Agripedia

ಮಣ್ಣಿನ ಬಗ್ಗೆ ರೈತರು ತಿಳಿಯಬೇಕಾದ ಅವಶ್ಯಕ ಅಂಶಗಳು

18 January, 2021 10:11 AM IST By:
Organic soil

ಮಣ್ಣಿನ ಫಲವತ್ತತೆ ಅದರ ಭೌತಿಕ ರಚನೆ,ಅದರಲ್ಲಿರುವ ರಾಸಾಯನಿಕ ಗುಣಧರ್ಮ ಮತ್ತು ಸೂಕ್ಷ್ಮಾಣು ಮತ್ತು ಇತರ ಜೀವಾಂಶಗಳ ಮೇಲೆ ನಿರ್ಧರಿಸುತ್ತದೆ.ಇದರಲ್ಲಿ ಯಾವುದಾದರೂ ಒಂದು ಅಂಶ ಕೂಡ ಕಡಿಮೆಯಾದರೂ ಮಣ್ಣಿನ ಫಲವತ್ತತೆ ಹಾಳಾಗುತ್ತದೆ.

*ಮಣ್ಣಿನಲ್ಲಿರುವ ಖನಿಜ ರೂಪದ ಪೋಷಕಾಂಶಕ್ಕಾಗಿ ಸಾವಯವ ವಸ್ತುಗಳು ಅವಶ್ಯವೇ...?*

ಖನಿಜ ರೂಪದ ಪೋಷಕಾಂಶಗಳು ಸಸ್ಯಗಳಿಗೆ ತಲುಪಬೇಕಾದರೆ ರಾಸಾಯನಿಕ ಕ್ರಿಯೆ ಅತ್ಯಗತ್ಯ. ಮಣ್ಣಿನಲ್ಲಿರುವ ಮೂಲ ಖನಿಜಗಳು ಮತ್ತು ಸಾವಯವ ಪದಾರ್ಥ ಸೇರಿಕೊಂಡು ರಾಸಾಯನಿಕ ಕ್ರಿಯೆಗೆ ಒಳಪಟ್ಟು  ಸಂಯುಕ್ತ ವಸ್ತುಗಳು ತಯಾರಾಗುತ್ತವೆ. ಇದರಿಂದ ಮಣ್ಣಿನ ಬಣ್ಣ ಮತ್ತು ಫಲವತ್ತತೆ ನಿರ್ಧರಿಸಲ್ಪಡುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸೂಕ್ಷ್ಮಾಣು ಜೀವ ಸಮೂಹ ಕೂಡ ಮಹತ್ವದ ಪಾತ್ರ ವಹಿಸುತ್ತದೆ.

*ಮಣ್ಣಿನ ಫಲವತ್ತತೆಯಲ್ಲಿ ಸಾವಯವ ವಸ್ತುವಿನ ಪಾತ್ರ*

>ಸಾವಯವ ವಸ್ತು ಸಸ್ಯಗಳಿಗೆ ಪೋಷಕಾಂಶ ದೊರೆಯುವಲ್ಲಿ ಪಾತ್ರವಹಿಸುತ್ತದೆ.

>ಸಾವಯವ ವಸ್ತು ಸೂಕ್ಷ್ಮಾಣುಗಳಿಂದ ಕೊಳೆತು ಅದರಲ್ಲಿರುವ ಪೋಷಕಾಂಶಗಳು ಸಸ್ಯಗಳಿಗೆ ದೊರೆಯಲು ಸಹಾಯ ಮಾಡುತ್ತದೆ.

>ಸಾವಯವ ವಸ್ತುಗಳು ಮಣ್ಣಿನಲ್ಲಿ ಇಂಗಾಲದ ಪ್ರಮಾಣವನ್ನು ಹೆಚ್ಚಿಸಿ ಮಣ್ಣಿನ ಫಲವತ್ತತೆ ಹೆಚ್ಚಾಗಲು ಕಾರಣವಾಗುತ್ತದೆ.

