Agripedia

ಮುಂಗಾರು ಬೆಳೆಗಳ ಬಾಧಿಸುವ ಹಲವು ರೋಗಗಳು ಮತ್ತು ಅವುಗಳ ನಿಯಂತ್ರಣ ವಿಧಾನ

01 August, 2021 7:54 PM IST By:

ಮಳೆಗಾಲದ ಆರಂಭದಲ್ಲಿ ಮುಂಗಾರು ಮಳೆ ತೋರಿದ ಕೃಪೆಯಿಂದಾಗಿ ರಾಜ್ಯಾದ್ಯಂತ ರೈತರು ವಿವಿಧ ಕಾಳು, ತರಕಾರಿ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಈಗಾಗಲೇ ಈ ಬೆಳೆಗಳು 40 ರಿಂದ 45 ದಿನಗಳದ್ದಾಗಿದ್ದು, ಬಿದರ್, ಕಲಬುರಗಿ, ಯಾದಗಿರಿ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ ಬಿತ್ತನೆ ಮಾಡಿರುವ ಉದ್ದು, ಹೆಸರು ಬೆಳೆಗಳು ಹೂವಾಡುವ ಹಂತ ತಲುಪಿವೆ. ಇನ್ನೇನು ಮುಂದಿನ ಒಂದು ವಾರದಲ್ಲಿ ಸೋಯಾ ಅವರೆ ಬೆಳೆಯಲ್ಲಿ ಕೂಡ ಹೂವುಗಳು ಕಾಣಲಾರಂಭಿಸುತ್ತವೆ.

ಆದರೆ, ಕೆಲ ದಿನಗಳ ಹಿಂದೆ ಸಿರಿದ ಭಾರೀ ಮಳೆ ಹಾಗೂ ಮರ‍್ನಾಲ್ಕು ದಿನಗಳಿಂದ ಮೋಡ ಕವಿದಿರುವ ಕಾರಣ, ವಾರಾತರಣ ತೇವಾಂಶದಿಂದ ಕೂಡಿದೆ. ಈ ವಾತವರಣವು ಬೆಳೆಗಳು ಹಲವು ರೋಗಗಳಿಗೆ ತುತ್ತಾಗಲು ಅನುಕೂಲಕರವಾಗಿರುತ್ತದೆ. ಜೊತೆಗೆ ಹಲವು ಕೀಟಗಳು, ನುಸಿ ಪೀಡೆಗಳು ಸಹ ಬೆಳೆಗಳನ್ನು ಬಾಧಿಸುತ್ತವೆ. ಈ ಸಂದರ್ಭದಲ್ಲಿ ರೈತರು ಅತ್ಯಂತ ಜಾಗರುಕತೆಯಿಂದ ಈ ರೋಗ ಹಾಗೂ ಕಈಟ ಬಾಧೆಗಳನ್ನು ನಿಯಂತ್ರಣಕ್ಕೆ ತರಬೇಕಾಗುತ್ತದೆ. ಇಲ್ಲದಿದ್ದರೆ ಮುಂದೆ ಇಳುವರಿ ತೀವ್ರ ಪ್ರಮಾಣದಲ್ಲಿ ಕುಂಠಿತವಾಗುವ ಸಾಧ್ಯಯತೆ ಹೆಚ್ಚಾಗಿರುತ್ತದೆ.

ಸೂಕ್ತ ಸಮಯದಲ್ಲಿ ಬೆಳೆಗೆ ತಗುಲಿದ ರೋಗಗಳನ್ನು ಗುರುತಿಸಿ, ನಿರ್ವಹಣಾ ಕ್ರಮಗಳನ್ನು ಕೈಗೊಂಡರೆ ರೋಗದಿಂದಾಗುವ ಹಾನಿ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ವಿವಿಧ ಬೆಳೆಗಳಿಗೆ ತಗುಲುವ ರೋಗಗಳನ್ನು ನಿಯಂತ್ರಿಸಲು ರೈತರು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ತಜ್ಞರು ಮಾಹಿತಿ ನೀಡಿದ್ದಾರೆ.

ಹೆಸರು, ಉದ್ದು, ಸೋಯಾ ಅವರೆ, ಮೆಣಸಿನ ಕಾಯಿ, ಬೆಂಡೆ ಮತ್ತು ತೊಗರಿ ಬೆಳೆಗಳಿಗೆ ಸಾಮಾನ್ಯವಾಗಿ ಬೂದಿ ರೋಗ, ಚಿಬ್ಬು ರೋಗ, ಹಳದಿ ನಂಜು ರೋಗ, ಮುಟುರು ರೋಗ, ನೇಟೆ ರೋಗಗಳು ತಗುಲುತ್ತವೆ. ಮಳೆ ಹೆಚ್ಚಾದಾಗ ಇವುಗಳ ಹಾವಳಿ ಸಾಮಾನ್ಯ. ಇಂತಹ ಕೆಲಸವು ರೋಗಗಳು ಹಾಗೂ ಅವುಗಳ ನಿರ್ವಹಣೆ ಕುರಿತು ಕೃಷಿ ತಜ್ಞರಾಗಿರುವ ಡಾ.ಗಂಗಾಧರ ನಾಡಗೌಡ ಅವರು ಇಲ್ಲಿ ಮಾಹಿತಿ ನೀಡಿದ್ದರೆ.

