ಮಣ್ಣು ಈ ಸೃಷ್ಟಿಯ ಮೂಲ. ಮಣ್ಣಿಂದಲೇ ಸಕಲ ಜೀವರಾಶಿಗಳ ಸೃಷ್ಟಿಯಾಗಿದೆ ಎನ್ನುತ್ತಾರೆ. ಮಣ್ಣಿಲ್ಲದಿದ್ದರೆ ಮನುಷ್ಯನಿಲ್ಲ, ಮಾನವ ಸಂಕುಲವೂ ಇಲ್ಲ. ಅಷ್ಟೇ ಅಲ್ಲ, ಮಣ್ಣೇ ಇಲ್ಲದಿದ್ದರೆ ಯಾವ ಜೀವರಾಶಿಯೂ ಬದುಕುಳಿಯಲಾರದು. ಹೀಗೆ ಎಲ್ಲರಿಗೂ ಮೂಲ ಆಸರೆಯಾಗಿರುವ ಮಣ್ಣು ಸಹ ಕೆಲವು ಸೂಕ್ಷ್ಮ ಜೀವಿಗಳ ಮೇಲೆ ಅವಲಂಬಿತವಾಗಿದೆ. ಅದರಲ್ಲೂ ಕೃಷಿಯ ಮೂಲ ಆಕರವಾಗಿರುವ ಮಣ್ಣಿನ ಗುಣಮಟ್ಟ ಹೆಚ್ಚಿಸುವಲ್ಲಿ ಈ ಸೂಕ್ಷ್ಮಾಣು ಜೀವಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.
ರೈತರು ಮತ್ತು ಮಣ್ಣಿನ ಪಾಲಿಗೆ ಸೌಹಾರ್ದ ಜೀವಿಗಳಾಗಿರುವ ಸೂಕ್ಷ್ಮಾಣುಗಳು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ಕೃಷಿಕರು ಬೆಳೆಯುವ ಬೆಳೆಗಳನ್ನು ಕಾಡುವ ಹಲವು ರೋಗಗಳ ನಿಯಂತ್ರಣದಲ್ಲಿ ಕಣ್ಣಿಗೆ ಕಾಣದ ಈ ಅಗೋಚರ ಜೀವಿಗಳ ಪಾತ್ರ ಮಹತ್ವದ್ದಾಗಿದೆ.
ನಾವು ಮೊಸರನ್ನು ದಿನ ನಿತ್ಯ ಸೇವಿಸುತ್ತೇವೆ. ಹಾಲು-ಮೊಸರಾಗುವುದು ಸೂಕ್ಷ್ಮಾಣು ಜೀವಿಗಳು ನಡೆಸುವ ಪ್ರಕ್ರಿಯೆಯಿಂದ. ಹಾಗೇ ಬ್ರೆಡ್, ಕೇಕ್ ಮತ್ತಿತರ ಬೇಕರಿ ತಿನಿಸುಗಳನ್ನು ತಯಾರಿಸುವಾಗಲೂ ಸೂಕ್ಷ್ಮಾಣು ಜೀವಿಗಳು ಬಳಕೆಯಾಗುತ್ತವೆ. ಇನ್ನೊಂದೆಡೆ ನಾವು ಪ್ರತಿ ದಿನವೂ ಬಳಸಿ ಬಿಸಾಡುವ ಹಸಿ ತ್ಯಾಜ್ಯವು ಕೊಳೆತು ಗೊಬ್ಬರವಾಗುವ ಪ್ರಕ್ರಿಯೆಯಲ್ಲಿ ಈ ಜೀವಿಗಳ ಪಾತ್ರವೇ ಪ್ರಮುಖವಾದದ್ದು. ಹಾಗೇ, ಸತ್ತ ಪ್ರಾಣಿಗಳು ಕೊಳೆತು ಸಂಪೂರ್ಣವಾಗಿ ಅವಶೇಷವಾಗುವಂತೆ ಮಾಡುವ ಈ ಜೀವಿಗಳು, ಆ ಮೂಲಕ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡುತ್ತವೆ. ಇನ್ನು ಕೃಷಿ ಭೂಮಿಯಲ್ಲಿ ಸಾರಜನಕ ಸ್ಥಿರೀಕರಿಸುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವ ಸೂಕ್ಷ್ಮಾಣು ಜೀವಿಗಳು, ನಿಜ ಅರ್ಥದಲ್ಲಿ ರೈತರ ಮಿತ್ರರಾಗಿವೆ.