>ಕೊಳೆತ ಸಾವಯವದಿಂದ ಮಣ್ಣಿನಲ್ಲಿ ಹ್ಯೂಮಸ್ ಪ್ರಮಾಣ ಹೆಚ್ಚಾಗಿ ಮಣ್ಣು ಕಠಿಣವಾಗಿ ಗಟ್ಟಿಯಾಗುತ್ತದೆ.ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಅನುಕೂಲವಾಗುತ್ತದೆ ಹಾಗೂ ಮಣ್ಣು ಕೊರೆಯುವಿಕೆ ಕಡಿಮೆಯಾಗುತ್ತದೆ.

>ಸಾವಯವ ಪದಾರ್ಥ ಹಾಗೂ ಸೂಕ್ಷ್ಮಾಣುಗಳು ಸಸ್ಯಗಳಿಗೆ ರೋಗಭಾದೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತವೆ.

>ಸಾವಯವ ವಸ್ತು ಮಣ್ಣಿನಲ್ಲಿ ಹೆಚ್ಚಿನ ನೀರು ಬಸಿಯಲುಸಹಾಯಕಾರಿ.

>ಕೊಳೆತ ಸಾವಯವ ವಸ್ತು ಬೆಳೆಗೆ ಸೂಕ್ತವಾದ ಮಣ್ಣಿನ ರಸಸಾರವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ

*ಮಣ್ಣಿನಲ್ಲಿ ಯಾವ ರೀತಿ ಸಾವಯವ ವಸ್ತುವನ್ನು ಹೆಚ್ಚಿಸಬಹುದು*

ಮಣ್ಣಿನಲ್ಲಿ ಸಾವಯವ ವಸ್ತು ಶೇ.2-10 ಮತ್ತು ಶೇ.90-98ರಷ್ಟು ಇತರ ಖನಿಜಾಂಶಗಳಿಂದ ಕೂಡಿರುತ್ತದೆ. ಆದರೆ ಈಗಿನ ಕೃಷಿಯುಗದಲ್ಲಿ ಸಾವಯವ ಪ್ರಮಾಣ ಇನ್ನಷ್ಟು ಕಡಿಮೆಯಾಗಿದೆ. ಸಾವಯವ ವಸ್ತುವಿನ ಒಟ್ಟು ಪ್ರಮಾಣದ ಶೇ.60 ಇಂಗಾಲ ಇರುತ್ತದೆ. ಶೇ.40 ರಷ್ಟು ಇತರ ಲವಣಾಂಶಗಳಿರುತ್ತವೆ. ಶೇ.1-2 ಇಂಗಾಲ ಹೊಂದಿದ ಮಣ್ಣು ಫಲವತ್ತಾಗಿದ್ದು, ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.

ವಿವಿಧ ಮೂಲಗಳಿಂದ ದೊರೆಯುವ ಕಾಂಪೋಸ್ಟ್ ಹಾಗೂ ವಿವಿಧ ಪ್ರಾಣಿಗಳಿಂದ ಬರುವ ಗೊಬ್ಬರ, ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಮಣ್ಣಿಗೆ ಹಾಕುವುದರಿಂದ ಮಣ್ಣಿನ ಸಾವಯವ ವಸ್ತುವನ್ನು ಹೆಚ್ಚಿಸಲು ಸಾಧ್ಯ.

*ಕೃಷಿಗೆ ನಿಜವಾದ ಆಧಾರಸ್ತಂಭವೇ ಸಾವಯವ ವಸ್ತು*

ಅಗತ್ಯ ಪ್ರಮಾಣದ ಸಾವಯವ ಗೊಬ್ಬರ ಮಣ್ಣಿಗೆ ಪೊರೈಕೆಯಾದಾಗ ಫಲವತ್ತತೆ ಉಳಿದು ಉತ್ತಮ ಇಳುವರಿ  ಪಡೆಯಬಹುದು.ಆಧುನಿಕ ಕೃಷಿಯಲ್ಲಿ ಹೆಚ್ಚು ಸಾವಯವ ಗೊಬ್ಬರ ಬಳಸುವವರು, ಅತಿ ಹೆಚ್ಚು ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡುವವರಿಗಿಂತ ಉತ್ತಮ ಇಳುವರಿಯನ್ನು ಪಡಯುತ್ತಿದ್ದಾರೆ.

ಲೇಖನ: ಯೋಗೇಂದ್ರ ಜಾಯಗೊಂಡೆ