ಚಿಬ್ಬು ರೋಗ

ಗಿಡದ ಎಲೆ, ಕಾಯಿಗಳ ಮೇಲೆ ದುಂಡನೆಯ ನೀರಿನಿಂದ ಆವೃತವಾದ ಕಪ್ಪು ಚುಕ್ಕೆಗಳು ಕಾಣಿಸಿಕೊಂಡು ನಂತರ ದೊಡ್ಡ ಮಚ್ಚೆಗಳಾಗಿ ಇಡೀ ಸಸ್ಯವನ್ನು ವ್ಯಾಪಿಸಿಕೊಳ್ಳುತ್ತವೆ. ಟೊಂಗೆ, ಗಿಡದ ಕವಲುಗಳು ಒಣಗುತ್ತವೆ. ಕಪ್ಪು ಬಣ್ಣದ ಶಿಲಿಂದ್ರ ಕೋಶಗಳು ಬೆಳೆದು, ಕ್ರಮೇಣವಾಗಿ ರೋಗಗ್ರಸ್ಥ ಎಲೆ, ಹಣ್ಣುಗಳು ಬಿಳಿ ಬಣ್ಣಕ್ಕೆ ತಿರುಗಿ ಒಣಗುತ್ತವೆ. ಈ ರೋಗ ನಿಯಂತ್ರಿಸಲು 1 ಮಿ.ಲೀ. ಡೈಫೆನ್‌ಕೊನಾಜೋಲ್ 10 ಡಬ್ಲ್ಯೂಪಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ 15 ದಿನಗಳಿಗೊಮ್ಮೆ 2ರಿಂದ 3 ಬಾರಿ ಸಿಂಪಡಿಸಬೇಕು.

ಬೂದಿ ರೋಗ

ಈ ರೋಗವು ಶಿಲಿಂದ್ರದಿಂದ ಬರುತ್ತದೆ. ಎಲೆಯ ಕೆಳಭಾಗದಲ್ಲಿ ಅಲ್ಲಲ್ಲಿ ಬೂದಿ ಚೆಲ್ಲಿದ ಹಾಗೆ ಕಲೆಗಳಾಗಿ, ರೋಗದ ತೀವ್ರತೆ ಹೆಚ್ಚಾದಂತೆ ಸಂಪೂರ್ಣವಾಗಿ ಎಲೆಯ ಕೆಳಭಾಗದಲ್ಲಿ ಆವರಿಸಿಕೊಳ್ಳುತ್ತದೆ. ಅಲ್ಲದೆ, ಎಲೆಯ ಮೇಲ್ಭಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ಎಲೆಯ ಮೇಲ್ಭಾಗದಲ್ಲೂ ಬೂದಿ ಕಾಣುತ್ತದೆ. ಇದು ದ್ಯುತಿ ಸಂಶ್ಲೇಷಣೆ ಕ್ರಿಯೆಯ ಮೇಲೆ ಪರಿಣಾಮ ಬೀರಿ, ಎಲೆಗಳು ಸಂಪೂರ್ಣವಾಗಿ ಹಳದಿಯಾಗಿ, ಒಣಗಿ ಗಿಡದಿಂದ ಬೀಳುತ್ತವೆ. ಒರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬಡೈಜಿಮ್ ಅಥವಾ 1 ಮಿ.ಲೀ ಡಿನೋಕ್ಯಾಪ್ 48 ಇ.ಸಿ. ಇಲ್ಲವೇ 1.5 ಮಿ.ಲೀ ಹಕ್ಸಾಕೋನಜಾಲ್ ಸಿಂಪಡಿಸಬೇಕು. ಜೊತೆಗೆ ಬೆಳೆ ನಡುವೆ ಗೋಧಿ, ಜೋಳವನ್ನು ಸರದಿ ಬೆಳೆಯಾಗಿ ಬೆಳೆಯಬೇಕು.

