ಬಿತ್ತುವ ಮೊದಲು ರೈತರು, ಬೀಜ ಹಾಗೂ ಮಣ್ಣಿನಿಂದ ಬರಬಹುದಾದ ರೋಗ ಹತೋಟಿ ಮಾಡಲು ಬೀಜೋಪಚಾರ ಕಡ್ಡಾಯವಾಗಿ ಮಾಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ತಿಳಿಸಿದ್ದಾರೆ.
ಧಾರವಾಡ: 2023-24ನೇ ಸಾಲಿನಲ್ಲಿ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಪೂರ್ವದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ವಲಯವಾರು ಸೂಚಿಸಿರುವ ರೋಗ ಹಾಗೂ ಬರ ನಿರೋದಕ ಸೂಕ್ತ ತಳಿಗಳ ಬೀಜಗಳನ್ನು ಆಯ್ಕೆಮಾಡಿಕೊಳ್ಳಬೇಕು.
ಬಿತ್ತುವ ಮೊದಲು ರೈತರು, ಬೀಜ ಹಾಗೂ ಮಣ್ಣಿನಿಂದ ಬರಬಹುದಾದ ರೋಗ ಹತೋಟಿ ಮಾಡಲು ಬೀಜೋಪಚಾರ ಕಡ್ಡಾಯವಾಗಿ ಮಾಡಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಹಾಗೂ ಬರ ನಿರೋಧಕ ಸೂಕ್ತ ತಳಿಗಳನ್ನು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಪ್ರಮುಖ ಬೆಳೆ ಹಾಗೂ ಬೀಜೋಪಚಾರ ವಿಧಾನಗಳು
1. ಗೋವಿನ ಜೋಳ:
* ಉರಿಜಿಂಗಿ ರೋಗಕ್ಕೆ- ಪ್ರತಿ ಕಿ.ಗ್ರಾಂ ಬೀಜಕ್ಕೆ 25 ಗ್ರಾಂ ಅಝೋಸ್ಪಿರಿಲ್ಲಂ (ಎಸಿಡಿ 15 ಅಥವಾ ಎಸಿಡಿ 20 ತಳಿ) ಹಾಗೂ 6 ಗ್ರಾಂ. ಟ್ರೈಕೊಡರ್ಮಾ ಹಾರ್ಜಿಯಾನಮ್ ಶಿಲೀದ್ರದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
* ಕೇದಿಗೆ ರೋಗಕ್ಕೆ- ಬಿತ್ತನೆಯ ಬೀಜವನ್ನು ಪ್ರತಿ ಕಿ. ಗ್ರಾಂ ಬೀಜಕ್ಕೆ 2ಗ್ರಾಂ. ಮೆಟಲಾಕ್ಸಿಲ್ (4%)+ ಮ್ಯಾಂಕೊಜೆಬ್(64%) ಎಮ್.ಜೆಡ್ 72 ಡಬ್ಲೂ.ಪಿ ಅಂತರವ್ಯಾಪಿ ಶಿಲೀಂಧ್ರನಾಶಕದಿಂದ ಉಪಚರಿಸಬೇಕು ಹಾಗೂ ರೋಗಗ್ರಸ್ಥ ಗಿಡಗಳನ್ನು ಬೇರುಸಹಿತ ಕಿತ್ತು ಸುಡಬೇಕು.
2. ಸೋಯಾ ಅವರೆ, ಹೆಸರು, ಹಾಗೂ ಶೇಂಗಾ ಬೆಳೆಗಳಿಗೆ:
* ಪ್ರತಿ ಕಿ.ಗ್ರಾಂ ಬಿತ್ತನೆ ಬೀಜವನ್ನು 3 ಗ್ರಾಮ ಥೈರಾಮ (75 WP) ಅಥವಾ ಕ್ಯಾಪ್ಟನ್ (80 WP) ಅಥವಾ ಕಾರ್ಬಾಕ್ಸಿನ್ ನಿಂದ (75 WP) ಉಪಚರಿಸಬೇಕು. ನಂತರ 1 ಲೀ. ನೀರಿಗೆ 100 ಗ್ರಾಂ ಬೆಲ್ಲ ಹಾಕಿ ಕರಗಿಸಿ ಪಾಕವನ್ನು ತಯಾರಿಸಿಕೊಳ್ಳಬೇಕು.
ಬಿತ್ತುವ ಬೀಜಗಳನ್ನು ಹರಡಿ ಅದರಮೇಲೆ ತಯಾರಿಸಿದ ಬೆಲ್ಲದ ಫಾಕವನ್ನು ಸರಿಯಾಗಿ ಎಲ್ಲ ಕಾಳುಗಳಿಗೆ ಹತ್ತುವಂತೆ ಸಿಂಪಡಿಸಿ 10 ಗ್ರಾಮ ಟ್ರೈಕೊಡ್ರಮಾ 10 ಗ್ರಾಂ ರೈಜೋಬಿಯಮ್ ಹಾಗೂ 10 ಗ್ರಾಂ ರಂಜಕ ಕರಗಿಸುವ ಅಣುಜೀವಿಯನ್ನು (PSB) ಬೀಜಕ್ಕೆ ಉಪಚರಿಸಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.