Agripedia

ಕೀಟಗಳ ನಿರ್ಮೂಲನೆಗೆ ಅಗ್ನಿಅಸ್ತ್ರ ರಾಮಬಾಣ

24 November, 2020 6:41 AM IST By:

ಅಗ್ನಿಅಸ್ತ್ರ ಅಂದರೆ ಇದರಲ್ಲಿ ಅಗ್ನಿ ಇರೋದಿಲ್ಲ  ಆದರೆ ಅಗ್ನಿ ಹಾಗೆ ಶಕ್ತಿಯುತವಾದ ಅಂಶಗಳಿರುತ್ತವೆ. ಅವು ಕೂಡ ಅಗ್ನಿಯ ಹಾಗೆ ಕಾರ್ಯ ನಿರ್ವಹಿಸಿ ಕೀಟಗಳನನ್ನು ದೂರ ಮಾಡುತ್ತವೆ.

ನೀಮಾಸ್ತ್ರ, ಬ್ರಹ್ಮಾಸ್ತ್ರದ ಬಗ್ಗೆ ತಿಳಿದುಕೊಂಡ ಮೇಲೆ ಇಂದು ನಾವು ಅಗ್ನಿ ಅಸ್ತ್ರದ ಬಗ್ಗೆ ತಿಳಿದುಕೊಳ್ಳೋಣ. ಅಗ್ನಿಅಸ್ತ್ರ ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಏಕೆಂದರೆ ಇದರಲ್ಲಿ ಬಳಸುವ ಪ್ರತಿಯೊಂದು ವಸ್ತುವೂ ವಿಶಿಷ್ಟ ಶಕ್ತಿಯನ್ನು ಹೊಂದಿದೆ, ನಾವು ಬಳಸುವ ಬೇವಿನ ಎಲೆಯಲ್ಲಿ ಅಜರಡಿಕ್ಟಿನ್ ಎಂಬ ಅಂಶವಿದ್ದು ಇದು ಕೀಟನಾಶಕವಾಗಿ, ಶಿಲಿಂಧ್ರನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ತಂಬಾಕಿನಲ್ಲಿರುವ ನಿಕೋಟಿನ್ ಸಂಶೋಧನೆಯ ಪ್ರಕಾರ ಕೀಟನಾಶಕವಾಗಿ, ಬ್ಯಾಕ್ಟೀರಿಯಾ ಹಾಗೂ ಶಿಲಿಂದ್ರದಿಂದ ರಕ್ಷಿಸುತ್ತದೆ, ಇನ್ನೊಂದು ಬದಿಯಲ್ಲಿ ಬೆಳ್ಳುಳ್ಳಿ ಹಾಗೂ ಹಸಿ ಮೆಣಸಿನಕಾಯಿ ಕೀಟಗಳು ಬರದೇ ಇರೋಹಾಗೆ ನೋಡಿಕೊಳ್ಳುತ್ತವೆ.

 ಬೇಕಾಗುವ ಸಾಮಗ್ರಿಗಳು:

 ದೇಸಿ ಹಸುವಿನ ಗಂಜಲ- 20 ಲಿಟರ್

 ತಂಬಾಕು ಎಲೆ - 1ಕೆಜಿ

 ಬೇವಿನ ಎಲೆ -5 ಕೆಜಿ

 ಹಸಿಮೆಣಸಿನಕಾಯಿ- 500 ಗ್ರಾಂ

 ಬೆಳ್ಳುಳ್ಳಿ- 500 ಗ್ರಾಂ

ತಯಾರಿಸುವುದು ಹೇಗೆ?

 ಮೊದಲಿಗೆ ಬೇವಿನ ಎಲೆ,  ಹಸಿಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಪೇಸ್ಟನ್ನು ಮಾಡಿಕೊಳ್ಳಬೇಕು ಇದಾದ ನಂತರ ಒಂದು ಲೋಹದ ಪಾತ್ರೆಯಲ್ಲಿ 20 ಲೀಟರ್ ಗಂಜಲವನ್ನು ಹಾಕಿ ಇದಕ್ಕೆ ಇವೆಲ್ಲವನ್ನು ಹಾಕಿ ನಾಲ್ಕು ಕುದಿ ಬರುವ ಹಾಗೆ ಕುದಿಸಬೇಕು, ಕುದಿಸಿದ ನಂತರ 48 ಗಂಟೆಗಳ ಕಾಲ ಇದನ್ನು ನೆರಳಿನ ಜಾಗದಲ್ಲಿ ಇಡಬೇಕು, 48 ಗಂಟೆಗಳ ನಂತರ ಅಗ್ನಿಯಾಸ್ತ್ರ ಬಳಸಲು ಸಿದ್ಧವಾಗಿದೆ.

ಬಳಸುವುದು ಹೇಗೆ?

  ಪ್ರತಿ ಲೀಟರ್ ನೀರಿಗೆ 30 ಮಿಲಿ

 ಎರಡುನೂರು ಲೀಟರ್ ನೀರಿಗೆ 6 ಲೀಟರ್

 ಉಪಯೋಗಗಳು:

 ಇದನ್ನು ಬಳಸುವ ಮೂಲಕ ನಾವು ಎಲೆ ಮಡಚುವ ಕೀಟಗಳು, ಕೊರಕಗಳನ್ನು ನಿಯಂತ್ರಿಸಬಹುದು.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