ಮುಟುರು ರೋಗ

ಈ ರೋಗವು ವಿವಿಧ ನಂಜಾಣುಗಳು ಮತ್ತು ಕೀಟಗಳ ಸಂಕಿರ್ಣ ಬಾಧೆಯಿಂದ ಬರುತ್ತದೆ. ಧ್ರಿಪ್ಸ್, ಮೈಟ್ ನುಸಿ ಮತ್ತು ಜಿಗಿಹೇನು ರೀತಿಯ ಕೀಟಗಳು ಎಲೆಯ ರಸ ಹೀರುವ ಜೊತೆಗೆ ನಂಜಾಣುಗಳು ಗಿಡದಿಂದ ಗಿಡಕ್ಕೆ ಹಾಗೂ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಸಾರವಾಗಲು ಕಾರಣವಾಗುತ್ತವೆ. ಚಿಗುರು ಎಲೆಗಳು ಹಸಿರು ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗಿ ಮುದುರಿಕೊಳ್ಳುತ್ತವೆ. ರೋಗದ ತೀವ್ರತೆ ಹೆಚ್ಚಿದಂತೆ ಎಲೆಗಳು ಸುರುಳಿ ಸುತ್ತಿಕೊಳ್ಳುತ್ತವೆ. ಕೊನೆಗೆ ಗಿಡಗಳು ಕುಬ್ಜವಾಗುತ್ತವೆ. ಇಂತಹ ಗಿಡಗಳು ಹೂವು, ಕಾಯಿ ಬಿಡುವುದಿಲ್ಲ. ಪ್ರತಿ ಲೀಟರ್ ನೀರಿನಲ್ಲಿ 2 ಮೀ.ಲೀ. ನೀಮ್‌ಜಾಲ್ ಅಥವಾ 1 ಗ್ರಾಂ ಡೈಫೆಂಥುರಾನ್ 50 ಡಬ್ಲೂ.ಪಿ ಬೆರೆಸಿ ಸಿಂಪಡಿಸಬೇಕು.

ಹಳದಿ ನಂಜು ರೋಗ

ಇದು ಬಿಳಿ ನೊಣದಿಂದ ಹರಡುವ ಒಂದು ವೈರಸ್ ರೋಗವಾಗಿದೆ. ಆರಂಭದಲ್ಲಿ ಸೋಂಕಿತ ಎಲೆಗಳಲ್ಲಿ ಹಳದಿ ನಾಳಗಳು ಮಾತ್ರ ಕಾಣಿಸುತ್ತವೆ. ನಂತರದ ಹಂತಗಳಲ್ಲಿ ಸಂಪೂರ್ಣ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊAಡು ಇಳುವರಿ ಕಡಿಮೆಯಾಗುತ್ತದೆ. ಆರಂಭಿಕ ಹಂತಗಳಲ್ಲಿ ರೋಗಭಾಧಿತ ಗಿಡಗಳನ್ನು ಕಿತ್ತು ಸುಡಬೇಕು. ಹಳದಿ ನಂಜು ರೋಗ ಹರಡುವ ಕೀಟಗಳ ನಿಯಂತ್ರಣಕ್ಕಾಗಿ 1.5 ಮಿ.ಲೀ. ಟ್ರೈಜೋಫಾಸ್ ಅನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಗತ್ಯವಿದ್ದರೆ 15 ದಿನಗಳ ನಂತರ ಇದೇ ಸಿಂಪಡಣೆಯನ್ನು ಪುನರಾವರ್ತಿಸಿ.

ಸಾಮಾನ್ಯ ನಿರ್ವಹಣೆ ವಿಧಾನಗಳು

ಚಿಬ್ಬುರೋಗ, ಹಣ್ಣು ಕೊಳೆ ರೋಗ, ಎಲೆ ಚುಕ್ಕೆ ರೋಗ ಹಾಗೂ ಬೂದಿ ರೋಗ ಕಂಡುಬAದರೆ 1 ಮೀ.ಲೀ. ಹೆಕ್ಸಾಕೋನಾಜೋಲ್ 5 ಇ.ಸಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ 15 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಿ. ಅಥವಾ ಫ್ಲೂಕ್ಸಾಪೈರಾಕ್ಸೈಡ್ + ಪೈರಾಕ್ಲೋಸ್ಟ್ರೋಬಿನ್ 500 ಎಸ್.ಸಿ. ಶಿಲಿಂದ್ರ ನಾಶಕವನ್ನು ತಲಾ 0.5 ಮಿ.ಲೀ.ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಾವಯವ ವಿಧಾನ ಅನುಸರಿಸುವವರು 5 ಮಿ.ಲೀ. ಬೇವಿನ ಎಣ್ಣೆ ಜೊತೆ 1/2 ಪ್ಯಾಕೇಟ್ ಶ್ಯಾಂಪು ಅಥವಾ ಸೋಪ್ ನೀರನ್ನು ಒಂದು ಲೀಟರ್ ನೀರಿಗೆ ಬೆರೆಸಿ ಗಿಡಗಳಿಗೆ ಸಿಂಪಡಣೆ ಮಾಡಿದರೆ ರೋಗಗಳು ನಿಯಂತ್ರಣಕ್ಕೆ ಬರುತ್ತವೆ.