ಮಣ್ಣಿಗೂ ಜೀವವಿದೆ
ಮಣ್ಣು ಒಂದು ಸಜೀವಿಯಾಗಿದ್ದು, ಮಣ್ಣಿನಲ್ಲಿ ಕೋಟ್ಯಂತರ ಜೀವಿಗಳು ಬದುಕುತ್ತವೆ. ಭೂಮಿಯ ಜೀವಸಂಕುಲಗಳ ಅಳಿವು ಉಳಿವು ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ಅವಲಂಬಿಸಿದೆ. ಸಜೀವ ಮಣ್ಣಿನಲ್ಲಿ ಸಾವಯವ ವಸ್ತುಗಳ ಆಸರೆಯಿಂದ ಹುಟ್ಟಿ ಬೆಳೆಯುವ ಕೋಟಿಗಟ್ಟಲೆ ಸೂಕ್ಷ್ಮಾಣು ಜೀವಿಗಳು ಪಕ್ಷತಿ ಕ್ಷಣವೂ ವೃದ್ಧಿಯಾಗುತ್ತವೆ. ಹಾಗೇ ಸಾಯುತ್ತಿರುತ್ತವೆ ಕೂಡ. ಹೀಗೆ ಸತ್ತ ನಂತರವೂ ಅವು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ ಎಂಬುದೇ ವಿಶೇಷ!
ಮಣ್ಣಿಗೂ ಆರೋಗ್ಯ ಕೆಡುತ್ತದೆ!
ಇನ್ನೊಂದು ಸೋಜಿಗದ ವಿಷಯ ಏನೆಂದರೆ ಮನುಷ್ಯ, ಪ್ರಾಣಿ, ಪಕ್ಷಿ, ಸಸ್ಯಗಳು ಅನಾರೋಗ್ಯಕ್ಕೆ ಈಡಾಗುವ ರೀತಿಯಲ್ಲೇ ಜೀವಂತ ಮಣ್ಣಿನ ಆರೋಗ್ಯ ಕೂಡ ಹದಗೆಡುತ್ತದೆ. ಇಂಗಾಲದ ಕೊರತೆಯಾದಾಗ ಸೌಖ್ಯ ಕೆಟ್ಟು ಮಣ್ಣಿನ ಉಸಿರಾಟ ನಿಲ್ಲುತ್ತದೆ. ಹೀಗೆ ಆನಾರೋಗ್ಯ ಸ್ಥಿತಿ ತಲುಪಿದ ಮಣ್ಣು, ಸಸ್ಯ ಅಥವಾ ಬೆಳೆಗಳಿಗೆ ಉಪಕಾರಿ ಆಗಲಾರದು. ಇಂತಹ ಸಂದರ್ಭದಲ್ಲಿ ಮಣ್ಣನ್ನು ಜತನ ಮಾಡಿ, ಫಲವತ್ತತೆ ಹೆಚ್ಚಿಸುವುದು ಸೂಕ್ಷ್ಮಾಣು ಜೀವಿಗಳು.
ಮಣ್ಣಿನ ಮೇಲ್ಪದರದಲ್ಲಿ ಬರಿಗಣ್ಣಿಗೆ ಕಾಣದ ಬ್ಯಾಕ್ಟಿರಿಯಾ, ಫಂಗಸ್, ಆಲ್ಗೆ, ಮೈಕೋರೆಜಾ, ಪ್ರೋಟೋಜೋವಾ ಮುಂತಾದ ಸೂಕ್ಷ್ಮ ಜೀವಿಗಳು ಇರುತ್ತವೆ. ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಮಾತ್ರ ಅವುಗಳು ಗೋಚರಿಸುತ್ತವೆ. ಮಣ್ಣಿನ ಆಳಕ್ಕೆ ಹೋದಂತೆ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಮಣ್ಣು ಜೀವಿಗಳ ಪರಸ್ಪರ ಅವಲಂಬನೆ, ಪರಸ್ಪರ ಸಹಕಾರದ ಜೀವನ ಮತ್ತು ಸಾವಯವ ವಸ್ತುಗಳನ್ನು ಕರಗಿಸುವ ವಿಧಾನಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಬಹುಮುಖ್ಯ. ಸೂಕ್ಷ್ಮಾಣು ಜೀವಿಗಳ ನೆರವಿನಿಂದ ಸಮರ್ಪಕವಾಗಿ ಕೊಳೆತ ಕಾಂಪೋಸ್ಟ್, ವಿವಿಧ ಬೆಳೆಗಳಿಗೆ ರೋಗ ತರುವ ಉಪದ್ರವಕಾರಿ ಜೀವಿಗಳನ್ನು ಕೊಲ್ಲುವ ಶಕ್ತಿ ಹೊಂದಿರುತ್ತದೆ. ಸಾವಯವ ಅಂಶಗಳನ್ನೇ ನೆಚ್ಚಿ ಬಾಳುವ ಈ ಅಗೋಚರ ಜೀವಿಗಳು ಸಸ್ಯಗಳ ಬೆಳವಣಿಗೆಗೆ ಹಲವು ವಿವಿಧಲ್ಲಿ ಸಹಕಾರಿಯಾಗುತ್ತವೆ. ಸಾವಯವ ಗೊಬ್ಬರವು ಸಸ್ಯಗಳಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಜೊತೆಗೆ ಮಣ್ಣಿನಲ್ಲಿರುವ ಉಪಕಾರಿ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ವೃದ್ಧಿಸಿ, ಅಪಕಾರಿ ಜೀವಿಗಳನ್ನು ನಾಶ ಮಾಡುತ್ತದೆ. ಒಟ್ಟಿನಲ್ಲಿ ಸೂಕ್ಷ್ಮಾಣು ಜೀವಿಗಳು ಮಣ್ಣಿನ ಆರೋಗ್ಯದ ಸಮತೋಲನವನ್ನು ಕಾಪಾಡುತ್ತವೆ.
