ದೊಡ್ಡ ಗಿಡದಲ್ಲಿ ಬೆಳೆಯುವ ಕಿತ್ತಳೆ ಅಥವಾ ನಿಂಬೆ ಹಣ್ಣುಗಳು ಬಾಲ್ಕನಿಯಲ್ಲಿಟ್ಟು ಪುಟ್ಟ ಕುಂಡದಲ್ಲಿ ಬೆಳೆದರೆ ಹೇಗಿರುತ್ತದೆ ಹೇಳಿ.... ಕಣ್ಣಿಗೂ ಮುದ, ಬಾಯಿಗೂ ರುಚಿ. ಮನೆಯೊಳಗೆ ಅದರ ಸೊಬಗೇ ಬೇರೆ. ಈ ಕುಬ್ಜ ಬೋನ್ಸಾಯ್ ಗಿಡಗಳು ಮನೆಯಂಗಳಕ್ಕೆ ಮಾತ್ರವಲ್ಲ, ಬಾಲ್ಕನಿ, ಮನೆಯೊಳಗೆ ಮಲಗುವ ಕೊಠಡಿಯ ಅಂದಕ್ಕೂ ಇನ್ನಷ್ಟು ಮೆರಗು ನೀಡುತ್ತವೆ.ಹೌದು ಇತ್ತೀಚೆಗೆ ಈ ಬೋನ್ಸಾಯ್ ಗಿಡಗಳಿಗೆ ಉಡುಗೋರೆಯಾಗಿ ನೀಡಲು ತುಂಬಾ ಡಿಮ್ಯಾಂಡ್ ಬರುತ್ತಿದೆ.
ಹಿಂದೆ ಹುಟ್ಟಿದ ಹಬ್ಬ, ಮದುವೆ ಇತರೆ ಶುಭ ಸಮಾರಂಭಗಳಿಗೆ ತೆರಳುವಾಗ ಆಟಿಕೆಗಳೋ ಅಥವಾ ಪ್ರಕೃತಿಯ ಪೊಟೋಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಆದರೆ ಈಗ ಪುಟ್ಟ ಗಿಡಗಳನ್ನು ನೀಡುವುದು ಕಾಮನ್ ಆಗಿದೆ. ಅದರಲ್ಲೂ ಬೋನ್ಸೈ ಹೊಸ ಟ್ರೆಂಡ್ ಆಗಿದೆ. ಬೋನ್ಸೈ ಅಂದ ತಕ್ಷಣ ಹುಬ್ಬೇರಿಸುವ ಅಗತ್ಯವಿಲ್ಲ ಏಕೆಂದರೆ ಇದನ್ನು ತಯಾರಿಸುವುದು ಕಷ್ಟವೇನಲ್ಲ “ಮನಸ್ಸಿದ್ದರೆ ಮಾರ್ಗ” ಅನ್ನೋ ಹಾಗೆ ಇದರ ಮೇಲೆ ಆಸಕ್ತಿ ಉಳ್ಳವರು ಇದನ್ನೇ ಒಂದು ವೃತ್ತಿಯನ್ನು ಬೇಕಾದರೂ ಮಾಡಬಹುದು.
ಬೋನ್ಸೈ ಇದೊಂದು ಅದ್ಭುತ ಕಲೆ, ಸಾವಿರಾರು ವರ್ಷಗಳ ಹಿಂದೆ ಈ ಕಲೆ ಉಗಮವಾಗಿದ್ದು ಚೀನಾದಲ್ಲಿಯಾದ್ರು ಜಪಾನಿಯರು ಅದನ್ನು ಮುಂದುವರಿಸಿಕೊಂಡು ಬಂದರು. ನಂತರ ಪ್ರಪಂಚದಾದ್ಯಂತ ಈ ಕಲೆ ತನ್ನ ನೆಲೆ ಕಂಡುಕೊಂಡು ಪ್ರಚಲಿತಕ್ಕೆ ಬಂತು. ದೊಡ್ಡಮರಗಳ ಜಾತಿಗೆ ಸೇರಿದ ಗಿಡಗಳನ್ನು ಚಿಕ್ಕ ಕುಂಡಗಳಲ್ಲಿ ಬೆಳೆದು ಅದಕ್ಕೆ ಕುಬ್ಜರೂಪ ಕೊಡೋದೆ ಬೋನ್ಸೈ ಕಲೆ.
ಜಪಾನೀಸ್ ಭಾಷೆಯಲ್ಲಿ ಬಾನ್ (Bon) ಎಂದರೆ ಮಡಕೆ/ಕುಂಡ/ ಆಳವಿಲ್ಲದ ಪ್ಯಾನ್, ಸಾಯ್ ಎಂದರೆ ಸಸ್ಯ.
ಬೋನ್ಸೈ ತಯಾರಿಸಲು ಬೇಕಾಗುವ ಪರಿಕರಗಳು:
ಸಸ್ಯಗಳು / ಸಸ್ಯಾಭಿವೃದ್ಧಿ:
ಬೀಜಗಳಿಂದ ಸಸ್ಯಗಳನ್ನು ಮಾಡಬಹುದು ಆದರೆ ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಪ್ರಬುದ್ಧ ಚಿಗುರುಗಳು, ಲೇಯರಿಂಗ್, ಕಸಿ ಮತ್ತು ಸ್ಥಳೀಯ ಮೂಲದ ಪ್ರಬುದ್ಧ ಮರಗಳ ಮೊಳಕೆಯನ್ನು ಸಾಮಾನ್ಯವಾಗಿ ಬಳಸುತ್ತಾರೆ.
ಕುಂಡ / ಮಡಿಕೆಗಳು:
2-4’’ ಇಂಚು ಎತ್ತರದ ಅಗಲವಾದ ಕುಂಡಗಳು ಬೇಕು. ಕುಂಡಗಳು ಸರಳವಾಗಿರಬೇಕು ಹಾಗೂ ನೈಸರ್ಗಿಕವಾಗಿ ಸಸ್ಯಕ್ಕೆ ಹೊಂದಿಕೊಳ್ಳಬೇಕು. ಕುಂಡದ ಬಣ್ಣವು ಪ್ರಕಾಶಮಾನವಾಗಿರಬೇಕು. ತಿಳಿ ಬಣ್ಣಗಳು ಮತ್ತು ಕಪ್ಪು ಸಾಮಾನ್ಯವಾಗಿ ಹೂಬಿಡುವ ಮರಗಳಿಗೆ ಉತ್ತಮವಾಗಿ ಕಾಣುತ್ತದೆ. ಹೂ ಬಿಡದ ಸಸ್ಯಗಳಿಗೆ ಕಂದು, ನೀಲಿ, ಹಸಿರು ಬಣ್ಣದ ಕುಂಡಗಳು ಸೂಕ್ತ ಜೊತೆಗೆ ಬೇರುಗಳು ಕೊಳೆಯುವುದನ್ನು ತಪ್ಪಿಸಲು ಸರಿಯಾದ ಒಳಚರಂಡಿಯನ್ನು ಒದಗಿಸಬೇಕು.
ಸಸ್ಯದ ಸೌಂದರ್ಯವನ್ನು ಹೆಚ್ಚಸಲು ಕಲ್ಲುಗಳು ಮತ್ತು ಪಾಚಿಯನ್ನು ಬಳಸಬಹುದು. ಇದರಿಂದ ಬೇಸಿಗೆಯ ಬಿಸಿ ದಿನಗಳಲ್ಲಿ ಸಸ್ಯವನ್ನು ತಂಪಾಗಿಡಲು ಸಹಾಯ ಮಾಡುತ್ತದೆ ಹಾಗೂ ಭಾರಿ ಮಳೆಯ ಸಮಯದಲ್ಲಿ ಮೇಲಿನ ಮಣ್ಣನ್ನು ತೊಳೆಯದಂತೆ ನಿಯಂತ್ರಿಸುತ್ತದೆ.
ಮಾಧ್ಯಮ : ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಉತ್ತಮವಾದ ಮಣ್ಣಿನ ಮಿಶ್ರಣ ಅದರಲ್ಲಿ 2 ಭಾಗ ಎಲೆಗೊಬ್ಬರ. 1 ಭಾಗ ಮರಳು ಮತ್ತು ಮಣ್ಣು ಇರಬೇಕು.
ಸಸ್ಯಗಳ ಆಯ್ಕೆ (ಗುಣಲಕ್ಷಣಗಳು)
- ಒಂದು ಸಣ್ಣ ಕುಂಡದಲ್ಲಿ ಅನೇಕ ವರ್ಷಗಳ ಕಾಲ ಜೀವಂತವಾಗಿರುವ ಶಕ್ತಿಯನ್ನು ಹೊಂದಿರಬೇಕು.
- ಕಾಂಡ, ರೆಂಬೆ ಮತ್ತು ಕೊಂಬೆಗಳು ನೈಸರ್ಗಿಕವಾಗಿ ಕಲಾತ್ಮಕ ರೂಪಗಳಲ್ಲಿ ಬೆಳೆಯಬೇಕು.
- ಅತಿಯಾದ ಸವರುವಿಕೆಯನ್ನು ತಡೆದುಕೊಳ್ಳುವ ಶಕ್ತಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿರಬೇಕು.
- ಸಸ್ಯದ ಬೆಳೆವಣಿಗೆ ಮಡಿಕೆಯ / ಕುಂಡದ ಆಕಾರದೊಂದಿಗೆ ಹೊಂದಿಕೊಳ್ಳಬೇಕು.
- ಬಲವಾದ ಕಾಂಡ, ಬುಡದಲ್ಲಿ ದಪ್ಪ ಹಾಗೂ ಕಡಿಮೆ ಎತ್ತರಕ್ಕೆ ಬೆಳೆಯಬೇಕು.
ವಿಶೇಷ ಕ್ರಮಗಳು:
1) ಸವರುವುದು (Pruning)
ಉದ್ದವಾಗಿರುವ ರೆಂಬೆ ಕೊಂಬೆಗಳನ್ನು ಮೊಟಕುಗೊಳಿಸಿ ಉತ್ತಮ ಆಕಾರವನ್ನು ನೀಡುತ್ತದೆ. ಅದಲ್ಲದೆ ರೋಗಲಕ್ಷಣ ಇರುವ ಎಲೆಗಳನ್ನು ಸಹ ತೆಗೆಯಬೇಕು.
2) ಟ್ರಿಮ್ಮಿಂಗ್ (Trimming)
ಬೋನ್ಸೈನ ಜೀವಿತಾವಧಿ ಅಂದರೆ ವರ್ಷಪೂರ್ತಿ ಟ್ರಿಮ್ಮಿಂಗ್ ಮಾಡಬೇಕಾಗುತ್ತದೆ ಇದರಿಂದ ಎಲೆಗಳ ಗಾತ್ರ ಚಿಕ್ಕದಾಗಿ ಹೆಚ್ಚು ಅನುಪಾತದಲ್ಲಿರುತ್ತದೆ.
3) ಬೆಂಡಿಂಗ್ ಮತ್ತು ವೈರಿಂಗ್
ತಮಗೆ ಇಷ್ಟವಾದ ಆಕಾರವನ್ನು ಸಸ್ಯಕ್ಕೆ ಕೊಡವುದೇ ಇದರ ಮುಖ್ಯ ಉದ್ದೇಶ. ಬೋನ್ಸೈನಲ್ಲಿ ನೈಸರ್ಗಿಕ ವಿನ್ಯಾಸ ಬೇಕೆಂದರೆ ಸಣ್ಣಗಿಡವಾಗಿರುವುದಾಗಲೇ ಅದನ್ನು “U” ಅಥವಾ ನಮಗೆ ಇಷ್ಟವಾದ ಆಕಾರಕ್ಕೆ ಬಗ್ಗಿಸಿ ತಾಮ್ರ ತಂತಿಯನ್ನು ಸುತ್ತಬೇಕು. ಸುಮಾರು 2-3 ತಿಂಗಳು ಹಾಗೇ ಬಿಟ್ಟು ನಂತರ ತಂತಿಯನ್ನು ತೆಗೆದರೆ ನಾವು ಕೊಟ್ಟಿರುವ ಆಕಾರದ ವಿನ್ಯಾಸ ಆಗೆಯೇ ಇರುತ್ತದೆ.
4) ಸಸ್ಯ ವರ್ಗಾವಣೆ / ರೀ-ಪೊಟಿಂಗ್:
ಒಂದು ವರ್ಷಕ್ಕೊಮ್ಮೆ ಗಿಡವನ್ನು ಬೇರೆ ಕುಂಡಕ್ಕೆ ವರ್ಗಾಹಿಸಬೇಕು. ಏಕೆಂದರೆ ಕಡಿಮೆ ಜಾಗ ಇರುವುದರಿಂದ ಬೇರುಗಳು ಒಂದಕ್ಕೊಂದು ಸುತ್ತಿಕೊಂಡಿರುತ್ತವೆ ಅದನ್ನು ತೆಗೆಯಬೇಕು, ಅಧಿಕವಾಗಿರುವ ಬೇರುಗಳು, ಒಂದಕ್ಕೊಂದು ಸುತ್ತಿಕೊಂಡಿರುತ್ತವೆ ಅದನ್ನು ತೆಗೆಯಬೇಕು, ಅಧಿಕವಾಗಿರುವ ಬೇರುಗಳು, ಚಿಗುರುಗಳನ್ನು ಕತ್ತರಿಸಬೇಕು. ನಂತರ ಬೇರೆ ಮಣ್ಣು ಗೊಬ್ಬರ, ಎರೆಹುಳುಗೊಬ್ಬರವಿರುವ ಇನ್ನೊಂದು ಕುಂಡಕ್ಕೆ ವರ್ಗಾಹಿಸಬೇಕು.
5) ನೀರಿನ ನಿರ್ವಹಣೆ : ಗಿಡಕ್ಕೆ ಪ್ರತಿದಿನ ನೀರು ಕೊಡುವುದು ಸೂಕ್ತ
ಬೊನ್ಸೈನಲ್ಲಿ ಹಲವಾರು ಶೈಲಗಳಿವೆ ಅವುಗಳೆಂದರೆ ನೇರ ಶೈಲಿ, ಅಂಕುಡೊಂಕಾದ ಶೈಲಿ, ಆಬ್ಲಿಕ್‍ಶೈಲಿ, ಬ್ರೂಮ್ ಶೈಲಿ ಇತ್ಯಾದಿ. ಹೂವಿನ ಗಿಡಗಳಾದ ನೀಲಿ ಜಾಕರಾಂಡ, ದಾಸವಾಳ, ಜಟ್ರೋಪ, ಮಾದವಿಲತಾ, ಆಲದ ಮರ, ಅರಳಿಮರ ಹಾಗೂ ಹಣ್ಣಿನ ಮರಗಳಾದ ದಾಳಿಂಬೆ, ಕಿತ್ತಳೆ, ಸೇಬು, ಹುಣುಸೆ ಇನ್ನು ಹಲವಾರು ಬೊನ್ಸೈ ಮಾಡಲು ಸೂಕ್ತವಾಗಿದೆ. ಇವುಗಳನ್ನು ಅಲಂಕಾರಿಕವಾಗಿ ಜೋಡಿಸುವುದರಿಂದ ಮನೆ ಮತ್ತು ಕಛೇರಿಗಳ ಅಂದ ಚೆಂದ ಹೆಚ್ಚಾಗೊದ್ರಲ್ಲಿ ಸಂದೇಹವೇ ಇಲ್ಲ.
ಲೇಖನ: 1.ಕವನ, ಜಿ. ಬಿ., 2. ಚಂದ್ರಶೇಖರ್, ಎಸ್. ವೈ. ಸಹಾಯಕ ಪ್ರಾಧ್ಯಪಕರು, ಪುಷ್ಪ ಕೃಷಿ ಮತ್ತು ಉದ್ಯಾನ ವಿನ್ಯಾಸ ವಿಭಾಗ, ತೋಟಗಾರಿಕೆ ಕಾಲೇಜು, ಮೂಡಿಗೆರೆ
3.ಪವಿತ್ರ, ಎಸ್, ಸಹಾಯಕ ಪ್ರಾಧ್ಯಪಕರು, ಹಣ್ಣಿನ ವಿಭಾಗ, ತೋಟಗಾರಿಕೆ ಕಾಲೇಜು, ಮೂಡಿಗೆರೆ