟ್ಟು ತಿಗಣೆ. ಬಿಳಿ ಹಿಟ್ಟಿನಂತಹ ತಿಗಣೆಗಳು ಎಳೆಯದಾದ ಎಲೆಗಳಿಂದ, ಹೂವಿನ ಗೊಂಚಲಿನಿAದ ಮತ್ತು ಹಣ್ಣಿನ ತೊಟ್ಟಿನ ಭಾಗದಿಂದ ರಸ ಹೀರುತ್ತವೆ. ಈ ಕೀಟದ ಬಾಧೆಗೊಳಗಾದ ಭಾಗಗಳು ಒಣಗಿ ಬೂಷ್ಟು ಬೆಳವಣಿಗೆಯಾಗುತ್ತದೆ.

ತಿಗಣೆ ನಿಯಂತ್ರಣ

ಪ್ರತಿ ಲೀಟರ್ ನೀರಿಗೆ 1.2 ಎಂ.ಎಲ್ ಭೂ ಫ್ರೋಜಿನ್ ಅಥವಾ ಲೀಟರ್‌ಗೆ 0.5 ಎಂ.ಎಲ್ ಅಥವಾ 1.2 ಎಂ.ಎಲ್ ಮೊನೋಕ್ರೊಟೋಫಾಸ್, 2 ಎಂ.ಎಲ್ ಪ್ರೊಫೆನೋಫಾಸ್, 5 ಗ್ರಾಂ. ಫಿಶ್ ಆಯಿಲ್ ರೋಸಿನಿ ಸೋಪು ಅಥವಾ ಶೇ.5ರ ಬೇವಿನ ಬೀಜದ ಕಷಾಯ ಬೆರೆಸಿ ಸಿಂಪಡಿಸಿ. ಕಾಂಡದ ಮೇಲೆ 25 ಸೆಂ.ಮೀ ಅಗಲದ ಅಲ್ಕಾಥಿನ್ ಬ್ಯಾಂಡ್‌ಗಳನ್ನು ಕಟ್ಟ ಬೇಕು. ಮರದ ಸುತ್ತ ಮಣ್ಣನ್ನು ಕೆರೆದು, ಪ್ರತಿ ಮರಕ್ಕೆ 250 ಗ್ರಾಂ. ಕ್ಲೋರೋಪೈರಿಫಾಸ್ ಹಾಕುವ ಮೂಲಕ ಈ ಕೀಟವನ್ನು ನಿಯಂತ್ರಿಸಬಹುದು.