ಸೂಕ್ಷ್ಮಾಣು ಜೀವಿಗಳಿಂದ ಮಣ್ಣಿಗೆ ಏನೆಲ್ಲಾ ಉಪಯೋಗ?
* ಬೆಳೆಗೆ ತಗುಲುವ ರೋಗ, ಕೀಟಬಾಧೆ ಹಾಗೂ ಕಳೆಗಳ ನಿಯಂತ್ರಣ
* ಸಸ್ಯದ ಬೇರುಗಳೊಂದಿಗೆ ಮಣ್ಣು ಸೌಹಾರ್ದ ಸಂಬAಧ ಬೆಸೆಯಲು ಸಹಕಾರಿ
* ಸಾವಯವ ವಸ್ತುಗಳನ್ನು ಅತ್ಯಗತ್ಯ ಸಸ್ಯ ಪೋಷಕಾಂಶಗಳಾಗಿ ಪರಿವರ್ತಿಸುವುದು
* ಮಣ್ಣಿನ ಭೌತಿಕ ರಚನೆ ಸುಧಾರಿಸುವುದು
* ಈ ಜೀವಿಗಳು ಮಣ್ಣಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚಿಸುತ್ತವೆ. ಇದರಿಂದ ಬರಗಾಲದಲ್ಲೂ ಬೆಳೆಗೆ ಅಗತ್ಯ ನೀರು ಸಿಗುತ್ತದೆ.
* ವಾತಾವರಣದಲ್ಲಿರುವ ಇಂಗಾಲವನ್ನು ಸಂಗ್ರಹಿಸುವ ಮೂಲಕ ಹವಾಮಾನ ಬದಲಾವಣೆ ತಡೆಯುತ್ತವೆ.
ಮಣ್ಣಿನಲ್ಲಿ ಇಂಗಾಲ ಹಿಡಿದಿಡುವ ವಿಧಾನ
* ಗಿಡಗಳು ಧ್ಯುತಿಸಂಶ್ಲೇಷಣೆ ಮೂಲಕ ವಾತಾವರಣದಲ್ಲಿರುವ ಇಂಗಾಲಾAಶವನ್ನು ತೆಗೆದುಕೊಂಡು ಅದನ್ನು ಸಕ್ಕರೆಯಾಗಿ ಪರಿವರ್ತಿಸುತ್ತವೆ. ಆಂದರೆ, ಸಕ್ಕರೆಯಲ್ಲಿ ಇಂಗಾಲದ ಅಂಶ ಇರುತ್ತದೆ.
* ತನ್ನಲ್ಲಿರುವ ಇಂಗಾಲದ ಅಂಶವಿರುವ ಸಕ್ಕರೆಯನ್ನು ಕೆಲವೊಮ್ಮೆ ಆಹಾರವಾಗಿ ಬಳಸುವ ಸಸ್ಯಗಳು, ಅಗತ್ಯಕ್ಕಿಂತಾ ಹೆಚ್ಚಾಗಿರುವ ಸಕ್ಕರೆಯನ್ನು ತನ್ನ ಬೇರುಗಳ ಮೂಲಕ ಮಣ್ಣಿಗೆ ಸೇರಿಸುತ್ತವೆ.
* ಮಣ್ಣೊಳಗಿನ ಸೂಕ್ಷ್ಮಾಣು ಜೀವಿಗಳು ಮಣ್ಣಿಗೆ ತಲುಪಿದ ಸಕ್ಕರೆ ಅಂಶವನ್ನು ತಿಂದು, ಸಕ್ಕರೆಯೊಳಗಿನ ಇಂಗಾಲವನ್ನು ತನ್ನೊಳಗೆ ಶೇಖರಿಸಿಟ್ಟುಕೊಳ್ಳುತ್ತವೆ.
* ಕಾಲ ಕಳೆದಂತೆ ಗಿಡಗಳು ಮತ್ತು ಜೀವಾಣುಗಳು ಸತ್ತು, ಮಣ್ಣೊಳಗೆ ಕೊಳೆತು ಕಳಿಯತೊಡಗಿದಾಗ, ಅವುಗಳಲ್ಲಿ ಸಂಗ್ರಹವಾಗಿದ್ದ ಇಂಗಾಲವೂ ಸಹ ಮಣ್ಣಲ್ಲಿ ಸೇರುತ್ತದೆ. ಈ ಇಂಗಾಲದ ಅಂಶವು ಮಣ್ಣಲ್ಲಿ ಕೊಳತ ಸಾವಯವ ಅಂಶವಾಗಿರುವ ಹ್ಯೂಮಸ್ ಜೊತೆ ಸೇರಿ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ.